ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಎಲ್ಲರಲ್ಲೂ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು ಇದ್ದೇ ಇರುತ್ತದೆ. ಆದರೆ ಜನ ನಕಾರಾತ್ಮಕ ಭಾವನೆಗಳಿಗೆ ಸ್ಪಂದಿಸಿದಷ್ಟು ಬೇಗ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುವುದಿಲ್ಲ. ಯಾರ ಬಗ್ಗೆ ಅಥವಾ ಯಾವುದರ ಬಗ್ಗೆಯೆ ಆಗಿರಲಿ ನಾವು ಬೇಗ ನಕಾರಾತ್ಮಕವಾಗಿ ಯೋಚಿಸುತ್ತೇವೆ. ಬಸ್ಸು, ರೈಲು, ವಿಮಾನ ದುರಂತ ಸಂಭವಿಸಿದ ಸುದ್ದಿ ತಿಳಿದಾಗ ನಮ್ಮವರು ಅದರಲ್ಲಿ ಪ್ರಯಾಣಿಸುತ್ತಿದ್ದಾರೆಂದಾದರೆ ಅವರಿಗೇನಾಯಿತೋ! ಎಂಬ ಆತಂಕದಲ್ಲಿ ಅತ್ತು, ಕರೆದು ಮನೆ ಮಂದಿಯನ್ನೆಲ್ಲ ಆತಂಕಕ್ಕೆ ಈಡು ಮಾಡುತ್ತೇವೆ. ಇತರ ಪ್ರಯಾಣಿಕರ ಬಗ್ಗೆ ನಾವು ಹೆಚ್ಚು ಚಿಂತಿಸುವುದಿಲ್ಲ.
ಮಗುವೊಂದು ಮನೆಯಲ್ಲಿ ಅದರಷ್ಟಕ್ಕೆ ಆಡುತ್ತಿದ್ದರೆ ಅದನ್ನು ನೋಡುವುದಕ್ಕೆ ಮನೆಮಂದಿಗೆ ಪುರುಸೊತ್ತಿರುವುದಿಲ್ಲ. ಆಡುವಾಗ ಮಗು ಬಿದ್ದರೆ ಮನೆಮಂದಿಯೆಲ್ಲ ಇದ್ದ ಕೆಲಸ ಬಿಟ್ಟು ಓಡಿಬಂದು ಏನಾಯಿತು? ಎಲ್ಲಿಗೆ ಪೆಟ್ಟಾಯಿತು! ಎಂದು ವಿಚಾರಿಸುತ್ತೇವೆ, ಮಗುವನ್ನು ಎತ್ತಿಕೊಳ್ಳುತ್ತೇವೆ, ಸಂತೈಸುತ್ತೇವೆ. ಮಾತ್ರವಲ್ಲ ಸಿಹಿ ತಿಂಡಿನೋ, ಚಾಕಲೇಟೋ ಕೊಟ್ಟು ಸಮಾಧಾನ ಪಡಿಸುತ್ತೇವೆ. ಅಪ್ಪ, ಅಮ್ಮ, ಮನೆ ಮಂದಿಯ ಈ ಕಾಳಜಿಯನ್ನು ನೋಡಿ ಮಗುವಿಗೆ ಗೊತ್ತಾಗುತ್ತದೆ. ನಾನು ಸಂತೋಷವಾಗಿದ್ದಾಗ ಯಾರೂ ಎತ್ತಿಕೊಳ್ಳಲ್ಲ, ಮುದ್ದು ಮಾಡಲ್ಲ, ಬಿದ್ದಾಗ, ಅತ್ತಾಗ ಮಾತ್ರ ಎಲ್ಲವೂ ಕೇಳದೆ ಸಿಗುತ್ತದೆ ಎಂದು. ಇದೇ ಭಾವನೆ ಬೆಳೆಯುತ್ತಾ ಕೆಲವು ಮಕ್ಕಳು ಬೇಕೆಂದೇ ಬಿದ್ದು ಗಾಯಮಾಡಿಕೊಳ್ಳುವುದು, ಹರಿತವಾದ ವಸ್ತುವಿನಿಂದ ಗೀರಿಕೊಂಡು ರಕ್ತಬರುವಂತೆ ಮಾಡುವುದು, ಹೊಟ್ಟೆ ನೋವೆಂದು ನಟಿಸಿ ಮಲಗಿಕೊಳ್ಳುವುದು ಇದೆ. ಹೀಗೆ ಮನೆ ಮಂದಿಯನ್ನು ಆರ್ಷಿಸುವ, ಅವರ ಗಮನವನ್ನು ಸೆಳೆಯುವ ತಂತ್ರವನ್ನು ಮಗು ಕರಗತ ಮಾಡಿಕೊಳ್ಳುತ್ತದೆ. ಇದು ಬಾಲ್ಯಕ್ಕಷ್ಟೇ ಸೀಮಿತವಾಗಿರುವುದಿಲ್ಲ, ಬದಲಾಗಿ ಬೆಳೆದು ದೊಡ್ಡವರಾದಾಗಲೂ ಬಯಸಿದ್ದು ಸಿಗಲಿಲ್ಲವೆಂದಾದರೆ ಕಣ್ಣೀರು ಸುರಿಸುವುದು, ಊಟ ಬಿಡುವುದು ನಡೆಯುತ್ತದೆ. ಈ ನಕಾರಾತ್ಮಕ ಭಾವನೆ ಪ್ರಜ್ಞೆಯಲ್ಲಿರುತ್ತದೆ. ಯಾವಾಗ ಬೇಕು ಆಗ ಪ್ರಕಟಗೊಳ್ಳುತ್ತದೆ. ಎಲ್ಲರೂ ತನ್ನನ್ನು ಗಮನಿಸಬೇಕು, ಹೊಗಳುತ್ತಿರಬೇಕು ಮತ್ತು ನಾನು ಹೇಳಿದಂತೆಯೇ ನಡೆಯಬೇಕೆನ್ನುವ ಭಾವ ಸದಾ ಜಾಗೃತವಾಗಿರುತ್ತದೆ.
ಒಂದು ಕಂಪನಿಯಲ್ಲಿ ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗುತ್ತಿರಲಿಲ್ಲ. ದಿನಾ ಯಾರೂ ಇಲ್ಲದ ಸಮಯವನ್ನು ನೋಡಿ ಒಬ್ಬೊಬ್ಬರು ಬಂದು ತಮ್ಮ ಸಹೋದ್ಯೋಗಿಗಳ ಬಗ್ಗೆ ಮೇಲಾಧಿಕಾರಿಯ ಬಳಿ ದೂರು ಹೇಳುತ್ತಿದ್ದರು. ಆಗ ಆತ ಎಲ್ಲರನ್ನೂ ಕರೆದು ನೀವು ನಿಮ್ಮ ನಿಮ್ಮ ಸಹೋದ್ಯೋಗಿಗಳ ಬಗ್ಗೆ ಒಂದು ನಕಾರಾತ್ಮಕ ವಿಚಾರ ಹೇಳುವುದಾದರೆ ಐದು ಸಕಾರಾತ್ಮಕ ವಿಚಾರವನ್ನು ತಿಳಿಸಬೇಕೆಂದು ಹೇಳಿದಾಗ ಎಲ್ಲರಿಗೂ ಕಷ್ಟವಾಗುತ್ತದೆ. ನಕಾರಾತ್ಮಕ ವಿಚಾರ ಎಷ್ಟೋ ಇದೆ. ಆದರೆ ಒಬ್ಬನ ಬಗ್ಗೆ ಸಕಾರಾತ್ಮಕ ವಿಚಾರಗಳನ್ನು ಹೇಳಲು ಎಲ್ಲರು ಸಾಕಷ್ಟು ಪರದಾಡಬೇಕಾಗುತ್ತದೆ. ಒಳ್ಳೆಯ ವಿಚಾರಗಳು ಎಲ್ಲರಲ್ಲೂ ಇವೆ. ಆದರೆ ಇದುವರೆಗೆ ಅವರ ಮನಸ್ಸು, ದೃಷ್ಟಿ ನಕಾರಾತ್ಮಕ ವಿಚಾರಗಳ ಬಗ್ಗೆಯೇ ಚಿಂತಿಸುತ್ತಿತ್ತು ಎನ್ನುವುದು ಅವರಿಗೆ ಮನದಟ್ಟಾಗುತ್ತದೆ.
ಮದುವೆ ಆಗಿ ಗಂಡನ ಮನೆಗೆ ಹೊರಟ ಮಗಳಿಗೆ ತಾಯಿ ಹೇಳುತ್ತಾಳೆ; ನೀನು ನಿನ್ನ ದಾಂಪತ್ಯದಲ್ಲಿ ಗಂಡನೊಂದಿಗೆ ಕಳೆದ ಒಳ್ಳೆಯ ವಿಚಾರಗಳ ರಸ ನಿಮಿಷಗಳ ಬಗ್ಗೆ ಬರೆದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳು, ಅದು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಬಹುದು ಎಂದು. ಸರಿ ಎಂದ ಮಗಳು ತಾವು ಜೊತೆಗೆ ಪ್ರವಾಸಕ್ಕೆ ಹೋದ ಬಗ್ಗೆ, ಹೋಟೆಲ್, ಸಿನಿಮಾ ಸುತ್ತಾಡಿದ, ಗಂಡ ಆಗಾಗ ಉಡುಗೊರೆ ತಂದುಕೊಟ,್ಟ ಹಬ್ಬ ಹರಿದಿನಗಳನ್ನು ಆಚರಿಸಿದ ಬಗ್ಗೆ ಹೀಗೆ ಎಲ್ಲವನ್ನೂ ಬರೆದಿಡುತ್ತಾಳೆ. ಎರಡು ಮಕ್ಕಳಾದ ನಂತರ ಗಂಡನಿಗೆ ಉದ್ಯೋಗದಲ್ಲಿ ಭಡ್ತಿ ದೊರೆತು ಕೆಲಸದ ಒತ್ತಡ ಹೆಚ್ಚಾಗುತ್ತದೆ. ಕ್ರಮೇಣ ಮೊದಲಿನಂತೆ ಹೋಟೆಲ್, ಸಿನಿಮಾ ಸುತ್ತಾಟ ಕಡಿಮೆ ಆಗುತ್ತದೆ. ದಿನಕಳೆದಂತೆ ಹೆಂಡತಿಗೆ ತನ್ನ ದಾಂಪತ್ಯ ಜೀವನದ ಬಗ್ಗೆ ಬೇಸರ ಉಂಟಾಗುತ್ತದೆ. ಗಂಡನ ನಡವಳಿಕೆ, ಮಾತು ಎಲ್ಲದರಲ್ಲೂ ತಪ್ಪು ಕಾಣಲಾರಂಭಿಸುತ್ತದೆ. ಒಂದು ದಿನ ಜಗಳವಾಡಿ ತವರು ಮನೆಗೆ ಬಂದು ನಾನಿನ್ನು ಗಂಡನ ಮನೆಗೆ ಹೋಗುವುದಿಲ್ಲ. ನನಗೆ ಸಂಸಾರ ಸಾಕಾಗಿದೆ. ವಿಚ್ಛೇದನ ತೆಗೆದುಕೊಳ್ಳಬೇಕೆಂದಿದ್ದೇನೆ ಅನ್ನುತ್ತಾಳೆ. ಆಗ ತಾಯಿ; ಮಗಳು ಮದುವೆ ಆದಾಗಿನಿಂದ ಬರೆಯುತ್ತಿದ್ದ ಡೈರಿ ಬಗ್ಗೆ ವಿಚಾರಿಸಿ ನೀನು ಮತ್ತೊಮ್ಮೆ ಆ ಡೈರಿಯನ್ನು ನಿಧಾನವಾಗಿ ಓದು. ಬಳಿಕ ನಿನ್ನ ನರ್ಧಾರವನ್ನು ತಿಳಿಸು ಎನ್ನುತ್ತಾಳೆ.
ಆಕೆ ತನ್ನ ಡೈರಿಯನ್ನು ಓದುತ್ತಾ ಹೋದಂತೆ ತನ್ನ ಗಂಡ ಹೇಗೆ ತನ್ನನ್ನು ಪ್ರೀತಿಸುತ್ತಿದ್ದ, ಆದರಿಸುತ್ತಿದ್ದ, ತನ್ನ ಬೇಕು ಬೇಡಗಳನ್ನು ಗಮನಿಸುತ್ತಿದ್ದ ಎಂಬುದನ್ನು ತಾನೇ ಬರೆದಿರುವುದನ್ನು ಓದುತ್ತಾಳೆ. ಬರಬರುತ್ತಾ ಮನೆ, ತನ್ನ ಸಂಸಾರ ಅಂದಾಗ ಸದಸ್ಯರ ನಂಬಿಕೆ, ವಿಶ್ವಾಸದ ಮೇಲೆ ಎಲ್ಲವೂ ನಡೆದುಕೊಂಡು ಹೋಗುತ್ತದೆ. ವಿಶೇಷವಾಗಿ ಪ್ರೀತಿಯ ಅಭಿವ್ಯಕ್ತಿ ದೈನಂದಿನ ಜೀವನದಲ್ಲಿ ಇಲ್ಲದಿರುವುದು ಗಮನಕ್ಕೆ ಬರುತ್ತದೆ. ಅದರಲ್ಲಿ ಇಬ್ಬರ ಹೊಣೆಗಾರಿಕೆಯೂ ಇದೆ ಎನ್ನುವುದು ಮನವರಿಕೆಯಾಗುತ್ತದೆ. ಹಾಗಾಗಿ ಕೆಲವೇ ದಿನಗಳಲ್ಲಿ ಗಂಡನ ನೆನಪಾಗಿ ಮತ್ತೆ ಊರಿಗೆ ಹಿಂದಿರುಗುತ್ತಾಳೆ.
‘ಸಂಸಾರ ಜಗತ್ತು’ ಹೇಗೆ ಮತ್ತು ಯಾಕೆ ಸೃಷ್ಟಿಯಾಯಿತು ಎನ್ನುವುದಕ್ಕೆ ಅದು ಭಗವಂತನ ಲೀಲೆ ಎನ್ನುತ್ತೇವೆ. ಲೀಲೆ ಎನ್ನುವುದು ಭಗವಂತನೊಳಗಿನ ಸಕಾರಾತ್ಮಕ ಭಾವನೆ, ಆನಂದ, ಅಭಿವ್ಯಕ್ತಿ ಎನ್ನಬಹುದು. ಮೊದಲು ತಾವು ಆನಂದವಾಗಿರುವುದು ಮುಖ್ಯ. ನಮ್ಮೊಳಗೆ ಖುಷಿ ಇಲ್ಲದಿದ್ದಲ್ಲಿ ಇತರರಿಗೆ ಖುಷಿ ಹಂಚುತ್ತೇವೆಂದರೆ ಅದು ಬರಿಯ ನಾಟಕವಾಗುತ್ತದೆ. ಆದ್ದರಿಂದ ಮೊದಲು ನಮ್ಮ ದೃಷ್ಟಿ, ಚಿಂತನೆಗಳನ್ನು ಸಕಾರಾತ್ಮಕಗೊಳಿಸೋಣ. ಅಂತರಂಗ ಬಹಿರಂಗಗಳೆರಡರಲ್ಲೂ ಸಕಾರಾತ್ಮಕ ಶುದ್ಧತೆ ಇರುವಂತೆ ನೋಡಿಕೊಳ್ಳೋಣ. ಆ ಮೂಲಕ ಜಗತ್ತನ್ನು ಗೆಲ್ಲೋಣ.
