ಅಧಿವೇಶನಗಳು ಹೇಗೆ ನಡೆಯುತ್ತವೆ…

ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ‘ಅಧಿವೇಶನ’ ಎನ್ನುವುದು ಸಂವಿಧಾನಬದ್ಧ ಕಾರ್ಯಕಲಾಪವಾಗಿದೆ. ಯಾವುದೇ ಚುನಾಯಿತ ಸರಕಾರವು ಅಧಿವೇಶನದಿಂದ ಓಡಿಹೋಗಲು ಅವಕಾಶವಿಲ್ಲ. ಜನರ ಧ್ವನಿ, ಬೇಡಿಕೆಯನ್ನು ಜನಪ್ರತಿನಿಧಿಗಳ ಮೂಲಕ ಸರಕಾರದ ಕಿವಿಗೆ ಹಾಕಲು ಹಾಗೂ ಸುಸೂತ್ರ ಆಡಳಿತಕ್ಕಾಗಿ ಬೇಕಾಗುವ ಕಾನೂನು ರೂಪಿಸಲು ಇರುವ ಶಾಸನಬದ್ಧ ಅಧಿಕಾರವೇ ಅಧಿವೇಶನ. ಈ ಅಧಿವೇಶನವನ್ನು ಇತ್ತೀಚೆಗೆ ನಾವು ಕೇವಲ ರಾಜಕೀಯ, ಗಲಾಟೆ ಹಾಗೂ ಇತರ ವಿವಾದಗಳಿಂದ ನೋಡುತ್ತಿರಬಹುದು. ಆದರೆ ಅಧಿವೇಶನಗಳಿಲ್ಲದೆ ಯಾವುದೇ ಕೇಂದ್ರ ಅಥವಾ ರಾಜ್ಯ ಸರಕಾರವನ್ನು ಸಂವಿಧಾನಾತ್ಮಕವಾಗಿ ನಡೆಸಲು ಸಾಧ್ಯವೇ ಇಲ್ಲ.
ಭಾರತದ ಸಂವಿಧಾನದ ಪ್ರಕಾರ ಯಾವುದೇ ಸರಕಾರವು ಎರಡು ಅಧಿವೇಶನದ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರ ಇರದಂತೆ ನೋಡಿಕೊಳ್ಳಬೇಕು. ಇದೇ ಕಾರಣಕ್ಕಾಗಿ ಚುನಾಯಿತ ಸರಕಾರವನ್ನು ಕೂಡಾ ಆರು ತಿಂಗಳೊಳಗೆ ರಚಿಸಬೇಕು ಎನ್ನುವ ನಿಯಮವನ್ನು ಸಂವಿಧಾನದಲ್ಲಿ ಮಾಡಲಾಗಿದೆ. ಒಂದು ವರ್ಷದಲ್ಲಿ ಕನಿಷ್ಠ ಎಷ್ಟು ದಿನ ಅಧಿವೇಶನ ನಡೆಸಬೇಕು ಎನ್ನುವ ಕುರಿತು ನಿರ್ದಿಷ್ಟ ಕಾನೂನಿಲ್ಲ. ಆರು ತಿಂಗಳ ಅಂತರದ ನಿಯಮ ಮಾತ್ರವಿದೆ.
ಅದಾಗ್ಯೂ ಕೇಂದ್ರ ಸರಕಾರದ ಮಟ್ಟಿಗೆ ವರ್ಷಕ್ಕೆ ಮೂರು ಸಾಮಾನ್ಯ ಅಧಿವೇಶನಗಳು ನಡೆಯುತ್ತದೆ. ವರ್ಷದ ಆರಂಭವೆಂದರೆ ಜನವರಿ ಕೊನೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತದೆ. ಈ ಅಧಿವೇಶನದ ಮೊದಲ ದಿನವು ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟçಪತಿಗಳು ಭಾಷಣ ಮಾಡುತ್ತಾರೆ. ಅದಾದ ಬಳಿಕ ಬಜೆಟ್ ಮಂಡನೆ, ಚರ್ಚೆ ಹಾಗೂ ಅನುಮೋದನೆ ನಡೆಯುತ್ತದೆ. ನಂತರ ಜೂನ್ ಅಥವಾ ಜುಲೈನಲ್ಲಿ ಮಳೆಗಾಲ ಅಥವಾ ಮಾನ್ಸೂನ್ ಅಧಿವೇಶನ ನಡೆಯುತ್ತದೆ. ಇದಕ್ಕೆ ಬಜೆಟ್‌ನಂತೆ ನಿರ್ದಿಷ್ಟ ಕಾರ್ಯಸೂಚಿಯಿಲ್ಲ. ಹಾಗೆಯೇ ನವೆಂಬರ್, ಡಿಸೆಂಬರ್ ಅವಧಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತದೆ.
ಕೇಂದ್ರ ಸರಕಾರವು ರಾಷ್ಟ್ರಪತಿಗಳ ಕರೆಯುವ ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನದಲ್ಲಿ ಏನು ನಡೆಯುತ್ತದೆ ಎನ್ನುವ ಕುತೂಹಲ ಇರಬಹುದು. ಸಾಮಾನ್ಯವಾಗಿ ದೇಶದ ಹಲವು ವಿಚಾರಗಳ ಬಗ್ಗೆ ಪ್ರಶ್ನೋತ್ತರ ನಡೆಯುತ್ತದೆ. ಸದಸ್ಯರು ಕೇಳುವ ಪ್ರಶ್ನೆಗೆ ಸಚಿವರ ಮೂಲಕ ಸರಕಾರ ಉತ್ತರ ನೀಡುತ್ತದೆ. ಇದಾದ ಬಳಿಕ ದೇಶದ ಜ್ವಲಂತ ಸಮಸ್ಯೆ ಅಥವಾ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅಧಿವೇಶನಕ್ಕಿಂತ ಮುಂಚೆ ಯಾವುದಾದರೂ ಸುಗ್ರೀವಾಜ್ಞೆ ಹೊರಡಿಸಿದ್ದರೆ ಅದಕ್ಕೆ ಮಸೂದೆ ಮೂಲಕ ಕಾನೂನು ನೀಡುವ ಪ್ರಯತ್ನವಾಗುತ್ತಿದೆ. ಏಕೆಂದರೆ ಅಧಿವೇಶನದ ಮುಂಚೆ ಹೊರಡಿಸಿರುವ ಯಾವುದೇ ಸುಗ್ರೀವಾಜ್ಞೆಯನ್ನು ನಂತರದ ಅಧಿವೇಶನದಲ್ಲಿ ಮಸೂದೆ ಮೂಲಕ ಮಂಡಿಸುವುದು ಸರಕಾರದ ಸಂವಿಧಾನ ಬದ್ಧ ಕರ್ತವ್ಯವಾಗಿರುತ್ತದೆ. ಇದರ ಹೊರತಾಗಿ ಹೊಸ ಕಾನೂನುಗಳ ರಚನೆಯ ಪ್ರಕ್ರಿಯೆ ಕೂಡ ಅಧಿವೇಶನದಲ್ಲಿ ನಡೆಯುತ್ತದೆ. ಯಾವುದಾದರೂ ರಾಜ್ಯದಲ್ಲಿ ರಾಷ್ಟçಪತಿ ಆಡಳಿತವಿದ್ದರೆ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಗತ್ಯ ಕಾಯ್ದೆ, ಕಾನೂನು ರಚನೆಯನ್ನು ಕೂಡ ಈ ಅಧಿವೇಶನದಲ್ಲಿಯೇ ಮಾಡಬೇಕಾಗುತ್ತದೆ. ರಾಷ್ಟ್ರಪತಿ ಆಡಳಿತಕ್ಕೆ ಸಮ್ಮತಿ ಕೊಡುವ ಕೆಲಸ ಕೂಡ ಅಧಿವೇಶನದಲ್ಲಾಗುತ್ತದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಪದಚ್ಯುತಿ ಮಾಡಬೇಕಿದ್ದರೂ ಅದನ್ನು ಅಧಿವೇಶನದಲ್ಲಿಯೇ ಮಾಡಬೇಕಾಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸರಕಾರವನ್ನು ಪತನ ಮಾಡಬೇಕಿದ್ದರೂ ಅದಕ್ಕೆ ವೇದಿಕೆಯಿರುವುದು ಲೋಕಸಭೆ ಅಧಿವೇಶನ ಮಾತ್ರ.
ದೇಶದ ಸಮಸ್ಯೆ, ಜನರ ಧ್ವನಿಯ ಬಗ್ಗೆ ಚರ್ಚಿಸಬೇಕಿದ್ದ ಅಧಿವೇಶನದ ಕಲಾಪಗಳು ಈಗ ಮಾಯವಾಗುತ್ತಿವೆ. ಸ್ವಾತಂತ್ರ್ಯ ಬಂದ ಆರಂಭಿಕ ವರ್ಷಗಳಲ್ಲಿ 151 ದಿನಗಳ ಕಾಲ ಕಲಾಪ ನಡೆದ ಉದಾಹರಣೆಯಿತ್ತು. ಇದು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. 1988ರಲ್ಲಿ ಒಮ್ಮೆ 102 ದಿನ ಕಲಾಪಗಳು ನಡೆದಿದ್ದವು. ಅದಾದ ಬಳಿಕ ಒಮ್ಮೆಯೂ ವರ್ಷದಲ್ಲಿ ಮೂರಂಕಿಯನ್ನು ದಾಟಿಲ್ಲ. ಕಳೆದ ಎರಡು ದಶಕದ ಸರಾಸರಿ ಕಲಾಪದ ಅವಧಿ 62 ದಿನಗಳಾಗಿವೆ. ಕಳೆದೊಂದು ದಶಕದಲ್ಲಿ ಇದು ಇನ್ನಷ್ಟು ಕಡಿಮೆಯಾಗಿದೆ. ಇದರಿಂದ ಇಷ್ಟೊಂದು ದೊಡ್ಡ ದೇಶದ ಜನರ ಕೂಗು ಸರಕಾರಕ್ಕೆ ಮುಟ್ಟಲು ತಡವಾಗಬಹುದು ಎನ್ನುವ ಆತಂಕವೂ ಪ್ರಜಾತಂತ್ರ ವ್ಯವಸ್ಥೆಯ ಪ್ರೇಮಿಗಳಲ್ಲಿದೆ.
ಕರ್ನಾಟಕದ ಕಥೆ ವಿಭಿನ್ನ
ಕರ್ನಾಟಕದ ಮಟ್ಟಿಗೆ ಅಧಿವೇಶನ ವಿಭಿನ್ನವಾಗಿರುತ್ತದೆ. ಅಧಿವೇಶನದಲ್ಲಿ ಏನು ನಡೆಯಬೇಕು ಎನ್ನುವುದೆಲ್ಲ ಲೋಕಸಭೆ ಹಾಗೂ ರಾಜ್ಯಸಭೆಯ ರೀತಿಯಲ್ಲೇ ಇರುತ್ತದೆ. ಆದರೆ ಕೆಲ ಸಣ್ಣ ಪುಟ್ಟ ಬದಲಾವಣೆಗಳಿರುತ್ತವೆ. ಕರ್ನಾಟಕದಲ್ಲಿ ಜಂಟಿ ಅಧಿವೇಶನವು ಫೆಬ್ರವರಿಯಲ್ಲಿ ನಡೆಯುತ್ತದೆ. ಅಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುತ್ತಾರೆ. ಅದಾದ ಬಳಿಕ ಕೆಲ ವಾರಗಳ ನಂತರ ಬಜೆಟ್ ಅಧಿವೇಶನ ನಡೆಯುತ್ತದೆ. ಅಲ್ಲಿ ರಾಜ್ಯ ಸರಕಾರದ ವತಿಯಿಂದ ಬಜೆಟ್ ಅನ್ನು ಮಂಡಿಸಲಾಗುತ್ತದೆ. ನಂತರ ಜುಲೈ ಸಂದರ್ಭದಲ್ಲಿ ಮಳೆಗಾಲದ ಅಧಿವೇಶನ ನಡೆದರೆ, ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನವಿರುತ್ತದೆ.
60 ದಿನ ಕಲಾಪದ ನಿಯಮ!
ಕರ್ನಾಟಕದ ವಿಧಾನಮಂಡಲದ ಉಭಯ ಸದನಗಳು ಒಂದು ನಿಯಮವನ್ನು ರಚಿಸಿಕೊಂಡಿವೆ. ಶಾಸನಸಭೆಯ ಸರ್ವಸದಸ್ಯರು ಸೇರಿಕೊಂಡು ಈ ನಿಯಮ ಮಾಡಿಕೊಂಡಿದ್ದಾರೆ. ಆ ಪ್ರಕಾರ ವರ್ಷದಲ್ಲಿ ಕನಿಷ್ಠ 60 ದಿನಗಳ ಕಾಲ ವಿಧಾನಮಂಡಲದ ಅಧಿವೇಶನವನ್ನು ನಡೆಸಬೇಕು. ಈ ನಿಯಮ ಜಾರಿಗೆ ಬಂದು ದಶಕಗಳೇ ಕಳೆದಿವೆ. ವಿಪರ್ಯಾಸವೆಂದರೆ ಇವತ್ತಿನವರೆಗೆ ಒಮ್ಮೆಯೂ 60 ದಿನಗಳವರೆಗೆ ಕರ್ನಾಟಕದ ವಿಧಾನಮಂಡಲದ ಕಲಾಪವೇ ನಡೆದಿಲ್ಲ. 2015ರಲ್ಲಿ 58 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆದ ಬಳಿಕ ಈವರೆಗೆ ಅಷ್ಟು ದಿನ ನಡೆದಿರುವ ಉದಾಹರಣೆಗಳೇ ಇಲ್ಲ. 50ರಿಂದ 80ರ ದಶಕದವರೆಗೆ 60 ದಿನಗಳಿಗಿಂತಲೂ ಹೆಚ್ಚು ಕಾಲ ನಡೆದಿದೆ. 1961ರಲ್ಲಿ 92 ದಿನ, 1963ರಲ್ಲಿ 98 ಮತ್ತು1973ರಲ್ಲಿ 97 ದಿನಗಳು ಅಧಿವೇಶನ ನಡೆದಿದ್ದು ದಾಖಲೆಯಾಗಿದೆ.
ಕಲಾಪದ ಕೆಲಸ ವಿಶೇಷತೆಗಳು
ಕಲಾಪಗಳಲ್ಲಿ ಸರಕಾರದ ವಿವಿಧ ಇಲಾಖೆಗಳ ವಾರ್ಷಿಕ ವರದಿ ಮಂಡನೆಯಾಗುತ್ತದೆ. ಸಿಎಜಿ ವರದಿಯ ಜೊತೆಗೆ ಸದನಕ್ಕೆ ಮಂಡಿಸಬಹುದಾದ ಎಲ್ಲ ವರದಿಗಳನ್ನು ಸಲ್ಲಿಸಲಾಗುತ್ತದೆ. ಇದರೊಟ್ಟಿಗೆ ನಮ್ಮ ರಾಜ್ಯದ ವಿಧಾನಸಭೆಗೆ ಸೀಮಿತವಾಗಿ ಒಂದಿಷ್ಟು ವಿಷಯ ಮಾತನಾಡಬಹುದು. ನಿಲುವಳಿ ಸೂಚನೆಯನ್ನು ಮಂಡಿಸಲಾಗುತ್ತದೆ. ಆದರೆ ಇದನ್ನು ಸರಕಾರ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅದರ ಮೇಲೆ ಚರ್ಚೆ ಮಾಡಿದರೆ ಕೊನೆಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಅದಲ್ಲದೇ ನಿಲುವಳಿ ಸೂಚನೆಯನ್ನು ಒಪ್ಪಿಕೊಳ್ಳುವುದು, ಸರಕಾರಕ್ಕಾದ ಮುಜುಗರ ಎಂದು ವ್ಯಾಖ್ಯಾನಿಸುವ ತಪ್ಪು ಅಭಿಪ್ರಾಯವಿದೆ. ಹೀಗಾಗಿ ಇದಕ್ಕೆ ಮನ್ನಣೆ ಸಿಗುವುದಿಲ್ಲ. ಸಾಮಾನ್ಯ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಬಳಿಕ ಪ್ರಶ್ನೋತ್ತರ ಎನ್ನುವುದು ದೈನಂದಿನ ಪ್ರಕ್ರಿಯೆ ಆಗಲಿದೆ. ಪ್ರತಿ ದಿನದ ಕಲಾಪವೂ ಪ್ರಶ್ನೋತ್ತರದಿಂದಲೇ ಆರಂಭವಾಗುತ್ತದೆ. ನಂತರ ಶೂನ್ಯ ವೇಳೆ ಎಂದಿರುತ್ತದೆ. ಕಲಾಪದ ಆರಂಭಕ್ಕೂ 24 ಗಂಟೆಯ ಅವಧಿಯಲ್ಲಿ ಏನಾದರೂ ತುರ್ತು ಘಟನೆ ನಡೆದರೆ ಅದನ್ನು ಸರಕಾರದ ಗಮನಕ್ಕೆ ತರಲು ಈ ಅವಧಿಯನ್ನು ಬಳಸಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ವಿಷಯ ಮಂಡನೆ ಮಾಡಿ ಸರಕಾರದಿಂದ ಉತ್ತರ ಪಡೆಯಬಹುದು. ಆದರೆ ಚರ್ಚೆಗೆ ಅವಕಾಶವಿರುವುದಿಲ್ಲ. ಇದಾದ ನಂತರ ಗಮನ ಸೆಳೆಯುವ ಸೂಚನೆ ಎಂದಿರುತ್ತದೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಮುಖ ವಿಚಾರಗಳ ಮೇಲೆ ಸದಸ್ಯರು ವಿಷಯ ಮಂಡಿಸಿ ಚರ್ಚೆ ನಡೆಸಿ ಸರಕಾರದ ಗಮನ ಸೆಳೆದು ಉತ್ತರ ಪಡೆಯಬಹುದು. ಇದರೊಟ್ಟಿಗೆ ನಿರ್ದಿಷ್ಟ ವಿಷಯದ ಮೇಲೆ ಕಾಲಮಿತಿಯ ಚರ್ಚೆಯೂ ನಡೆಯುತ್ತದೆ. ಕೆಲವು ಅಧಿವೇಶನಗಳಲ್ಲಿ ಇಲಾಖಾವಾರು ಚರ್ಚೆಯೂ ನಡೆದ ಉದಾಹರಣೆಗಳಿವೆ. ಇವೆಲ್ಲವೂ ಸರಕಾರದ ಮನಸ್ಥಿತಿ, ಕಾರ್ಯವೈಖರಿ ಹಾಗೂ ಸಭಾಧ್ಯಕ್ಷರ ವಿವೇಚನೆಯ ಮೇರೆಗೆ ನಡೆಯುತ್ತದೆ. ಅಂದಹಾಗೆ ಇವೆಲ್ಲ ಕಾರ್ಯಕಲಾಪಗಳನ್ನು ನಿಗದಿ ಮಾಡಲು ಸಭಾಧ್ಯಕ್ಷರ ನೇತೃತ್ವದ ಬಿಸಿನೆಸ್ ಅಡ್ವೆöÊಸರಿ ಕಮಿಟಿ ಎಂದಿರುತ್ತದೆ. ಕಲಾಪ ಹೇಗೆ ನಡೆಯಬೇಕು ಎನ್ನುವುದು ಆ ಸಮಿತಿಯ ಸಭೆಯಲ್ಲೇ ನಿರ್ಣಯವಾಗುತ್ತದೆ.
ವಿಶೇಷ ಅಧಿವೇಶನ
ಕರ್ನಾಟಕ ಅಥವಾ ಕೇಂದ್ರ ಸರಕಾರದ ಮಟ್ಟದಲ್ಲಿ ತುರ್ತು ಅಗತ್ಯವಿದ್ದಾಗ ವಿಶೇಷ ಅಧಿವೇಶನ ಕರೆಯಲಾಗುತ್ತದೆ. ತುರ್ತಾಗಿ ಯಾವುದಾದರೂ ಕಾನೂನು ರಚಿಸಬೇಕು ಅಥವಾ ಒಂದು ವಿಷಯದ ಮೇಲೆ ನಿರ್ಣಯ ಮಾಡಬೇಕು ಎಂದಾದಾಗ ಈ ರೀತಿ ವಿಶೇಷ ಅಧಿವೇಶನ ಕರೆಯಲಾಗುತ್ತದೆ. ಕಾವೇರಿ ವಿಚಾರದಲ್ಲಿ ಸಾಕಷ್ಟು ಬಾರಿ ಇಂತಹ ಪ್ರಮೇಯಗಳು ನಡೆದಿವೆ. ಇತ್ತೀಚೆಗೆ ಕೇಂದ್ರ ಸರಕಾರವು ಡಿಲಿಮಿಟೇಶನ್ ಬಿಲ್‌ಗಾಗಿ ವಿಶೇಷ ಅಧಿವೇಶನ ಕರೆದಿದ್ದನ್ನು ಸ್ಮರಿಸಬಹುದು. ವಿಶೇಷ ಅಧಿವೇಶನದ ವೇಳೆ ನಿರ್ದಿಷ್ಟ ಕಾರ್ಯಸೂಚಿಗೆ ಸೀಮಿತವಾಗಿ ಕಾರ್ಯಕಲಾಪ ನಡೆಯುತ್ತದೆ. ಇತರ ವಿಷಯಗಳ ಚರ್ಚೆಗೆ ಅವಕಾಶಗಳಿರುವುದಿಲ್ಲ.

Facebook
Twitter
WhatsApp
LinkedIn
Telegram