ಅನಿಲ್ ಕುಮಾರ್ ಎಸ್. ಎಸ್.
ಹಿಂದಿನ ಸಂಚಿಕೆಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಭಾಗಗಳಲ್ಲಿ ಆಗಿರುವ ಮಹಿಳಾ ಸಬಲೀಕರಣದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಬಾರಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಪ್ರಮುಖ ಅಂಗವಾದ ‘ಜನಮಂಗಲ’ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳೋಣ. ಯೋಜನೆಯ ಎಲ್ಲಾ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಬಡವರಿಗೆ, ಅಸಹಾಯಕ ವ್ಯಕ್ತಿಗಳಿಗೆ ಇರುವಂತೆಯೇ ಜನಮಂಗಲ ಕಾರ್ಯಕ್ರಮವೂ ಕೂಡಾ ಅಸಹಾಯಕ ವ್ಯಕ್ತಿಗಳಿಗಾಗಿಯೇ ಇರುವುದು. ಒಂದು ಬಡ ಕುಟುಂಬದಲ್ಲಿ ಅಂಗವಿಕಲ ಮಗು ಹುಟ್ಟಿದರೆ, ಕುಟುಂಬದ ಯಾರಾದರೂ ಸದಸ್ಯರಿಗೆ ಖಾಯಿಲೆ ಅಥವಾ ಅಪಘಾತದಿಂದ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ಆ ಕುಟುಂಬದ ಪರಿಸ್ಥಿತಿ ಎಷ್ಟೊಂದು ಚಿಂತಾಜನಕ ಆಗಿರಬಹುದು! ನಿತ್ಯವೂ ದುಡಿದು ಸಂಸಾರ ಸಾಗಿಸಬೇಕಾದ ಕುಟುಂಬದಲ್ಲಿ ಅಂಗವಿಕಲನಾದ ಆ ವ್ಯಕ್ತಿಯನ್ನು ನೋಡಿಕೊಳ್ಳುವವರು ಯಾರು? ಅವರ ನಿತ್ಯ ಪೋಷಣೆಯನ್ನು ಮಾಡುವುದು ಹೇಗೆ? ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ಕೆಲವು ಉಪಕರಣಗಳನ್ನು ಖರೀದಿಸಿ ಸಾಮಾನ್ಯರಂತೆ ಜೀವನ ನಡೆಸುವ ಅವಕಾಶಗಳಿರುತ್ತವೆ. ಆದರೆ ಕಡುಬಡವರ ಕುಟುಂಬಕ್ಕೆ ಅಂತಹ ಶಕ್ತಿ ಇರುವುದಿಲ್ಲ. ಇಂತಹ ಅಸಹಾಯಕ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರು 2019ರಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಸಂದರ್ಭದಲ್ಲಿ ‘ಜನಮಂಗಲ’ ಎಂಬ ಲೋಕಕಲ್ಯಾಣ ಕಾರ್ಯಕ್ರಮವನ್ನು ಆರಂಭಿಸಿದರು.
ಈ ಕಾರ್ಯಕ್ರಮದಲ್ಲಿ ಗಾಲಿಕುರ್ಚಿ, ವಾಕರ್, ವಾಕಿಂಗ್ ಸ್ಟಿಕ್, ಮೊಣಕೈ ಊರುಗೋಲು, ಸಿಂಗಲ್ ಲೆಗ್ ವಾಕಿಂಗ್, ತ್ರಿಲೆಗ್ ವಾಕಿಂಗ್, ನಡುಗೋಲು ಹಾಗೂ ವಾಟರ್ಬೆಡ್ಗಳನ್ನು ಅಂಗವಿಕಲತೆ ಹೊಂದಿರುವ ಕುಟುಂಬಕ್ಕೆ ಅಗತ್ಯಾನುಸಾರ ನೀಡಲಾಗುತ್ತದೆ. ಜನಮಂಗಲ ಕಾರ್ಯಕ್ರಮದಡಿ ಉಪಕರಣಗಳನ್ನು ಪಡೆದ ವ್ಯಕ್ತಿಗಳು ಇಂದು ಸಂತೋಷದಿoದ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೊರಗಡೆ ತೆರಳಿದರೂ ಇವರು ಮನೆಯಲ್ಲಿ ಸ್ವತಂತ್ರವಾಗಿ ಇರುತ್ತಾರೆ. ತೀವ್ರ ಅನಿವಾರ್ಯತೆ ಇದ್ದಾಗ ಮಾತ್ರ ಇನ್ನೊಬ್ಬರ ಸಹಾಯವನ್ನು ಪಡೆಯುತ್ತಾರೆ. ಇದು ದೈಹಿಕವಾಗಿ ಶಕ್ತಿವಂತರಾಗಿರುವವರ ವಿಚಾರವಾದರೆ, ವೃದ್ಧಾಪ್ಯದಲ್ಲಿರುವವರಿಗೆ ನೀಡಲಾಗುವ ವಾಟರ್ಬೆಡ್, ವೀಲ್ ಚೇರ್ ಇತ್ಯಾದಿ ಉಪಕರಣಗಳು ಅವರನ್ನು ವೇದನೆಯಿಂದ ವಿಮುಕ್ತಿಗೊಳಿಸುತ್ತದೆ. ವಾಟರ್ಬೆಡ್ನ ಸಹಾಯದಿಂದಾಗಿ ತಿಂಗಳುಗಟ್ಟಲೆ ಮಲಗಿದ್ದಲ್ಲೇ ಇದ್ದ ಅಸಹಾಯಕ ವ್ಯಕ್ತಿಗಳ ಚರ್ಮದ ಪೋಷಣೆಯಾಗಿ ಕನಿಷ್ಠ ನರಳಾಟದ ಜೀವನದಿಂದ ಕಾಪಾಡಲಾಗುತ್ತದೆ. ಹಾಗೆಯೇ ಕಮೋಡ್ ಸಹಿತ ವೀಲ್ ಚೇರ್ ಮೂಲಕ ಸುಲಭ ಶೌಚಾಲಯದ ಸೌಲಭ್ಯವನ್ನು ಒದಗಿಸಲಾಗಿದೆ. ಇವು ಕುಟುಂಬದ ಇತರ ಸದಸ್ಯರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಜನಮಂಗಲ ಕಾರ್ಯಕ್ರಮದ ಉಪಕರಣಗಳನ್ನು ಪಡೆದುಕೊಂಡ ಎಷ್ಟೋ ವ್ಯಕ್ತಿಗಳು ಮನೆಯಲ್ಲಿಯೇ ಸಣ್ಣ ಆದಾಯ ತರುವ ಚಟುವಟಿಕೆಗಳನ್ನು ಮಾಡಿರುವ ಉದಾಹರಣೆಗಳು ಇವೆ. ಇದು ಅವರಿಗೇ ಗೊತ್ತಿಲ್ಲದೆ ಅವರಲ್ಲಿ ಒಂದು ಆತ್ಮವಿಶ್ವಾಸವನ್ನು ಬೆಳೆಸಿರುತ್ತದೆ. ‘ಅಂಗವಿಕಲತೆ ಒಂದು ಶಾಪ ಅಲ್ಲ’ ಎಂಬುದನ್ನು ಎಷ್ಟೋ ಜನರು ಇಂದು ಸಾಬೀತು ಪಡಿಸಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ಯಾರಾದರೂ ಅಂಗವಿಕಲ ವ್ಯಕ್ತಿಗಳು ಅಥವಾ ಅಸಹಾಯಕ ಕುಟುಂಬಗಳಿದ್ದಲ್ಲಿ, ಅಲ್ಲಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಜನಮಂಗಲ ಕಾರ್ಯಕ್ರಮದ ಸವಲತ್ತನ್ನು ನೀಡಲು ಕೇಂದ್ರ ಕಛೇರಿಗೆ ಬೇಡಿಕೆ ಸಲ್ಲಿಸುತ್ತಾರೆ. ಕೇಂದ್ರ ಕಛೇರಿಯಿಂದ ಅನುಮೋದನೆಗೊಂಡು ಆ ಸಲಕರಣೆಗಳು ಅದೇ ಕಾರ್ಯಕರ್ತರ ಮೂಲಕ ಆ ವ್ಯಕ್ತಿಯ ಕುಟುಂಬಕ್ಕೆ ತಲುಪುತ್ತದೆ. ಇಷ್ಟಕ್ಕೇ ಸೀಮಿತಗೊಳ್ಳದೆ ಮುಂದಿನ ದಿನಗಳಲ್ಲಿ ಯೋಜನೆಯ ಕಾರ್ಯಕರ್ತರು ಆ ವ್ಯಕ್ತಿಯ ಯೋಗಕ್ಷೇಮಗಳನ್ನು ವಿಚಾರಿಸುತ್ತಿರುತ್ತಾರೆ. ಯೋಜನೆಯ ಕಾರ್ಯಕರ್ತರು ಪರಿಕರಗಳನ್ನು ತಲುಪಿಸುವುದರ ಜೊತೆಗೆ ಸರಕಾರದಿಂದ ಯಾವುದಾದರೂ ವಿಶೇಷ ಸವಲತ್ತುಗಳು ದೊರೆಯುವುದಿದ್ದರೆ ಅವುಗಳನ್ನು ತಲುಪಿಸುವಲ್ಲಿಯೂ ಸಹಾಯ ಮಾಡುತ್ತಾರೆ.
ಹಾಸಿಗೆಯಲ್ಲಿಯೇ ದೀರ್ಘಕಾಲ ಮಲಗಿದವರಿಗೆ ಹುಣ್ಣು ಆಗದಂತೆ ತಡೆಯಲು 8,716 ಮಂದಿಗೆ ವಾಟರ್ಬೆಡ್, ನಡೆದಾಡಲು ಸಾಧ್ಯವಿಲ್ಲದವರಿಗೆ ಹೊರಗಡೆ ಓಡಾಡಲು 10,567ಮಂದಿಗೆ ಗಾಲಿಕುರ್ಚಿ (ವೀಲ್ ಚೇರ್), ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನ, ಶೌಚಕ್ಕೆ ಹೋಗಲು ಅನುಕೂಲವಾಗುವಂತೆ 2,521 ಮಂದಿಗೆ ಗಾಲಿಕುರ್ಚಿ (ಕಮೋಡ್ ವೀಲ್ ಚೇರ್), ಅಪಘಾತಗಳಿಂದ ವಿಕಲಾಂಗರಾಗಿ ಓಡಾಡುತ್ತಿರುವವರಿಗೆ ಕಂಕುಳಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ 1,105 ಮಂದಿಗೆ ಊರುಗೋಲು (ಆಕ್ಸಿಲರಿ ಕ್ರಚಸ್), 949 ಮಂದಿಗೆ ಎಲ್ಬೋ ಕ್ರಚಸ್, ವಯಸ್ಕರಾಗಿದ್ದು ಸ್ಟೊçÃಕ್, ಪ್ಯಾರಾಲಿಸಿಸ್ ಮುಂತಾದ ರೋಗಗಳಿಗೆ ತುತ್ತಾಗಿರುವವರಿಗೆ ನಡೆದಾಡಲು ಅನುಕೂಲವಾಗುವಂತೆ 3,652 ಮಂದಿಗೆ ನಡುಗೋಲು (ಯು ಶೇಪ್ ವಾಕರ್), ನಡೆದಾಡಲು ಕಷ್ಟವಾಗಿರುವ 3,839 ಮಂದಿಗೆ ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್) ಹಾಗೂ 2,344 ಮಂದಿಗೆ ಮೂರು ಕಾಲಿನ ಕೈಗೋಲು (ತ್ರೀ ಲೆಗ್ ಸ್ಟಿಕ್)ಗಳನ್ನು ಒದಗಿಸಲಾಗಿದೆ. ಹೀಗೆ ಒಟ್ಟು 33,693 ಮಂದಿಗೆ ವಿವಿಧ ಸಲಕರಣೆಗಳನ್ನು ಒದಗಿಸಲಾಗಿದೆ.
ಶ್ರೀ ಹೆಗ್ಗಡೆಯವರ ಈ ‘ಜನಮಂಗಲ’ ಕಾರ್ಯಕ್ರಮವು ಇತರ ಸಂಘಸAಸ್ಥೆಗಳಿಗೂ ಪ್ರೇರಣೆಯನ್ನು ನೀಡಿ ಅವರು ತಮ್ಮ ಕೈಲಾದ ಸಹಾಯಗಳನ್ನು ನೀಡುತ್ತಿರುವುದು ನಮಗೆ ಅತ್ಯಂತ ಸಂತೃಪ್ತಿಯನ್ನು ನೀಡಿದೆ.
ಇನ್ನಷ್ಟು ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
