ಅಸಹಾಯಕರ ಪಾಲಿನ ಆಸರೆ ಮಾಸಾಶನ

ಕಳೆದ ಸಂಚಿಕೆಯಲ್ಲಿ ‘ವಾತ್ಸಲ್ಯ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ಮಾಸಾಶನ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.
ಅಸಹಾಯಕರ ಬಾಳನ್ನು ಬೆಳಗುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಸೌಲಭ್ಯಗಳನ್ನು ಪಡೆಯಬೇಕಾದರೆ ಫಲಾನುಭವಿಯ ಬಳಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹೀಗೆ ಯಾವುದಾದರೊಂದು ದಾಖಲಾತಿಗಳು ಇರಬೇಕಾದುದು ಕಡ್ಡಾಯ. ನಾನಾ ಕಾರಣಗಳಿಂದ ಯಾವುದೇ ದಾಖಲೆಗಳಿಲ್ಲದೆ, ಬದುಕಿನ ಇಳಿವಯಸ್ಸಿನಲ್ಲಿ ಅಗತ್ಯ ಸೌಲಭ್ಯಗಳಿಂದ ವಂಚಿತರಾದ, ವಿವಾಹದ ನಂತರ ಪತಿ ಪತ್ನಿಯಿಂದ, ಪತ್ನಿ-ಪತಿಯಿಂದ ದೂರವಾಗಿ, ಮಕ್ಕಳಿಲ್ಲದೆ, ಮಕ್ಕಳು ಹೆತ್ತವರಿಂದ ದೂರವಾಗಿ, ಅನಾರೋಗ್ಯದಿಂದ, ಮಾನಸಿಕ ಅಸ್ವಸ್ಥರಾಗಿ, ದೇಹದ ಅಂಗಾಂಗಗಳನ್ನು ಕಳೆದುಕೊಂಡು, ಆಸ್ತಿ-ಪಾಸ್ತಿ, ಸ್ವಂತ ಮನೆ ಹೀಗೆ ಬದುಕಿನ ಸಂಧ್ಯಾಕಾಲದಲ್ಲಿ ತಮ್ಮವರೆನ್ನುವವರು ಯಾರು ಇಲ್ಲದೆ ಒಂದು ತುತ್ತಿನ ಅನ್ನಕ್ಕಾಗಿ ಕಷ್ಟಪಡುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ.
ಯೌವನದ ದಿನಗಳಲ್ಲಿ ಯಾವುದೋ ಕೆಲಸ ಮಾಡಿ ಸಮಾಜದಲ್ಲಿ ಗೌರವಯುತವಾಗಿ ಬದುಕಿ ಬಾಳಿದ ಇವರಿಗೆ ತಮ್ಮ ಈ ಹಿರಿಯ ವಯಸ್ಸಿನಲ್ಲಿ ಜೀವನ ನಿರ್ವಹಣೆಗಾಗಿ, ಔಷಧ ಖರೀದಿ, ದಿನನಿತ್ಯದ ಖರ್ಚುಗಳಿಗಾಗಿ ಇನ್ನೊಬ್ಬರ ಎದುರು ಕೈಚಾಚಲು ಆತ್ಮಗೌರವ ಒಪ್ಪುತ್ತಿಲ್ಲ. ಭಿಕ್ಷೆ ಬೇಡುವುದನ್ನು ಇವರು ಊಹಿಸಿಕೊಳ್ಳಲಾರರು. ಎಷ್ಟೇ ಕಷ್ಟಗಳನ್ನು ಅನುಭವಿಸಿದರೂ, ಖಾಯಿಲೆಗಳು ಜೊತೆಗಿದ್ದರೂ ತಮ್ಮ ಗೌರವಯುತ ಬದುಕಿಗೆ ಅಂತಿಮ ಕಾಲದಲ್ಲೂ ಚ್ಯುತಿ ಬಾರದಂತೆ ಜೀವನ ನಡೆಸಬೇಕೆಂದು ನಿರ್ಧರಿಸಿದ ಈ ಹಿರಿಜೀವಗಳ ನೋವು, ಅಸಹಾಯಕತೆ ಪೂಜ್ಯ ಶ್ರೀ ಹೆಗ್ಗಡೆಯವರಿಗೆ ಕೇಳಿಸಿದೆ. ಸಮಾಜದಲ್ಲಿರುವ ಇಂತಹ ಅಸಹಾಯಕರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳು ಒಂದಷ್ಟು ಆರ್ಥಿಕ ನೆರವು ನೀಡುವ ವಿಶೇಷ ಕಾರ್ಯಕ್ರಮವೊಂದನ್ನು ಆರಂಭಿಸಿದ್ದಾರೆ. ಅದುವೇ ‘ಮಾಸಾಶನ’. ಇದರ ಫಲಾನುಭವಿಗಳ ಬದುಕಿನ ಕಥೆಗಳಂತೂ ಎಂಥವರಲ್ಲೂ ಕಣ್ಣೀರನ್ನು ತರಿಸುತ್ತವೆ.
ಯತೀಂದ್ರ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದ ಗೋಪಾಲ ದೇವರಹಳ್ಳಿಯವರು. ಬದುಕಿನಲ್ಲಿ ಎಲ್ಲರೂ ಜೊತೆಗಿದ್ದರು. ಎಲ್ಲವು ಇತ್ತು. 21ರ ಯುವಕನಿಗೆ ಒಂದು ದಿನ ಇದ್ದಕ್ಕಿದ್ದಂತೆ ವಿಪರೀತ ಜ್ವರ ಕಾಣಿಸಿಕೊಂಡಿತು. ಜ್ವರದಲ್ಲಿ ರಾತ್ರಿ ಮಲಗಿದವರಿಗೆ ಬೆಳಗಾಗುವಾಗ ಎದ್ದೇಳಲು ಸಾಧ್ಯವಾಗಲೇ ಇಲ್ಲ. ದಿನಕಳೆದಂತೆ ಹಾಸಿಗೆ ಹಿಡಿದರು. ಇದೀಗ ಕಳೆದ ಇಪ್ಪತ್ತೈದು ವರ್ಷಗಳಿಂದ ಯತೀಂದ್ರರವರದ್ದು ಒಂಟಿ ಬದುಕು. ಒಂದು ಸಣ್ಣ ಕೊಠಡಿಯಲ್ಲಿ ಒಂದೆಡೆ ಶೌಚಾಲಯ, ಇನ್ನೊಂದೆಡೆ ಅಡುಗೆಯ ಜಾಗ. ಇವುಗಳ ಮಧ್ಯೆ ಮಲಗಿಕೊಂಡು ಎಲ್ಲವನ್ನು ಮಾಡಿ ಮುಗಿಸಬೇಕಾದ ಅನಿವಾರ್ಯತೆ ಇವರದ್ದು. ಇವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿ ತಿಂಗಳು ಮಾಸಾಶನ ಮೊತ್ತವನ್ನು ನೀಡುತ್ತಿದೆ. ಈ ಹಣದಿಂದ ಊರಿನ ಹೋಟೆಲ್ ಮಾಲಕರೋರ್ವರು ನಿತ್ಯ ಮೂರು ಹೊತ್ತು ಊಟವನ್ನು ನೀಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಜಾನಕಿಯವರು ತಮ್ಮ ಮನೆಯವರಿಗೆ ನೆರವಾಗುವ ನಿಟ್ಟಿನಲ್ಲಿ ಸಣ್ಣ ವಯಸ್ಸಿನಲ್ಲೆ ದುಡಿಮೆಗೆಂದು ಬೆಂಗಳೂರಿನ ಬಸ್ಸನ್ನೇರಿದರು. ಕೆಲವು ವರ್ಷಗಳ ಬಳಿಕ ಊರಿಗೆ ಮರಳಿದಾಗ ಇದ್ದಕ್ಕಿದ್ದಂತೆ ಮಾನಸಿಕ ಅಸ್ತಿತ್ವವನ್ನೇ ಕಳೆದುಕೊಂಡರು. ಕೈಗೆ ಸಿಕ್ಕ ವಸ್ತುಗಳನ್ನು ಹಾಳುಗೆಡವುದು, ಊರಿಡಿ ಓಡುವುದು ಮಾಮೂಲಿಯಾಯಿತು. ಮಗಳ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ತಾಯಿ, ಮಗಳ ಗುಂಗಿನಲ್ಲೆ ಕೊರಗಿ ಇಹಲೋಕ ತ್ಯಜಿಸಿದರು. ತಂದೆಯೂ ಮಗಳ ನೆನಪಿನಲ್ಲಿ ಮಾನಸಿಕ ಅಸ್ವಸ್ಥರಾದರು. ಇದೀಗ ಜಾನಕಿಯವರು ಒಬ್ಬರೇ ಇದ್ದಾರೆ. ಅವರ ಪರಿಸ್ಥಿತಿಯನ್ನು ಕಂಡು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಂತೆ ಗ್ರಾಮಾಭಿವೃದ್ಧಿ ಯೋಜನೆಯಿಂದ ‘ವಾತ್ಸಲ್ಯ’ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಅವರಿಗೆ ಹೆಸರಾಂತ ಆಸ್ಪತ್ರೆಯೊಂದರಲ್ಲಿ 50 ದಿನಗಳ ಕಾಲ ಚಿಕಿತ್ಸೆಯನ್ನು ನೀಡಲಾಗಿದೆ. ಪರಿಣಾಮವಾಗಿ ಜಾನಕಿಯವರು ತಾನೇ ಅಡುಗೆ ಮಾಡಿ ಉಣ್ಣುವ ಹಂತಕ್ಕೆ ತಲುಪಿದ್ದಾರೆ. ಇದೀಗ ಇವರಿಗೆ ಪ್ರತಿ ತಿಂಗಳು ಯೋಜನೆಯಿಂದ ಮಾಸಾಶನವನ್ನು ನೀಡಲಾಗುತ್ತಿದ್ದು ಇವರು ಈ ಮೊತ್ತದಿಂದಲೇ ಬದುಕಿ ಬಾಳುತ್ತಿದ್ದಾರೆ. ಹೀಗೆ ಮಾಸಾಶನ ಪಡೆಯುತ್ತಿರುವ ಪ್ರತಿಯೋರ್ವ ಫಲಾನುಭವಿಯದ್ದು ಒಂದೊಂದು ಕಣ್ಣೀರ ಕಥೆಗಳಿವೆ.
ಇದೀಗ ಓರ್ವ ಫಲಾನುಭವಿಗೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತಿ ತಿಂಗಳು ಕನಿಷ್ಠ ರೂ. 1 ಸಾವಿರದಿಂದ ಗರಿಷ್ಠ ರೂ. 3 ಸಾವಿರದವರೆಗೆ ಮಾಸಾಶನವನ್ನು ನೀಡಲಾಗುತ್ತಿದ್ದು ಇದುವರೆಗೆ ಒಟ್ಟು 80,741 ಫಲಾನುಭವಿಗಳಿಗೆ ರೂ. 137 ಕೋಟಿ ಮೊತ್ತದ ಮಾಸಾಶನವನ್ನು ನೀಡಲಾಗಿದೆ. ಈ ಹಣ ಅಸಹಾಯಕರ ನಿತ್ಯದ ಖರ್ಚುಗಳಿಗೆ ಅಂದರೆ ಆಹಾರ, ಔಷಧಗಳಿಗೆ ನೆರವಾಗುತ್ತಿದೆ. ಮಾಸಾಶನ ಮೊತ್ತವನ್ನೇ ನಂಬಿ ಬದುಕುವ ಈ ಹಿರಿಯ ಜೀವಗಳಿಗೆ ಬೇರೆ ಆಸರೆಯಿಲ್ಲ. ಈ ಕಾರ್ಯಕ್ರಮ ಇತರರಿಗೆ ಪ್ರೇರಣೆಯಾಗಲಿ ಎಂಬ ಆಶಯ ಮಾಸಾಶನ ಫಲಾನುಭವಿಗಳದ್ದು. ಮಾಸಾಶನ ಫಲಾನುಭವಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ ವಿದ್ಯಾನಿಧಿ’ ಎಂಬ ಯೋಜನೆಯನ್ನು ಆರಂಭಿಸಿದ್ದು ಇದರಡಿ ಇದುವರೆಗೆ 340 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲಾಗಿದೆ.
ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವಿಶೇಷ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram

Latest Updates