ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಕಳೆದ ಸಂಚಿಕೆಯಲ್ಲಿ ‘ಗ್ರಾಮ ಕಲ್ಯಾಣ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ‘ನವಚೇತನ’ ಕಾರ್ಯಕ್ರಮದ ಕುರಿತು ವಿವರವಾಗಿ ತಿಳಿದುಕೊಳ್ಳೋಣ.
ಎಷ್ಟೋ ಮಕ್ಕಳು ಹುಟ್ಟುತ್ತಲೆ ವಿಶೇಷಚೇತನರಾಗಿರುತ್ತಾರೆ.ಅವರು ಅಸಹಾಯಕರಾಗಿ ಜೀವನದಲ್ಲಿ ಕಷ್ಟವನ್ನು ಅನುಭವಿಸಬೇಕಾಗಿರುತ್ತದೆ. ಅವರಿಗೂ ಎಲ್ಲರಂತೆ ಶಿಕ್ಷಣ ನೀಡಿ ಮಾನಸಿಕ ಧೈರ್ಯ, ಆತ್ಮಾಭಿಮಾನ ತುಂಬುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕಾಗಿದೆ.
ಹಾಗೆಂದು ಸಾಮಾನ್ಯ ಮಕ್ಕಳೊಂದಿಗೆ ವಿಶೇಷಚೇತನರಿಗೆ ಶಿಕ್ಷಣ ನೀಡುವುದು ಅಷ್ಟು ಸುಲಭದ ಮಾತಲ್ಲ. ಸರಕಾರ ವಿಶೇಷಚೇತನರಿಗೂ ಸರಿಯಾದ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ವಿಶೇಷ ಶಾಲೆಗಳನ್ನು ಆರಂಭಿಸಿದೆ. ರಾಜ್ಯದಲ್ಲಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಹೀಗೆ ಅಂಧ ಮಕ್ಕಳ, ಶ್ರವಣದೋಷವುಳ್ಳ, ಬುದ್ಧಿಮಾಂದ್ಯತೆಯುಳ್ಳ ಮಕ್ಕಳಿಗೆ ಪ್ರತ್ಯೇಕವಾದ ಹಲವಾರು ಶಾಲೆಗಳಿವೆ. ಆದರೆ ಹೆಚ್ಚಿನ ಶಾಲೆಗಳು ಹಲವಾರು ಮೂಲಭೂತ ಸೌಕರ್ಯಗಳ ಕೊರತೆಯನ್ನೆದುರಿಸುತ್ತಿದ್ದವು. ಇದನ್ನು ಹತ್ತಿರದಿಂದ ಕಂಡ ಪೂಜ್ಯ ಶ್ರೀ ಹೆಗ್ಗಡೆಯವರು ಅವರಿಗೆ ನೆರವು ನೀಡುವ ಮತ್ತು ಅವರ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 2007ರಲ್ಲಿ ‘ನವಚೇತನ’ ಎಂಬ ವಿಶೇಷ ಕಾರ್ಯಕ್ರಮವೊಂದನ್ನು ಆರಂಭಿಸಿದರು.
ಈ ಕಾರ್ಯಕ್ರಮದಡಿ ವಿಶೇಷಚೇತನ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಈಗಾಗಲೇ ಕಟ್ಟಡ, ಶೌಚಾಲಯ ರಚನೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡಲಾಗಿದೆ. ಇಷ್ಟೇ ಅಲ್ಲದೆ ಬ್ರೈಲ್ ಕಂಪ್ಯೂಟರ್ ಖರೀದಿ, ಧ್ವನಿಮುದ್ರಿತ ಪುಸ್ತಕ, ಬ್ರೈಲ್ ಲಿಪಿ, ಫೈಲ್ ಮೇಕಿಂಗ್ ಮೆಷಿನ್, ಬ್ರೈಲ್ ಟೈಪ್ ರೈಟರ್, ಬ್ರೈಲ್ ಲೈಬ್ರರಿ, ಗ್ರೂಪ್ ಹಿಯರಿಂಗ್, ಪ್ರಾಜೆಕ್ಟರ್, ವಾಟರ್ಫಿಲ್ಟರ್, ಮಂಚ, ಗೋಬರ್ ಗ್ಯಾಸ್, ಚೆಯರ್, ಟೇಬಲ್, ಮಕ್ಕಳ ಆಟದ, ಕ್ರೀಡಾ ಸಾಮಾಗ್ರಿ ಹೀಗೆ ಹಲವು ರೀತಿಯ ನೆರವನ್ನು ನೀಡಲಾಗಿದೆ. ಇದರೊಂದಿಗೆ ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾದ ತರಬೇತಿ ಹಾಗೂ ಚಟುವಟಿಕೆಗಳಿಗೆ ಅಗತ್ಯವಾದ ಸಹಕಾರ, ವೈದ್ಯಕೀಯ ನೆರವನ್ನು ಒದಗಿಸಲಾಗಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಮಕ್ಕಳನ್ನು ದೈಹಿಕ, ಮಾನಸಿಕ, ಬೌದ್ಧಿಕವಾಗಿ ಉತ್ತೇಜಿಸಿ ಭಾವನಾತ್ಮಕ ಬೆಳವಣಿಗೆಯತ್ತ ಪ್ರೋತ್ಸಾಹಿಸಲಾಗಿದೆ. ಪರಿಣಾಮವಾಗಿ ಸಾಕಷ್ಟು ಮಂದಿ ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲಾ ಸೌಲಭ್ಯಗಳನ್ನು ಅನುಭವಿಸುವಂತಾಗಿದೆ. ಎಲ್ಲರ ಜೊತೆಗೂಡಿ ಬೆರೆಯಲು ಸಾಧ್ಯವಾಗಿದೆ. ಸಾಮಾನ್ಯರೇ ಬೆರಗುಗೊಳ್ಳುವಂತೆ ಸಾಧನೆಗೈದ ಸಾಕಷ್ಟು ವಿಶೇಷಚೇತನ ಸಾಧಕರು ನಮ್ಮ ನಡುವೆಯೇ ಇದ್ದಾರೆ.
ಕೆಲವೊಂದು ವಿಶೇಷಚೇತನ ಶಾಲೆಗಳು ಸ್ವಂತ ಕಟ್ಟಡವಿಲ್ಲದೆ ಮೂಲಸೌಕರ್ಯಗಳ ಕೊರತೆಯಿಂದಾಗಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವುಗಳಿಗೂ ಕೂಡಾ ಪೂಜ್ಯರು ಆರ್ಥಿಕ ನೆರವನ್ನು ನೀಡುತ್ತಾ ಬಂದಿರುತ್ತಾರೆ. ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೆರವು ನೀಡಿದರ ಪರಿಣಾಮವಾಗಿ ಇನ್ನೇನು ಮುಚ್ಚುವ ಹಂತದಲ್ಲಿದ್ದ ಕೆಲವು ವಿಶೇಷಚೇತನ ಶಾಲೆಗಳ ಬಾಗಿಲು ಮತ್ತೆ ತೆರೆದುಕೊಂಡಂತಾಗಿದೆ. ಯೋಜನೆ ನೆರವು ನೀಡಿದರ ಪರಿಣಾಮವಾಗಿ ದಾನಿಗಳು, ಸಂಘ-ಸಂಸ್ಥೆಗಳು ತಮ್ಮ ಕೈಲಾದ ಸಹಾಯವನ್ನೂ ಮಾಡಿದ್ದಾರೆ. ಇದರಿಂದ ಶಿಕ್ಷಕರು ಮತ್ತು ಪೋಷಕರಿಗೆ ತಮ್ಮ ವಿಶೇಷಚೇತನ ಮಕ್ಕಳ ಭವಿಷ್ಯದ ಕುರಿತಿದ್ದ ಚಿಂತೆ ಒಂದಷ್ಟರ ಮಟ್ಟಿಗೆ ದೂರವಾಗಿದೆ. ಮನೆಯ ಕೋಣೆಯೊಳಗೆ ಬಂಧಿಯಾಗಿದ್ದ ಒಂದಷ್ಟು ಮಂದಿ ಹೊರಪ್ರಪಂಚವನ್ನು ಕಾಣುವಂತಾಗಿದೆ. ಅವರ ಆಸೆ, ಆಕಾಂಕ್ಷೆಗಳು ಈಡೇರುವಂತಾಗಿದೆ.
ಇದುವರೆಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ 116 ವಿಶೇಷಚೇತನ ಶಾಲೆಗಳಿಗೆÀ ಮೂಲಭೂತ ಅಗತ್ಯತೆಗಳ ಖರೀದಿ, ಮೂಲ ಸೌಕರ್ಯಗಳನ್ನು ವ್ಯವಸ್ಥೆಗೊಳಿಸುವಿಕೆ ಮುಂತಾದ ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಸಹಕಾರವನ್ನು ನೀಡಲಾಗಿದೆ. ಯೋಜನೆ ಮತ್ತು ಇತರ ಸಂಘ ಸಂಸ್ಥೆಗಳ ಪ್ರಯತ್ನದ ಫಲವಾಗಿ ಇಂದು ಹೆಚ್ಚಿನ ವಿಶೇಷಚೇತನ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೀಗಿದೆ.
ನವಚೇತನ ಕಾರ್ಯಕ್ರಮದಡಿ ವಿಶೇಷಚೇತನರ ಸಂಸ್ಥೆಗಳಿಗೆ ನೆರವು ನೀಡಿದಲ್ಲದೆ ಈ ನೆರವು ನೀಡುವ ಕಾರ್ಯಕ್ರಮವನ್ನು 2008 ರಿಂದ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೂ ಪೂಜ್ಯರು ವಿಸ್ತರಿಸಿದರು. ಇದೀಗ 124 ಆಶ್ರಮಗಳ ನಿರ್ವಹಣೆಗಾಗಿ ಶ್ರೀ ಕ್ಷೇತ್ರದಿಂದ ಆರ್ಥಿಕ ಸಹಕಾರವನ್ನು ನೀಡಲಾಗಿದೆ. ಇದರಿಂದಾಗಿ ರಾಜ್ಯದ ಸಾವಿರಾರು ವೃದ್ಧರು, ಅನಾಥರು, ಅಗತ್ಯ ಸೌಲಭ್ಯಗಳೊಂದಿಗೆ ಅವುಗಳಲ್ಲಿ ದಿನಕಳೆಯುವಂತಾಗಿದೆ.
ವಿಶೇಷಚೇತನರ ನೋವಿಗೆ ಸ್ಪಂದಿಸುತ್ತಿರುವ ಪೂಜ್ಯ ಶ್ರೀ ಹೆಗ್ಗಡೆಯವರ ಈ ನವಚೇತನ ಕಾರ್ಯಕ್ರಮ ಇತರ ಸಂಘ ಸಂಸ್ಥೆಗಳಿಗೂ ಪ್ರೇರಣೆಯಾಗಿ ಅವರು ಕೂಡಾ ಅವರ ಕೈಲಾದಷ್ಟು ಸೇವೆಯನ್ನು ಮಾಡುತ್ತಿದ್ದಾರೆ.
ಮುಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮತ್ತೊಂದು ವಿಶೇಷ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.