ಖಾಲಿ ಕೈಲಿ ಕಾರ್ಕಳಕೆ ಬಂದಾಕೆ ಅನಾಥರಿಗೆ ಆಸರೆಯಾದಳು

ಡಾ. ಚಂದ್ರಹಾಸ್ ಚಾರ್ಮಾಡಿ


ಕಳೆದ 30 ವರ್ಷಗಳ ಹಿಂದೆ ಬರಿಗೈಲಿ ಕುಂದಾಪುರದಿoದ ಕಾರ್ಕಳಕ್ಕೆ ಬಂದ ಆಯಿಷಾ ಬಾನು ಮನಸ್ಸು ಮಾಡಿದರೆ ಇಂದು ಕೋಟ್ಯಾಧಿಪತಿಯಾಗಿ ಮೆರೆಯಬಹುದಿತ್ತು. ಆದರೆ ತನ್ನ ಗಳಿಕೆಯನ್ನೆಲ್ಲ ಅನಾಥರಿಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಅವರ ಬದುಕಿನ ಕಥೆಯನ್ನು ಅವರ ಮಾತಿನಲ್ಲೇ ಕೇಳೋಣ.
‘ಕುಂದಾಪುರದ ಪುಟ್ಟ ಹಳ್ಳಿಯಲ್ಲಿ ಜನಿಸಿದ ನಾನು ಅಪ್ಪಟ ಬಡತನದ ಕುಟುಂಬದಿoದ ಬಂದವಳು. ನನ್ನ ತಾಯಿಗೆ ನಾವು ಇಬ್ಬರು ಹೆಣ್ಣು, ಮೂರು ಗಂಡು ಮಕ್ಕಳು. ಕಷ್ಟಪಟ್ಟು ಏಳನೇ ತರಗತಿಯವರೆಗೆ ಓದಿಸಿದರು. ಮುಂದಕ್ಕೆ ಸುಮಾರು ಹತ್ತು ವರ್ಷಗಳ ಕಾಲ ಅರೇಬಿಕ್ ಶಿಕ್ಷಣವನ್ನು ಪಡೆದೆ. ಸಣ್ಣ ವಯಸ್ಸಿನಲ್ಲಿ ವರನೊಬ್ಬನನ್ನು ಹುಡುಕಿ ಮದುವೆಯನ್ನೂ ಮಾಡಿಸಿದರು. ಗಂಡ ಆಗ ಕಾರ್ಕಳದಲ್ಲಿ ಬೀಡಾದ ಅಂಗಡಿಯೊoದನ್ನು ಇಟ್ಟುಕೊಂಡಿದ್ದರು. ಮದುವೆಯಾದ ಕೆಲವು ವರ್ಷಗಳಲ್ಲಿ ಅಂದರೆ 1993ರಲ್ಲಿ ನಾನು ಗಂಡನೊoದಿಗೆ ಕಾರ್ಕಳಕ್ಕೆ ಬಂದೆ. ನಮಗೆ ಇಬ್ಬರು ಹೆಣ್ಮಕ್ಕಳು. ಇಲ್ಲಿ ದುಡಿದು ಸಂಸಾರ ನಿರ್ವಹಿಸುವುದು ಕಷ್ಟವೆಂದೆನಿಸಿ ಗಂಡ ಕೆಲಸವನ್ನು ಹುಡುಕುತ್ತಾ ಮುಂಬೈಯ ರೈಲು ಹತ್ತಿದರು. ಆಗ ಮಕ್ಕಳಿಬ್ಬರು ಸಣ್ಣವರು. ಸಂಸಾರ ನಿರ್ವಹಣೆಗೆ ನಾನು ಹೆಗಲುಕೊಡಬೇಕಾದುದು ಅನಿವಾರ್ಯವಾಯಿತು. ಮನೆ ಖರ್ಚನ್ನು ನಿಭಾಯಿಸುವ ಉದ್ಯೋಗವೊಂದರ ಹುಡುಕಾಟದಲ್ಲಿದ್ದಾಗ ನನ್ನ ಪಾಲಿಗೆ ದೇವರಂತೆ ಪ್ರತ್ಯಕ್ಷರಾದವರು ಕಾರ್ಕಳದ ಡಾ| ಮಂಜುನಾಥ ಕಿಣಿ ಮತ್ತು ಡಾ| ಪ್ರತಿಭಾ ಕಿಣಿ ದಂಪತಿ. ಅದಾಗಲೇ ಇವರು ‘ಕಾರ್ಕಳ ನರ್ಸಿಂಗ್ ಹೋಂ’ ಅನ್ನು ನಡೆಸುತ್ತಿದ್ದರು. ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಅರ್ಹತೆಗೆ ಮೀರಿದ ಉದ್ಯೋಗವನ್ನು ನನಗೆ ಕೊಟ್ಟರು. ನನ್ನ ಸಂಸಾರ ನಿರ್ವಹಣೆಗೆ ಸಾಕಾಗುವಷ್ಟು ಸಂಬಳದೊoದಿಗೆ ಊಟ, ಕಾಫಿ, ತಿಂಡಿ, ವಸತಿ, ಮಕ್ಕಳಿಗೆ ಶಿಕ್ಷಣಕ್ಕೆ ನೆರವನ್ನು ನೀಡಿದರು. ಹದಿನೆಂಟು ವರ್ಷಗಳ ಕಾಲ ‘ನರ್ಸಿಂಗ್ ಹೋಂ’ನಲ್ಲಿ ಕೆಲಸ ಮಾಡಿದೆ.
ಅಂಬ್ಯುಲೆನ್ಸ್ ಮಾಲಕಿಯಾದೆ
ಇಪ್ಪತ್ತೆöÊದು ವರ್ಷಗಳ ಹಿಂದೆ ಇಲ್ಲಿನ ಸರಕಾರಿ ಆಸ್ಪತ್ರೆಯನ್ನು ಹೊರತುಪಡಿಸಿ ಬೇರೆಲ್ಲೂ ಅಂಬ್ಯುಲೆನ್ಸ್ಗಳಿರಲಿಲ್ಲ. ಆ ದಿನಗಳಲ್ಲಿ ನಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸಬೇಕಾದರೆ ದೂರದ ಮೂಡುಬಿದಿರೆ, ಮಣಿಪಾಲದಿಂದ ಅಂಬ್ಯುಲೆನ್ಸ್ಗಳು ಬರಬೇಕಾಗಿತ್ತು. ಇದರಿಂದ ರೋಗಿಗಳು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದರು. ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ದುಡಿದ ಹಣವನ್ನೆಲ್ಲ ತೊಡಗಿಸಿ ನಾನು ಒಂದು ಅಂಬ್ಯುಲೆನ್ಸ್ ಖರೀದಿಸಿದರೆ ಹೇಗೆ? ಎಂದು ಆಸ್ಪತ್ರೆಯ ಮಾಲಕರಲ್ಲಿ ಕೇಳಿಕೊಂಡೆ. ಕಿಣಿ ದಂಪತಿಗಳು ಸಂತೋಷದಿoದ ಒಪ್ಪಿಕೊಂಡರು. ತಮ್ಮ ಕೈಲಾದ ಸಹಾಯ ಮಾಡುವುದಾಗಿಯೂ ಧೈರ್ಯತುಂಬಿದರು. ಸುಮಾರು ರೂ.1 ಲಕ್ಷ ನೀಡಿ ಓಮ್ನಿಯೊಂದನ್ನು ಖರೀದಿಸಿದೆ. ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ಅದಕ್ಕೆ ಅಂಬ್ಯುಲೆನ್ಸ್ ರೂಪ ಕೊಟ್ಟೆ. ಎಲ್ಲಿಂದ ಯಾರೇ ಕರೆ ಮಾಡಿದರೂ ಚಾಲಕನೊಂದಿಗೆ ನಾನು ಅಲ್ಲಿಗೆ ಹೋಗುತ್ತಿದ್ದೆ. ದಿನದ 24 ಗಂಟೆಯೂ ಅಂಬ್ಯುಲೆನ್ಸ್ ಸದ್ದು ಮಾಡತೊಡಗಿತು. ಅಂಬ್ಯುಲೆನ್ಸ್ನಿoದ ಬಂದ ಆದಾಯದಲ್ಲಿ ಚಾಲಕನಿಗೂ ಕೈತುಂಬಾ ಸಂಬಳ ನೀಡಿದೆ.
ನೀರಿಗೆ ಬಿದ್ದು ಕೊಳೆತ ಹೆಣವಿರಲಿ, ಆತ್ಮಹತ್ಯೆ ಮಾಡಿದವರ ಅಸ್ಥಿಪಂಜರ ಮಾತ್ರ ದೊರೆಯಲಿ, ಹೆಣದಲ್ಲಿ ಎಷ್ಟೇ ಹುಳವಿರಲಿ, ಎಷ್ಟೇ ಕೊಳೆತಿರಲಿ ಆ ಹೆಣವನ್ನು ತಂದು ಸ್ಮಶಾನದಲ್ಲಿ ದಫನ ಮಾಡುವುದು, ವಾರಸುದಾರರಿದ್ದರೆ ಅವರಿಗೆ ತಲುಪಿಸುವುದು ಇದು ನನ್ನ ನಿತ್ಯದ ಕಾಯಕವಾಯಿತು. ನಾನು ಮಾಡುವ ಕೆಲಸವನ್ನು ನೋಡಿ ಎಲ್ಲೇ ಹೆಣವನ್ನು ಕಂಡರೂ ಪೊಲೀಸರು, ಸಾರ್ವಜನಿಕರು ನನಗೆ ಕರೆ ಮಾಡತೊಡಗಿದರು. ಹೆಣದ ಕೂದಲು, ಕೈಕಾಲು, ದೇಹವನ್ನು ನೋಡಿ ಅವರು ಯಾವ ರಾಜ್ಯದವರೆಂದು ಗುರುತು ಹಿಡಿಯುವುದರಲ್ಲಿ ನಾನು ನಿಪುಣಳಾಗಿದ್ದೆ. ಹೀಗೆ ಸಮಾಜಕ್ಕೆ ನನ್ನನ್ನು ನಾನು ಅರ್ಪಿಸಿಕೊಂಡ ನಂತರ ಆಸ್ಪತ್ರೆ ಕೆಲಸವನ್ನು ಬಿಡಬೇಕಾಯಿತು. ನನ್ನ ಸಮಾಜ ಸೇವೆಯನ್ನು ಕಂಡು ಕಿಣಿ ದಂಪತಿಗಳು ಸಂತೋಷದಿoದ ಬೀಳ್ಕೊಟ್ಟರು.
ಮೊದಲ ಅಂಬ್ಯುಲೆನ್ಸ್ ಖರೀದಿಸಿ ಎರಡು ವರ್ಷ ಪೂರ್ಣವಾಗುವಷ್ಟರಲ್ಲಿ ಇನ್ನೊಂದು ಅಂಬ್ಯುಲೆನ್ಸ್ ಮನೆ ಸೇರಿತು. ನಾಲ್ಕು ವರ್ಷ ಬಿಟ್ಟು ಮಗದೊಂದು, ಹೀಗೆ ಇಂದು ನಾನು ಐದು ಅಂಬ್ಯುಲೆನ್ಸ್ನ ಒಡತಿ. ಆರಂಭದ ದಿನಗಳಿಗೆ ಹೋಲಿಸಿದರೆ ಇದೀಗ ಬಾಡಿಗೆ ಸಿಗುವುದು ತುಂಬಾ ಕಡಿಮೆ. ಆದರೂ ಊಟ, ಬಟ್ಟೆಗಾಗುವಷ್ಟು ಆದಾಯವನ್ನು ಅಂಬ್ಯುಲೆನ್ಸ್ಗಳು ತಂದು ಕೊಡುತ್ತಿವೆ. ಕೊರೊನಾ ದಿನಗಳಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ್ ಅನ್ನು ಬಾಡಿಗೆಗೆ ನೀಡಿದ್ದೆ. ಆ ದಿನಗಳಲ್ಲಿ ಸುಮಾರು ಮೂವತ್ತು ಹೆಣಗಳನ್ನು ನಾನೇ ನಿಂತು ದಫನ ಮಾಡಿಸಿದ್ದೇನೆ.
ಅಂಬ್ಯುಲೆನ್ಸ್ ದುಡಿದ ಹಣವನ್ನೆಲ್ಲ ಸೇರಿಸಿ ಹದಿನೈದು ವರ್ಷಗಳ ಹಿಂದೆ ಸ್ವಂತ ಸೂರೊಂದು ಬೇಕೆಂದು ಕಾರ್ಕಳ ಪೇಟೆಯ ಪಕ್ಕ ಸಾಲ್ಮರ ಎಂಬಲ್ಲಿ 45 ಸೆನ್ಸ್ ಜಮೀನು, ಪುಟ್ಟ ಮನೆಯೊಂದನ್ನು ಖರೀದಿಸಿದೆ.
ಸ್ವಂತ ಸೂರು ಆಶ್ರಮವಾಯಿತು
ಎಂಟು ವರ್ಷಗಳ ಹಿಂದೆ ಸಂಜೆ 7 ಗಂಟೆಯ ಹೊತ್ತಿಗೆ ‘ನಿಟ್ಟೆ – ಪರ್ಪಲೆ ರಸ್ತೆಯಲ್ಲಿ ಬುದ್ಧಿಮಾಂದ್ಯಳೊಬ್ಬಳು ಬಸ್‌ಗಳಿಗೆ ಕಲ್ಲು ತೂರಾಟ ಮಾಡಿ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾಳೆ. ಅವಳ ಮೈಮೇಲೆ ಒಂದು ತುಂಡು ಬಟ್ಟೆಯೂ ಇಲ್ಲ. ಅವಳನ್ನು ಹೀಗೆ ಬಿಟ್ಟರೆ ಅವಳು ಏನಾದರೊಂದು ಅನಾಹುತ ಮಾಡುವುದು ಖಂಡಿತಾ ಆಯಿಷಾಕ್ಕ. ಅವಳನ್ನು ಹೇಗಾದರೂ ಮಾಡಿ ನಿಮ್ಮ ಅಂಬ್ಯುಲೆನ್ಸ್ಗೆ ಹಾಕಿ ಕರೆದುಕೊಂಡು ಹೋಗಿ’ ಎಂದು ಸಾರ್ವಜನಿಕರು ಮತ್ತು ಇಲಾಖೆಯವರು ನನಗೆ ಕರೆ ಮಾಡಿ ಕೇಳಿಕೊಂಡರು. ಅವಳನ್ನು ಕರೆತಂದು ಬಿಡುವುದಾದರೂ ಎಲ್ಲಿಗೆ? ಎಂದು ಎಷ್ಟೇ ಯೋಚಿಸಿದರೂ ಉತ್ತರ ಸಿಗಲಿಲ್ಲ. ಆದದ್ದು ಆಗಲಿ, ದೇವರಿದ್ದಾನೆ ಎಂಬ ನಂಬಿಕೆಯೊoದಿಗೆ ಅಂಬ್ಯುಲೆನ್ಸ್ನೊoದಿಗೆ ಅಲ್ಲಿಗೆ ಹೋದೆ. ಬೆಡ್‌ಶೀಟ್ ಹಾಕಿ ಅವಳನ್ನು ಹಿಡಿದು ಅಂಬ್ಯುಲೆನ್ಸ್ ಹತ್ತಿಸಬೇಕಾದರೆ ಸಾಕೋ ಸಾಕಾಗಿತ್ತು. ಅವಳನ್ನು ಕೂರಿಸಿಕೊಂಡು ಹತ್ತು ಗಂಟೆಯವರೆಗೆ ಹತ್ತಾರು ಆಸ್ಪತ್ರೆಗಳಿಗೆ ಸುತ್ತಾಡಿದರೂ ಯಾರೂ ಸೇರಿಸಿಕೊಳ್ಳಲು ಸಿದ್ಧರಿರಲಿಲ್ಲ. ಕೊನೆಗೆ ಯಾರಾದರೂ ವಾರಸುದಾರರು ಸಿಗಬಹುದು ಎಂಬ ನನ್ನ ಕಲ್ಪನೆಯೂ ಸುಳ್ಳಾಯಿತು. ಜೊತೆಗಿದ್ದ ಪೊಲೀಸ್‌ನವರು ದಿಕ್ಕು ತೋಚದಾದರು. ಕೊನೆಗೆ ಒಂದು ದಿನದ ಮಟ್ಟಿಗೆ ನನ್ನ ಮನೆಯಲ್ಲಿ ಅವಳಿಗೆ ಆಶ್ರಯ ಕಲ್ಪಿಸಿದೆ. ರಾತ್ರಿಯಿಡೀ ಅವಳ ರಂಪಾಟ ಕಂಡು ಮರುದಿನ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಅವಳನ್ನು ಎಲ್ಲಾದರೂ ಸೇರಿಸೋಣ ಎಂದು ಹೊರಡಲು ರೆಡಿಯಾಗುತ್ತಿದ್ದಂತೆ, ‘ನಿಮ್ಮ ಮನೆಯಿಂದ ಒಂದು ಕಿ.ಮೀ. ದೂರದಲ್ಲಿ ರಸ್ತೆಯಲ್ಲೊಬ್ಬಳು ಬಿದ್ದಿದ್ದಾಳೆ. ಮೈಮೇಲೆ ಬಟ್ಟೆಯಿಲ್ಲ. ನೋಡುವಾಗ ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಾಳೆ. ಆಯಿಷಾಮ್ಮ, ಅವಳನ್ನು ಕರೆದುಕೊಂಡು ಹೋಗಿ ಎಲ್ಲಾದರೂ ಬಿಡಿ’ ಎಂದು ಅಲ್ಲಿನ ಬ್ಯೂಟಿಪಾರ್ಲರ್‌ನ ಮಾಲಕಿಯೊಬ್ಬರು ಕರೆ ಮಾಡಿ ಹೇಳಿದರು. ಫೋನ್ ಕೆಳಗಿಡಬೇಕೆನ್ನುವಷ್ಟರಲ್ಲಿ ಸಾರ್ವಜನಿಕರಿಂದ ಕರೆಯ ಮೇಲೆ ಕರೆಗಳು ಬರತೊಡಗಿದವು. ಮಾನಸಿಕ ಅಸ್ವಸ್ಥೆಯನ್ನು ಮನೆಯಲ್ಲೆ ಬಿಟ್ಟು ಅಂಬ್ಯುಲೆನ್ಸ್ನೊoದಿಗೆ ಅಲ್ಲಿಗೆ ಹೋಗಿ ಅವಳನ್ನು ನೇರವಾಗಿ ಮನೆಗೆ ಕರೆದುಕೊಂಡು ಬಂದೆ. ‘ಇಂಥ ಮಕ್ಕಳು ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದರೆ, ಅವರನ್ನು ನಾನು ಹೀಗೆ ಬಿಡುತ್ತಿದ್ದೇನಾ?’ ಎಂಬ ಒಂದೇ ಒಂದು ಯೋಚನೆ ನನ್ನ ಬದುಕನ್ನು ಬದಲಾಯಿಸಿತು. ಅವಳಿಗೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿಬಿಟ್ಟೆ. ಮರುದಿನ ಬಂಡಿಮಠ ಬಸ್‌ಸ್ಟಾö್ಯಂಡ್‌ನಲ್ಲಿದ್ದ ಅನಾಥ ಅಜ್ಜನೋರ್ವನನ್ನು ರಿಕ್ಷಾ ಚಾಲಕರೋರ್ವರು ನನ್ನ ಮನೆಗೆ ಕರೆದುಕೊಂಡು ಬಂದರು. 85 ವರ್ಷದ ಆ ಅಜ್ಜನಿಗೆ ನಡೆದಾಡಲು ಆಗುತ್ತಿರಲಿಲ್ಲ. ಅವರಿಗೆ ಚಿಕಿತ್ಸೆ ನೀಡಿದೆ. ಕೆಲವೇ ದಿನಗಳಲ್ಲಿ ಹುಷಾರಾದರು. ಹೀಗೆ ಒಂದು ವರ್ಷದಲ್ಲಿ 90 ಮಂದಿ ಅನಾಥರು ನನ್ನ ಮನೆ ಸೇರಿದರು. ಒಂದಷ್ಟು ಮಂದಿಯ ಮನೆ ವಿಳಾಸ ಕಂಡುಹಿಡಿದು ಅವರನ್ನು ಅವರ ಮನೆಗೆ ಕಳುಹಿಸಿಕೊಟ್ಟು ಬಂದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಾನು ಹಾಕಿದ ವೀಡಿಯೋ ನೋಡಿ ಇಲ್ಲಿಗೆ ಬಂದು ಗುರುತು ಪತ್ತೆಹಚ್ಚಿ ಕರೆದುಕೊಂಡು ಹೋದರು. ಉಳಿದವರು ಮಾನಸಿಕ ಅಸ್ವಸ್ಥರು, ವೃದ್ಧರು, ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾದ ಮಹಿಳೆಯರು, ಮಕ್ಕಳು ಹೀಗೆ ಒಟ್ಟು 70 ಮಂದಿ ಇದೀಗ ಇಲ್ಲಿದ್ದಾರೆ. ಇವರಲ್ಲಿ ಎಂಟು ಜನ ಮಲಗಿದ ಸ್ಥಿತಿಯಲ್ಲಿರುವವರು ಇದ್ದಾರೆ. ಇವರ ಪಾಲನೆಯ ಜೊತೆಗೆ ಐದು ಮಂದಿ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿದ್ದೇನೆ. ಹೀಗೆ ನನ್ನ ಸ್ವಂತ ಮನೆ ಆಶ್ರಮವಾಗಿ ಬದಲಾಯಿತು.
ಸುರಕ್ಷಾ ಚಾರಿಟೇಬಲ್ ಟ್ರಸ್ಟ್
ಇತ್ತೀಚೆಗೆ ನನ್ನ ವಾಸಕ್ಕಾಗಿ ಪಕ್ಕದಲ್ಲಿ ಮೂರು ಸೆನ್ಸ್ ಜಾಗದಲ್ಲಿ ಬಂಡೆಕಲ್ಲಿನ ಮೇಲೆ ಸ್ವಂತ ಸೂರೊಂದನ್ನು ನಿರ್ಮಿಸಿಕೊಂಡಿದ್ದೇನೆ. 45 ಸೆನ್ಸ್ ಜಮೀನನ್ನು ಅನಾಥರಿಗಾಗಿ ಮೀಸಲಿಟ್ಟು ಕಳೆದ ಮೂರು ವರ್ಷಗಳ ಹಿಂದೆ ‘ಸುರಕ್ಷಾ ಚಾರಿಟೇಬಲ್ ಟ್ರಸ್ಟ್’ ಎಂಬ ಹೆಸರಿನಲ್ಲಿ ನೋಂದಾಯಿಸಿದ್ದೇನೆ. ಕಳೆದ 6 ವರ್ಷಗಳಲ್ಲಿ ನಾನು ಒಬ್ಬಳೇ ದುಡಿದು 80 ಮಂದಿ ಅನಾಥರನ್ನು ಸಾಕಿದ್ದೇನೆ. ನನ್ನ ಪ್ರಯತ್ನಕ್ಕೆ ಮಗಳು, ಅಳಿಯ, ಗಂಡ ಕೂಡಾ ಸಾಥ್ ನೀಡಿದ್ದಾರೆ.
ಕೊರೊನಾ ಕಾಲದಲ್ಲಿ ಕಷ್ಟವೋ ಕಷ್ಟ
ಕೊರೊನಾ ದಿನಗಳು ನಮ್ಮ ಪಾಲಿಗೆ ಸಾಕಷ್ಟು ನೋವನ್ನು ನೀಡಿವೆ. ದೊಡ್ಡ ಮಗಳು, ಅಳಿಯ ಉದ್ಯೋಗವನ್ನು ಕಳೆದುಕೊಂಡರು. ಗಂಡನ ಸಂಪಾದನೆಯೂ ಕಡಿಮೆಯಾಯಿತು. ಕೇವಲ ಅಂಬ್ಯುಲೆನ್ಸ್ನಿoದ ಬಂದ ಆದಾಯವೇ ಅನಾಥರಿಗೆ ಅನ್ನ ನೀಡಿದೆ. ಹಾಗೆಂದು, ನಾನು ಯಾರಲ್ಲೂ ಒಂದು ರೂಪಾಯಿಯನ್ನೂ ಕೇಳಲಿಲ್ಲ.
ಕೊರೊನಾ ನಂತರದ ದಿನಗಳು ಅಂದರೆ ಕಳೆದ ಎರಡು ವರ್ಷಗಳಿಂದ ದಾನಿಗಳಿಂದ, ಸಮಾನ ಮನಸ್ಕರಿಂದ ಸಣ್ಣಪುಟ್ಟ ಸಹಾಯ ದೊರೆಯುತ್ತಿದೆ. ಆಶ್ರಮವನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಹುಟ್ಟುಹಬ್ಬ ಆಚರಣೆ, ಹಬ್ಬಗಳ ಆಚರಣೆಯ ನೆಪದಲ್ಲಿ ಕೆಲವರು ಕೆಲವೊಮ್ಮೆ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.
ಆಹಾರ, ಔಷಧ ಹೀಗೆ ಒಂದು ದಿನಕ್ಕೆ ಕಡಿಮೆಯೆಂದರೂ ಒಂದುವರೆ ಸಾವಿರ ರೂಪಾಯಿ ಖರ್ಚಿಗೆ ಬೇಕು. ನಾಲ್ಕು ಮಕ್ಕಳ ಶಾಲಾ ಖರ್ಚು ಬೇರೆಯೇ ಇದೆ. ಇಲ್ಲಿನ ಪ್ರತಿಯೊಬ್ಬರಿಗೂ ವೈದ್ಯರ ಸಲಹೆಯಂತೆ ಔಷಧಗಳನ್ನು ನೀಡಲಾಗುತ್ತಿದೆ. ವಾರಕ್ಕೆ ರೂ. 1,500 ಇದಕ್ಕೆ ತಗಲುತ್ತದೆ. ಕಾರ್ಕಳದ ಸ್ಪಂದನಾ ಆಸ್ಪತ್ರೆಯ ವೈದ್ಯರಾದ ಡಾ| ಕೆ. ಎಸ್. ರಾವ್ ರಿಯಾಯಿತಿ ದರದಲ್ಲಿ ಔಷಧ, ಮಾತ್ರೆಗಳನ್ನು ನೀಡುವ ಮೂಲಕ ಸಹಕರಿಸುತ್ತಿದ್ದಾರೆ.
ಮೂಲಭೂತ ಸೌಕರ್ಯಗಳು ಬೇಕಾಗಿವೆ
ಇಲ್ಲಿನ ಅನಾಥರಿಗೆ ಬೇಕಾಗಿರುವುದು ಒಂದು ಸೂರು ಮತ್ತು ಒಂದು ಹಿಡಿ ಅನ್ನ. ಅಷ್ಟನ್ನು ಬಿಟ್ಟು ಬೇರೆ ಏನನ್ನೂ ಅವರು ಕೇಳುವುದಿಲ್ಲ. ನಾವು ಭೂಮಿಗೆ ಬರುವಾಗ ಇಲ್ಲಿಂದ ಹೊರಡುವ ಟಿಕೆಟ್ ಅನ್ನು ಪಡೆದುಕೊಂಡೆ ಬಂದಿದ್ದೇವೆ. ಆದ್ದರಿಂದ ನನ್ನ ಕೈಲಾದಷ್ಟು ವೃದ್ಧರ ಸೇವೆ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಖರೀದಿಸಿದಾಗ ಇರುವ ಮನೆಯಲ್ಲಿರುವುದು ಮೂರು ರೂಮುಗಳು. ಜನ ಹೆಚ್ಚಾದಂತೆ ಎದುರಿಗೊಂದು ತಗಡು ಶೀಟ್ ಹಾಕಿದ್ದೇನೆ. ಜೋರು ಮಳೆ ಬಂದರೆ ನೀರು ಒಳಬರುತ್ತದೆ. ಇನ್ನು ಹಿಂಭಾಗದಲ್ಲಿ ತಗಡು ಶೀಟ್ ಹಾಕಿ ಹಾಲ್ ಒಂದನ್ನು ಸಿದ್ಧಪಡಿಸಿದ್ದೇನೆ. 70 ಮಂದಿಗೆ ಅದು ಎಲ್ಲೂ ಸಾಕಾಗುವುದಿಲ್ಲ. ಇದೀಗ ದೊಡ್ಡ ಹಾಲ್‌ವೊಂದರ ಅಗತ್ಯತೆ ಇದೆ. ಹಾಲ್‌ನ ಆರಂಭಿಕ ಕೆಲಸ ಮುಗಿದಿದೆ. ಯಾರಲ್ಲೂ ಹಣ ಕೊಡಿ ಎಂದು ಕೇಳಲು ಮನಸ್ಸು ಒಪ್ಪುವುದಿಲ್ಲ. ಆದರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಇಲ್ಲಿನ ವಸ್ತುಸ್ಥಿತಿಯನ್ನು ನೋಡಿ ಆಹಾರಕ್ಕಾಗಿ ಈಗಾಗಲೇ ರೂ. 50 ಸಾವಿರ ನೀಡಿದ್ದಾರೆ. ಹೊಸ ಕಟ್ಟಡಕ್ಕೂ ಧರ್ಮಸ್ಥಳದಿಂದ ಆರ್ಥಿಕ ನೆರವು ದೊರೆಯುವ ನಿರೀಕ್ಷೆ ಇದೆ. ಹಾಗಾದಾಗ ಅನಾಥರಿಗೊಂದು ಸುಂದರ ಆಸರೆ ದೊರೆತಂತಾಗುತ್ತದೆ.
ಆಯಿಷಾ ಸದಾ ಬ್ಯುಸಿ
ಹಣ ಅಂದರೆ ಅಲ್ಲರಿಗೂ ಇಷ್ಟ. ಆದರೆ ಹೆÀಣ ಅಂದರೆ ಎಲ್ಲರು ಹೆದರುವವರೇ. ಆದರೆ ನಾನು ಮಾತ್ರ ಸತ್ತವರಿಗೆ ಹೆದರುವುದಿಲ್ಲ. ಆದರೆ ಜೀವ ಇರುವವರಿಗೆ ಹೆದರಬೇಕಾಗುತ್ತದೆ. ಈ ಊರಿನಲ್ಲಾಗಲಿ ಅಥವಾ ಪಕ್ಕದ ಊರಿನಲ್ಲಾಗಲಿ ಎಲ್ಲಾದರೂ ಅನಾಥ ಶವ ಕಂಡರೆ ಇಲಾಖೆಯವರು ನನಗೆ ಕರೆ ಮಾಡುತ್ತಾರೆ. ನಾನಂತೂ ಹೆಣ ಯಾವ ಸ್ಥಿತಿಯಲ್ಲಿದ್ದರೂ, ಎಲ್ಲೇ ಇದ್ದರೂ ಹೆದರುವುದಿಲ್ಲ. ಆತ್ಮಹತ್ಯೆಯಂತಹ ಕೇಸ್‌ಗಳಲ್ಲಿ ಮರದಿಂದ ಹೆಣವನ್ನು ಇಳಿಸಿ ಶುಚಿಗೊಳಿಸಿ, ಕೊಳೆತ ಹೆಣವನ್ನು ನೀರಿನಿಂದ ತೆಗೆದು ಪ್ಯಾಕ್ ಮಾಡಿ, ಸುಮಾರು ಎರಡು ಮೂರು ಕಿ.ಮೀ. ದೂರದಿಂದ ಹೆಣವನ್ನು ಹೊತ್ತು ತಂದು ಪೋಸ್ಟ್ ಮಾರ್ಟಂ ಮಾಡಿಸಿ ಸ್ಮಶಾನದಲ್ಲಿ ಕಟ್ಟಿಗೆಯ ಮೇಲೆ ಹೆಣವನ್ನು ಇಡುವವರೆಗಿನ ಕೆಲಸವನ್ನು ಮಾಡಿದ ನಂತರವೇ ಮನೆ ಸೇರುವುದು. ಈಗಾಗಲೇ 200ಕ್ಕೂ ಹೆಚ್ಚು ಇಂತಹ ಕೆಲಸ ಮಾಡಿದ್ದೇನೆ. ಇನ್ನು ಆಶ್ರಮದಲ್ಲಿರುವ ನಾಲ್ಕೆöÊದು ಮಂದಿಗೆ ಏಳು ಬಾಟಲಿ ರಕ್ತವನ್ನು ನೀಡಿ ಅವರನ್ನು ಬದುಕಿಸಿದ್ದೇನೆ. ನಾನು ಯಾವುದೇ ಪ್ರಚಾರವನ್ನು ಬಯಸಿಲ್ಲ. ಆದರೂ ನನ್ನ ಕೆಲಸವನ್ನು ಸಾವÀðಜನಿಕರು, ಇಲಾಖೆಗಳು ಗುರುತಿಸಿ 97 ಸನ್ಮಾನಗಳನ್ನು ಮಾಡಿಸಿದ್ದಾರೆ ಎಂದಾಗ ಆಯಿಷಾರವರ ಮೊಗದಲ್ಲಿ ಸಾರ್ಥಕತೆಯ ಭಾವನೆ ಎದ್ದು ಕಾಣುತ್ತಿತ್ತು.
18 ರಿಂದ 90 ವರ್ಷ ವಯಸ್ಸಾದವರು ಇಲ್ಲಿದ್ದಾರೆ. ಒಬ್ಬೊಬ್ಬರದ್ದು ಒಂದೊoದು ಕಥೆ. ಇಲ್ಲಿ ಸರ್ವಧರ್ಮೀಯರೂ ಇದ್ದು ಅವರವರ ಇಚ್ಛೆಯಂತೆ ಭಜನೆ, ಪೂಜೆ, ಪುನಸ್ಕಾರಗಳನ್ನು ಮಾಡುತ್ತಾರೆ. ಯಾವುದಕ್ಕೂ ಇಲ್ಲಿ ಅಂಕುಶಗಳಿಲ್ಲ. ಇದೀಗ ಇವರುಗಳನ್ನು ನೋಡಿಕೊಳ್ಳಲು ಮೂರು ಮಂದಿ ಸಮಾನ ಮನಸ್ಕ ಕೆಲಸದವರವನ್ನು ನೇಮಿಸಿಕೊಂಡಿದ್ದಾರೆ.
ನಿಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಹೀಗೆ ಯಾವುದೇ ಖುಷಿಯನ್ನು ನೀವು ಇಲ್ಲಿನ ಅನಾಥರೊಂದಿಗೆ ಆಚರಿಸಿಕೊಳ್ಳಬಹುದು. ನಾವು ಕಂಡುಕೊoಡoತೆ ಸದ್ಯಕ್ಕೆ ಇವರಿಗೆ 25 ಮಂಚ, ಆಹಾರದ ಅಗತ್ಯತೆ ಇದೆ. ಆಶ್ರಮ ಸಾರ್ವಜನಿಕರ ಭೇಟಿಗೆ ಮುಕ್ತವಾಗಿದೆ. ನೀವು ಆಯಿಷಾರವರ ಸಮಾಜ ಸೇವೆಗೆ ಕೈಜೋಡಿಸಬೇಕೆಂದಿದ್ದರೆ ಅವರಿಗೆ ಕರೆ ಮಾಡಲು ಅವರ ದೂರವಾಣಿ ಸಂಖ್ಯೆ : 9880497157.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *