96ರ ವೃದ್ಧೆ ನಿರಂತರ ಓದುವ ಶ್ರದ್ಧೆ

ಓದುವ ಹವ್ಯಾಸವನ್ನು ಒಮ್ಮೆ ಬೆಳೆಸಿಕೊಂಡರೆ ಅದು ಮತ್ತೆ ಎಂದಿಗೂ ನಮ್ಮನ್ನು ಬಿಡಲಾರದು. ನಿತ್ಯ ಜ್ಞಾನವಂತರನ್ನಾಗಿಸುತ್ತಾ ದಿನನಿತ್ಯದ ಕೆಲಸಗಳ ಜೊತೆ ಜೊತೆಗೆ ಓದು ಸಾಗುತ್ತಿರುತ್ತದೆ. ಕಷ್ಟ, ನೋವು, ಒತ್ತಡದ ಬದುಕಿನಿಂದ ನಮ್ಮನ್ನು ದೂರವಾಗಿಸುತ್ತದೆ. ಓದಿನಿಂದ ದೊರೆಯುವ ನೆಮ್ಮದಿ ಬೇರೆ ಯಾವುದರಿಂದಲೂ ದೊರೆಯಲಾರದು. ಈ ಮಾತಿಗೆ ಉತ್ತಮ ಉದಾಹರಣೆ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಶಾಂತಾಬಾಯಿ. 96 ವರ್ಷ ಪ್ರಾಯದ ಶಾಂತಾಬಾಯಿ ಸಿದ್ದಪ್ಪ ಕಿಲ್ಲೆದ್‌ರವರು ‘ನಿರಂತರ’ ಪತ್ರಿಕೆಯನ್ನು ಕಳೆದ ಹತ್ತು ವರ್ಷಗಳಿಂದ ಓದುತ್ತಿದ್ದಾರೆ. ಪತ್ರಿಕೆಯಲ್ಲಿ ಬರುವ ಬರಹಗಳು ಅವರ ಜ್ಞಾನಮಟ್ಟವನ್ನು ಹೆಚ್ಚಿಸಿವೆ. ಪ್ರತಿ ಸಂಚಿಕೆಯನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅಗತ್ಯ ಬಿದ್ದಾಗ ಅವುಗಳ ಪುಟವನ್ನು ಮತ್ತೆ ತೆರೆಯುತ್ತಾರೆ. ಪ್ರತಿ ತಿಂಗಳು ಪತ್ರಿಕೆ ಕೈ ಸೇರುವಿಕೆಗಾಗಿ ದಾರಿ ಕಾಯುತ್ತಿರುತ್ತಾರೆ. ಪತ್ರಿಕೆ ತಲುಪುವಾಗ ಒಂದೆರಡು ದಿನ ತಡವಾದರೂ ಅಲ್ಲಿನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರನ್ನು ಭೇಟಿಯಾಗಿ ಪತ್ರಿಕೆ ತಲುಪದ ಬಗ್ಗೆ ವಿಚಾರಿಸುತ್ತಾರೆ. ಪತ್ರಿಕೆಯೊಂದಿಗಿನ ಇವರ ನಂಟಿಗೆ ನಿರಂತರ ಸಂಪಾದಕೀಯ ಮಂಡಳಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರ ಓದುವ ಹವ್ಯಾಸ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಲಿ ಎಂಬ ಆಶಯ ಪತ್ರಿಕಾ ಬಳಗದ್ದು.

Facebook
Twitter
WhatsApp
LinkedIn
Telegram