‘ಓದು’ ಎಂಬುವುದು ಮಾನವನ ಉತ್ತಮ ಹವ್ಯಾಸಗಳಲ್ಲೊಂದು. ಓದು ವ್ಯಕ್ತಿಯನ್ನು ಮಾನಸಿಕ, ಸಾಮಾಜಿಕವಾಗಿ ಬೆಳೆಸುತ್ತದೆ. ತಾನು ಓದುವ ಜೊತೆಗೆ ಇತರರನ್ನು ಓದುವಂತೆ ಪ್ರೇರೇಪಿಸುವ ಬಹುದೊಡ್ಡ ಬಳಗವೇ ಇದೆ. ಓದಿನಿಂದ ದೊರೆಯುವ ಖುಷಿಯ ಅನುಭವವಾಗಬೇಕಾದರೆ ಮೊದಲು ನಾವು ಓದುಗರಾಗಬೇಕು. ಓದಲು ಬೇಕಾದ ಪುಸ್ತಕ ಎಲ್ಲಿ ಲಭ್ಯ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಸಾಮಾನ್ಯವಾಗಿ ಊರಿನಲ್ಲಿರುವ ಗ್ರಂಥಾಲಯಗಳು ಓದುಗರ ಓದಿನ ದಾಹವನ್ನು ತಣಿಸುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ತಾಲೂಕಿನ ಓದುಗರು ಪುಸ್ತಕಗಳಿಗಾಗಿ ಗ್ರಂಥಾಲಯವನ್ನೇ ಅವಲಂಬಿಸಬೇಕಾಗಿಲ್ಲ. ಇದೇ ಊರಿನಲ್ಲಿ ಓಡಾಡುತ್ತಿರುವ ಸುಶಾನ್ರವರ ರಿಕ್ಷಾವನ್ನೇರಿದರೆ ಸಾಕು.
ಸುಶಾನ್ರವರ ಬದುಕಿನ ಬಂಡಿಯಾದ ಆಟೋ ಸಾಮಾನ್ಯ ರಿಕ್ಷಾಗಳಂತಿಲ್ಲ. ಆ ರಿಕ್ಷಾವನ್ನೇರಿದಾಗ ಅಲ್ಲೊಂದು ಹೊಸ ಪುಸ್ತಕಗಳ ಲೋಕವೇ ತೆರೆದುಕೊಳ್ಳುತ್ತದೆ. ರಿಕ್ಷಾದ ಒಳಭಾಗ ಅಂದರೆ ಪ್ರಯಾಣಿಕರು ಕುಳಿತುಕೊಳ್ಳುವ ಎದುರು ಭಾಗದಲ್ಲಿ ಒಂದಷ್ಟು ಬಾಕ್ಸ್, ರ್ಯಾಕ್ಗಳನ್ನು ಜೋಡಿಸಿ ಅದರಲ್ಲಿ ಪುಸ್ತಕಗಳನ್ನು ಜೋಡಿಸುವ ಮೂಲಕ ತನ್ನ ರಿಕ್ಷಾವನ್ನೇ ಗ್ರಂಥಾಲಯವನ್ನಾಗಿಸಿದ್ದಾರೆ. ಕಥೆ, ಚುಟುಕು, ಅಡುಗೆಗೆ ಸಂಬAಧಿಸಿದ, ಕಾದಂಬರಿ, ಮಕ್ಕಳ ನಾಟಕ, ರಸಪ್ರಶ್ನೆ ಹೀಗೆ ಎಲ್ಲಾ ಪ್ರಕಾರಗಳ ಸುಮಾರು ೬೦ಕ್ಕೂ ಹೆಚ್ಚಿನ ಪುಸ್ತಕಗಳು ಇವೆ. ಇದರೊಂದಿಗೆ ದಿನಪತ್ರಿಕೆಗಳಿಗೂ ಇಲ್ಲಿ ಜಾಗವಿದೆ. ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು ತಮಗೆ ಬೇಕಾದ ಪುಸ್ತಕಗಳನ್ನು ಮನೆಗೆ ಕೊಂಡೋಗಿ ಓದಿ, ನಂತರ ಹಿಂದಿರುಗಿಸಬಹುದಾಗಿದೆ. ಇದರೊಂದಿಗೆ ಪ್ರಯಾಣಿಕರಿಗೆ ಮೊಬೈಲ್ ಚಾರ್ಜರ್ ಪಾಯಿಂಟ್, ಕುಡಿಯುವ ನೀರು ಮುಂತಾದ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಿದ್ದಾರೆ.
ಓದುವ ಹವ್ಯಾಸಕ್ಕೆ ಹೊಸ ಮೆರುಗು : ಓದುವ ಹವ್ಯಾಸವನ್ನು ಬಾಲ್ಯದಿಂದಲೇ ರೂಢಿಸಿಕೊಂಡ ಸುಶಾನ್ ಓದುವ ಅಭಿರುಚಿಯನ್ನು ಇತರರಲ್ಲೂ ಬೆಳೆಸಬೇಕೆಂಬ ನಿಟ್ಟಿನಲ್ಲಿ ಕಳೆದ ಐದು ತಿಂಗಳಿನಿAದ ತನ್ನ ಆಟೋ ರಿಕ್ಷಾದಲ್ಲಿ ಗ್ರಂಥಾಲಯವನ್ನು ತೆರೆದಿದ್ದಾರೆ. ಆರಂಭದಲ್ಲಿ ಪುಸ್ತಕಗಳನ್ನು ತಾನೇ ಸ್ವತಹ ಖರೀದಿಸಿದ್ದಾರೆ. ನಂತರ ಒಂದಷ್ಟು ಓದುಗರು ತಮ್ಮ ಬಳಿ ಇದ್ದ ಪುಸ್ತಕಗಳನ್ನು ಇವರಿಗೆ ಉಚಿತವಾಗಿ ನೀಡಿದ್ದಾರೆ. ಸೈನಿಕರ ಬಗ್ಗೆ ಗೌರವ ಮೂಡಿಸುವ ಸ್ವಚ್ಛ ಭಾರತ್ ಮತ್ತು ಇತರ ಜಾಗೃತಿ ಮೂಡಿಸುವಂತಹ ಬರಹಗಳು ರಿಕ್ಷಾದ ಒಳ ಮತ್ತು ಹೊರಗೂ ಕಾಣಸಿಗುತ್ತವೆ. ರಿಕ್ಷಾದ ಹಿಂಭಾಗದಲ್ಲಿ ರಿಕ್ಷಾದೊಳಗಡೆ ಲಭ್ಯವಿರುವ ಸೇವೆಗಳ ಪಟ್ಟಿಯೆ ಇದೆ.
ಸುಶಾನ್ರವರ ಈ ಪ್ರಯತ್ನ ವಿದ್ಯಾರ್ಥಿಗಳ ಮನ ಗೆದ್ದಿದೆ. ಪ್ರತಿನಿತ್ಯ ಒಂದಷ್ಟು ಮಂದಿ ಪುಸ್ತಕಗಳನ್ನು ಹುಡುಕುತ್ತಾ ಇವರ ಬಳಿ ಬರುತ್ತಾರೆ. ಇವರ ಪ್ರಯತ್ನದ ಫಲವಾಗಿ ಓದುವ ಹವ್ಯಾಸವನ್ನು ವೃದ್ಧಿಸಿಕೊಂಡವರು ಇದ್ದಾರೆ. ಶಾಲಾ ಮಕ್ಕಳಿಗಂತೂ ಸುಶಾನ್ರವರ ರಿಕ್ಷಾವೆಂದರೆ ಅಚ್ಚುಮೆಚ್ಚು. ಬೆಳಗ್ಗೆ ಮತ್ತು ಸಂಜೆ ಶಾಲಾ ಮಕ್ಕಳನ್ನು ಶಾಲೆಗೆ ಬಿಡುವ, ಕರೆ ತರುವ ಕಾಯಕವನ್ನು ಮಾಡುತ್ತಾರೆ. ಅದರಿಂದ ಬರುವ ಹಣದಲ್ಲೂ ಒಂದಷ್ಟು ಪುಸ್ತಕಗಳನ್ನು ಖರೀದಿಸಿ ತನ್ನ ಗ್ರಂಥಾಲಯವನ್ನು ವೃದ್ಧಿಸುತ್ತಿದ್ದಾರೆ.
ಬಾಡಿಗೆಯಿಂದ ಬದುಕು : ಸುಶಾನ್ ಮೂಲತಹ ಬಾಳ್ತಿಲ ಗ್ರಾಮದ ನೀರಪಾದೆಯವರು. ಇವರಿಗೆ ಮೂವತ್ನಾಲ್ಕು ವರ್ಷ. ಎಸ್ಸೆಸೆಲ್ಸಿ ಮುಗಿಸಿದ ನಂತರ ಇರುವ ಅಲ್ಪ ಜಮೀನಿನಲ್ಲಿ ಬದುಕು ಸಾಗಿಸುವುದು ಕಷ್ಟವೆಂದುಕೊಂಡು ಬೆಂಗಳೂರಿನ ಜ್ಯೂಸ್ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಕಳೆದ ಎರಡು ವರ್ಷಗಳ ಹಿಂದೆ ನಗರ ಜೀವನಕ್ಕೆ ಗುಡ್ ಬೈ ಹೇಳಿ ಊರಿಗೆ ಬಂದು ರಿಕ್ಷಾ ಖರೀದಿಸಿ ಅದರಲ್ಲಿ ದುಡಿಯಲು ಆರಂಭಿಸಿದ್ದಾರೆ. ಬಿ.ಸಿ.ರೋಡಿನ ರಕ್ತೇಶ್ವರಿ ರಿಕ್ಷಾ ನಿಲುಗಡೆಯಲ್ಲಿ ರಾತ್ರಿ 11 ಗಂಟೆಯವರೆಗೂ ಇವರು ಜನರ ಸೇವೆಗೆ ಲಭ್ಯವಿರುವ ಮೂಲಕ ತನ್ನ ಸಂಸಾರದ ನೊಗವನ್ನು ಸಾಗಿಸುತ್ತಿದ್ದಾರೆ.
ಬಹುಪ್ರತಿಭಾವಂತನಾದ ಸುಶಾನ್ ಲೈವ್ ಪೈಂಟಿAಗ್ ಅನ್ನು ಮಾಡುತ್ತಾರೆ. ಉತ್ತಮ ಚಿತ್ರ ಕಲಾವಿದ ಕೂಡಾ ಹೌದು. ಕಾರ್ಟೂನ್, ವಾಹನ ಚಾಲನೆ, ಪೈಂಟಿಂಗ್, ಕ್ಯಾಟರಿಂಗ್ ಹೀಗೆ ಇವರ ಬದುಕು ಸಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಗ್ರಂಥಾಲಯವನ್ನು ವಿಸ್ತರಿಸುವ ಯೋಚನೆ ಇವರಲ್ಲಿದೆ.
ರಿಕ್ಷಾ ಚಾಲಕನ ಈ ಪ್ರಯತ್ನವನ್ನು ಕಂಡು ಸ್ಥಳೀಯ ಸಂಸದರು, ಓದುವ ಆಸಕ್ತರು ಖುಷಿಗೊಂಡಿದ್ದಾರೆ. ಇವರನ್ನು ನಾವೆಲ್ಲ ಪ್ರೋತ್ಸಾಹಿಸುವ ಮೂಲಕ ಓದುವ ಅಭಿರುಚಿಯನ್ನು ಉಳಿಸಿ-ಬೆಳೆಸಬೇಕಾಗಿದೆ. ಸುಶಾನ್ರವರ ಮೊಬೈಲ್ ನಂಬರ್ : 9008905130.
