ಆನ್‌ಲೈನ್‌ನಲ್ಲೂ ಹುಬ್ಬಳ್ಳಿ ಮಸಾಲ ಘಮ

ಹುಬ್ಬಳ್ಳಿ, ವ್ಯಾಪಾರ – ವಹಿವಾಟಿಗೆ ಹೆಸರುವಾಸಿ. ‘ಹುಬ್ಬಳ್ಳಿ ಮಸಾಲ’ ತಯಾರಿಸುವ ಮೂಲಕ ‘ಹುಬ್ಬಳ್ಳಿ ಮಸಾಲ ಅಂದ್ರೆ ಅಜ್ಜಿ ಕೈರುಚಿ ಇದ್ದಂಗ್’ ಎಂದು ಬ್ರ್ಯಾಂಡ್ ನೇಮ್ ಸೃಷ್ಟಿಸಿ ಆನ್‌ಲೈನ್‌ನಲ್ಲಿಯೂ ಮಾರುಕಟ್ಟೆ ಕಂಡುಕೊ0ಡವರು ಜ್ಯೋತಿ ಇಚ್ಚಂಗಿ. ಇವರು ತಯಾರಿಸುವ ಖಾರದಹುಡಿ ಮತ್ತು ಮಸಾಲಹುಡಿಯ ಘಮ ನಮ್ಮ ರಾಜ್ಯವನ್ನು ದಾಟಿ ಎಲ್ಲೆಡೆ ಹರಡಿಕೊಂಡಿದೆ. ಮೂರು ವರ್ಷಗಳ ಹಿಂದೆ ಮಿಕ್ಸರ್‌ನಲ್ಲಿ ದಿನಕ್ಕೆ ಎರಡು, ಮೂರು ಕೆ.ಜಿ.ಯಷ್ಟು ಮಸಾಲೆಹುಡಿ ತಯಾರಿಸಿ ಮಾರಾಟ ಮಾಡುತ್ತಿದ್ದವರು ಇದೀಗ ತಮ್ಮ ಮನೆಯಲ್ಲೆ ‘ಸತ್ಯಜ್ಯೋತಿ ಹೋಮ್ ಪ್ರಾಡಕ್ಟ್ಸ್’ ಎಂಬ ಮಸಾಲೆಹುಡಿ ತಯಾರಿಯ ಘಟಕ ಮಾಡಿದ್ದಾರೆ. ಯಂತ್ರಗಳ ಸಹಾಯದಿಂದ ದಿನಕ್ಕೆ ಸುಮಾರು 60 ಕೆ.ಜಿ.ಯಷ್ಟು ಖಾರದಹುಡಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಎಸ್ಸೆಸೆಲ್ಸಿವರೆಗೆ ಓದಿರುವ ಜ್ಯೋತಿಯವರಿಗೆ ಗೃಹೋದ್ಯಮದಲ್ಲಿ ಬೆಳಗಲು, ಸ್ವಾವಲಂಬಿ ಜೀವನ ನಡೆಸಲು ಬೆಂಬಲವಾಗಿ ನಿಂತಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.
ಜ್ಯೋತಿಯವರು ಈಶ್ವರ ನಗರದ ಸಮೃದ್ಧಿ ಬಡಾವಣೆಯವರು. ಪತಿ, ಅತ್ತೆ ಹಾಗೂ ತಂಗಿ ಇರುವ ಕುಟುಂಬ ಇವರದ್ದು. ಕಳೆದ ಸುಮಾರು ಹನ್ನೊಂದು ವರ್ಷಗಳಿಂದ ‘ಅನ್ನದಾನೇಶ್ವರಿ’ ಸ್ವಸಹಾಯ ಸಂಘದ ಸದಸ್ಯರಾಗಿದ್ದಾರೆ. ಸ್ವಉದ್ಯೋಗಾಸಕ್ತರಿಗೆ ಯೋಜನೆ ಹಮ್ಮಿಕೊಂಡ ಅಧ್ಯಯನ ಪ್ರವಾಸದಲ್ಲಿ ಕಿತ್ತೂರು ಮತ್ತು ಬೈಲಹೊಂಗಲಕ್ಕೆ ತೆರಳಿ ಯೋಜನೆಯ ಪಾಲುದಾರ ಸದಸ್ಯರು ಅವರ ಮನೆಗಳಲ್ಲಿ ಕೈಗೊಂಡ ಸ್ವಉದ್ಯೋಗಗಳನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದರು. ಜ್ಯೋತಿಯವರು ಮನೆಬಳಕೆಗೆಂದು ಮಾಡುತ್ತಿದ್ದ ಖಾರದಹುಡಿಯನ್ನು ತಯಾರಿಸಿ ಮಾರಾಟ ಮಾಡುವ ನಿರ್ಧಾರಕ್ಕೆ ಬಂದರು. ಮನೆಕೆಲಸಗಳನ್ನೆಲ್ಲ ಮಾಡಿ ಮಿಕ್ಕುಳಿದ ಸಮಯದಲ್ಲಿ ಹುಬ್ಬಳ್ಳಿಯ ಮಾರುಕಟ್ಟೆಯಿಂದ ಅಲ್ಪಸ್ವಲ್ಪ ಮಸಾಲೆ ಪದಾರ್ಥಗಳನ್ನು ತಂದು ಮಿಕ್ಸರ್‌ನಲ್ಲಿಯೇ ಹುಡಿ ಮಾಡಿದರು. ಎಷ್ಟು ದುಡಿದರೂ ದಿನಕ್ಕೆ ಎರಡರಿಂದ ಮೂರು ಕೆ.ಜಿ.ಯಷ್ಟು ಖಾರದಹುಡಿ ತಯಾರಾಗುತ್ತಿತ್ತು. ಅದನ್ನೇ ಮಾರಾಟ ಮಾಡತೊಡಗಿದರು. ದಿನಕಳೆದಂತೆ ಖಾರದಹುಡಿಗೆ ಬೇಡಿಕೆ ಹೆಚ್ಚಾಗತೊಡಗಿತು. ಸುಮಾರು ಆರು ತಿಂಗಳವರೆಗೆ ಹೀಗೆ ಮಿಕ್ಸರ್‌ನಲ್ಲೇ ಹುಡಿ ತಯಾರಿಸಿ ಮಾರಾಟ ಮಾಡುವುದು ಇವರ ಕಾಯಕವಾಯಿತು. ಸಾಂಬಾರ್ ಹುಡಿಯ ರುಚಿಗೆ ಗ್ರಾಹಕರು ಮಾರುಹೋಗಿ ಬೇಡಿಕೆ ಹೆಚ್ಚಾದಾಗ ಗ್ರೈಂಡಿಂಗ್ ಯಂತ್ರ ಬಳಸುವಂತೆ ಯೋಜನೆಯ ಕಾರ್ಯಕರ್ತರು ಸಲಹೆ ನೀಡಿದರು. ಯೋಜನೆಯ ಸಹಕಾರ ಹಾಗೂ ಇತರ ಮೂಲಗಳಿಂದ ಸಾಲ ಪಡೆದು ಖಾರದ ಹುಡಿ ಕುಟ್ಟುವ ಗ್ರೈಂಡರ್ ಯಂತ್ರ, ಕಪ್ ಸೀಲಿಂಗ್ ಯಂತ್ರ ಹಾಗೂ ಬ್ರ್ಯಾಂಡ್ ಸೀಲರ್ ಯಂತ್ರವನ್ನು ಖರೀದಿಸಿದರು.
ಮಸಾಲೆ ಪದಾರ್ಥಗಳನ್ನು ಹುರಿಯುವ ಕೆಲಸದಲ್ಲಿ ಇವರ ತಂಗಿ ಲಲಿತಾ ಮತ್ತು ಪ್ಯಾಕಿಂಗ್ ಕೆಲಸಗಳಲ್ಲಿ ಅತ್ತೆ ಶಾಂತಾರವರು ಸಹಕರಿಸುತ್ತಾರೆ. ರುಬ್ಬುವ ಯಂತ್ರದ ನಿರ್ವಹಣೆಯ ಕೆಲಸವನ್ನು ಜ್ಯೋತಿಯವರೇ ಮಾಡುತ್ತಾರೆ. ಇವರ ಪತಿ ದಿನಸಿ ಅಂಗಡಿ ಹೊಂದಿರುವ ಸತೀಶ್ ಇಚ್ಚಂಗಿಯವರು ಖಾರದಹುಡಿ, ಮಸಾಲೆ ಹುಡಿ ತಯಾರಿಗೆ ಬೇಕಾದ ಜೀರಿಗೆ, ಕಾಳುಮೆಣಸು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಚಕ್ಕೆ, ರಾಮಪತ್ರೆ, ಕಲ್ಲುಹೂವುಗಳನ್ನು ಸಗಟು ದರದಲ್ಲಿ ಮಾರ್ಕೆಟ್‌ನಲ್ಲಿ ಖರೀದಿಸಿ ತಂದು ನೆರವಾಗುತ್ತಾರೆ. ಹೋಟೆಲ್, ಮೆಸ್‌ಗಳು ಇವರ ಗಿರಾಕಿಗಳು. ದಿನಕ್ಕೆ ಸುಮಾರು ೬೦ ಕೆ.ಜಿ.ಯಷ್ಟು ಗರಂ ಮಸಾಲೆ ಮತ್ತು ಸಾಂಬಾರ್ ಹುಡಿ ತಯಾರಾಗುತ್ತದೆ.
ಆನ್‌ಲೈನ್ ಸ್ಪರ್ಶ : ‘ಹುಬ್ಬಳ್ಳಿ ಮಸಾಲಾ’ ಆನ್‌ಲೈನ್‌ಗೂ ಲಗ್ಗೆ ಇಟ್ಟಿದೆ. ಹತ್ತು ಗ್ರಾಂ.ನಿ0ದ ಐನೂರು ಗ್ರಾಂ.ವರೆಗಿನ ಪ್ಯಾಕ್‌ಗಳು ಲಭ್ಯ. ಆನ್‌ಲೈನ್‌ನಲ್ಲಿ ಖರೀದಿ ಮಾಡಿದರೆ ತುಸು ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದು. ಕೊರೊನಾದ ಅವಧಿಯಲ್ಲಿಯೂ ಇವರ ಸಾಂಬಾರ್ ಹುಡಿ ವ್ಯಾಪಾರ ನಿರಾತಂಕವಾಗಿ ನಡೆದಿದೆ. ಆನ್‌ಲೈನ್ ಮಾರಾಟದಿಂದಲೂ ಹೆಚ್ಚು ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಜ್ಯೋತಿ. ಖಾರದ ಹುಡಿ ತಯಾರಿಯ ಜೊತೆಗೆ ಮಸಾಲೆ ಖಾರಾ, ಬೇಸನ್ ಉಂಡೆ, ಚೌಚೌ ಉಂಡೆ, ಕರಿದ ಅವಲಕ್ಕಿಯನ್ನೂ ತಯಾರಿಸಿ ಮಾರಾಟ ಮಾಡುತ್ತಾರೆ. ಕಿರು ಉದ್ದಿಮೆಯ ಇವರ ಸಾಧನೆಗೆ ‘ಎಂಎಸ್‌ಎ0ಇ ಪ್ರಶಸ್ತಿ’ ಸಂದಿದೆ. ಛಲ ಮತ್ತು ಪ್ರಯತ್ನವಿದ್ದರೆ ಯಾವುದೇ ಕೆಲಸದಲ್ಲಿ ಯಶಸ್ಸು ಗಳಿಸಬಹುದು ಎಂಬುದಕ್ಕೆ ಜ್ಯೋತಿಯವರು ಉತ್ತಮ ಉದಾಹರಣೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *