ಸಮುದ್ರದಲ್ಲಿ ಇಳಿಯುವ ವಿಮಾನಗಳು

ಸಮುದ್ರ ದಡದಲ್ಲಿ ವಿಮಾನದಿಂದ ಇಳಿದು ಮನೆ ತಲುಪುವ ದಿನಗಳು ಹತ್ತಿರವಾಗುತ್ತಿವೆ. ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಸೇವೆಗೆ ಕರ್ನಾಟಕ ರಾಜ್ಯದ ಕರಾವಳಿ ತೆರೆದುಕೊಂಡು ರಾಜ್ಯದ ಪ್ರವಾಸೋದ್ಯಮವು ಚಿಗುರಲಿದೆ. ಈ ಯೋಜನೆಗೆ ‘ಸೀಪ್ಲೇನ್’ ಎಂದು ಹೆಸರು. ನೀರಿನ ಮೇಲಿಂದಲೇ ವಿಮಾನ ಟೇಕ್‌ಆಫ್ ಆಗುವ ಮತ್ತು ನೀರ ಮೇಲೆಯೇ ಲ್ಯಾಂಡಿoಗ್ ಆಗುವ ಪ್ರಮುಖ ಯೋಜನೆಯಿದು.
ನೀರಿನಲ್ಲಿ ವಿಮಾನ : ನೀರಿನಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿoಗ್ ಆಗುವ ವಿಮಾನದ ಚಕ್ರಗಳ ಬದಲಾಗಿ ಉದ್ದನೆಯ ದೋಣಿಯಂತಹ ರಚನೆಗಳು ಇರುತ್ತವೆ. ಫ್ಲೈಯಿಂಗ್ ಬೋಟ್ ವಿಮಾನದ ಕೆಳಭಾಗ ದೋಣಿಯಂತೆ ವಿನ್ಯಾಸಗೊಂಡಿರುತ್ತದೆ. ಇದು ನೇರವಾಗಿ ನೀರ ಮೇಲೆ ತೇಲುತ್ತದೆ. ನೀರಿನಿಂದ ವಿಮಾನ ಟೇಕ್ ಆಫ್ ಆಗಲು ಸಾಮಾನ್ಯ ರನ್‌ವೇಗಿಂತ ಹೆಚ್ಚಿನ ವೇಗ ಬೇಕಾಗುತ್ತದೆ. ಮೊದಲು ವಿಮಾನದ ಇಂಜಿನ್ ಸ್ಟಾರ್ಟ್ ಮಾಡಿ ನಂತರ ನಿಧಾನವಾಗಿ ಮೇಲಕ್ಕೆ ಚಲಿಸುತ್ತದೆ. ವೇಗ ಹೆಚ್ಚಾಗುತ್ತಿದ್ದಂತೆ ವಿಮಾನದ ಮುಂಭಾಗ ನೀರಿನಿಂದ ಮೇಲೆರುತ್ತದೆ. ಹಿಂಭಾಗ ಒಂಚೂರು ನೀರಿನಲ್ಲಿರುತ್ತದೆ. ವೇಗ ಹೆಚ್ಚಾದಂತೆ ರೆಕ್ಕೆಗಳ ಕೆಳಗೆ ಸೃಷ್ಟಿಯಾಗುವ ಗಾಳಿಯ ಒತ್ತಡದಿಂದ ವಿಮಾನ ನೀರನ್ನು ಬಿಟ್ಟು ಸಂಪೂರ್ಣವಾಗಿ ಮೇಲೆರುತ್ತದೆ. ವಿಮಾನ ನೀರಿನಲ್ಲೆ ಲ್ಯಾಂಡಿoಗ್ ಆಗುತ್ತದೆ. ಆದರೆ ಲ್ಯಾಂಡಿoಗ್ ಕೆಲಸ ಅಷ್ಟು ಸುಲಭವಲ್ಲ. ವಿಮಾನ ಲ್ಯಾಂಡಿoಗ್ ಮಾಡುವಾಗ ಪೈಲಟ್ ಮೊದಲು ನೀರಿನ ಮೇಲ್ಮೈಯಲ್ಲಿ ಅಲೆಗಳು ಹೆಚ್ಚು ಇವೆಯಾ? ಎಂಬುವುದನ್ನು ಪರಿಶೀಲಿಸುತ್ತಾರೆ. ಗಾಳಿಯ ದಿಕ್ಕಿಗೆ ವಿರುದ್ಧವಾಗಿ ವಿಮಾನವನ್ನು ತರುತ್ತಾರೆ. ನೀರನ್ನು ಸ್ಪರ್ಶಿಸುವ ಮೊದಲು ವಿಮಾನದ ಎದುರುಭಾಗವನ್ನು ಸ್ವಲ್ಪ ಪ್ರಮಾಣದಲ್ಲಿ ಮೇಲೆತ್ತಿ ಹಿಂಭಾಗ ನೀರಿಗೆ ತಾಕುವಂತೆ ಮಾಡಲಾಗುತ್ತದೆ. ನೀರನ್ನು ಸ್ಪರ್ಶಿಸಿದ ನಂತರ ವಿಮಾನದ ವೇಗ ಕಡಿಮೆಯಾಗುತ್ತದೆ. ನಂತರ ವಿಮಾನ ದೋಣಿ ರೀತಿಯಲ್ಲಿ ತೇಲುತ್ತಾ ದಡ ಸೇರುತ್ತದೆ.
ಲ್ಯಾಂಡಿoಗ್‌ನಲ್ಲಿ ಹಲವು ಸವಾಲುಗಳು : ನೀರು ಶಾಂತವಾಗಿದ್ದ ಸಂದರ್ಭದಲ್ಲಿ ಆಳ ಮತ್ತು ನೀರಿನ ಮೇಲ್ಮೈ ಸರಿಯಾಗಿ ಕಾಣುವುದಿಲ್ಲ. ಅಲೆಗಳು ಹೆಚ್ಚಿದ್ದರೆ ವಿಮಾನ ಮಗುಚುವ ಸಾಧ್ಯತೆಗಳಿವೆ. ಹೀಗೆ ಲ್ಯಾಂಡಿoಗ್‌ನಲ್ಲಿ ಸಾಕಷ್ಟು ಸವಾಲುಗಳಿವೆ. ಕರ್ನಾಟಕದಲ್ಲಿ ಸೀಪ್ಲೇನ್ ಸದ್ದು : ಕರ್ನಾಟಕದ ಹಲವಾರು ಭಾಗಗಳನ್ನು ಈಗಾಗಲೇ ಕೇಂದ್ರ ಸರಕಾರ ತನ್ನ ಉಡಾನ್ ಯೋಜನೆಯಡಿ ಗುರುತಿಸಿದೆ. ಮಂಗಳೂರು ಕಬಿನಿ ಜಲಾಶಯ, ಶರಾವತಿ ಹಿನ್ನೀರು, ಬೈಂದೂರು, ಮಲ್ಪೆ ಬೀಚ್, ಕಾರವಾರದ ಕಾಳಿ ನದಿ, ತುಂಗಭದ್ರಾ ನದಿ ಕೆಆರ್ ಎಸ್, ಆಲಮಟ್ಟಿ ಅಣೆಕಟ್ಟು ಈ ಯೋಜನೆಯ ವ್ಯಾಪ್ತಿಯಲ್ಲಿವೆ.
ಯಾವಾಗ ಆರಂಭ? : ಈಗಾಗಲೇ ಕೊಚ್ಚಿಯಿಂದ ಲಕ್ಷದೀಪದ ಅಗಟ್ಟಿ, ಕರವಟ್ಟಿ, ಕಲ್ಪೇನಿ, ಕಿಲ್ಟನ್ ಮತ್ತು ಕದ್ಮತ್ ಎಂಬ ಐದು ದ್ವೀಪಗಳಿಗೆ ಹತ್ತೊಂಭತ್ತು ಆಸನಗಳ ‘ಟ್ವಿನ್ ಆಟರ್’ ಎಂಬ ವಿಮಾನದ ಮೂಲಕ ಸೀಪ್ಲೇನ್ ಸೇವೆ ಆರಂಭಿಸಲು ‘ಸ್ಕೈಹಾಫ್ ಏವಿಯೇಷನ್’ ಎಂಬ ಸಂಸ್ಥೆ ಸಜ್ಜಾಗಿದೆ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ 500 ಸೀಪ್ಲೇನ್ ಸೇವೆ ಸಿದ್ಧಗೊಳ್ಳಲಿದೆ.
ಸುಮಾರು 11 ಸಾವಿರ ಕಿ.ಮೀ. ಇರುವ ಕರಾವಳಿ ರನ್‌ವೇ ನಿರ್ಮಿಸುವುದಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿ ರನ್‌ವೇ ನಿರ್ಮಾಣಕ್ಕೆ ತಗಲುವ ಖರ್ಚು ಕೂಡಾ ತುಂಬಾ ಕಡಿಮೆ. ಈಗಾಗಲೇ ನಿರ್ಮಲ ಸೀತಾರಾಮನ್ ಬಜೆಟ್‌ನಲ್ಲಿ ಸೀಪ್ಲೇನ್ ವಲಯಕ್ಕೆ ಬಜೆಟ್ ಅನ್ನು ಘೋಷಿಸಿರುವುದು ಹೊಸ ಭರವಸೆಯನ್ನು ಚಿಗುರುವಂತೆ ಮಾಡಿದೆ. ಸೀಪ್ಲೇನ್ ಜಾರಿಯಾದರೆ ನಾಲ್ಕು ಗಂಟೆಗಳ ಕಾಲ ಬೋಟ್ ಪ್ರಯಾಣವನ್ನು ವಿಮಾನ 30 ನಿಮಿಷದಲ್ಲಿ ತಲುಪಿಸಲಿದೆ.
ವಿಮಾನದ ಪೈಲಟ್‌ಗಳು ಈ ವಿಮಾನ ಹಾರಾಟ ನಡೆಸುವುದು ಒಂಚೂರು ಕಷ್ಟ. ಸದ್ಯಕ್ಕೆ ಪೈಲಟ್‌ಗಳ ಕೊರತೆಯಂತೂ ಇದೆ. ಇದಕ್ಕಾಗಿ ವಿದೇಶಿ ಪೈಲಟ್‌ಗಳಿಂದ ವಿಶೇಷ ತರಬೇತಿ ನಡೆಸುವ ಯೋಚನೆಯನ್ನು ನಾಗರೀಕ ವಿಮಾನಯಾನ ಸಂಸ್ಥೆ ಹೊಂದಿದೆ. ಮುಂದೊಂದು ದಿನ ಸಮುದ್ರ ದಡ ವಿಮಾನ ನಿಲ್ದಾಣವಾಗಿ ಸಮುದ್ರ, ಜಲಾಶಯಗಳಲ್ಲಿ ವಿಮಾನಗಳು ಸದ್ದು ಮಾಡಲಿವೆ.

Facebook
Twitter
WhatsApp
LinkedIn
Telegram