ನೆಲೆಯಿಲ್ಲದ ಬದುಕಿಗೆ ಜೀವಸೆಲೆಯಾದ ವಾತ್ಸಲ್ಯ

ಕಳೆದ ಸಂಚಿಕೆಯಲ್ಲಿ ‘ನವಚೇತನ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ವಾತ್ಸಲ್ಯ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಶ್ರೀ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಕೈಗೊಂಡ ಅನೇಕ ಕಾರ್ಯಕ್ರಮಗಳಲ್ಲಿ ‘ಮಾಸಾಶನ’ ಕಾರ್ಯಕ್ರಮ ಪ್ರಮುಖವಾದುದು. ಮಾಸಾಶನ ಕಾರ್ಯಕ್ರಮದಡಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸುಮಾರು 20 ಸಾವಿರ ಮಂದಿ ಯಾರ ಪೋಷಣೆಯೂ ಇಲ್ಲದ, ದುಡಿಯಲಾಗದ ಅಸಹಾಯಕ ಸ್ಥಿತಿಯಲ್ಲಿರುವ ವೃದ್ಧರಿಗೆ, ವಿಶೇಷಚೇತನರಿಗೆ ಪ್ರತಿ ತಿಂಗಳು ರೂ. 1 ಸಾವಿರದಿಂದ ರೂ. 3 ಸಾವಿರದವರೆಗೆ ‘ಮಾಸಾಶನ’ವನ್ನು ನೀಡಲಾಗುತ್ತಿದೆ. ಇದುವರೆಗೆ ಒಟ್ಟು 80,642 ಫಲಾನುಭವಿಗಳಿಗೆ ರೂ. 136 ಕೋಟಿ ಮೊತ್ತದ ಮಾಸಾಶನವನ್ನು ಒದಗಿಸಲಾಗಿದೆ. ಸರಕಾರದ ನಂತರ ಇಷ್ಟು ದೊಡ್ಡ ಮೊತ್ತದ ಮಾಸಾಶನವನ್ನು ನೀಡುತ್ತಿರುವ ಇನ್ನೊಂದು ವ್ಯವಸ್ಥೆ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಎಂದರೆ ತಪ್ಪಾಗಲಾರದು. ಪೂಜ್ಯ ಶ್ರೀ ಹೆಗ್ಗಡೆಯವರ ಆದೇಶದಂತೆ ಕೋವಿಡ್ ಸಂದರ್ಭದಲ್ಲಿಯೂ ಮಾಸಾಶನ ಮೊತ್ತ ಕ್ಲಪ್ತ ಸಮಯದಲ್ಲಿ ಅಸಹಾಯಕರಿಗೆ ತಲುಪಬೇಕೆಂಬ ನಿಟ್ಟಿನಲ್ಲಿ ಯೋಜನೆಯ ಕಾರ್ಯಕರ್ತರ ಖಾತೆಗಳಿಗೆ ಜಮೆಗೊಳಿಸಿ ನಂತರ ಕಾರ್ಯಕರ್ತರು ಖುದ್ದಾಗಿ ಮನೆ ಭೇಟಿ ಮಾಡಿ ಅವುಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ದಾಖಲೀಕರಣಕ್ಕಾಗಿ ಕಾರ್ಯಕರ್ತರು ಫಲಾನುಭವಿಗಳಿಗೆ ಮಾಸಾಶನ ನೀಡುವ ಛಾಯಾಚಿತ್ರಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಕಳುಹಿಸಿಕೊಡುತ್ತಿದ್ದರು. ಇದರಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಒಂದಷ್ಟು ಮಂದಿ ಗೋಡೆ ಇಲ್ಲದ, ಪ್ಲಾಸ್ಟಿಕ್ ತಡಿಕೆ, ತೆಂಗಿನ ಗರಿಗಳ ಗುಡಿಸಲಿನಲ್ಲಿ ಬದುಕುತ್ತಿರುವುದನ್ನು ಗಮನಿಸಿದರು. ಅವರಿಗೆ ಯಾವುದೇ ಸುರಕ್ಷತೆ ಅಥವಾ ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದಿರುವುದನ್ನು ಗಮನಿಸಿದ ಮಾತೃ ಹೃದಯ ಅಂತಹ ಜೀವಗಳಿಗೆ ಒಂದು ಭದ್ರವಾದ ಬದುಕನ್ನು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದರು. ಆ ಸಂಕಲ್ಪವೇ ‘ವಾತ್ಸಲ್ಯ ಕಾರ್ಯಕ್ರಮ’.
ಕಾರ್ಯಕ್ರಮದ ರೂಪುರೇಷೆಗಳನ್ನು ಅಮ್ಮನವರೇ ಖುದ್ದಾಗಿ ರೂಪಿಸಿದರು. ಮೊದಲಾಗಿ ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಮೂಲಕ ರಾಜ್ಯಾದ್ಯಂತ ಸುಮಾರು 55 ಸಾವಿರ ಮನೆಗಳ ಸರ್ವೇಯನ್ನು ಮಾಡಿಸಿದರು. ಅದರಂತೆ ಪ್ರಾರಂಭದಲ್ಲಿ ಸುಮಾರು 18,179 ಅಸಹಾಯಕ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ವಾತ್ಸಲ್ಯ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದರು. ಮೊದಲ ಬಾರಿಗೆ ಇವರುಗಳಿಗೆ ಸೀರೆ, ಪಂಚೆ, ಶರ್ಟ್, ಲೋಟ, ತಟ್ಟೆ, ಅಡುಗೆ ಪಾತ್ರೆ, ಚಾಪೆ, ಹೊದಿಕೆ, ಸಾಬೂನು ಮುಂತಾದ ಅಗತ್ಯ ವಸ್ತುಗಳನ್ನೊಳಗೊಂಡ ‘ವಾತ್ಸಲ್ಯ ಕಿಟ್’ ಅನ್ನು ತಯಾರಿಸಿ ವಿತರಿಸಲಾಯಿತು. ಎರಡನೇ ಹಂತದಲ್ಲಿ ಶಿಥಿಲಗೊಂಡ ಮನೆಗಳನ್ನು ದುರಸ್ಥಿ ಮಾಡಿಕೊಡಲಾಯಿತು.
‘ವಾತ್ಸಲ್ಯ’ ಕಾರ್ಯಕ್ರಮದಡಿ ಅಸಹಾಯಕ ವ್ಯಕ್ತಿಗಳಿಗೆ ಈವರೆಗೆ ರಾಜ್ಯಾದ್ಯಂತ 943 ವಾತ್ಸಲ್ಯ ಮನೆಗಳನ್ನು ರಚಿಸಿಕೊಡಲಾಗಿದೆ. 1734 ಮನೆ ರಿಪೇರಿ, 200 ಶೌಚಾಲಯ ರಚನೆ ಮತ್ತು ಶೌಚಾಲಯ ದುರಸ್ಥಿ, ಸ್ನಾನ ಗೃಹ ರಚನೆ, ಸ್ನಾನ ಗೃಹ ದುರಸ್ಥಿ, ಮನೆಗಳಿಗೆ ಸೋಲಾರ್, ವಿದ್ಯುತ್ ವ್ಯವಸ್ಥೆ, ನಳ್ಳಿ ನೀರಿನ ವ್ಯವಸ್ಥೆಗೊಳಿಸಲಾಗಿದೆ. ಇದಲ್ಲದೆ ಸುಮಾರು 2,049 ಮಂದಿ ಅಸಹಾಯಕ ವ್ಯಕ್ತಿಗಳಿಗೆ ಅಡುಗೆ ಮಾಡಲು ಸಾಧ್ಯವಿಲ್ಲದಿರುವ ವಿಷಯವು ಮಾತೃಶ್ರೀಯವರ ಗಮನಕ್ಕೆ ಬಂತು. ಹಾಗೆಂದು ಪ್ರತಿನಿತ್ಯ ಇವರಿಗೆ ಹೊರಗಿನಿಂದ ಆಹಾರವನ್ನು ದೊರಕಿಸಿಕೊಡುವುದೂ ಕಷ್ಟಸಾಧ್ಯ. ಅವರುಗಳಿಗೆ ನೆರವಾಗುವ ನಿಟ್ಟಿನಲ್ಲಿ ಪೌಷ್ಠಿಕ ಆಹಾರ ತಜ್ಞರಿಂದ ಸಲಹೆ ಪಡೆದು ಕೆಲವು ಆಯ್ದ ಧಾನ್ಯಗಳಿಂದ ‘ವಾತ್ಸಲ್ಯ ಮಿಕ್ಸ್’ ಅನ್ನು ತಯಾರಿಸಿ ಯೋಜನೆಯ ಜ್ಞಾನವಿಕಾಸ ಕಾರ್ಯಕರ್ತರ ಮೂಲಕ ರಾಜ್ಯದಾದ್ಯಂತ ನೀಡಲಾಗುತ್ತಿದೆ. ಇಂದಿಗೂ ಪ್ರತಿ ತಿಂಗಳು 2 ಸಾವಿರಕ್ಕೂ ಹೆಚ್ಚು ಅಸಹಾಯಕರಿಗೆ ‘ವಾತ್ಸಲ್ಯ ಮಿಕ್ಸ್’ ಅನ್ನು ಒದಗಿಸಲಾಗುತ್ತಿದೆ.
ಮಾಸಾಶನ ಫಲಾನುಭವಿಗಳ ಮಕ್ಕಳ ಅಥವಾ ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ ವಿದ್ಯಾನಿಧಿ’ಯನ್ನು ನೀಡಲಾಗುತ್ತಿದೆ. ಈಗಾಗಲೇ 328 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ‘ವಾತ್ಸಲ್ಯ’ ಎಂಬ ಕಾರ್ಯಕ್ರಮವು ಕೇವಲ ವಸ್ತು, ಪರಿಕರಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ಪ್ರೀತಿ, ವಾತ್ಸಲ್ಯಗಳನ್ನು ಹಂಚಿಕೊಳ್ಳುವ ಒಂದು ಭಾವನಾತ್ಮಕ ಕಾರ್ಯಕ್ರಮವಾಗಿದೆ. ವಾತ್ಸಲ್ಯದ ಪರಿಣಾಮವಾಗಿ ಇದೀಗ ಅಸಹಾಯಕರಿಗೆ ಸಹಾಯ ಮಾಡುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕೆಲವು ಸ್ಥಳೀಯ ಸಹೃದಯಿಗಳು ಇವರಿಗೆ ನಿರಂತರ ಆಹಾರವನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಇವರನ್ನು ಮಾತೃಶ್ರೀ ಅಮ್ಮನವರು ‘ಪೋಷಕರು’ ಎಂದು ಗುರುತಿಸಿದ್ದಾರೆ. ಹೆತ್ತವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ ಎನ್ನುವ ಸಮಾಜದ ಉನ್ನತ ಮೌಲ್ಯವನ್ನು ಈ ವಾತ್ಸಲ್ಯ ಕಾರ್ಯಕ್ರಮವು ಪರೋಕ್ಷವಾಗಿ ಎತ್ತಿ ಹಿಡಿದಿದೆ.
ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವಿಶೇಷ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram