ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ನಾವು ಎಷ್ಟೇ ಜಾಗರೂಕರಾಗಿ ವಾಹನ ಚಲಾಯಿಸಿದರೂ, ವರ್ಷಾನುಗಟ್ಟಲೆ ಅನುಭವಗಳಿದ್ದರೂ ಎದುರಿನಿಂದ ಅಥವಾ ಹಿಂದುಗಡೆಯಿAದ ಬರುವ ವಾಹನ ಸವಾರ ಮಾಡುವ ಸಣ್ಣ ತಪ್ಪಿನಿಂದ ನಾವು ನಮ್ಮ ದೇಹದ ಅಂಗಾಂಗಗಳನ್ನು ಕಳೆದುಕೊಳ್ಳಬಹುದು. ಕೆಲವೊಮ್ಮೆ ಪ್ರಾಣಪಕ್ಷಿಯೆ ಹಾರಿ ಹೋಗಬಹುದು.
ನಮ್ಮ ದೇಶದ ಅಪಘಾತದ ಅಂಕಿಅಂಶವನ್ನೊಮ್ಮೆ ಗಮನಿಸಿದರೆ ವಾಹನ ಚಲಾಯಿಸಲು ಒಮ್ಮೆ ಹೆದರಬೇಕಾಗುತ್ತದೆ. ‘ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ’ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತ ದೇಶದಲ್ಲಿ 2025ರಲ್ಲಿ 5,13,474 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,83,434 ಜನರು ಸಾವನ್ನಪ್ಪಿದ್ದಾರೆ. ಅಂದರೆ ದೇಶದಲ್ಲಿ ಪ್ರತಿ ಗಂಟೆಗೆ ಸುಮಾರು 21 ಸಾವುಗಳು ಸಂಭವಿಸುತ್ತಿವೆ ಎಂಬುವುದನ್ನು ಇದು ಸೂಚಿಸುತ್ತದೆ. ಭಾರತ ದೇಶದಲ್ಲಿ ಕೋವಿಡ್ನ 2020ರ ಅಲೆಯಲ್ಲಿ ಮೃತಪಟ್ಟವರ ಸಂಖ್ಯೆ 1.49 ಲಕ್ಷ. ಇದಕ್ಕಿಂತಲೂ ಹೆಚ್ಚು ಅಕಾಲಿಕ ಮರಣಗಳು ರಸ್ತೆ ಅಪಘಾತದಿಂದ ಕೇವಲ ಒಂದು ವರ್ಷದಲ್ಲಿ ಸಂಭವಿಸುತ್ತವೆ ಎನ್ನುವುದಾದರೆ ಇದು ಅತ್ಯಂತ ಗಂಭೀರ ವಿಷಯವಲ್ಲವೇ? ಇನ್ನು ಗಾಯಗೊಂಡವರ ಪಾಲು ಬಹುದೊಡ್ಡದಿದೆ. 2025ರ ಅಧಿಕೃತ ಅಕಿಅಂಶ ಬಿಡುಗಡೆಗೊಂಡಿಲ್ಲ.2024ರಲ್ಲಿ 4,71,441 ಮಂದಿ ಅಪಘಾತದಿಂದ ಗಾಯಗೊಂಡಿದ್ದಾರೆ. ಅತಿವೇಗದ ಚಾಲನೆ, ಹೆಲ್ಮೆಟ್ ಧರಿಸದಿರುವುದು ಹೀಗೆ ಅಪಘಾತಕ್ಕೆ ಕಾರಣಗಳು ಹಲವಾರು ಇರಬಹುದು. ಅಪಘಾತವಾದ ನಂತರ ಸಾಲದ ಸುಳಿಯಲ್ಲಿ ಸಿಲುಕಿ ಕಷ್ಟದ ದಿನಗಳನ್ನು ದೂಡುತ್ತಿರುವವರ ಪ್ರಮಾಣವು ಸಾಕಷ್ಟಿದೆ. 2026ರವರೆಗಿನ ವರದಿಯ ಪ್ರಕಾರ ರಸ್ತೆ ಅಪಘಾತದ ಸಾವುಗಳ ಸರಣಿಯಲ್ಲಿ ಕರ್ನಾಟಕವು ಏಳನೇ ಸ್ಥಾನದಲ್ಲಿದೆ.
ಅಪಘಾತವಾದ ಆರಂಭಿಕ ಸಮಯವನ್ನು ‘ಗೋಲ್ಡನ್ ಅವರ್’ (Golden Hour) ಎಂದು ಕರೆಯುತ್ತೇವೆ. ಈ ಸಂದರ್ಭದಲ್ಲಿ ಅಂದರೆ ಆಸ್ಪತ್ರೆಗೆ ಸೇರಿಸುವ ಹಂತದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಸಂತ್ರಸ್ತರು ತುಂಬಾ ಬಡವರಾಗಿದ್ದರೆ, ವಿಮಾ ಪಾಲಿಸಿಗಳು ಇಲ್ಲದಿದ್ದ ಪಕ್ಷ ಯಾವುದಾದರೊಂದು ಕಡಿಮೆ ಖರ್ಚಿನ ಆಸ್ಪತ್ರೆಗೆ ಅನಿವಾರ್ಯವಾಗಿ ದಾಖಲಿಸಬೇಕಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಅಪಘಾತ ಸಂಭವಿಸಿದಾಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಣದ ಕೊರತೆಯಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಸಾಗಾಟ ಮಾಡುವ ಸಂದರ್ಭಗಳಲ್ಲಿ ಎಷ್ಟೋ ಪ್ರಾಣಪಕ್ಷಿಗಳು ಹಾರಿಹೋಗುತ್ತವೆ. ‘ಗೋಲ್ಡನ್ ಅವರ್’ನಲ್ಲಿ ತತ್ಕ್ಷಣ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆಗಳನ್ನು ನೀಡಿದ್ದಲ್ಲಿ ಜೀವ ಉಳಿಸಲು ಬಹಳ ದೊಡ್ಡ ಅವಕಾಶವಿರುತ್ತದೆ. ಹೆಚ್ಚಿನ ಚಿಕಿತ್ಸೆಗೆ ನಂತರ ದೊಡ್ಡ ಆಸ್ಪತ್ರೆಗೆ ವರ್ಗಾಯಿಸಬಹುದು. ‘ಗೋಲ್ಡನ್ ಅವರ್’ನ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದಲ್ಲಿ ಪ್ರಾಥಮಿಕ ಖರ್ಚು-ವೆಚ್ಚವನ್ನು ಭರಿಸುವುದು ಯಾರು? ಹೇಗೆ? ಎನ್ನುವ ಅತೀ ದೊಡ್ಡ ಸಮಸ್ಯೆಗೆ ಒಂದು ಅತ್ಯುತ್ತಮ ಪರಿಹಾರವಾಗಿ ಕೇಂದ್ರ ಸರಕಾರ ಫೆ. 13, 2026 ರಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದುವೇ ‘ಪಿ.ಎಂ.ರಾಹತ್.’ ಇದರ ಪೂರ್ಣ ಹೆಸರು (PM-RAHAT Scheme – Prime Minister Road Accident Victims Hospitalisation and Assured Treatment Scheme). ‘ಮೋಟಾರು ವಾಹನ ಕಾಯಿದೆ 1988 ರ ಸೆಕ್ಷನ್ 162’ರ ಅಡಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ.
‘ಪಿ.ಎಂ. ರಾಹತ್’ ಯೋಜನೆಯಡಿ ದೇಶದಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಗರಿಷ್ಠ ರೂ. 1.50 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ದೊರೆಯುತ್ತದೆ. ಈ ಯೋಜನೆ ಈಗಾಗಲೇ ನಮ್ಮ ರಾಜ್ಯದಲ್ಲೂ ಜಾರಿಗೆ ಬಂದಿದೆ. ಅಪಘಾತ ಸಂಭವಿಸಿದ ದಿನದಿಂದ ಗರಿಷ್ಠ 7 ದಿನಗಳವರೆಗೆ ಆಸ್ಪತ್ರೆಯಲ್ಲಿ ಈ ಸೌಲಭ್ಯ ದೊರೆಯುತ್ತದೆ. ಇದರಿಂದಾಗಿ ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ದೊರೆಯುವ ಮೂಲಕ ಎಷ್ಟೋ ಜೀವಗಳ ಉಳಿವಿಗೆ ಕಾರಣವಾಗಲಿದೆ.
ಭಾರತದ ರಾಜ್ಯ, ರಾಷ್ಟ್ರೀಯ ಅಥವಾ ಗ್ರಾಮೀಣ ರಸ್ತೆ ಹೀಗೆ ಎಲ್ಲಾದರೂ ಮೋಟಾರು ಅಪಘಾತಕ್ಕೆ ಒಳಗಾದ ಪಾದಚಾರಿಗಳು, ಸವಾರರು ಅಥವಾ ಪ್ರಯಾಣಿಕರು ಈ ಯೋಜನೆಗೆ ಅರ್ಹರು. ಇದರ ಪ್ರಯೋಜನ ಪಡೆಯಲು ಮುಂಗಡವಾಗಿ ಯಾವುದೇ ರೀತಿಯ ನೋಂದಣೆ ಅಥವಾ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಅಪಘಾತ ಸಂಭವಿಸಿದ ತಕ್ಷಣ ನಿಮಗೆ ಬೇಕಾದ ಆಸ್ಪತ್ರೆಗೆ ಹೋಗಿ ದಾಖಲಾಗಬಹುದಾಗಿದೆ. ರೂ. 1.50 ಲಕ್ಷದವರೆಗಿನ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ‘ಮೋಟಾರು ಅಪಘಾತ ನಿಧಿ’ಯ ಮೂಲಕ ನೇರವಾಗಿ ಆಸ್ಪತ್ರೆಗೆ ಪಾವತಿಯಾಗುತ್ತದೆ.
‘ಪಿ.ಎಂ.ರಾಹತ್’ ಯೋಜನೆಗೆ ಪೂರಕವಾಗಿ ರಾಜ್ಯದ ಆರೋಗ್ಯ ಸಚಿವರು ಇತ್ತೀಚೆಗೆ ರಾಜ್ಯದಿಂದಲೂ ರೂ. 1 ಲಕ್ಷವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದಿರುವುದು ಸಂತೋಷದ ಸಂಗತಿ.
ಈ ಯೋಜನೆಯ ಮೂಲಕ ಅಪಘಾತಕ್ಕೊಳಗಾದ ವ್ಯಕ್ತಿಗಳ ಅಮೂಲ್ಯ ಜೀವವನ್ನು ‘ಗೋಲ್ಡನ್ ಅವರ್’ನಲ್ಲಿ ಸೂಕ್ತ ಚಿಕಿತ್ಸೆಯ ಮೂಲಕ ಉಳಿಸಲು ಸಹಾಯವಾಣಿ ಸಂಖ್ಯೆ 112 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಭಾರತ ಸರಕಾರದ ಅಧಿಕೃತ ಪೋರ್ಟಲ್ (India.gov.in) ಗೆ ಭೇಟಿ ನೀಡಬಹುದಾಗಿದೆ.
