ಸಿಂಗಾಪುರವೆಂಬ ಸ್ವರ್ಗ

ವಿದೇಶ ಪ್ರವಾಸಕ್ಕೆ ಹೋಗಬೇಕೆಂದುಕೊoಡಾಗ ತಕ್ಷಣ ನೆನಪಾಗುವ ಹೆಸರೇ ‘ಸಿಂಗಾಪುರ’. ಜೀವನದಲ್ಲೊಮ್ಮೆ ಸಿಂಗಾಪುರ ನೋಡಬೇಕೆಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಭೂಲೋಕದ ಸ್ವರ್ಗವೆಂದೇ ಕರೆಯಲ್ಪಡುವ ಸಿಂಗಾಪುರ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ಇತ್ತೀಚೆಗೆ ಶ್ರೀ ಹೆಗ್ಗಡೆ ಕುಟುಂಬಸ್ಥರು ಸಿಂಗಾಪುರ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಸೊಬಗನ್ನು ಓದುಗರಿಗೆ ಉಣಿಸುವ ಪ್ರಯತ್ನ ಇಲ್ಲಿದೆ.
ಸಿಂಗಾಪುರ ಗಣರಾಜ್ಯ ದೇಶ. 63 ಸಣ್ಣ ದ್ವೀಪಗಳನ್ನು ಮತ್ತು ಒಂದು ಮುಖ್ಯ ದ್ವೀಪವನ್ನು ಹೊಂದಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಪ್ರಥಮ ಸ್ಥಾನವನ್ನು ಪಡೆದಿದೆ. ಇಲ್ಲಿ ಚೀನಾ, ಮಲಾಯ್ ಮತ್ತು ಭಾರತೀಯ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಸಿಂಗಾಪುರ ಹಚ್ಚ ಹಸಿರಿನಿಂದ ಕೂಡಿದ್ದು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಕೈಚಾಚಿ ಸೆಳೆಯುತ್ತದೆ. ಅಲ್ಲಿರುವ ಐತಿಹಾಸಿಕ, ಪಾರಂಪರಿಕ ಹಾಗೂ ಪ್ರೇಕ್ಷಣೀಯ ತಾಣಗಳು ಪ್ರವಾಸಿಗರ ಮನಗೆಲ್ಲುತ್ತವೆ.
ಸ್ವಚ್ಛತೆ, ಶಿಸ್ತು, ಆಧುನಿಕತೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವೈವಿಧ್ಯದ ಮೂಲಕ ಸಿಂಗಾಪುರ ಜಗತ್ತಿಗೆ ಮಾದರಿಯಾಗಿ ನಿಲ್ಲುತ್ತದೆ. ಸಿಂಗಾಪುರ ಸ್ವಚ್ಛ ಹಾಗೂ ರಮಣೀಯ ನಗರ. ಹುಡುಕಿದರೂ ಎಲ್ಲಿಯೂ ಕಸ ಕಣ್ಣಿಗೆ ಕಾಣದು ಎಂಬ ರೀತಿಯಲ್ಲಿ ನಗರ-ಹಳ್ಳಿ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡಿದ್ದಾರೆ. ಅಲ್ಲಿನ ಪ್ರತಿಯೊಬ್ಬ ನಾಗರಿಕರೂ ಕೂಡ ತಮ್ಮ ಮನೆ ಮಾತ್ರವಲ್ಲದೆ ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆ ಕಾಪಾಡುವಲ್ಲಿ ಕಾಳಜಿ ವಹಿಸುತ್ತಾರೆ ಮತ್ತು ಅದನ್ನು ತಮ್ಮ ಜವಾಬ್ದಾರಿ ಎಂದು ಭಾವಿಸುತ್ತಾರೆ. ಸಿಂಗಾಪುರ ‘ಸ್ವಚ್ಛ ನಗರ’ ಎಂದು ಗುರುತಿಸಿಕೊಳ್ಳುವುದಕ್ಕೊಂದು ಕಾರಣವಿದೆ. ಕಸವನ್ನು ವಿಲೇವಾರಿ ಮಾಡಲು ಮತ್ತು ಮರುಬಳಕೆ ಮಾಡಲು ವ್ಯವಸ್ಥಿತ ಯೋಜನೆಗಳನ್ನು ಅಲ್ಲಿನ ಸರಕಾರವು ಜಾರಿಗೊಳಿಸಿದ್ದು, ಎಲ್ಲ ನಾಗರಿಕರು ತಪ್ಪದೆ ಅಲ್ಲಿನ ಕಾನೂನುಗಳನ್ನು ಪಾಲನೆ ಮಾಡುತ್ತಾರೆ. ಅಲ್ಲಿ ರಸ್ತೆಗಳಲ್ಲಿ, ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆದರೆ ಭಾರಿ ದಂಡ ವಿಧಿಸಲಾಗುತ್ತದೆ. ಈ ಶಿಸ್ತು ಮತ್ತು ಕಾನೂನು ಪಾಲನೆಯಿಂದಲೇ ಸಿಂಗಾಪುರವನ್ನು ವಿಶ್ವದ ಅತಿ ಶುದ್ಧ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ಚ್ಯೂಯಿಂಗಮ್ ಜಗಿಯುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ಚ್ಯೂಯಿಂಗಮ್ ಜಗಿದು ಬೀದಿಗಳಲ್ಲಿ ಉಗುಳಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಸಾರ್ವಜನಿಕವಾಗಿ ಧೂಮಪಾನಕ್ಕೆ ಅವಕಾಶವೇ ಇಲ್ಲ.
ಸ್ವಚ್ಛತೆ ಜೊತೆಗೆ ಅಲ್ಲಿನ ಜನರ ಪರಿಸರ ಪ್ರೀತಿಯನ್ನು ಮೆಚ್ಚಲೇಬೇಕು. ಪರಿಸರ ಸಂರಕ್ಷಣೆಗೆ ಸಿಂಗಾಪುರ ಖಂಡಿತಾ ಮಾದರಿ ಹಾಗೂ ಪ್ರೇರಣೆಯಾಗುವಂಥದ್ದು. ಅಲ್ಲಿನ ನಾಲ್ಕು ಮಹಡಿಯಿಂದ 30-40 ಮಹಡಿಯ ಕಟ್ಟಡಗಳಲ್ಲೂ ವಿಭಿನ್ನ ಜಾತಿಯ ಮರಗಿಡಗಳನ್ನು ನೆಟ್ಟು ಪೋಷಿಸುತ್ತಾರೆ. ಸಣ್ಣಪುಟ್ಟ ಗಿಡಗಳಿಂದ ಹಿಡಿದು ಕೆಲವು ಅಡಿಗಳವರೆಗೆ ಬೆಳೆಯುವ ಮರಗಳನ್ನು ದೊಡ್ಡ ಕಟ್ಟಡಗಳ ಮೇಲೆ ಬೆಳೆಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದಾರೆ. ತಮ್ಮ ಮನೆಯ ಎದುರುಗಡೆ ಒಂದಿಷ್ಟು ಜಾಗವಿದ್ದರೆ ಕೃಷಿ ಮಾಡುತ್ತಾರೆ. ಕೈ ತೋಟದ ಮೂಲಕ ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ. ಕೃಷಿಯಲ್ಲಿ ಆಧುನಿಕತೆ ಮತ್ತು ತಂತ್ರಜ್ಞಾನ ಮಿಳಿತವಾಗಿದೆ. ಪಟ್ಟಣ, ನಗರದಲ್ಲಿ ಸಸ್ಯ ಸಂಪತ್ತನ್ನು ಹೆಚ್ಚಿಸಲು, ಉದ್ಯಾನವನ ಅಭಿವೃದ್ಧಿಪಡಿಸಲು ಸರಕಾರ ಹಾಗೂ ಜನರೂ ತಮ್ಮ ಕೊಡುಗೆ ನೀಡುತ್ತಾರೆ.
ಆಧುನಿಕತೆ ಮತ್ತು ತಂತ್ರಜ್ಞಾನ ಸಿಂಗಾಪುರದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲಿನ ವಿಮಾನ ನಿಲ್ದಾಣವೇ ತಂತ್ರಜ್ಞಾನ ಮತ್ತು ಸೌಂದರ್ಯದ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಸಿಂಗಾಪುರದ ‘ಚಂಗಿ ವಿಮಾನ ನಿಲ್ದಾಣ’ವನ್ನು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಅನೇಕ ಬಾರಿ ಪ್ರಶಂಸಿಸಲಾಗಿದೆ. ಅಲ್ಲಿನ ಗಗನಚುಂಬಿ ಕಟ್ಟಡಗಳ ವಿನ್ಯಾಸದ ವೈಭವ ಒಂದು ಸೋಜಿಗದಂತೆ ಅನಿಸುತ್ತದೆ. ತಂತ್ರಜ್ಞಾನ ಎನ್ನುವುದು ಪ್ರತಿಯೊಂದು ವಿಚಾರದಲ್ಲೂ ಹಾಸುಹೊಕ್ಕಿದ್ದು ಬದುಕು, ಆಧುನಿಕತೆ, ಕೃಷಿ, ಸ್ವಚ್ಛ ಪರಿಸರದ ಸಮತೋಲನವನ್ನು ಅನುಭವಿಸುವ ತಾಣ ಸಿಂಗಾಪುರವಾಗಿದೆ.
ಸಂಸ್ಕೃತಿಯ ವೈವಿಧ್ಯಕ್ಕೆ ಸಿಂಗಾಪುರ ಪ್ರತಿಬಿಂಬವಾಗಿ ನಿಲ್ಲುತ್ತದೆ. ಚೀನಿ, ಮಲಾಯಿ, ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದು. ಅಪೂರ್ವ ತಾಣಗಳ ಜೊತೆಗೆ ಸಾಕಷ್ಟು ಐತಿಹಾಸಿಕ ಪ್ರದೇಶಗಳೂ ಇಲ್ಲಿವೆ. ಸುಂದರವಾದoತಹ ಅನೇಕ ಮ್ಯೂಸಿಯಂಗಳಿವೆ. ಅವುಗಳಲ್ಲಿ ಒಂದಾದ ಪೆರಾನಕನ್ ಮ್ಯೂಸಿಯಂನಲ್ಲಿ ಎಲ್ಲ ಧರ್ಮಗಳಿಗೂ ಸಂಬoಧಪಟ್ಟ ವಸ್ತು, ವಿಚಾರ ಇತ್ಯಾದಿಗಳನ್ನು ಕಾಣಬಹುದಾಗಿದೆ. ಸಿಂಗಾಪುರದಲ್ಲಿ ಇಂಥದ್ದೇ ಪ್ರಧಾನ ಧರ್ಮ ಎಂಬುವುದಿಲ್ಲ. ಎಲ್ಲ ಧರ್ಮಗಳ ಜನರು ಇಲ್ಲಿದ್ದಾರೆ. ಅದಕ್ಕನುಗುಣವಾಗಿ ಎಲ್ಲಾ ಧರ್ಮಾಚರಣೆಗಳನ್ನೂ ಕೈಗೊಳ್ಳುತ್ತಾರೆ. ಬೌದ್ಧ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಉಳಿದಂತೆ ಕ್ರೆö್ಯಸ್ತರು, ಇಸ್ಲಾಂ, ಹಿಂದೂ ಹೀಗೆ ಅನೇಕ ಧರ್ಮದವರಿದ್ದಾರೆ. ಪೆರಾನಕನ್ ಮ್ಯೂಸಿಯಂನ ವಿಶೇಷವೇನೆಂದರೆ ವಿವಿಧ ಧರ್ಮಗಳಿಗೆ ಸಂಬoಧಪಟ್ಟ ಕಲೆ, ಸಂಸ್ಕೃತಿ ಆಚಾರ-ವಿಚಾರ ಇತ್ಯಾದಿ ಸಂಗತಿಗಳೆಲ್ಲ ವಿವಿಧ ಕಾಲಘಟ್ಟದಲ್ಲಿ ಹೇಗೆ ಇತ್ತು, ಈಗ ಹೇಗಿದೆ ಎಂಬುದನ್ನು ಅನಾರವಣಗೊಳಿಸುತ್ತದೆ. ಮುಖ್ಯವಾಗಿ ಆಧುನಿಕ ಉಡುಗೆ-ತೊಡುಗೆ, ಜೀವನ ಶೈಲಿಯ ಕುರಿತಾಗಿಯೂ ವಿಶೇಷ ಪ್ರದರ್ಶನವಿದೆ.
ಸಿಂಗಾಪುರ ಸುಮಾರು 600 ಕೀ.ಮೀ.ನ ಪುಟ್ಟ ದ್ವೀಪ. ಹಾಗಾಗಿ ಅಭಿವೃದ್ಧಿ ಹಾಗೂ ಸಸ್ಯ ಸಂಪತ್ತಿನ ಸಂರಕ್ಷಣೆಗೆ ಜಾಗ ಕಡಿಮೆ. ಕಳೆದ ನೂರು ವರ್ಷಗಳಲ್ಲಿ ಸುಮಾರು150 ಕಿ.ಲೋ. ಮೀಟರ್‌ನಷ್ಟು ಸಮುದ್ರವನ್ನು ಮಣ್ಣು ತುಂಬಿಸಿ ಗಟ್ಟಿ ಭೂಮಿಯನ್ನಾಗಿ ಪರಿವರ್ತಿಸಿ ತಮ್ಮ ನಗರವನ್ನು ವಿಸ್ತರಿಸಿದ್ದಾರೆ. ಇಲ್ಲಿ ಇತ್ತೀಚಿನ ನಿರ್ಮಾಣ ಮರಿನಾ ಬೇ (ಒಚಿಡಿiಟಿಚಿ ಃಚಿಥಿ) ಪ್ರದೇಶದ ಸುಮಾರು ನಲವತ್ತು ಎಕರೆ ಜಾಗದಲ್ಲಿ ವಿಶ್ವವಿಖ್ಯಾತ ಮರಿನಾ ಬೇ ಸ್ಯಾಂಡ್ಸ್ ಹೋಟೆಲ್, ಪಾರ್ಕ್, ‘ಗಾರ್ಡನ್ಸ್ ಬೈ ದಿ ಬೇ’ ಎನ್ನುವ ವೈವಿಧ್ಯಮಯ ಸಸ್ಯಗಳ ಎರಡು ಬೃಹತ್ ಗಾಜಿನ ಮನೆಗಳನ್ನು ನಿರ್ಮಿಸಿದ್ದಾರೆ. ಈ ಬೃಹತ್ ಗಾಜಿನ ಗುಮ್ಮಟದೊಳಗೆ ನಾನಾ ವಿಧದ ಸಸ್ಯ, ಮರ-ಗಿಡಗಳನ್ನು ಬೆಳೆಸಿದ್ದಾರೆ. ಹೆಚ್ಚಾಗಿ ಮೆಡಿಟರೇನಿಯನ್ ಪ್ರದೇಶಗಳ ಸಸ್ಯಗಳ ಸಂಗ್ರಹ ಇಲ್ಲಿದೆ. ಇವುಗಳ ಜೊತೆಗೆ ಲ್ಯಾವೆಂಡರ್ ಗಿಡಗಳು, ಆಲಿವ್ ತೋಪುಗಳು ಮತ್ತು ದೈತ್ಯ ಮರಗಳೂ ಇವೆ. ಸಿಂಗಾಪುರದ ಈ ಹೂವಿನ ಗುಮ್ಮಟವು ೨೦೧೫ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಿಸಲ್ಪಟ್ಟಿದ್ದು ‘ವಿಶ್ವದ ಅತಿದೊಡ್ಡ ಹಸಿರುಮನೆ’ ಎಂಬ ಖ್ಯಾತಿಯನ್ನು ಹೊಂದಿದೆ. ಇದು ಮೂರು ಎಕರೆ ಪ್ರದೇಶದಲ್ಲಿದ್ದು ವಿವಿಧ ದೇಶಗಳಿಗೆ ಸಂಬoಧಪಟ್ಟ ಸಸ್ಯ ಸಂಪತ್ತುಗಳನ್ನು ನಾವಿಲ್ಲಿ ಕಾಣಬಹುದು. ಅವುಗಳನ್ನು ಎಂಟು ಥೀಮ್ ಪಾರ್ಕ್ ಆಗಿ ಮಾಡಿದ್ದು, ಬಾವೊಬಾಬ್ಸ್, ಸಕ್ಯುಲೆಂಟ್ ಗಾರ್ಡನ್, ಆಸ್ಟೆçÃಲಿಯನ್ ಗಾರ್ಡನ್, ಸೌತ್ ಆಫ್ರಿಕನ್ ಗಾರ್ಡನ್, ಸೌತ್ ಅಮೆರಿಕನ್ ಗಾರ್ಡನ್, ಆಲಿವ್ ಗ್ರೋವ್, ಕ್ಯಾಲಿಫೋರ್ನಿಯಾ ಗಾರ್ಡನ್ ಮತ್ತು ಮೆಡಿಟರೇನಿಯನ್ ಗಾರ್ಡನ್ ಎಂದು ಹೆಸರಿಸಲಾಗಿದೆ. ಹೂವಿನ ಗುಮ್ಮಟದ ವಿನ್ಯಾಸದ ಜೊತೆಗೆ ಗಿಡಗಳಿಗೆ ಮಾಡಿರುವ ನೀರು, ಬೆಳಕಿನ ವ್ಯವಸ್ಥೆ, ಆಧುನಿಕ ತಂತ್ರಜ್ಞಾನದ ಬಳಕೆ ಅದ್ಭುತವಾಗಿದೆ. ಇಡೀ ಪ್ರದೇಶ ಗಾಜಿನಿಂದ ಆವೃತವಾಗಿದ್ದರೂ ಅಲ್ಲಿನ ತಾಪಮಾನ 23-25 ಸೆ. ಡಿಗ್ರಿಯಷ್ಟಿರುವುದು ವಿಶೇಷವೇ ಸರಿ.
ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸುವ, ಸಿಂಗಾಪುರದ ‘ಲಿಟಲ್ ಇಂಡಿಯಾ’ ಪ್ರದೇಶದ ಬಗ್ಗೆ ಹೇಳಲೇಬೇಕು. ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಭಾರತದಲ್ಲೇ ಇದ್ದೇವೆ ಎಂಬoತೆ ಭಾಸವಾಗುತ್ತದೆ. ಇಲ್ಲಿ ನೆಲೆಸಿರುವ ಬಹುಪಾಲು ಜನರು ಭಾರತೀಯ ಮೂಲದವರಾಗಿದ್ದು ಭಾರತದ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳನ್ನು ಹಾಗೂ ಧಾರ್ಮಿಕ ನಂಬಿಕೆ, ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಇಲ್ಲಿ ಸಾಕಷ್ಟು ಅಪೂರ್ವ ದೇವಸ್ಥಾನಗಳಿದ್ದು ಈ ಪ್ರದೇಶ ಲಿಟಲ್ ಇಂಡಿಯಾ ಎಂದೇ ಪ್ರಖ್ಯಾತಿ ಪಡೆದಿದೆ. ಚೀನೀ ಸಂಸ್ಕೃತಿಯನ್ನು ಹೋಲುವ ಪ್ರದೇಶವಿದ್ದು ಚೈನಾ ಟೌನ್ ಎಂದೇ ಪ್ರಖ್ಯಾತಿ ಪಡೆದಿದೆ. ಚೀನಾದ ಸಂಸ್ಕೃತಿಯನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಚೈನಾಟೌನ್ ಚೀನಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಉಳಿಸಿಕೊಂಡಿದೆ. ಕಂಪಾoಗ್ ಗ್ಲಾಮ್ ಎಂಬ ಪ್ರದೇಶವಿದ್ದು ಮುಸ್ಲಿಂ ಸಮುದಾಯವರು ಮತ್ತು ಅರಬ್‌ನ ಜನರು ಇಲ್ಲಿ ವಾಸಿಸುತ್ತಿದ್ದು ಮಧ್ಯಪ್ರಾಚ್ಯದ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಹೀಗೆ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವ ಪ್ರದೇಶಗಳನ್ನು ನಾವು ಸಿಂಗಾಪುರದಲ್ಲಿ ಕಾಣಬಹುದಾಗಿದೆ.
ಭದ್ರತೆ ಹಾಗೂ ಸುರಕ್ಷತೆಯ ವಿಚಾರದ ದೃಷ್ಟಿಯಿಂದ ಜನರು ಇಲ್ಲಿಗೆ ಪ್ರವಾಸ ಹೋಗಲು ಇಷ್ಟಪಡುತ್ತಾರೆ. ಪ್ರವಾಸಿಗರಿಗೆ ಇದು ಸುರಕ್ಷಿತ ತಾಣ ಎಂಬ ಭಾವನೆ ಇದೆ. ಸಿಂಗಾಪುರವು ವಿಶ್ವದ ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು. ಇಲ್ಲಿ ರಾತ್ರಿ ವೇಳೆ ಕೂಡಾ ಮಹಿಳೆಯರು ಒಂಟಿಯಾಗಿ ಸುರಕ್ಷಿತವಾಗಿ ಓಡಾಡಬಹುದಾದ ಪರಿಸರವಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದಾದರೂ ವಸ್ತುವನ್ನು ಮರೆತು ಬಿಟ್ಟು ಹೋದರೂ ಅದು ಕಳವಾಗುತ್ತದೆ ಎಂಬ ಭಯ ಅಲ್ಲಿನ ಜನರಿಗೆ ಕಾಡದಷ್ಟು ಆ ದೇಶ ಸುರಕ್ಷಿತವಾಗಿದೆ. ಅಲ್ಲಿನ ಪತ್ರಿಕೆಗಳಲ್ಲಿ ಅಪರಾಧ ಸುದ್ದಿಗಳು ಕಾಣಸಿಗುವುದೇ ಅಪರೂಪವಂತೆ.
ಸಿoಗಾಪುರದ ಸಿವಿಕ್ ಡಿಸ್ಟಿçಕ್ಟ್ ಎಂಬ ನಗರದಲ್ಲಿ ಹಳೆಯ ಬ್ರಿಟಿಷ್ ಕಟ್ಟಡಗಳನ್ನು ನೋಡಬಹುದಾಗಿದೆ. ಪ್ರಾಚೀನ ವಾಸ್ತುಶೈಲಿ ಹಾಗೂ ವಿನ್ಯಾಸ ಆಕರ್ಷಕವಾಗಿದ್ದು ಬೆರಗು ಮೂಡಿಸುತ್ತದೆ. ಇನ್ನು ಐತಿಹಾಸಿಕ ಕಟ್ಟಡಗಳೊಂದಿಗೆ ವಸ್ತುಸಂಗ್ರಹಾಲಯಗಳಾದ ದಿ ಆರ್ಟ್ಸ್ ಹೌಸ್, ನ್ಯಾಷನಲ್ ಗ್ಯಾಲರಿ ಸಿಂಗಾಪುರ್, ನ್ಯಾಷನಲ್ ಮ್ಯೂಸಿಯಂ ಆಫ್ ಸಿಂಗಾಪುರ ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಣ್ಣಿಸಿ ಪ್ರವಾಸಿಗರನ್ನು ಮನಸೂರೆಗೊಳಿಸುತ್ತದೆ.
ಪ್ರತಿಯೊಬ್ಬರ ಪಾಲಿಗೂ ಸಿಂಗಾಪುರ ಒಂದು ಕನಸಿನ ನಗರಿ. ಅದು ಕೇವಲ ಪ್ರವಾಸಿಗರ ಮನೋರಂಜನೆಯ ತಾಣವಲ್ಲ. ಬದಲಾಗಿ ಶಿಸ್ತು, ಪ್ರಗತಿ, ಸಂಸ್ಕೃತಿ ಸೌಂದರ್ಯದ ಪ್ರತೀಕ. ಅಲ್ಲಿನ ಶಿಸ್ತುಬದ್ಧ ಜೀವನಶೈಲಿ ಇತರರಿಗೆ ಮಾದರಿಯೂ ಹೌದು. ಒಟ್ಟಾರೆಯಾಗಿ ಸಿಂಗಾಪುರಕ್ಕೆ ಭೇಟಿ ನೀಡುವುದು ಒಂದು ಜೀವನಾನುಭವ ಎನ್ನುವುದರಲ್ಲಿ ಎರಡು ಮಾತಿಲ್ಲ.

Facebook
Twitter
WhatsApp
LinkedIn
Telegram