ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಭಾರತೀಯ ಸಂಸ್ಕೃತಿ, ಆಚರಣೆಗಳು ಬಹಳ ವಿಶಿಷ್ಟವಾದುದು. ಜೀವನದ ಹಲವು ಕ್ಷಣ, ಸಂದರ್ಭಗಳನ್ನು ಸಂಸ್ಕೃತಿಯೊoದಿಗೆ ಮಿಳಿತಗೊಳಿಸಿ ಮಾಡುವ ಆಚರಣೆಗಳು ಬದುಕಿಗೆ ಮತ್ತಷ್ಟು ಉಲ್ಲಾಸ, ಹುರುಪನ್ನು ನೀಡುವಂಥವುಗಳಾಗಿವೆ. ಮನೆಯಲ್ಲಿ ಮಗುವಿನ ಜನನವಾದಾಗ ಆ ಮಗುವಿನ ನಾಮಕರಣದ ಕಾರ್ಯಕ್ರಮವನ್ನು ಬಹಳ ಸಂಭ್ರಮದಿoದ ಎಲ್ಲರೂ ಆಚರಿಸುತ್ತಾರೆ. ನಾಮಕರಣದಂದು ಕುಟುಂಬ, ಬಂಧು-ಮಿತ್ರರು, ಊರವರನ್ನೆಲ್ಲ ಕರೆದು ಹಬ್ಬದಂತೆ ಸಿಹಿಯೂಟ ಉಣ ಬಡಿಸುತ್ತಾರೆ. ಇದು ಮಗುವಿಗೆ ಹೆಸರಿಡುವ ಕಾರ್ಯಕ್ರಮವಾದರೂ ಅದರ ಹಿಂದಿನ ಆಸೆ, ಆಕಾಂಕ್ಷೆಗಳು, ಉದ್ದೇಶ, ಆಶಾಭಾವನೆಗಳು ಸಾಕಷ್ಟು ಇರುತ್ತವೆ. ಮಗುವಿನ ತಂದೆ ತಾಯಿಯು ‘ನಮ್ಮ ಮಗ ಅಥವಾ ಮಗಳು ಬೆಳೆದು ದೊಡ್ಡವಳಾಗಿ ಉತ್ತಮ ಜೀವನ ನಡೆಸಿ ಕೀರ್ತಿ ಗಳಿಸಲಿ. ನಮ್ಮ ಮನೆ, ಮನೆತನಕ್ಕೆ, ಊರಿಗೆ ಹೆಸರನ್ನು ತರುವಂತಾಗಲಿ’ ಎಂದು ಆಶೀಸುತ್ತಾರೆ. ಅಜ್ಜ-ಅಜ್ಜಿಯರೂ ಕೂಡ ತಮ್ಮ ವಂಶೋದ್ಧಾರಕ/ಕಿಗೆ ಹೆಸರನ್ನು ಸೂಚಿಸಿ ದೀಪದಂತೆ ಬೆಳಕು ಪಸರಿಸಲಿ ಎಂದು ಹಾರೈಸುತ್ತಾರೆ. ನಾಮಕರಣ ಮಾಡಲಾದ ಹೆಸರಿನೊಂದಿಗೆ ತಮ್ಮ ವಂಶ, ಕುಲದ ಹೆಸರನ್ನು ಜೋಡಣೆ ಮಾಡುತ್ತಾರೆ. ಧೀಮಂತ ವ್ಯಕ್ತಿಗಳ ಹೆಸರಿಡುವ ಮೂಲಕ ತಮ್ಮ ಮಕ್ಕಳೂ ಕೂಡ ಅವರಂತೆಯೇ ಆಗಲಿ ಎಂದು ಇಚ್ಛಿಸುತ್ತಾರೆ. ಮನೆಯಲ್ಲಿ ಬಡತನವಿದ್ದರೂ ಮಗನಿಗೆ ಕುಬೇರ ಎಂದು ಹೆಸರಿಟ್ಟು, ಆತನಾದರೂ ಸಿರಿ ಸಂಪತ್ತು ಗಳಿಸುವಂತಾಗಲಿ ಎಂದು ಪ್ರಾರ್ಥಿಸುತ್ತಾರೆ.
ಹೆಸರು ಇಡುವ ಶಾಸ್ತçಗಳಲ್ಲಿ ನಾನಾ ರೀತಿಯಿಂದ ಹೆಸರನ್ನು ಸೂಚಿಸಲಾಗುತ್ತದೆ. ಮಗುವಿನ ಜಾತಕದ ಅನ್ವಯ ಹೆಸರನ್ನು ಸೂಚಿಸುತ್ತಾರೆ. ಅದರ ಜೊತೆಗೆ ಮನೆತನ ಅಥವಾ ಉಪನಾಮವನ್ನು ಕೂಡ ಸೇರಿಸಿ ಹೆಸರಿಟ್ಟುಬಿಡುತ್ತಾರೆ. ಇನ್ನು ಕೆಲವರು ಧೀಮಂತ ವ್ಯಕ್ತಿಗಳ, ಖ್ಯಾತ ನಾಮರ ಹೆಸರಿಟ್ಟರೆ, ಕೆಲವರು ತಮ್ಮ ನೆಚ್ಚಿನ ಆಟಗಾರರ, ಚಲನಚಿತ್ರ ಕಲಾವಿದರ ಹೆಸರಿಡುವುದುಂಟು. ಮಗುವಿನ ತಂದೆ-ತಾಯಿಯ ಹೆಸರಿನಲ್ಲಿರುವ ಅಕ್ಷರಗಳನ್ನು ಬಳಸಿಕೊಂಡು ಮಕ್ಕಳಿಗೆ ಹೆಸರಿಡುತ್ತಾರೆ. ಇನ್ನೂ ಕೆಲವರು ತಮ್ಮ ಆತ್ಮೀಯ ಗೆಳೆಯ/ಗೆಳತಿಯ ಹೆಸರನ್ನು ತಮ್ಮ ಮಕ್ಕಳಿಗೆ ಇಡುವವರಿದ್ದಾರೆ. ತಮ್ಮ ಮಕ್ಕಳಿಗೆ ಅವಿಸ್ಮರಣೀಯ ಘಳಿಗೆ, ಘಟನೆಗಳ ಹೆಸರುಗಳನ್ನು ಇಡುವ ಮೂಲಕ ಆ ಘಳಿಗೆ, ಘಟನೆಯನ್ನು ಚಿರಸ್ಥಾಯಿಯಾಗಿಸುವವರು ಇದ್ದಾರೆ.
ಮಗು ಹುಟ್ಟುವ ಮೊದಲೇ ಗಂಡಾದರೆ ಹೀಗೆ, ಹೆಣ್ಣಾದರೆ ಹಾಗೆ ಹೆಸರಿಡೋಣವೆಂದು ಸಾಕಷ್ಟು ಪೂರ್ವ ಸಿದ್ಧತೆಗಳು ಆಗಿರುತ್ತವೆ. ನಮ್ಮ ಸಂಪ್ರದಾಯದಲ್ಲಿ ನಾಮಕರಣ ಎಂಬ ವಿಧಿ ಮಾಡಿ, ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಅಕ್ಷರವನ್ನು ಜ್ಯೋತಿಷಿಗಳಲ್ಲಿ, ವಿದ್ವಾಂಸರಲ್ಲಿ ಕೇಳಿಕೊಂಡು ಅವರು ಸೂಚಿಸಿದ ಅಕ್ಷರದಿಂದ ಆರಂಭಗೊಳ್ಳುವ ಹೆಸರಿಡುವುದು ಸಾಮಾನ್ಯ. ಉದಾಹರಣೆಗೆ ಲ, ಲ, ಲಿ, ಲೋ ಎಂದು ಬಂದರೆ ಲೋಕೇಶ ಎಂದು ಇಡುತ್ತಾರೆ. ಹಿಂದೆಲ್ಲ ಹೆಸರು ಇಡುವುದರ ಹಿಂದೆ ಅನೇಕ ಯೋಚನೆಗಳು ಇದ್ದವು. ಕುಲದೇವರು, ಗ್ರಾಮದೇವರು, ಇಷ್ಟದೇವರ ಹೆಸರನ್ನು ಇಟ್ಟು ನಿರಾಳರಾಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನ್ಮ ನಕ್ಷತ್ರಕ್ಕೊಂದು ಹೆಸರು, ಶಾಲಾ-ಕಾಲೇಜು ವ್ಯವಹಾರಕ್ಕೊಂದು (ಕರೆಯುವುದಕ್ಕೆ) ಹೆಸರು ಇಡುತ್ತಿದ್ದೇವೆ. ಮಾತ್ರವಲ್ಲದೆ ಮನೆಯಲ್ಲಿ ಮುದ್ದಿನಿಂದ ಕರೆಯುವ ಸಲುವಾಗಿ ಅಪ್ಪು, ಪುಟ್ಟ, ಅಮ್ಮಿ, ಪಮ್ಮಿ ಹೀಗೆ ಹೆಸರನ್ನು ಮತ್ತಷ್ಟು ಸರಳೀಕರಿಸುವುದುಂಟು.
ಹೆಸರಿಗೆ ಸಾಕಷ್ಟು ಮಹತ್ವವಿದೆ. ಹೆಸರಿನಿಂದ ವ್ಯಕ್ತಿಯನ್ನು ಮಾತ್ರವಲ್ಲದೆ ಅವರಲ್ಲಿನ ವ್ಯಕ್ತಿತ್ವವನ್ನು ಗುರುತಿಸುತ್ತೇವೆ. ಅದಕ್ಕಾಗಿ ಹೆಸರು ಇಡಲು ಹೆತ್ತವರು ಅನೇಕ ಬಾರಿ ಯೋಚಿಸುತ್ತಾರೆ. ಪ್ರತಿಯೊಂದು ಹೆಸರೂ ಕೂಡ ಒಂದು ಅರ್ಥವನ್ನು ಹೊಂದಿದೆ. ಕೆಲವು ಸಂದರ್ಭಗಳಲ್ಲಿ ಹೆಸರು ಧರ್ಮ, ಸಮಾಜ, ಮೌಲ್ಯವನ್ನು ಪ್ರತಿನಿಧಿಸುತ್ತದೆ. ಒಬ್ಬ ವ್ಯಕ್ತಿಯ ಹೆಸರನ್ನು ಕೇಳಿದಾಗಲೇ ಗೌರವದ ಭಾವನೆ ಮೂಡಿದರೆ, ಇನ್ನು ಕೆಲವರ ಹೆಸರು ಕೇಳಿದರೆ ಬೇಸರವೂ ಮೂಡುತ್ತದೆ. ಯಾಕೆಂದರೆ ಅವರವರ ಸ್ವಭಾವಕ್ಕೆ ಅನುಗುಣವಾಗಿ ನಮ್ಮಲ್ಲಿ ಗೌರವ ಅಥವಾ ತಿರಸ್ಕಾರದ ಭಾವನೆ ಮೂಡುತ್ತದೆ. ಯಾರೂ ಕೂಡ ದುರ್ಯೋಧನನ ಹೆಸರು ಇಟ್ಟುಕೊಳ್ಳುವುದಿಲ್ಲ. ಆತ ತುಂಬಾ ಹಠಮಾರಿ, ತನ್ನ ಸ್ವಭಾವವನ್ನು ಇಚ್ಛಾನುಸಾರವಾಗಿ ಉಪಯೋಗಿಸುತ್ತಾನೆ. ಯಾರಿಗೆ ಹಿಂಸೆ ಆದರೂ ತಾನು ಸುಖವಾಗಿ ಇರಬೇಕು ಎಂದು ಬಯಸುವವನು ಎಂಬ ಭಾವನೆ ಆ ಹೆಸರು ಕೇಳಿದಾಗ ಬರುತ್ತದೆ. ಹಿಂಸೆಯನ್ನು ಆನಂದಿಸುವವರನ್ನು ನಾವು ಯಾವಾಗಲೂ ಇಷ್ಟಪಡುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ದುಷ್ಟರಿಗೆ ಶಿಕ್ಷೆ ನೀಡಿ ಧರ್ಮ ಉಳಿಸುವ ದೇವರ ಹೆಸರನ್ನು ಹೆಚ್ಚಾಗಿ ಇಡಲಾಗುತ್ತದೆ. ಹೆಸರು ಕರೆಯುವ ನೆಪದಲ್ಲಿ ದೇವರನ್ನು ಸ್ತುತಿಸಿದ ಹಾಗೆಯೂ ಆಗುತ್ತದೆ ಎಂಬ ಒಂದು ಭಕ್ತಿಯೂ ಅದರಲ್ಲಿ ಅಡಗಿದೆ. ‘ಮಂಜುನಾಥ’ ಎಂಬ ಹೆಸರನ್ನು ಬಹಳಷ್ಟು ಜನರು ಇಡುತ್ತಾರೆ. ಅದನ್ನು ಹತ್ತು ಭಾರಿ ಕರೆದರೆ ಹತ್ತು ಭಾರಿ ನಾಮಸ್ಮರಣೆ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅನೇಕರದ್ದು.
ಒಬ್ಬ ನಾಸ್ತಿಕನಿದ್ದ. ಒಂದು ದಿನವೂ ಆತ ದೇವರ ಪೂಜೆ-ಪುರಸ್ಕಾರ ಮಾಡಿದವನಲ್ಲ. ಅನೇಕ ವಾರಗಳ ಕಾಲ ಮಲಗಿದ್ದಲ್ಲೇ ಇದ್ದ. ಆತ ಒಂದು ದಿನ ಮರಣವನ್ನಪ್ಪಿದ. ಆಗ ಪ್ರತ್ಯಕ್ಷರಾದ ಯಮ ಕಿಂಕರರು ಆತನನ್ನು ಯಮಧರ್ಮರಾಜನಲ್ಲಿಗೆ ಕರೆದೊಯ್ದರು. ಆತನ ಪಾಪ-ಪುಣ್ಯದ ಫಲವನ್ನು ಲೆಕ್ಕಹಾಕಿ ಮೇಲೆ ಆತನನ್ನು ಸ್ವರ್ಗಕ್ಕೆ ಕಳುಹಿಸಿಕೊಡುವಂತೆ ತಿಳಿಸಲಾಯಿತು. ಆಗ ಅಲ್ಲೊಬ್ಬ ಕೇಳಿದ ‘ಸ್ವಾಮಿ ಯಮಧರ್ಮರಾಯ, ಆತ ನಾಸ್ತಿಕ. ದೇವರ ಮೇಲೆ ಯಾವ ಗೌರವ, ಭಕ್ತಿಗಳೂ ಇಲ್ಲ. ಮತ್ತೆ ಯಾವ ಕಾರಣದಿಂದ ಆತನನ್ನು ಸ್ವರ್ಗಕ್ಕೆ ಕಳುಹಿಸಿಕೊಟ್ಟಿರುವಿರೀ?’ ಆಗ ಯಮಧರ್ಮರಾಯನು ‘ಆತ ನಾಸ್ತಿಕನೇ ಇರಬಹುದು. ಆತ ತಾನು ಸಾಯುವ ಸಂದರ್ಭದಲ್ಲಿ ಶ್ರೀಮಾನ್ ನಾರಾಯಣನ ಧ್ಯಾನ ಮಾಡಿದ. ಹಾಗಾಗಿ ಅವನ ಪಾಪ-ದೋಷಗಳೆಲ್ಲ ಪರಿಹಾರವಾಗಿ ಸ್ವರ್ಗ ಸೇರುವಂತಾಯಿತು’ ಎಂದ.
ಸ್ವಾಮೀ, ಅದು ಆತನ ಮಗನ ಹೆಸರಲ್ಲವೇ! ತಾನು ಸಾಯುವ ಸಮಯದಲ್ಲಿ ಮಗನ ಹೆಸರು ಕೂಗಿಕೊಂಡದ್ದಷ್ಟೇ ಅಲ್ಲವೇ ಎಂದು ಮರು ಪ್ರಶ್ನಿಸಿದ. ಆಗ ಯಮದೇವನು; ‘ಅದು ಮಗನಿಗೆ ಇಟ್ಟಿರುವ ಹೆಸರಾದರೂ ಅದು ಶ್ರೀಮನ್ನಾರಾಯಣನ ಹೆಸರಲ್ಲವೇ. ಆತ ಮೃತನಾಗುವ ವೇಳೆ ನಾರಾಯಣ ಎಂದು ಬಹು ಪ್ರೀತಿಯಿಂದ ಕೂಗಿಕೊಂಡ. ಅದು ಕ್ಷೀರಸಾಗರದಲ್ಲಿದ್ದ ಭಗವಂತನಿಗೆ ಅರ್ಪಿತವಾಗಿ ಆತ ಪ್ರಸನ್ನಗೊಂಡು ಸ್ವರ್ಗ ಪ್ರಾಪ್ತಿ ಕರುಣಿಸಿದ. ನೋಡು ಭಗವಂತನ ಲೀಲೆಯೆಂದರೆ ಇದೇ ಅಲ್ಲವೇ’ ಎಂದ. ಭಕ್ತ ಕುಂಬಾರ, ಕೋಳೂರ ಕೊಡಗೂಸು, ಭಕ್ತ ಪ್ರಹ್ಲಾದ ಹೀಗೆ ಭಗವಂತನ ನಾಮಸ್ಮರಣೆಯಿಂದ ಮುಕ್ತಿ ಹೊಂದಿ ಪರಮ ಪಾವನವಾದವರು ಅನೇಕರಿದ್ದಾರೆ. ಹೆಸರಿನೊಂದಿಗಿರುವ ನಂಟು ಅಪ್ಯಾಯಮಾನವಾದದ್ದು. ನಮ್ಮ ಮನೆಯ ಹೆಸರನ್ನು ಅಥವಾ ತಂದೆ-ತಾಯಿಯ ಹೆಸರನ್ನು ಹೇಳಿ ‘ಓ ನೀವು ಅವರ ಮಕ್ಕಳಾ!’ ಎಂದು ಪ್ರೀತಿ-ಗೌರವವನ್ನು ತೋರಿದರೆ ಆಗ ಆಗುವ ಖುಷಿ ಅಷ್ಟಿಷ್ಟಲ್ಲ. ಕೆಲವೊಮ್ಮೆ ಪರಿಚಿತರ ಹೆಸರು ಹೇಳಿಕೊಂಡೇ ಬಾಂಧವ್ಯಗಳು ವೃದ್ಧಿಯಾಗುತ್ತದೆ. ಇನ್ನು ಜನಸಂದಣಿಯಲ್ಲಿ ನಮಗಿಷ್ಟವಾದ ವ್ಯಕ್ತಿಯ ಹೆಸರನ್ನು ಯಾರಾದರೂ ಕೂಗಿದರೆ ಒಂದೊಮ್ಮೆ ಕಣ್ಣುಗಳೆರಡು ಅತ್ತ ಹೋಗದೇ ಇರದು. ಅವರು ನಮ್ಮ ಆಪ್ತರು ಇರಬಹುದೇ ಎಂಬ ಭಾವನೆ ಮೂಡುತ್ತವೆ. ಆತ್ಮೀಯರ ಹೆಸರು ಕೇಳಿದೊಡನೆ ಮನದಲ್ಲಿ ಸಂತೋಷದ ಭಾವ ಸ್ಫುರಿಸುವುದುಂಟು. ತಮ್ಮ ನೆಚ್ಚಿನ ಗುರುಗಳು, ಗೆಳೆಯ-ಗೆಳತಿಯರು, ಪ್ರೀತಿಪಾತ್ರರು ಹೀಗೆ ಮನಸ್ಸಿಗೆ ಅತ್ಯಾಪ್ತರಾಗಿರುವವರ ಹೆಸರು ಎಂದಿಗೂ ಮನದಲ್ಲಿ ಅಚ್ಚಳಿಯದೇ ಇರುತ್ತದೆ. ಮಾತ್ರವಲ್ಲದೆ ಆ ಹೆಸರಿನೊಂದಿಗೆ ಯಾವುದೋ ಒಂದು ಅವಿನಾಭಾವ ನಂಟು ಬೆಸೆದುಕೊಂಡಿರುತ್ತದೆ.
ಹಿಂದೆಲ್ಲ ಕೆಲಸ ಗಿಟ್ಟಿಸಿಕೊಳ್ಳಲು ಹೆಸರೇ ಸಾಕಾಗುತ್ತಿತ್ತು. ಈಗಿನಂತೆ ಶಿಫಾರಸ್ಸು ಪತ್ರದ ಅಗತ್ಯವಿರಲಿಲ್ಲ. ‘ಸ್ವಾಮಿ ನಮ್ಮೂರ ಶಾನುಬೋಗರು, ಶಾಲಾ ಹೆಡ್ಮಾಸ್ಟರ್ ಅಥವಾ ಇಂತಿoಥವರು ನಿಮ್ಮನ್ನು ಭೇಟಿಯಾಗೋಕೆ ಹೇಳಿದ್ರು. ಕೆಲಸ ಆಗುತ್ತದೆ ಎಂದು’ ಎಂಬ ವರದಿಯನ್ನು ಒಪ್ಪಿಸಿದಾಕ್ಷಣ ಕೆಲಸ ಸಿಕ್ಕೇ ಬಿಡುತ್ತಿತ್ತು. ಆದರೆ ಈಗ ಉದ್ಯೋಗಾಕಾಂಕ್ಷಿಯ ಕೌಶಲವೇ ಪರಿಗಣಿಸಲ್ಪಡುವುದರಿಂದ ಶಿಫಾರಸ್ಸುಗಳಿಗೆ ಅಷ್ಟೇನೂ ಮನ್ನಣೆ ಇಲ್ಲವಾಗಿದೆ. ಕೆಲವೊಮ್ಮೆ ಹೆಸರಿನಿಂದ ವ್ಯಕ್ತಿಗೆ ಬೆಲೆ ಬಂದರೆ ಇನ್ನು ಕೆಲವು ಭಾರಿ ವ್ಯಕ್ತಿಯಿಂದಾಗಿ ಹೆಸರಿಗೆ ಗೌರವ ದೊರೆಯುತ್ತದೆ.
ನಮ್ಮ ರಾಷ್ಟçಪಿತ ಮಹಾತ್ಮಾಗಾಂಧೀಜಿಯವರ ಹೆಸರು ಜಗದ್ವಿಖ್ಯಾತವಾದುದು ಎಂಬುದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲ. ಬಹುಶಃ ನನಗನ್ನಿಸಿದ ಪ್ರಕಾರ ಅವರ ಹೆಸರು ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಅಜರಾಮರವಾಗಿದೆ. ಬಾಪೂಜಿಯವರ ನೆನಪಿಗೋಸ್ಕರ ನಮ್ಮಲ್ಲಿ ರಸ್ತೆಗಳಿಗೆಲ್ಲ ಮಹಾತ್ಮಾ ಗಾಂಧೀಜಿ (ಎಂ.ಜಿ.) ರಸ್ತೆ ಎಂದು ಹೆಸರನ್ನಿಡುವುದುಂಟು. ಅಂತೆಯೇ ವಿಶ್ವದ ಅನೇಕ ದೇಶಗಳಲ್ಲಿ ಅವರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಹೆಸರಿನ ಬಗ್ಗೆ ಅನೇಕ ತಮಾಷೆಯ ವಿಷಯಗಳೂ ಇವೆ. ಶಾಲಾ-ಕಾಲೇಜುಗಳಲ್ಲಿ ಹುಡುಗರು ತಮ್ಮ ಆಪ್ತ ಗೆಳೆಯರನ್ನು ಕರೆಯುವುದು ಅವರಿಗಿಟ್ಟಿರುವ ಅಡ್ಡ ಹೆಸರಿನಿಂದಲೇ. ಕೆಲವು ಚೂಟಿ ಹುಡುಗರಂತೂ ತಮ್ಮ ಅಧ್ಯಾಪಕರಿಗೆ ಅಡ್ಡ ಹೆಸರು ಇಟ್ಟು ತರಲೆ ಮಾಡಿ ಖುಷಿ ಪಡುವುದುಂಟು. ಅವೆಲ್ಲ ನೆನಪಿನಲ್ಲಿ ಅಚ್ಚಳಿಯದೆ ಉಳಿದುಕೊಂಡು ನಮ್ಮ ಬದುಕನ್ನು ರೂಪಿಸಿದ ಗುರುಗಳು ಎಂಬ ಗೌರವವೂ, ಹೆಮ್ಮೆಯೂ ವ್ಯಕ್ತವಾಗುತ್ತದೆ. ತರಗತಿಗಳಲ್ಲಿ ಒಂದೇ ಹೆಸರಿನವರು ಎರಡು ಮೂರು ವಿದ್ಯಾರ್ಥಿಗಳಿದ್ದರೆ ಶಿಕ್ಷಕರ ಕಷ್ಟವಂತೂ ಹೇಳತೀರದು. ಆತನಲ್ಲ, ಇವ, ಇವನಲ,್ಲ ಅವ ಎನ್ನುವ ಹೊತ್ತಿಗೆ ಸಮಯ ಕಳೆದು ಹೋಗಿ ಪಾಠ ಅರ್ಧದಲ್ಲೇ ಬಾಕಿಯಾಗುವ ಸಂದರ್ಭಗಳೂ ಇವೆ. ಅದಕ್ಕಾಗಿ ಅವರಿಗೆ ಕ್ರಮ ಸಂಖ್ಯೆ ಕೊಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತರಾದರೂ ಮಕ್ಕಳ ಹೆಸರು ನೆನಪಾಗುವುದಿಲ್ಲ. ಶಿಕ್ಷಕರಿಗೂ ಅಷ್ಟೇ ತರಗತಿಯಲ್ಲಿನ ಜಾಣ ಮಕ್ಕಳು, ತಂಟೆ ಮಾಡುವ, ಚೂಟಿ ಮಕ್ಕಳ ಹೆಸರು ನೆನಪಿನಲ್ಲಿ ಉಳಿಯುವುದೇ ಹೆಚ್ಚು.
ವ್ಯಕ್ತಿ, ಮನೆ, ಉದ್ದಿಮೆ, ಕಂಪೆನಿ ಇತ್ಯಾದಿಗಳಿಗೆ ಸಂಬAಧಿಸಿದ ಹೆಸರು ಹೇಳಿದಾಕ್ಷಣ ಅಥವಾ ಕೇಳಿದಾಕ್ಷಣ ಅಲ್ಲೊಂದು ಬಂಧ ಮೂಡುವುದಂತೂ ನಿಜ. ಹೆಸರನ್ನು ಬಳಸಿ ಸೇವೆ-ಸಹಕಾರ ನೀಡುವವರು ಒಂದೆಡೆಯಾದರೆ, ಹೆಸರಿನ ಮೂಲಕ ಲಾಭ, ಪ್ರಯೋಜನವನ್ನು ಪಡೆಯುವವರು ಇದ್ದಾರೆ. ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೇ ನಮ್ಮ ಹೆಸರು ದುರುಪಯೋಗವಾಗುವುದುಂಟು, ಅಪಪ್ರಚಾರಕ್ಕೊಳಗಾಗುವುದುಂಟು. ಹೀಗೆ ಬದುಕಿನ ಉದ್ದಕ್ಕೂ ಗುರುತಿಸುವುದು ಮಾತ್ರವಲ್ಲದೆ ಒಂದಲ್ಲ ಒಂದು ರೀತಿಯಲ್ಲಿ ಹೆಸರುಗಳು ಬಳಕೆಯಾಗುತ್ತಲೇ ಇರುತ್ತವೆ. ಅವೆಲ್ಲದರ ನಡುವೆ ನಮ್ಮ ವ್ಯಕ್ತಿತ್ವವು ನಮ್ಮ ಹೆಸರಿಗೆ ಮತ್ತಷ್ಟು ಗೌರವ ತಂದುಕೊಡುವAತೆ ನಮ್ಮ ಜೀವನವನ್ನು ರೂಪಿಸಿಕೊಳ್ಳುವತ್ತ ನಮ್ಮ ಪ್ರಯತ್ನವಿರಲಿ.
