ಅನಿಲ್ ಕುಮಾರ್ ಎಸ್.ಎಸ್.
ಹಿಂದಿನ ಸಂಚಿಕೆಯಲ್ಲಿ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಸಬಲೀಕರಣದಲ್ಲಿ ಯೋಜನೆಯ ಪಾತ್ರಗಳನ್ನು ತಿಳಿದುಕೊಂಡಿದ್ದೆವು.
ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘ ಪದ್ಧತಿಯು ದೇಶಾದ್ಯಂತ ಹೆಸರುವಾಸಿಯಾಗಿದ್ದರೆ, ಪುರುಷರಿಂದಲೂ ಸ್ವಸಹಾಯ ಸಂಘಗಳ ನಿರ್ವಹಣೆ ಸಾಧ್ಯ ಎನ್ನುವುದನ್ನು ಪೂಜ್ಯ ಶ್ರೀ ಹೆಗ್ಗಡೆಯವರು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೇಶಕ್ಕೇ ಮಾದರಿಯಾಗುವಂತೆ ತೋರಿಸಿಕೊಟ್ಟಿದ್ದಾರೆ. ಯೋಜನೆಯ ಪ್ರಾರಂಭದ ದಿನಗಳಲ್ಲಿ ರೈತರ ಸ್ವಸಹಾಯ ಸಂಘಗಳನ್ನು ಪೂಜ್ಯರು ಪ್ರಾರಂಭಿಸಿದರು. ೧೦ಕ್ಕಿಂತ ಹೆಚ್ಚು ರೈತರನ್ನೊಳಗೊಂಡ ಈ ಸಂಘಗಳು ‘ಪ್ರ್ರಗತಿಬಂಧು ಸ್ವಸಹಾಯ ಸಂಘಗಳು’ ಎಂದು ಪ್ರಸಿದ್ಧಿ ಪಡೆದವು. ಈ ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಎಲ್ಲಾ ಅಂಶಗಳು ಇರುತ್ತವೆ. ಇವುಗಳ ಜೊತೆಯಲ್ಲಿ ‘ಶ್ರಮ ವಿನಿಮಯ’ ಎಂಬ ವಿಶೇಷ ವ್ಯವಸ್ಥೆಯನ್ನು ಈ ಸಂಘಗಳು ಹೊಂದಿರುತ್ತವೆ.
ಸ್ವಸಹಾಯದ ಮೂಲಕ ಕೇವಲ ಆರ್ಥಿಕ ಸಾಲ ಸೌಲಭ್ಯ ಪಡೆಯಲಿಕ್ಕಷ್ಟೇ ಮೀಸಲಾಗಿಡದೆ, ಕೃಷಿ ಕೆಲಸ ಕಾರ್ಯಗಳಿಗೆ ದೈಹಿಕ ಶ್ರಮದ ಮೂಲಕವೂ, ಸ್ವಸಹಾಯದ ಮೂಲಕ ಸರ್ವರೂ ಪ್ರಗತಿ ಹೊಂದುವ ಒಂದು ವಿನೂತನ ವ್ಯವಸ್ಥೆ ಇದಾಗಿದೆ. ಒಂದು ಪ್ರಗತಿಬಂಧು ಸಂಘದಲ್ಲಿ 10 ಜನ ಸದಸ್ಯರಿದ್ದಲ್ಲಿ, ಇತರ ಸಂಘದoತೆಯೇ ಪ್ರತೀ ವಾರದ ಸಭೆಯು ಒಬ್ಬೊಬ್ಬ ಸದಸ್ಯರ ಮನೆಯಲ್ಲಿ ಕೈಗೊಳ್ಳಲಾಗುತ್ತದೆ. ಆದರೆ ಇಲ್ಲಿ ವಿಶೇಷವಾಗಿ ಯಾವ ಮನೆಯಲ್ಲಿ ವಾರದ ಸಭೆ ನಡೆಯಬೇಕೋ, ಆ ದಿನವಿಡೀ ಆ ಮನೆಯ ಕೃಷಿ ಕೆಲಸಕಾರ್ಯಗಳನ್ನು ಆ ಸಂಘದ ಹತ್ತು ಮಂದಿ ಉಚಿತವಾಗಿ ಮಾಡಲೇಬೇಕಾಗಿರುತ್ತದೆ. ಕೆಲಸ ಕಾರ್ಯದ ನಂತರ ಸಂಜೆ ಆ ಮನೆಯಲ್ಲಿ ವಾರದ ಸಭೆ ಆಗುತ್ತದೆ. ಆ ಸದಸ್ಯರಿಗೆ ಆ ದಿನ ಒಮ್ಮೆಲೆ ಹತ್ತು ಆಳುಗಳು ಉಚಿತವಾಗಿ ದೊರೆಯುವುದರಿಂದ ದೊಡ್ಡ ಮಟ್ಟದ ಕೃಷಿ ಕೆಲಸಕಾರ್ಯಗಳು ಸುಲಭವಾಗಿ ಒಮ್ಮೆಲೇ ಕೈಗೊಳ್ಳಲು ಸಾಧ್ಯವಾಗುತ್ತದೆ. ವಾರದ ಸರದಿಯಂತೆ ಈ ಶ್ರಮ ವಿನಿಯಯದ ಲಾಭ ಪ್ರತಿಯೊಬ್ಬ ಸದಸ್ಯರಿಗೂ ಸಿಗುತ್ತದೆ. ಕೇವಲ ಊಟೋಪಚಾರದ ವ್ಯವಸ್ಥೆ ನೋಡಿಕೊಂಡರೆ ಸಾಕು. ಉಚಿತವಾಗಿ ಒಮ್ಮೆಲೇ ಹತ್ತು ಆಳುಗಳ ಶ್ರಮಗಳನ್ನು ತಮ್ಮ ಕೃಷಿ ಕೆಲಸಕಾರ್ಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು. ಸಂಘದಲ್ಲಿ ಒಂದು ಕುಟುಂಬದAತೆ ಅನ್ಯೋನ್ಯತೆಯ ಸದಸ್ಯರಿರುವಾಗ ಪ್ರತೀ ವಾರ ಈ ಶ್ರಮ ವಿನಿಮಯವನ್ನು ಬಹಳ ಸಂತೋಷದಿAದ, ಪರಸ್ಪರ ಗೌರವದಿಂದ ಮಾಡಿಕೊಳ್ಳುತ್ತಾರೆ. ಇದು ಸಂಘದ ಸೌಹಾರ್ದತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಕರಾವಳಿ ಜಿಲ್ಲೆಗಳ ಕೃಷಿ ಅಭಿವೃದ್ಧಿಯಲ್ಲಿ ಯೋಜನೆಯ ಶ್ರಮ ವಿನಿಮಯ ಕಾರ್ಯಕ್ರಮದ ಕೊಡುಗೆ ಅದ್ವಿತೀಯವಾಗಿದೆ. ಸಣ್ಣ ರೈತರು ಸುಲಭವಾಗಿ ತಮ್ಮ ಕೃಷಿ ಭೂಮಿಗಳಲ್ಲಿ ಕೃಷಿ ಮಾಡಿ ಅತ್ಯುತ್ತಮ ಬೆಳೆಯನ್ನು ಪಡೆಯಲು ಈ ಶ್ರಮ ವಿನಿಮಯದಿಂದ ಸಾಧ್ಯವಾಗಿದೆ. ದೀರ್ಘಕಾಲಿಕ ತೋಟಗಾರಿಕಾ ಅಭಿವೃದ್ಧಿಯಲ್ಲಿ ಕೂಡಾ ಯೋಜನೆಯ ಈ ಶ್ರಮ ವಿನಿಮಯ ವ್ಯವಸ್ಥೆಯು ಬಹುದೊಡ್ಡ ಕೊಡುಗೆಯನ್ನು ನೀಡಿರುತ್ತದೆ. ಈ ಪ್ರಗತಿಬಂಧು ಸಂಘಗಳಲ್ಲದೆ, ಇತರ ಪುರುಷರ ಸಂಘಗಳ ವ್ಯವಸ್ಥೆಯೂ ಯೋಜನೆಯಲ್ಲಿದೆ. ಒಂದೇ ರೀತಿಯ ವೃತ್ತಿ ಮಾಡುವ ವೃತ್ತಿ ಬಾಂಧವರು ಕೂಡಾ ಯೋಜನೆಯ ವ್ಯವಸ್ಥೆಯಲ್ಲಿ ಸಂಘಗಳನ್ನು ರಚಿಸಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಉದಾ: ಅಟೋ ಚಾಲಕರ ಸಂಘ, ಬೀದಿ ವ್ಯಾಪಾರಿಗಳ ಸಂಘ ಇತ್ಯಾದಿ. ಈ ಪುರುಷ ಸಂಘಗಳು ಕೂಡಾ ವಾರದ ಸಭೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ.
ಪ್ರತೀ ವಾರದ ಸಭೆಯಲ್ಲಿ ಪ್ರತೀ ಸದಸ್ಯರಿಗೆ ಸಭಾ ಅಧ್ಯಕ್ಷತೆ ವಹಿಸುವ ಅವಕಾಶವಿರುತ್ತದೆ. ಸಭೆಯನ್ನು ನಿರ್ವಹಿಸುವ ನಾಯಕತ್ವ ಗುಣ ಹಾಗೂ ಮಾತುಗಾರಿಕೆಯನ್ನು ಈ ವಾರದ ಸಭೆಯು ಎಲ್ಲಾ ಸದಸ್ಯರಿಗೆ ಕಲಿಸುತ್ತದೆ. ವಾರದ ಸಭೆಗಳಲ್ಲಿ ಅನೇಕ ವಿಷಯಗಳನ್ನು ಚರ್ಚಿಸುವುದರಿಂದ ಇವರಿಗೆ ಉತ್ತಮ ಜ್ಞಾನವೂ ಸಿಗುತ್ತದೆ. ಯೋಜನೆಯ ಸೇವಾಪ್ರತಿನಿಧಿಗಳು ಹಾಗೂ ಮೇಲ್ವಿಚಾರಕರು ಆಗಿಂದಾಗ್ಗೆ ಈ ಸಂಘಗಳನ್ನು ಭೇಟಿ ಮಾಡಿ ಅನೇಕ ವಿಷಯಗಳನ್ನು ತಿಳಿಸುತ್ತಾರೆ. ಸದಸ್ಯರು ಯೋಜನೆಯ ಅನೇಕ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯುತ್ತಾರೆ. ಒಕ್ಕೂಟದ ನಿರ್ವಹಣೆಯಲ್ಲಿ ಪುರುಷರ ಸಂಘಗಳು ಉತ್ತಮ ಪಾತ್ರವನ್ನು ವಹಿಸುತ್ತವೆ. ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಿ, ಉತ್ತಮ ವ್ಯವಸ್ಥೆಗಳನ್ನು ಕಾಪಾಡುವುದರಲ್ಲೂ ಪುರುಷ ಸದಸ್ಯರು ಸದಾ ಮುಂದಿರುತ್ತಾರೆ.
ಊರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪುರುಷ ಸದಸ್ಯರು ಬಹಳ ಸಕ್ರಿಯವಾಗಿ ಭಾಗವಹಿಸುತ್ತಾರೆ. ಊರಿನ ಕಾರ್ಯಕ್ರಮ ಮತ್ತು ಯೋಜನೆಯ ಕಾರ್ಯಕ್ರಮಗಳಿಗೆ ಕೊಂಡಿಯನ್ನು ಈ ಪುರುಷ ಸದಸ್ಯರು ಬೆಸೆಯುತ್ತಾರೆ. ಯೋಜನೆಯ ಕಾರ್ಯಕ್ರಮಗಳನ್ನು ಅವರು ಊರಿನಲ್ಲಿ ಕೈಗೊಳ್ಳುವಾಗ ತಮ್ಮ ಮನೆಯ ಕೆಲಸದಂತೆ ಎಲ್ಲಾ ಕೆಲಸಗಳಲ್ಲಿಯೂ ಭಾಗವಹಿಸುತ್ತಾರೆ ಹಾಗೂ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಸಂಘದಿAದ ಆರ್ಥಿಕ ಶಿಸ್ತನ್ನು ಕಲಿತ ಇವರು ಪ್ರಗತಿನಿಧಿಯನ್ನು ಅತ್ಯಂತ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಸಮರ್ಪಕ ಮರುಪಾವತಿಯನ್ನು ಸುಲಭವಾಗಿ ಮಾಡಿಕೊಂಡು ಹೋಗುತ್ತಾರೆ. ಸದಾ ಕ್ರಿಯಾಶೀಲರಾಗಿರುವ ಇವರು ಆರ್ಥಿಕ ಹಾಗೂ ಸಾಮಾಜಿಕವಾಗಿ ನಿರಂತರವಾಗಿ ಅಭಿವೃದ್ಧಿ ಹೊಂದುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಸಂಘದ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಸದಾ ಉತ್ತಮ ಶ್ರೇಣಿಯನ್ನು ಕಾಯ್ದುಕೊಳ್ಳುತ್ತಾ ಮಾದರಿ ಸಂಘಗಳಾಗಿರುವ ನಿಟ್ಟಿನಲ್ಲಿ ಸದಾ ಶ್ರಮಿಸುತ್ತಾರೆ.
ಇನ್ನಷ್ಟು ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
