311 ವರ್ಷಗಳ ಸ್ವಾದ ತಿರುಪತಿ ಲಡ್ಡು ಪ್ರಸಾದ

ತಿರುಪತಿಯ ಹೆಸರು ಕೇಳಿದೊಡನೆ ತಕ್ಷಣ ನೆನಪಾಗುವುದು ವಿಶೇಷ ರುಚಿ ಮತ್ತು ಪರಿಮಳವನ್ನು ಹೊಂದಿರುವ ಅಲ್ಲಿನ ಲಡ್ಡು ಪ್ರಸಾದ. ತಿರುಪತಿ ಲಡ್ಡಿಗೆ ಆಗಸ್ಟ್ 2ರಂದು 311 ವರ್ಷಗಳು ಪೂರ್ಣಗೊಂಡಿವೆ. ಬರೋಬ್ಬರಿ ಮೂರು ಶತಮಾನಗಳು ಕಳೆದರೂ ಲಡ್ಡುವಿನ ರುಚಿ ಮಾತ್ರ ಹಾಗೇ ಇದೆ. ಲಡ್ಡು ಪ್ರಸಾದ ಹುಟ್ಟಿದ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ.
ನೈವೇದ್ಯವಾಗಿ ಲಡ್ಡು : 1715ರ ಆಗಸ್ಟ್ 2 ರಂದು ಮೊದಲ ಬಾರಿಗೆ ದಪ್ಪ ಬೂಂದಿಯ ಲಡ್ಡು ತಯಾರಿಸಿ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗಿತ್ತು. ಲಡ್ಡು ತಯಾರಿಗೆ 21 ದಿನಗಳ ಸಿದ್ಧತೆಗಳು ನಡೆದಿದ್ದವು. ಆರಂಭದಲ್ಲಿ ತಿರುಪ್ರೋಣಂ, ಅಪ್ಪಮಮ್, ಮನೋಹರಮ್, ವಡಾ ಹೀಗೆ ನಾಲ್ಕು ಪ್ರಕಾರದ ಲಡ್ಡುಗಳನ್ನು ತಯಾರಿಸಲಾಗುತ್ತಿತ್ತು.
ತಯಾರಿ ಹೀಗೆ : ಕಡಲೆಹಿಟ್ಟು ಮತ್ತು ಬೂಂದಿಯಿಂದ ಲಡ್ಡನ್ನು ತಯಾರಿಸಲಾಗುತ್ತಿತ್ತು. ಸೌದೆ ಉರಿಯ ಮೇಲೆ ತಯಾರಿಸುವ ಮತ್ತು ಹೆಚ್ಚಿನ ಕೆಲಸಗಳನ್ನು ಕೈಯಿಂದಲೇ ಮಾಡಿ ಮುಗಿಸುತ್ತಿದ್ದ ಕಾರಣ ಆರಂಭದಲ್ಲಿ ದಿನಕ್ಕೆ 2 ರಿಂದ 3 ಸಾವಿರ ಲಡ್ಡುಗಳು ಮಾತ್ರ ತಯಾರಾಗುತ್ತಿದ್ದವು. 50 ಮಂದಿ ಅಡುಗೆಯವರು ತಯಾರಿ ಕೆಲಸದಲ್ಲಿ ತೊಡಗಿರುತ್ತಿದ್ದರು.
1984ರಲ್ಲಿ ಗ್ಯಾಸ್ ಬಳಕೆ : ಮೊದಲ ಬಾರಿಗೆ ಗ್ಯಾಸ್ ಅನ್ನು ಬಳಸಲಾಯಿತು. ಇದರಿಂದಾಗಿ ತಯಾರಿ ಪ್ರಮಾಣ ಹೆಚ್ಚಿತು. ಅದರಂತೆ ಭಕ್ತರ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಳವಾಯಿತು. ಮುಂದಿನ ದಿನಗಳಲ್ಲಿ ದಿನವೊಂದಕ್ಕೆ 1 ಲಕ್ಷದಷ್ಟು ಲಡ್ಡುಗಳು ತಯಾರಾಗತೊಡಗಿದವು. ಪ್ರಸ್ತುತ ದಿನವೊಂದಕ್ಕೆ ಸರಾಸರಿ 4 ರಿಂದ 6 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ವಿಶೇಷ ಹಬ್ಬಗಳ ಸಂದರ್ಭದಲ್ಲಿ 8 ರಿಂದ 10ಲಕ್ಷ ಲಡ್ಡುಗಳು ಇಲ್ಲಿ ತಯಾರಾಗುತ್ತವೆ.
ಎರಡು ಅಡುಗೆ ಮನೆಗಳು : ಎರಡು ಸಾವಿರ ಚದರಡಿಯ ಅಡುಗೆ ಮನೆಯಲ್ಲಿ ಕೇವಲ ಒಲೆಯ ಮೇಲೆ ಕಡಲೆಹಿಟ್ಟನ್ನು ಬಿಸಿ ಮಾಡಿ ಲಡ್ಡು ತಯಾರಿಸುವ ಮಿಶ್ರಣವನ್ನು ಸಿದ್ಧಪಡಿಸಲಾಗುತ್ತದೆ. 20 ಸಾವಿರ ಚದರ ಅಡಿಯ ಮೂರು ಮಹಡಿಯ ಅಡುಗೆಮನೆಯಲ್ಲಿ ಗ್ಯಾಸ್ ಮತ್ತು ಸ್ಟೀಮ್‌ನಿಂದ ನಡೆಯುವ ಯಂತ್ರಗಳಿದ್ದು700 ಮಂದಿ ಲಡ್ಡು ತಯಾರಿಯಲ್ಲಿ ತೊಡಗಿರುತ್ತಾರೆ.
ಮೂರು ಪ್ರಕಾರಗಳ ಲಡ್ಡು ತಯಾರಿ
ಆಸ್ಥಾನಂ ಲಡ್ಡು : ಒಂದು ಲಡ್ಡುವಿನ ತೂಕ 750 ಗ್ರಾಂ. ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ.
ಕಲ್ಯಾಣೋತ್ಸವ ಲಡ್ಡು : ಲಡ್ಡು ಒಂದರ ತೂಕ 700 ಗ್ರಾಂ. ಕಲ್ಯಾಣೋತ್ಸವ ಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನೀಡಲಾಗುತ್ತದೆ.
ಪೋಕ್ರಂ ಲಡ್ಡು : ತೂಕ 175 ಗ್ರಾಂ. ನಿತ್ಯ ಬರುವ ಭಕ್ತರಿಗೆ ನೀಡಲಾಗುತ್ತದೆ.
ತಯಾರಿ ಪ್ರಕ್ರಿಯೆ : 250 ರಿಂದ 270 ಮಂದಿ ಪರಿಣಿತ ಅಡುಗೆಯವರಿದ್ದಾರೆ. ಇವರು ಸಾಮಾಗ್ರಿಗಳ ಮಿಶ್ರಣ, ಬೂಂದಿ ಕರಿಯುವ, ಶುದ್ಧತೆಯನ್ನು ಕಾಯ್ದುಕೊಳ್ಳುವ ಕೆಲಸವನ್ನು ಮಾಡುತ್ತಾರೆ. 350 ರಿಂದ 400 ಸಿಬ್ಬಂದಿಗಳು ಸಾಮಾಗ್ರಿಗಳ ಸಾಗಾಟ, ಬೂಂದಿ ಸೋಸುವ, ಲಡ್ಡುಗಳಿಗೆ ಕೈಯಿಂದ ಆಕಾರ ನೀಡುವ, ಲಡ್ಡುಗಳನ್ನು ಟ್ರೇ ಅಥವಾ ಕನ್ವೇಯರ್ ಬೆಲ್ಟ್ಗೆ ಲೋಡ್ ಮಾಡುವ ಕೆಲಸಗಳನ್ನು ಮಾಡುತ್ತಾರೆ. ಲಡ್ಡು ತಯಾರಿಸುವಾಗ ಎಲ್ಲ ಅಡುಗೆಯವರು ಏಕಕಂಠದಿಂದ ಮಂತ್ರವನ್ನು ಜಪಿಸುತ್ತಾರೆ. ಲಡ್ಡು ತಯಾರಿಸುವ ಸಮಯದಲ್ಲಿ ವೈಷ್ಣವ ಬ್ರಾಹ್ಮಣರು ನಿರಂತರವಾಗಿ ‘ಓಂ ನಮೋ ವೆಂಕಟೇಶಾಯ’ ಎಂದು ಜಪಿಸುತ್ತಾರೆ. ದಿನವಿಡೀ 20 ಗಂಟೆಗಳ ಕಾಲ ಲಡ್ಡು ತಯಾರಿಸಲಾಗುತ್ತದೆ. ಮೂರು ಪ್ರತ್ಯೇಕ ಪಾಳಿಗೆಗಳಲ್ಲಿ ಲಡ್ಡು ತಯಾರಾಗುತ್ತದೆ.
ಲಡ್ಡಿನಲ್ಲಿ ಏನಿರುತ್ತೆ? : ಲಡ್ಡು ತಯಾರಿಗೆ ಕಡಲೆಹಿಟ್ಟು, ಸಕ್ಕರೆ, ಹಸುವಿನ ತುಪ್ಪ, ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿಯನ್ನು ಬಳಸಲಾಗುತ್ತದೆ. ಮೊದಲಿಗೆ ಕಡಲೆಹಿಟ್ಟಿನ ಮಿಶ್ರಣವನ್ನು ತುಪ್ಪದಲ್ಲಿ ಕರೆದು ಬೂಂದಿ ತಯಾರಿಸಲಾಗುತ್ತದೆ. ನಂತರ ಅದಕ್ಕೆ ಸಕ್ಕರೆ ಪಾಕ, ತುಪ್ಪ ಮತ್ತು ಇತರ ಸಾಮಾಗ್ರಿಗಳನ್ನು ಬಳಸಿ ಲಡ್ಡು ತಯಾರಿಸಲಾಗುತ್ತದೆ. ಈ ಲಡ್ಡುಗಳಿಗೆ ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆ ದೊರೆತಿದ್ದು ಇವುಗಳನ್ನು ತಯಾರಿಸುವ ಮತ್ತು ವಿತರಿಸುವ ಏಕೈಕ ಹಕ್ಕು ತಿರುಮಲ ತಿರುಪತಿ ದೇವಸ್ಥಾನಕ್ಕೆ ಮಾತ್ರ ಇದೆ. ಲಡ್ಡು ತಯಾರಿಸಲು ಪ್ರತಿದಿನ 10 ಟನ್ ಕಡಲೆ ಹಿಟ್ಟು, 10 ಟನ್ ಸಕ್ಕರೆ, 700 ಕೆ.ಜಿ. ಗೋಡಂಬಿ,150 ಕೆ.ಜಿ. ಏಲಕ್ಕಿ, 300 ರಿಂದ 500 ಲೀಟರ್ ತುಪ್ಪ, 500 ಕೆ.ಜಿ. ಕಲ್ಲು ಸಕ್ಕರೆ ಮತ್ತು 540 ಕೆ.ಜಿ. ಒಣದ್ರಾಕ್ಷಿ ಬಳಕೆಯಾಗುತ್ತದೆ. ಇಂದು ತಿರುಪತಿ ಲಡ್ಡುವಿನ ಸಿಹಿ ಎಲ್ಲೆಡೆ ಪಸರಿಸಿದೆ. ಪಸರಿಸುತ್ತಿದೆ.

Facebook
Twitter
WhatsApp
LinkedIn
Telegram