ಹೆಣ್ಣೆಂದೇಕೆ ಬೀಳುಗಳೆವಿರ!

ಹಿಂದಿನ ಕಾಲದಲ್ಲಿ ಹಿರಿಯರು ಆಶೀರ್ವಾದ ಮಾಡಬೇಕಾದರೆ ‘ದೀರ್ಘಸುಮಂಗಲಿ ಭವಃ ಮತ್ತು ಪುತ್ರಪ್ರಾಪ್ತಿರಸ್ತು’ ಎಂದೇ ಆಶೀರ್ವದಿಸುತ್ತಿದ್ದರು. ಗಂಡು ಮಗು ಹುಟ್ಟಿದರೆ ಬಟ್ಟಲು ಹಿಡಿದುಕೊಂಡು ಅದಕ್ಕೆ ಹೊಡೆಯುವುದರ ಮೂಲಕ ತನ್ನ ಮನೆಯಲ್ಲಿ ಗಂಡು ಮಗು ಜನಿಸಿದೆ ಎಂಬ ಸುದ್ದಿಯನ್ನು ನೆರೆಮನೆಯವರಿಗೆಲ್ಲಾ ತಕ್ಷಣ ತಿಳಿಯುವಂತೆ ಮಾಡುತ್ತಿದ್ದರು. ಗಂಡು ದುಡಿದು ತರುವವನು. ತನ್ನ ವಂಶ ಬೆಳೆಸುವವನೆಂಬ ಭಾವನೆ ಎಲ್ಲರದಾಗಿತ್ತು. ಹಾಗಾಗಿ ಸಹಜವಾಗಿ ಊಟ, ತಿಂಡಿ, ವಿದ್ಯೆ ಅವಕಾಶ ಎಲ್ಲದರಲ್ಲೂ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ಇರುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಆಸ್ತಿಯಲ್ಲೂ ಗಂಡು, ಹೆಣ್ಣು ಮಕ್ಕಳಿಬ್ಬರಿಗೂ ಸಮಾನ ಪಾಲು ಕೊಡಬೇಕಾಗುತ್ತದೆ. ಮಾತ್ರವಲ್ಲ ಗಂಡು ಮಕ್ಕಳಿಲ್ಲದಿದ್ದರೆ ಹೆಣ್ಣುಮಕ್ಕಳೆ ಹೆತ್ತವರನ್ನು ನೋಡಿಕೊಳ್ಳಬೇಕೆಂಬ ಕಾನೂನು ಜಾರಿಯಲ್ಲಿದೆ. ಹಾಗಾಗಿ ತಾನು ಮದುವೆ ಆಗಿ ಬೇರೆ ಮನೆಗೆ ಹೋದರು ಹೆತ್ತವರನ್ನು ಸಾಕುವ ಬಾಧ್ಯತೆ ನನ್ನದಲ್ಲ ಎಂದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ.
ಇಂದಿಗೂ ಕೂಡಾ ಗಂಡು ಮಕ್ಕಳನ್ನು ಬೆಳೆಸುವಲ್ಲಿ ಹೆಣ್ಣು ಮಕ್ಕಳ ಹಾಗೆ ಯಾವುದೇ ಕಟ್ಟುಪಾಡುಗಳಿಲ್ಲ. ಆತ ಗಂಡಸು, ಎಲ್ಲಿ ಬೇಕಾದರೂ ಹೋಗಬಹುದು. ಏನು ಬೇಕಾದರೂ ಮಾಡಬಹುದೆಂಬ ಚಿಂತನೆ ಹೆತ್ತವರದ್ದಾಗಿದೆ. ಆದರೆ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಅನೇಕ ರೀತಿಯ ಕಾನೂನಿನ ಸುರಕ್ಷತೆ ಬಂದಿರುವುದರಿAದ ನಾವು ನೈತಿಕತೆ, ಸಂಸ್ಕಾರಗಳ ಬಗೆಗೆ ಹೆಣ್ಣು ಮಕ್ಕಳಿಗಷ್ಟೆ ಹೇಳಿದರೆ ಸಾಲದು, ಗಂಡು ಮಕ್ಕಳನ್ನು ಸಣ್ಣಪ್ರಾಯದಲ್ಲೆ ಕೂರಿಸಿಕೊಂಡು ಆತನ ಇತಿಮಿತಿಗಳ ಬಗ್ಗೆ ಹೇಳುವುದು ಒಳಿತು. ಎಷ್ಟೇ ಕಾನೂನುಗಳಿದ್ದರೂ ಇಂದಿಗೂ ಹೆಣ್ಣು ಮಕ್ಕಳ ಮೇಲೆ ಅನ್ಯಾಯ, ಅತ್ಯಾಚಾರಗಳು ನಡೆಯುತ್ತಿವೆ. ಘಟನೆ ನಡೆದ ಬಳಿಕ ಶಿಕ್ಷೆಯೂ ಆಗುತ್ತದೆ. ಆದರೆ ಶಿಕ್ಷೆಯಿಂದ ಸಮಾಜವನ್ನು ತಿದ್ದುವ ಬದಲು, ಈ ರೀತಿಯ ಅನ್ಯಾಯ ನಡೆಯಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಂಡು ಅದನ್ನು ಸರಿಪಡಿಸುವ ದೃಷ್ಟಿಯಲ್ಲಿ ಯೋಚಿಸುವುದು ಒಳಿತು. ಮನೆಯಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಗಂಡುಮಕ್ಕಳಿಗೆ ಸಲಹೆ ಹಾಗೂ ಎಚ್ಚರಿಕೆ ನೀಡುವುದು ಅಗತ್ಯ.
ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರನ್ನು ಸಮಾನ ರೀತಿಯಲ್ಲಿ ಬೆಳೆಸಬೇಕು. ತಪ್ಪು ಯಾರಿಂದ ಆಗಿದೆ ಅವರಿಗೆ ಬುದ್ಧಿ ಹೇಳಬೇಕಲ್ಲದೆ ಆತನ ತಪ್ಪಿಗೆ ಬಲಿಪಶುವಾದ ಹೆಣ್ಣು ಮಕ್ಕಳಿಗಲ್ಲ. ಮನೆಯಲ್ಲಿ ಗಂಡು ಮಕ್ಕಳು ಏನೇ ತಪ್ಪು ಮಾಡಲಿ, ಯಾವುದೇ ಕೆಟ್ಟ ಭಾಷೆ ಉಪಯೋಗಿಸಲಿ ತಾಯಿ ಅಥವಾ ಮನೆಯವರು ಇನ್ನೂ ಸಣ್ಣ ಹುಡುಗ ಎಂದು ತಪ್ಪನ್ನು ತಿದ್ದುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಇತ್ತೀಚೆಗೆ ಸಣ್ಣ ಹುಡುಗರೂ ಸಹ ಇಂಥಾ ಅನ್ಯಾಯದ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ಕಾಣುತ್ತಿದ್ದೇವೆ. ಅದಕ್ಕೆ ಮೂಲ ಕಾರಣವನ್ನು ಹುಡುಕಿದಾಗ ಕಂಡುಕೊoಡ ಸತ್ಯ ಏನೆಂದರೆ ತಾನು ಗಂಡು, ತಾನು ಏನು ಮಾಡಿದರೂ ನಡೆಯುತ್ತದೆ ಎಂದು ಚಿಕ್ಕಂದಿನಿoದಲೇ ಮನಸ್ಸಿನಲ್ಲಿ ಬೇರೂರಿದ ಭಾವನೆ. ಈ ಭಾವನೆಗೆ ನೀರೆರೆಯುವವರು ಹೆತ್ತವರು ಮತ್ತು ಸಮಾಜ.
ಸಂಸ್ಕೃತಿ, ಸಂಸ್ಕಾರ ಎಲ್ಲರಿಗೂ ಅಗತ್ಯ. ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳುವಂತೆ ನಮ್ಮ ನಡವಳಿಕೆ ಹೇಗಿರಬೇಕೆಂದು ತಿಳಿಸಿ ಎಚ್ಚರಿಸಬೇಕು. ಮನೆಯಿಂದ ಹೊರಡುವಾಗ ಎಲ್ಲೂ ಹೆಣ್ಣು ಮಕ್ಕಳನ್ನು ವಿಚಿತ್ರವಾಗಿ ನೋಡುವುದಾಗಲೀ ಅವರ ಉಡುಗೆ, ನಡಿಗೆ, ಶರೀರದ ಬಗ್ಗೆ ಕೀಳುಮಟ್ಟದ ಮಾತುಗಳನ್ನು ಆಡುವುದಾಗಲಿ ಮಾಡಬೇಡ. ಯಾಕೆಂದರೆ ಇದೇ ಮಾತನ್ನು ನಿನಗೆ ಅಥವಾ ನಿನ್ನ ಅಕ್ಕ ತಂಗಿಯರಿಗೆ ಹೇಳಿದರೆ ನಿನಗೆ ಹೇಗೆ ಅನಿಸುತ್ತದೆ ಎಂಬ ಬಗ್ಗೆ ಯೋಚಿಸು. ಮಾತನಾಡುವ ಪ್ರಮೇಯ ಬಂದಾಗಲೂ ನಿನ್ನ ಮಾತು, ನಿನ್ನ ಮತ್ತು ಅವಳ ಚಾರಿತ್ರö್ಯಕ್ಕೆ ಧಕ್ಕೆ ಬಾರದಂತೆ ಇರಲಿ ಎಂದು ಹೇಳಬೇಕು. ಸಂಸ್ಕೃತಿ, ಸಂಸ್ಕಾರ ಗಂಡು ಹೆಣ್ಣುಗಳಿಗಿಬ್ಬರಿಗೂ ಬೇಕು. ಹೆಣ್ಣು-ಗಂಡೆoಬ ಭೇದಸಲ್ಲದು.
ಕಾಲೇಜು ಅಥವಾ ಕಚೇರಿಗಳಲ್ಲಿ ಹೆಣ್ಣು ಮಗಳು ಹೆಚ್ಚು ಅಂಕ ಗಳಿಸಿದರೆ ಅಥವಾ ಅವಳಿಗೆ ಬೇಗ ಭಡ್ತಿ ಆದರಂತೂ ಗಂಡು ಮಕ್ಕಳಿಗೆ ಬಹಳ ಸಿಟ್ಟು ಬರುವುದಿದೆ. ಅಲ್ಲಿ ಅವಳನ್ನು ಪ್ರೋತ್ಸಾಹಿಸುವ ಬದಲು ಅವಳ ಬಗ್ಗೆ, ಅವಳ ಶೀಲದ ಬಗ್ಗೆ ಸುಲಭವಾಗಿ ಇಲ್ಲಸಲ್ಲದ ಮಾತುಗಳನ್ನು ಹೇಳುವುದರ ಮೂಲಕ ಸೇಡು ತೀರಿಸುವ ಮನೋಭಾವ ಕಂಡು ಬರುತ್ತದೆ. ಬದಲಾಗಿ ಅವಳ ಯಶಸ್ಸನ್ನು, ಗೆಲುವನ್ನು ಸ್ವೀಕರಿಸುವ ಮತ್ತು ತಾನೂ ಗೆಲುವಿಗಾಗಿ ಹೆಚ್ಚು ಪರಿಶ್ರಮ ಪಡಬೇಕೆನ್ನುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳ ಜೊತೆ ಹೋಟೆಲ್ ಅಥವಾ ಪ್ರವಾಸಕ್ಕೆ ಹೋಗುವುದಿದ್ದರೂ ಅವರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕಲ್ಲದೆ, ಸಿಕ್ಕಿದ ಅವಕಾಶದಲ್ಲಿ ತನ್ನ ಕೆಟ್ಟತನವನ್ನು ಪ್ರದರ್ಶಿಸುವ ಪ್ರಯತ್ನಕ್ಕೆ ಇಳಿಯಬಾರದು. ‘ನನ್ನ ಮಗ ಒಳ್ಳೆಯವನು, ಗೆಳೆಯರ ಜೊತೆ ಸೇರಿ ಹಾಳಾದ’ ಎಂಬ ಮಾತನ್ನು ತಾಯಂದಿರು ಆಗಾಗ ಹೇಳುತ್ತಿರುತ್ತಾರೆ. ಆದರೆ ತನ್ನ ಮಗ ಗೆಳೆಯರಿಗೆ ಒಳ್ಳೆಯ ಮಾದರಿ, ಸರಿತಪ್ಪುಗಳ ನಡುವೆ ಸರಿಯಾದುದನ್ನು ಆಯ್ಕೆ ಮಾಡುವವ, ಕೆಟ್ಟವರ ಜೊತೆ ಸೇರಿ ಕೆಡುವುದರ ಬದಲು, ತನ್ನ ಒಳ್ಳೆಯತನದಿಂದ ಅವರನ್ನು ಪರಿವರ್ತಿಸುವವ ಯಾಕಾಗಬಾರದು! ಎಂಬುದನ್ನು ಯೋಚಿಸಬೇಕಾಗಿದೆ.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಕೆಲವೆಡೆಗಳಲ್ಲಿ ಚಿಕ್ಕಂದಿನಿoದಲೇ ಮನೆಯಲ್ಲಿ ತಂದೆಗೆ, ಅಣ್ಣನಿಗೆ ಸಿಗುವ ಗೌರವ ತಾಯಿಗೆ, ಅಕ್ಕನಿಗೆ ಸಿಗುವುದಿಲ್ಲ. ಅಮ್ಮ ಯಾವಾಗಲೂ ಅಡುಗೆ ಮನೆಯಲ್ಲಿ ದುಡಿಯುತ್ತಾ ಇರುವ ಮತ್ತು ತಂದೆ ಹೇಳಿದ್ದಕ್ಕೆ ಎದುರಾಡದೆ ಹೊಂದಾಣಿಕೆಯಿAದ ನಡೆಯುವುದನ್ನೇ ಮಗ ನೋಡುತ್ತಿರುತ್ತಾನೆ. ಹಾಗಾಗಿ ಮನೆಯಲ್ಲಿ ತಾಯಿಗೆ ಯಾವುದೇ ರೀತಿಯ ಧ್ವನಿಯಿಲ್ಲ ಮತ್ತು ಆಕೆ ಎರಡನೇ ದರ್ಜೆ ಪ್ರಜೆ ಎನ್ನುವ ಅರಿವು ಮೂಡುತ್ತದೆ. ಆತನಿಗೆ ತಂದೆಯೇ ಮಾದರಿ ಆಗುತ್ತಾನೆ. ಹೆಣ್ಣುಮಕ್ಕಳಿಗೆ ತಾಯಿ ಅನುಭವಿಸುವ ನೋವು, ದುಃಖದ ಬಗ್ಗೆ ಗೊತ್ತಿದ್ದರೂ ಅವಳಿಗೂ ಅಲ್ಲಿ ಮಾತನಾಡುವ ಅವಕಾಶ, ಧೈರ್ಯ ಇರುವುದಿಲ್ಲ. ಗಂಡು ಹೆಣ್ಣಿನ ಬಗೆಗಿನ ಸಮಾನತೆ ಮನೆಯಿಂದಲೇ ಆರಂಭವಾಗಬೇಕು.
ಈಗ ದಿನಗಳು ಬದಲಾಗಿವೆ. ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡಿ ತನ್ನ ಕುಟುಂಬದ ಪೋಷಣೆ ಮಾಡುತ್ತಿದ್ದಾಳೆ ಅಂದ ಬಳಿಕ ಮನೆಯಲ್ಲಿ ಅವಳಿಗೆ ಎಲ್ಲಾ ರೀತಿಯ ಸಹಕಾರ, ಸಹಾಯದ ಜೊತೆಗೆ ಮನೆಯ ಆರ್ಥಿಕ-ಸಾಮಾಜಿಕ ವಿಚಾರಗಳಲ್ಲಿ ಅವಳ ಸಲಹೆ-ಸೂಚನೆಗಳಿಗೂ ಪ್ರಾಧಾನ್ಯತೆ ಕೊಡಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಹೆಣ್ಣು ಮಕ್ಕಳಿಗೆ ವಿದ್ಯೆ ಮತ್ತು ಉದ್ಯೋಗಗಳೆಂಬ ಎರಡೂ ರೆಕ್ಕೆಗಳನ್ನು ಕೊಡಬೇಕಾದದ್ದು ಹೆತ್ತವರ ಕರ್ತವ್ಯವಾಗಿದೆ.

Facebook
Twitter
WhatsApp
LinkedIn
Telegram