ಯುವಜನತೆಯಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಲಿ

ಇಂದಿನ ಮಕ್ಕಳನ್ನು ನೀನು ಏನಾಗಬೇಕೆಂದು ಕೇಳಿದರೆ, ಕ್ರಿಕೆಟಿಗನಾಗಬೇಕೆಂದು ಹೇಳುವವರೇ ಹೆಚ್ಚು. ಕ್ರಿಕೆಟ್ ಆಟಗಾರರಂತೆ ನಾವೂ ಕೂಡ ಫೋರ್, ಸಿಕ್ಸ್ ಹೊಡೆಯಬೇಕೆಂಬ ಆಸೆಯನ್ನೂ ವ್ಯಕ್ತಪಡಿಸುತ್ತಾರೆ. ತಾವು ನೋಡಿದ ಕ್ರಿಕೆಟ್ ಆಟಗಾರರನ್ನು ಇಷ್ಟಪಟ್ಟಿರುತ್ತಾರೆ ಹಾಗೂ ಅವರ ಹಾಗೆ ಆಗಬೇಕೆಂದು ಕನಸು ಕಾಣುತ್ತಾರೆ. ಕೆಲವು ಮಕ್ಕಳು ಪೈಲೆಟ್, ಪೊಲೀಸ್, ಸೈನಿಕ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಿಂಚಬೇಕೆAದು ಹಂಬಲ ಹೊಂದಿರುತ್ತಾರೆ. ಕೆಲವು ಭಕ್ತರು ಕ್ಷೇತ್ರಕ್ಕೆ ಬಂದಾಗ ಹೇಳುವುದುಂಟು; ‘ಸ್ವಾಮಿ, ಮಕ್ಕಳು ಕ್ರಿಕೆಟ್ ಬಿಟ್ಟು ಬೇರೇನೂ ಆಡುವುದಿಲ್ಲ. ಓದುವುದನ್ನು ಬಿಟ್ಟು ಕ್ರಿಕೆಟ್ ಆಡಲು ಹೋಗುತ್ತಾರೆ’ ಎಂದು. ಆಗ ‘ಇದು ಮಕ್ಕಳ ವಯೋಸಹಜ ಆಸೆಗಳು. ಅವರು ಪ್ರೌಢರಾದಂತೆ ಅವರ ಆಸೆ-ಆಕಾಂಕ್ಷೆಗಳೂ ಕೂಡ ಬದಲಾಗುತ್ತಲೇ ಇರುತ್ತವೆ. ಯಾವುದೇ ಭಯ ಬೇಡ. ಮಕ್ಕಳು ಮೊಬೈಲ್ ಗೇಮ್, ವಿಡಿಯೋ ಗೇಮ್ ಆಡದೇ ಕ್ರಿಕೆಟ್ ಅನ್ನು ಆಡುತ್ತಾರಲ್ಲ ಅದು ಪುಣ್ಯ. ಮಕ್ಕಳಿಗೆ ದೈಹಿಕ ಶ್ರಮ ಬೇಕು. ಮೈದಾನದಲ್ಲಿ ಆಡುವಾಗ ದೇಹದ ಎಲ್ಲ ಅವಯವಗಳೂ ಕೆಲಸ ಮಾಡುತ್ತವೆ. ಇದು ಅವರ ದೈಹಿಕ, ಮಾನಸಿಕ ಕ್ಷಮತೆ ಹೆಚ್ಚಲು ಸಹಕಾರಿಯಾಗುತ್ತವೆ. ಟಿ.ವಿ. ನೋಡುವುದರಿಂದ, ಮೊಬೈಲ್, ಕಂಪ್ಯೂಟರ್ ಗೇಮ್ ಆಡುವುದರಿಂದ ಮನರಂಜನೆಯಾಗಬಹುದೇ ಹೊರತು ದೈಹಿಕ ಆರೋಗ್ಯಕ್ಕಾಗಿ ಯಾವುದೇ ಪ್ರಯೋಜನವಿಲ್ಲ’ ಎನ್ನುತ್ತೇನೆ.
ಕ್ರಿಕೆಟ್ ಜಗತ್‌ಪ್ರಸಿದ್ಧ ಆಟ. ವಿಶ್ವದ ಯಾವುದೇ ರಾಷ್ಟçಕ್ಕೂ ಹೋದರೂ ಕ್ರಿಕೆಟ್ ಆಟವನ್ನು ಕಾಣಬಹುದು. ನಮ್ಮ ದೇಶದಲ್ಲೂ ಬಹಳ ವರ್ಷಗಳ ಹಿಂದೆಯೇ ಕ್ರಿಕೆಟ್ ಆಟವಿತ್ತು. ರಾಜ್ಯದ ಕರಾವಳಿ ಭಾಗದಲ್ಲಂತೂ ತೆಂಗಿನ ಮರದ ದಂಡನ್ನು ಬಳಸಿಕೊಂಡು ಟೆನಿಸ್ ಬಾಲ್ ಸಿಗದಿದ್ದರೆ ಪ್ಲಾಸ್ಟಿಕ್ ಕವರ್ ಜೋಡಿಸಿ ಚೆಂಡು ಮಾಡಿ ಆಟವಾಡುವ ಕಾಲವಿತ್ತು. ದಕ್ಷಿಣ ಕನ್ನಡದಲ್ಲಿ ಅಂಡರ್ ಆರ್ಮ್ ಬೌಲಿಂಗ್ ಹೆಚ್ಚು ಪ್ರಚಲಿತದಲ್ಲಿತ್ತು. ಅಂಡರ್ ಆರ್ಮ್ ಕ್ರಿಕೆಟ್‌ನಲ್ಲೂ ಬಹಳಷ್ಟು ಆಟದ ತಜ್ಞರಿದ್ದರು. ವೇಗದ ಬೌಲರ್, ಸ್ಪಿನ್ ಹಾಕುವವರು ಹೀಗೆ ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದರು. ಯಾವಾಗ ಟಿ.ವಿ.ಯಲ್ಲಿ ಕ್ರಿಕೆಟ್ ಅನ್ನು ನೋಡಲಾರಂಭಿಸಿದೆವೋ ಅದರ ಬಳಿಕ ಓವರ್ ಆರ್ಮ್ ಕ್ರಿಕೆಟ್ ಆಟ ಹೆಚ್ಚು ಬಳಕೆಗೆ ಬಂತು.
ನಾನು ಬೆಂಗಳೂರಿನ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ. ಆಗ ಶಾಲೆಯಿಂದ ಧರ್ಮಸ್ಥಳ ಸೇರಿದಂತೆ ದಕ್ಷಿಣ ಕನ್ನಡದ ಹಲವೆಡೆಗಳಿಗೆ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸ ಮುಗಿಸಿ ಶಾಲೆಗೆ ಹೋದ ಬಳಿಕ ಅಧ್ಯಾಪಕರು ಮಕ್ಕಳನ್ನು ಉದ್ದೇಶಿಸಿ ‘ಪ್ರವಾಸದಲ್ಲಿ ಏನೆಲ್ಲ ಕಂಡಿರಿ?’ ಎಂದು ಕೇಳಿದರು. ಆಗ ಮಕ್ಕಳೆಲ್ಲ ಎರಡು ವಿಷಯಗಳನ್ನು ಮುಖ್ಯವಾಗಿ ಹೇಳಿದರು. ‘ಅಲ್ಲಿ ರಸ್ತೆ ಬದಿಯಲ್ಲಿನ ಮರಗಳ ಎಲೆಗಳೆಲ್ಲ ಕೆಂಪಾಗಿರುತ್ತವೆ ಮತ್ತು ಅಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಆಡುತ್ತಾರೆ’ ಎಂದರು. ಆಗ ಅಧ್ಯಾಪಕರು ಆ ಕುರಿತಾಗಿ ಉತ್ತರ ಸಿಗಬಹುದೇ ಎಂದು ನನ್ನ ಮುಖವನ್ನು ನೋಡತೊಡಗಿದರು. ಆಗ ನಾನು ‘ಸರ್, ನಮ್ಮಲ್ಲಿ ಡಾಂಬಾರು ಇಲ್ಲದ ಮಣ್ಣಿನ ರಸ್ತೆಗಳೇ ಇವೆ. ಹಾಗಾಗಿ ರಸ್ತೆಯಲ್ಲಿ ವಾಹನ ಚಲಿಸಿದಾಗ ಧೂಳೆದ್ದು ಅವು ಮರಗಳ ಮೇಲೆ ಕೂರುತ್ತವೆ ಹಾಗಾಗಿ ಎಲೆಗಳೆಲ್ಲ ಕೆಂಪಾಗಿ ಕಾಣುತ್ತವೆ’ ಎಂದೆ. ಎಲ್ಲಾ ಮಕ್ಕಳು ಜೋರಾಗಿ ನಕ್ಕರು. ‘ಹಾಗೆಯೇ ನಮಲ್ಲಿ ಓವರ್ ಆರ್ಮ್ ಕ್ರಿಕೆಟ್ ಆಡುವ ಅಭ್ಯಾಸವೇ ಇಲ್ಲ. ಅದರ ಬಗ್ಗೆ ತಿಳಿದಿಲ್ಲ’ ಎಂದೆ. ಓವರ್ ಆರ್ಮ್, ಹಾರ್ಡ್ಬಾಲ್ ಕ್ರಿಕೆಟ್ ಆಡುತ್ತಾರೆ ಎಂದು ನನಗೂ ಗೊತ್ತಾದದ್ದು ಬೆಂಗಳೂರಿನಲ್ಲಿ ಶಾಲೆಗೆ ಸೇರಿದ ಮೇಲೆ.
ಉಜಿರೆಯಲ್ಲಿ ನಾಲ್ಕೆöÊದು ದಶಕಗಳ ಹಿಂದೆ ‘ಮಕ್ಕಳ ಮೇಳ’ವನ್ನು ಆಯೋಜನೆ ಮಾಡಿದ್ದೆವು. ಅದರಲ್ಲಿ ಮಕ್ಕಳಿಗೆ ಹೊಸ ರೀತಿಯ ಆಟಗಳನ್ನು ಪರಿಚಯ ಮಾಡಿಕೊಡುವ ಕಾರ್ಯಕ್ರಮವೂ ಇತ್ತು. ಅಲ್ಲಿ ಫುಟ್ಬಾಲ್, ಹಾಕಿ ಇನ್ನಿತರ ಆಟಗಳಿದ್ದವು. ವಿಶೇಷವಾಗಿ ಸ್ಕೇಟಿಂಗ್ ಅನ್ನು ಪರಿಚಯಿಸಿದ್ದೆವು. ಕಾಲಿಗೆ ಚಕ್ರ ಕಟ್ಟಿಕೊಂಡು ಹೋಗುವ ಈ ಆಟದ ಕಲ್ಪನೆಯೂ ಕೂಡ ಮಕ್ಕಳಿಗೆ ಇರಲಿಲ್ಲ. ಆಟ ಆಡುವ ರೀತಿ, ನೀತಿ, ಹೇಗೆ ನಿಂತುಕೊಳ್ಳಬೇಕು, ಹೇಗೆ ಓಡಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಇಂತಹ ವಿವಿಧ ಮಾಹಿತಿಗಳನ್ನು ನೀಡಲಾಗಿತ್ತು. ಬಹಳಷ್ಟು ಮಕ್ಕಳು ಕಾಲಿಗೆ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ಓಡುತ್ತಿದ್ದರು. ಹೆಣ್ಣುಮಕ್ಕಳಂತೂ ೭ನೇ ತರಗತಿಯ ನಂತರ ಯಾವುದೇ ರೀತಿಯ ಆಟೋಟಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಯಾಕೆಂದರೆ ಹೆಣ್ಣುಮಕ್ಕಳು ಅರ್ಧಚಡ್ಡಿಯಂತಹ ಕ್ರೀಡಾ ಉಡುಗೆ ತೊಡುವುದು ತಪ್ಪು ಎನ್ನುವ ಭಾವನೆ ಆ ಕಾಲದಲ್ಲಿ ಹಲವರಲ್ಲಿತ್ತು. ‘ಮಕ್ಕಳ ಮೇಳ’ದ ಬಳಿಕ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಶಾಲಾ ಆಟದ ಸಮಯದಲ್ಲಿ ವಿವಿಧ ಆಟಗಳನ್ನು ಆಡಲು ಆರಂಭಿಸಿದರು. ಹೀಗೆ ಆಟೋಟಗಳ ಬಗ್ಗೆ ಸಾಕಷ್ಟು ತಿಳಿಯಲು ಮಕ್ಕಳ ಕೂಟ ಸಹಕಾರಿಯಾಯಿತು.
ಟಿ.ವಿ.ಯ ಬಳಕೆ ಬಂದ ಮೇಲೆ ಕ್ರಿಕೆಟ್‌ನ ಬಗ್ಗೆ ಅನೇಕ ವಿಚಾರಗಳು ಜನರಿಗೆ ತಿಳಿಯಿತು. ಅದುವರೆಗೂ ಅಂಡರ್ ಆರ್ಮ್ಗೆ ಸೀಮಿತವಾಗಿದ್ದ ಕ್ರಿಕೆಟ್ ಓವರ್ ಆರ್ಮ್ನತ್ತ ವಾಲಿತು. ಈಗಲೂ ಅಷ್ಟೇ ದಕ್ಷಿಣ ಕನ್ನಡದ ಭಾಗಗಳಲ್ಲಿ ಓವರ್ ಆರ್ಮ್ ಕ್ರಿಕೆಟ್ ಇದ್ದರೂ ಅಂಡರ್ ಆರ್ಮ್ ಕ್ರಿಕೆಟ್‌ಗಳು ಅಲ್ಲಲ್ಲಿ ಆಯೋಜನೆಯಾಗುತ್ತಿರುತ್ತವೆ. ಕ್ರಿಕೆಟ್‌ನಲ್ಲಿ ಬಾಲ್ ಎಸೆಯುವುದು, ಬ್ಯಾಟ್ ಬೀಸುವುದು ಇಷ್ಟೇ ಅಲ್ಲ, ಆಟವನ್ನು ಚಾಕಚಕ್ಯತೆಯಿಂದ ಕೂಡ ಆಡಬೇಕು, ಆಟವಾಡಲು ದೇಹದಾರ್ಢ್ಯ ಇದ್ದರೆ ಮಾತ್ರ ಸಾಲದು, ಕ್ಷಮತೆಯೂ ಕೂಡ ಮುಖ್ಯವಾಗುತ್ತದೆ ಎಂಬ ಅರಿವು ಹೆಚ್ಚಿನವರಲ್ಲಿ ಮೂಡಿತು. ವಿಶ್ವಕಪ್ ಅಂಗವಾಗಿ ನಡೆದ ಭಾರತ ಮತ್ತು ಆಸ್ಟೆçÃಲಿಯಾ ಪಂದ್ಯದಲ್ಲಿ ಭಾರತದ ಮೊದಲ ಮೂರು ವಿಕೆಟ್‌ಗಳು ಬೇಗನೆ ಉರುಳಿದ್ದವು. ಆ ಹಂತದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಒಂದೊoದೇ ರನ್ ಪೇರಿಸಿಕೊಂಡು ಆಟದ ಶೈಲಿಯನ್ನು ಬದಲಾಯಿಸಿದರು. ಈ ರೀತಿಯ ಆಟದ ಕರಾಮತ್ತುಗಳು ಭಾರತೀಯರಿಗೆ ಅದರಲ್ಲೂ ಹಳ್ಳಿ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಎಲ್ಲರಿಗೂ ಬ್ಯಾಟ್ ಬೀಸಿ ದಾಂಢಿಗರಾಗಬೇಕು, ಫೋರ್, ಸಿಕ್ಸ್ ಹೊಡೆಯಬೇಕು ಎಂಬ ಕಲ್ಪನೆಯಿತ್ತೇ ಹೊರತು, ಅಂಕವನ್ನು ಹೇಗೆ ಪೇರಿಸಬೇಕು ಎಂಬ ಅರಿವಿರಲಿಲ್ಲ. ಹೀಗಾಗಿ ನಿಧಾನವಾಗಿ ಅಂಕವನ್ನು ಪೇರಿಸಿಕೊಂಡು ಹೋಗುವುದು ಅಂದರೆ ಪ್ರತೀ ಓವರ್‌ನಲ್ಲಿ ಆರು ರನ್ ತೆಗೆದರೂ ೫೦ ಓವರ್‌ನಲ್ಲಿ ೩೦೦ ರನ್ ತೆಗೆಯಬಹುದು ಎಂಬ ಯೋಚನೆ ಕೂಡಾ ಇರಲಿಲ್ಲ. ಇಂತಹ ಆಟದ ಶೈಲಿ ಅಥವಾ ಚಾಕಚಕ್ಯತೆಗಳು ಟಿ.ವಿ.ಯಲ್ಲಿನ ನೇರ ಪ್ರಸಾರದಿಂದ ಜನಪ್ರಿಯಗೊಂಡವು.
ಆಟ ಆಡುವುದಕ್ಕಿಂತ ಹೆಚ್ಚು ಆಟದಲ್ಲಿ ನಮ್ಮನ್ನು ನಾವು ತೊಡಗಿಸುವುದು ಬಹಳ ಮುಖ್ಯ. ಒಂದು ದಿನದ ಅಥವಾ ಕೆಲವು ಗಂಟೆಗಳ ಕಾಲ ಆಟ ಆಡುವುದಕ್ಕೆ ಆಟಗಾರನು ಅದೆಷ್ಟೋ ದಿನಗಳ ಕಾಲ ಹಗಲು ರಾತ್ರಿ ಶ್ರಮಪಡಬೇಕಾಗುತ್ತದೆ. ತರಬೇತಿ, ಅಭ್ಯಾಸ, ವ್ಯಾಯಾಮ, ದೈಹಿಕ ಮತ್ತು ಮಾನಸಿಕ ಆರೋಗ್ಯ ಇತ್ಯಾದಿ ಕಾಯ್ದುಕೊಂಡು ಆಟ ಆಡುವ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಆಟಗಾರರಿಗೆ ತರಬೇತಿ ನೀಡುವವರೂ ಕೂಡ ಮಹತ್ವದ ಪಾತ್ರ ವಹಿಸುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರಿಗೆ ಬೌಲಿಂಗ್ ಕಡೆ ಒಲವಿತ್ತಂತೆ. ಅವರ ತರಬೇತುದಾರರು ಒಂದು ದಿನ ಆತನ ಬ್ಯಾಟಿಂಗ್ ನೋಡಿ ನೀನು ಉತ್ತಮ ಬ್ಯಾಟರ್ ಆಗಬಲ್ಲೆ ಎಂದು ಬ್ಯಾಟಿಂಗ್ ಕಡೆ ಗಮನ ಕೊಡುವಂತೆ ತರಬೇತು ನೀಡಿದರಂತೆ. ಮುಂದಿನದು ಇತಿಹಾಸ.
ಆಟಗಾರನು ಹೇಗೆ, ಎಷ್ಟರಮಟ್ಟಿಗೆ ಕಠಿಣ ತರಬೇತಿ ಪಡೆಯಬೇಕಿರುತ್ತದೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಟಿ.ವಿ.ಯಲ್ಲಿ ಮಹಾಭಾರತ ಮತ್ತು ರಾಮಾಯಣದ ಯುದ್ಧದ ದೃಶ್ಯಗಳನ್ನು ನೋಡುವಾಗ ಮಂತ್ರಗಳನ್ನು ಪ್ರಯೋಗಿಸಿ ಬಾಣಗಳನ್ನು ಆಕಾಶಕ್ಕೆ ಬಿಡುತ್ತಿದ್ದರು. ತನ್ನತ್ತ ಬರುವ ಬಾಣಗಳನ್ನು ನಾಶ ಮಾಡಲು ಅಥವಾ ತಡೆ ಒಡ್ಡಲು ಎದುರಾಳಿಯು ಬಾಣಗಳನ್ನು ಪ್ರತಿಮಂತ್ರಿಸಿ ಬಿಡುತ್ತಿದ್ದರು. ಆಗ ಆಕಾಶದಲ್ಲಿಯೇ ಘರ್ಷಣೆಯಾಗಿ ಅದರಲ್ಲೊಂದು ಬಾಣ ಕೆಳಗೆ ಬೀಳುತ್ತಿತ್ತು. ಉದಾಹರಣೆಗೆ ಆಗ್ನೇಯಾಸ್ತçವನ್ನು ಬಿಟ್ಟಾಗ ಅದರ ಮರ್ಮವನ್ನರಿತು ವರುಣಾಸ್ತçವನ್ನು ಪ್ರಯೋಗ ಮಾಡಿದರೆ ಬೆಂಕಿಯ ವಿರುದ್ಧವಾಗಿ ನೀರು ಚೆಲ್ಲಿ ಆಗ್ನೇಯಾಸ್ತç ನಿಷ್ಪçಯೋಜಕವಾಗುತ್ತದೆ. ಹಾಗಾದರೆ ‘ಬಾಣ ಪ್ರಯೋಗಿಸಿದವನು ಯಾವ ಬಾಣ ಪ್ರಯೋಗಿಸಿದ, ಎಷ್ಟು ಶಕ್ತಿಯುಳ್ಳದ್ದು, ಅದಕ್ಕೆ ಪ್ರತಿಯಾಗಿ ಯಾವ ಶಸ್ತಾçಸ್ತçವನ್ನು ಬಳಸಬೇಕು? ಅದನ್ನು ಹೇಗೆ ಎದುರಿಸಬೇಕು ಎಂಬಿತ್ಯಾದಿಗಳನ್ನು ತಿಳಿದು ಪ್ರತಿ ಶಸ್ತçವನ್ನು ಹೂಡಲು ಎದುರಾಳಿಗೆ ಸಮಯ ಉಂಟೇ? ಆತ ಹೇಗೆ ನಿಖರವಾಗಿ ಪ್ರತ್ಯಾಸ್ತçವನ್ನು ಪ್ರಯೋಗಿಸುತ್ತಾನೆ’ ಎಂಬ ಅನುಮಾನಗಳು ನನ್ನನ್ನು ಕಾಡುತ್ತಿದ್ದವು.
ಒಮ್ಮೆ ವಿದ್ವಾಂಸರೊಬ್ಬರು ಮಹಾಭಾರತದ ಕಥೆಯನ್ನು ವಿವರಿಸುವಾಗ ನನ್ನಲ್ಲಿದ್ದ ಸಂದೇಹಕ್ಕೆ ಅವರ ಬಳಿ ಉತ್ತರ ಸಿಗಬಹುದೇನೋ ಎಂದು ಹೇಳಿಕೊಂಡೆ. ಆಗ ಅವರು ಅವೆಲ್ಲ ಕ್ಷಣಾರ್ಧದಲ್ಲಿ ಘಟಿಸುವಂತಹುಗಳು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಏನೇನೆಲ್ಲ ಆಗಿ ಹೋಗಿರುತ್ತದೆ ಎನ್ನುತ್ತಾ ಕ್ರಿಕೆಟ್‌ನ ಉದಾಹರಣೆಯನ್ನು ನೀಡಿದರು. ಕ್ರಿಕೆಟ್ ಪಂದ್ಯದಲ್ಲಿ ವೇಗದ ಬೌಲರ್ ೧೪೦ ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚೆಂಡನ್ನು ಎಸೆಯುವಾಗ ಬ್ಯಾಟ್ಸ್ಮ್ಯಾನ್ ಆ ಬಾಲ್ ಹೇಗೆ ಬರುತ್ತದೆ? ಯಾವ ಕಡೆಯಿಂದ ಬರುತ್ತದೆ ಎಂಬಿತ್ಯಾದಿ ಸುಳಿವನ್ನು ತಿಳಿದುಕೊಂಡು ಬ್ಯಾಟಿಂಗ್ ಮಾಡಬೇಕಾಗುತ್ತದೆ. ಹಾಗೆಯೇ ಬಾಣ ಪ್ರಯೋಗದಲ್ಲೂ ಕೂಡ ಪ್ರತ್ಯಾಸ್ತç ಬಿಡುವಾಗ ಎಲ್ಲಾ ರೀತಿಯಲ್ಲೂ ವಿಶ್ಲೇಷಣೆ, ವಿಮರ್ಶೆ, ಆಲೋಚನೆ, ಊಹೆಗಳನ್ನೆಲ್ಲ ಮಾಡಬೇಕಾಗುತ್ತದೆ ಎನ್ನುತ್ತಾ ವೇಗದ ಬಾಲ್ ಅನ್ನು ಎದುರಿಸುವ ಸಂದರ್ಭದ ಸಾಮ್ಯತೆಯೊಂದಿಗೆ ವಿವರಿಸಿದರು. ಅದಕ್ಕೆ ಸಾಕಷ್ಟು ಅಭ್ಯಾಸ ಮಾಡಬೇಕಾದ ವಾಸ್ತವ ಸಂಗತಿಯನ್ನು ತಿಳಿಸಿದರು.
ಕ್ರಿಕೆಟ್ ಎಂಬುದು ಒಂದು ಟೀಮ್‌ವರ್ಕ್. ಅಲ್ಲಿ ಒಬ್ಬ ಆಟ ಆಡಿದರೆ ಸಾಲದು. ಎಲ್ಲರೂ ಪರಸ್ಪರ ಸಹಕಾರ ನೀಡಿದಾಗ ಮಾತ್ರ ಆಟ ಯಶಸ್ವಿಗೊಳ್ಳಲು ಸಾಧ್ಯ. ತಂಡಕ್ಕೆ ನಾಯಕನಿರುತ್ತಾನೆ. ಆತನ ನಿರ್ದೇಶನದಂತೆ ಎಲ್ಲರೂ ಆಟ ಆಡುತ್ತಾರೆ. ಬೌಲಿಂಗ್ ಮಾಡುವಾತ ಯಾರು, ಎಲ್ಲಿ ಫೀಲ್ಡ್ಗೆ ನಿಲ್ಲಬೇಕೆಂದು ಸೂಚಿಸುತ್ತಾನೆ. ಅದರಂತೆ ನಡೆದುಕೊಂಡಾಗ ವಿಕೆಟ್ ಅನ್ನು ಸುಲಭವಾಗಿ ಉರುಳಿಸಬಹುದು. ಅದರ ಬದಲಾಗಿ ಆತ ಹೇಳಿದಲ್ಲಿ ನಾನ್ಯಾಕೆ ನಿಲ್ಲಬೇಕು, ನಾನು ಇಲ್ಲೇ ನಿಲ್ಲುತ್ತೇನೆ ಎಂದು ಭಾವಿಸಿದರೆ ಒಬ್ಬರಿಂದಾಗಿ ಆಟದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ. ಫುಟ್ಬಾಲ್, ಹಾಕಿ, ವಾಲಿಬಾಲ್ ಹೀಗೆ ಬಹುತೇಕ ಆಟಗಳಲ್ಲಿ ಟೀಮ್‌ವರ್ಕ್ ಅತಿ ಅಗತ್ಯ. ನಾನೆ ಗೋಲು ಹೊಡೆಯುತ್ತೇನೆ ಎನ್ನುವ ಬದಲು ಗೋಲು ಹೊಡೆಯುವವನಿಗೆ ಬಾಲ್ ದಾಟಿಸುತ್ತೇನೆಂಬುದು ಕೂಡ ಮುಖ್ಯ. ಇಂತಹ ಮನೋಧರ್ಮದಿಂದ, ಆಟದ ಶೈಲಿಯಿಂದ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
ನಮ್ಮ ದೇಹದ ಸದೃಢತೆಯನ್ನು ಕಾಪಾಡಿಕೊಳ್ಳಲು ಕ್ರೀಡೆಯೂ ಅತ್ಯಂತ ಸಹಕಾರಿಯಾದುದು. ಸ್ಪರ್ಧೆಗಾಗಿ ಮಾತ್ರವಲ್ಲ, ಮನೋರಂಜನೆ, ಆರೋಗ್ಯವೃದ್ಧಿ, ಉತ್ಸಾಹ, ಸಂತೋಷಕ್ಕಾಗಿ ಕ್ರೀಡೆಗಳಲ್ಲಿ ತೊಡಗಿಕೊಳ್ಳೋಣ. ಮುಖ್ಯವಾಗಿ ಮಕ್ಕಳನ್ನು ಮೊಬೈಲ್, ಕಂಪ್ಯೂಟರ್ ಗೇಮ್, ಟಿ.ವಿ.ಗಳಿಗೆ ಸೀಮಿತಗೊಳಿಸದೆ ಮೈ-ಮನಸ್ಸಿಗೆ ಶಕ್ತಿ ತುಂಬುವ, ದೇಹದ ಕಸುವು ಹೆಚ್ಚಿಸುವ ಬಯಲಲ್ಲಿ ಆಡುವ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡುತ್ತಾ ಎಲ್ಲರಲ್ಲೂ ಕ್ರೀಡಾಸ್ಫೂರ್ತಿಯನ್ನು ಬೆಳೆಸೋಣ.

Facebook
Twitter
WhatsApp
LinkedIn
Telegram