ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್.
ನನ್ನ ವೃತ್ತಿ ಜೀವನ ಪ್ರಾರಂಭವಾದದ್ದು ದೇಶದ ಒಂದು ಶ್ರೇಷ್ಠ ಬ್ಯಾಂಕ್ ಆದ ವಿಜಯ ಬ್ಯಾಂಕಿನ ಸೇವೆಯಲ್ಲಿ, ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಕೆಲಸ ಮಾಡಿದ ಅನುಭವಕ್ಕಿಂತಲೂ ಮೂರು ಬ್ರಾಂಚ್ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಆದದ್ದು ಅನನ್ಯ ಅನುಭವಗಳು, ಸಾಲ ಬೇಕಾದಲ್ಲಿ ಮ್ಯಾನೇಜರ್ನಲ್ಲೇ ಕೇಳುವುದು ಸರ್ವೇ ಸಾಮಾನ್ಯ ರೂಢಿ. ಪರಿಣಿತರು ಸಾಲ ಕೇಳುವ ಮೊದಲೇ ಎಲ್ಲಾ ಪೂರ್ವತೆಯಾರಿಗಳನ್ನು, ದಾಖಲಾತಿಗಳನ್ನು ಹಿಡಿದುಕೊಂಡು ಬಂದೇ ಸಾಲದ ಬೇಡಿಕೆಗಳನ್ನು ನಮ್ಮಲ್ಲಿ ಸಲ್ಲಿಸಿ ಸಾಲ ಪಡೆಯುತ್ತಿದ್ದರು. ಆದರೆ ಇಂತವರು ವಿರಳ. ಬಹುತೇಕರು ನಮ್ಮಲ್ಲಿ ಬಂದು ನಮಗೆ ಇಷ್ಟು ಸಾಲ ಬೇಕು ಅದಕ್ಕೆ ಏನು ಕೊಡಬೇಕೆಂದು ಮುಗ್ಧತೆಯಿಂದ ಕೇಳುತ್ತಿದ್ದರು. ಅವರ ಬೇಡಿಕೆ ಮತ್ತು ಉದ್ದೇಶದ ಅನುಗುಣವಾಗಿ ನಮ್ಮ ಬ್ಯಾಂಕ್ ನಿಯಮಾವಳಿ ಪ್ರಕಾರ ಎಷ್ಟೆಲ್ಲಾ ದಾಖಲೆಗಳು ಮತ್ತು ಭದ್ರತೆಗಳನ್ನು ಅವರು ನೀಡಬೇಕೆಂದು ಹೇಳುತ್ತಾ ಹೋಗುವಾಗ ಅವರು ಕಂಗಾಲಾಗುತ್ತಿದ್ದರು. ಏಕೆಂದರೆ ಅವುಗಳಲ್ಲಿ ಅರ್ಧಕ್ಕೆ ಅರ್ಧದಷ್ಟು ಅವರಲ್ಲಿ ಇರುತ್ತಿರಲಿಲ್ಲ. ದಾಖಲೆಗಳು ಇಲ್ಲ ಎಂದು ಗೊತ್ತಾಗುತ್ತಲೇ ದುಂಬಾಲು ಬೀಳಲು ಶುರುಮಾಡುವರು. ನೀವು ಮ್ಯಾನೇಜರ್, ಮುಖ್ಯ ಮಾಡಿದರೆ ಸಾಲ ಖಂಡಿತಾ ಆಗುತ್ತದೆ. ನೀವೇ ನಮ್ಮ ಪಾಲಿನ ದೇವರು, ನೀವು ಸಾಲ ಕೊಟ್ಟಲ್ಲಿ ನಾವು ಖಂಡಿತಾ ಪ್ರಾಮಾಣಿಕತೆಯಿಂದ ತೀರಿಸುತ್ತೇವೆ. ನೀವು ಕೊಡುವ ಸಾಲವು ನಮ್ಮ ಭಾಗ್ಯದ ಬೆಳಕಾಗುವುದು. ನಮ್ಮ ಆದಾಯ ದುಪ್ಪಟ್ಟಾಗುವುದು, ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದೆಲ್ಲಾ ಹೇಳುತ್ತಿದ್ದರು. ಆದರೆ ನಾವು ಏನೂ ಮಾಡುವಂತಿರಲಿಲ್ಲ. ಅಂತಹ ಮುಗ್ಧ ಜನರು ಹೇಳುವ ವಿಷಯಗಳು ವಾಸ್ತವವಾಗಿ ಸತ್ಯವಾಗಿದ್ದರೂ ಕೂಡಾ ಓರ್ವ ಬ್ಯಾಂಕ್ ಮ್ಯಾನೇಜರ್ ಆಗಿ ಅವುಗಳನ್ನೆಲ್ಲಾ ಒಪ್ಪಿಕೊಳ್ಳುವಂತಿರಲಿಲ್ಲ. ಬಹುತೇಕ ಸಂದರ್ಭದಲ್ಲಿ ಅವರನ್ನು ಬೇರೆ ಬೇರೆ ರೀತಿಯಲ್ಲಿ ಸಮಾಧಾನಪಡಿಸಬೇಕಾಗುತ್ತಿತ್ತು. ಅವರನ್ನು ಕುರಿತು ನೋಡಿ, ನೀವು ಹೇಳುತ್ತಿರುವುದೆಲ್ಲಾ ಸತ್ಯವೂ ಹೌದು. ನಿಮಗೆ ಸಾಲ ಮರುಪಾವತಿ ಮಾಡಲು ಸಾಕಷ್ಟು ಆದಾಯವಿದೆ ಎಂದು ನಾನು ವೈಯಕ್ತಿಕವಾಗಿ ಅರ್ಥಮಾಡಿಕೊಳ್ಳಬಹುದೇ ಹೊರತು ಓರ್ವ ಬ್ಯಾಂಕ್ ಅಧಿಕಾರಿಯಾಗಿ ಅಲ್ಲ. ನಾನು ಬ್ಯಾಂಕಿನ ನಿಯಮವನ್ನು ಪಾಲಿಸಲೇಬೇಕು. ನಿಯಮಗಳ ಪ್ರಕಾರ ದಾಖಲೆ ವಿವರಗಳನ್ನು ಕಂಪ್ಯೂಟರ್ಗೆ ನೀಡಿದರೆ ಮಾತ್ರ ಸಾಲದ ಖಾತೆಯನ್ನು ತೆರೆಯಲು ಸಾಧ್ಯ ದಾಖಲೆಗಳು ಇಲ್ಲದೇ ಕಂಪ್ಯೂಟರ್ ಮುಂದೆಯೇ ಹೋಗುವುದಿಲ್ಲ ಎಂದು ಕಂಪ್ಯೂಟರ್ ಕಡೆಗೆ ಬೊಟ್ಟು ಮಾಡುತ್ತಿದ್ದೆ. ಹೇಗೂ ಕೊನೆಗೆ ನನ್ನ ಎದುರಿನ ಆ ಕಂಪ್ಯೂಟರ್ ಅನ್ನು ವಿಷಾದದಿಂದ ದೃಷ್ಟಿಸುತ್ತಾ ಒಲ್ಲದ ಮನಸ್ಸಿನಿಂದ ಹೊರಹೋಗುತ್ತಿದ್ದರು. ಅವರೇನೋ ಹೇಗೋ ನನ್ನ ಕ್ಯಾಬಿನ್ನಿಂದ ಹೊರಹೋಗುತ್ತಿದ್ದರು ಆದರೆ ಒಂದು ನೋವು ಮಾತ್ರ ನನ್ನ ಮನಸ್ಸಿನಿಂದ ಹೊರ ಹೋಗುತ್ತಿರಲಿಲ್ಲ. ಅದುವೇ ವಾಸ್ತವ ದೃಷ್ಟಿಕೋನದಿಂದ ಅರ್ಹತೆ ಇರುವ ಓರ್ವ ಗ್ರಾಹಕನಿಗೆ ಕೆಲವು ದಾಖಲೆಗಳ ಕೊರತೆಯಿಂದಾಗಿ ಅವರ ಭವಿಷ್ಯ ಬೆಳಗಿಸುವಂತಹ ಸಾಲ ಕೊಡಲು ನನ್ನಿಂದ ಆಗಲಿಲ್ಲ ಎನ್ನುವ ನೋವು. ಎಷ್ಟೋ ಬಾರಿ ಹಾಗೆ ಹೊರಗೆ ಹೋದವರು ಕೊರತೆ ಇರುವ ದಾಖಲೆಗಳನ್ನು ಹೇಗಾದರೂ ಹೊಂದಿಸಿ ಸಾಲ ಪಡೆಯಬೇಕೆಂಬ ಶತ ಪ್ರಯತ್ನಕ್ಕೆ ಇಳಿಯುತ್ತಾರೆ. ಬಹಳ ಪ್ರಯತ್ನಪಟ್ಟು ಕೆಲವೊಂದಷ್ಟು ದಾಖಲೆಗಳನ್ನು ಪಡೆಯುತ್ತಾರೆ. ಆದರೆ ಎಲ್ಲೋ ಒಂದು ಕಡೆ ಯಾವುದೋ ಒಂದು ದಾಖಲೆ ಪಡೆಯುವುದು ಸಾಧ್ಯವೇ ಇಲ್ಲದ ಪರಿಸ್ಥಿತಿಗೆ ತಲುಪುತ್ತಾರೆ. ಕೈಯಲ್ಲಿದ್ದ ಹಣ, ಸಮಯವನ್ನು ವ್ಯರ್ಥ ಮಾಡಿ ಆ ದಾಖಲೆ ಸಿಗದೇ ಕೊನೆಗೂ ಸಾಲವು ಸಿಗುವುದಿಲ್ಲ ಎನ್ನುವ ಸತ್ಯ ಗೊತ್ತಾದಾಗ ಅವರಿಗಾಗುವ ವೇದನೆ ಅಪ್ಪಿಷ್ಟಲ್ಲ, ನಮ್ಮ ಗ್ರಾಮೀ ಭಾಗದಲ್ಲಿ ಇಂದಿಗೂ ದಾಖಲೆಗಳಿಗೆ ಅಷ್ಟು ಮಹತ್ವ ಕೊಡದ ಜನರಿದ್ದಾರೆ. ತಮ್ಮ ಪೂರ್ವಜರಿಂದ ಬಂದ ಆಸ್ತಿಗಳ ಬಗ್ಗೆ, ಸರಿಯಾದ ವಿಭಜನೆ ಪತ್ರಗಳನ್ನು ಮಾಡಿಕೊಳ್ಳದೇ ಇರುವುದು, ಅನಧಿಕೃತವಾಗಿ ಭೂಮಿಗಳನ್ನು ಬದಲಾಯಿಸಿಕೊಳ್ಳುವುದು, ಎಷ್ಟು ದಶಕಗಳಿಂದ ಅಕ್ರಮ ಸ್ಥಳಗಳಲ್ಲಿ ಕೃಷಿ-ಮನೆಗಳನ್ನು ಮಾಡಿಕೊಂಡಿದ್ದರೂ ಸಕ್ರಮಗೊಳಿಸಲು ಯಾವುದೇ ಪ್ರಯತ್ನ ಮಾಡದೇ ಇರುವುದು, ದಾಖಲೆಗಳಿಗಾಗಿ ಸರ್ವೇ ಮಾಡಿಸಿದಾಗ ಅವರ ಜಾಗ ಎಲ್ಲೋ ಇರುವುದು, ವಿಸ್ತೀರ್ಣದಲ್ಲಿ ಲೋಪ, ಪಹಣಿಗಳಲ್ಲಿ ಲೋಪ, ದಿಕ್ಕುಗಳಲ್ಲಿ ಲೋಪ, ನಕ್ಷೆ, ಸಂಪರ್ಕ, ರಸ್ತೆ ಹೀಗೆ ಅನೇಕ ಲೋಪಗಳು ಕಂಡು ಬರುವುದು. ಅವುಗಳನ್ನು ಸರಿಪಡಿಸುವ ಕ್ಲಿಷ್ಟತೆಯನ್ನು ತಿಳಿದು ಅದರ ಗೋಜಿಗೆ ಹೋಗುವುದಿಲ್ಲ. ಇಂತಹ ಜಾಗಗಳಿಂದ ಉತ್ತಮ ಕೃಷಿ ಆದಾಯವಿದ್ದರೂ ದಾಖಲೆಗಳಿಲ್ಲದೇ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬ್ಯಾಂಕಿನಿಂದ ಬಿಡಿಕಾಸು ಸಾಲ ಸಿಗುವುದಿಲ್ಲ. ಕೂಲಿ ಮಾಡುವವರು, ಬೀದಿ ವ್ಯಾಪಾರಿಗಳು. ಅಂಗಡಿ ಹೋಟೇಲ್ಗಳಲ್ಲಿ ಕೆಲಸ ಮಾಡುವವರು, ಫಿಟ್ಟರ್ಗಳು, ಪ್ಲಂಬರ್ಗಳು, ಕಟ್ಟಡ ಕಾರ್ಮಿಕರು, ಹೀಗೆ ಎಷ್ಟೋ ಸಾಮಾನ್ಯ ವೃತ್ತಿಪರರು ಉತ್ತಮ ಆದಾಯ ಹೊಂದಿದ್ದರೂ ಈ ಕುರಿತು ದಾಖಲೆಗಳಿಲ್ಲದೆ ಬ್ಯಾಂಕಿನ ಸಾಲದಿಂದ ವಂಚಿತರಾಗುವರು. ಇನ್ನೂ ದಾಖಲೆ ಆದಾಯ ಎಲ್ಲಾ ಇದ್ದರೂ ತಾನು ಬಯಸಿದ ಉದ್ದೇಶಕ್ಕೆ ಸಾಲ ಸಿಗದೇ ಇರುವುದು ಮತ್ತೊಂದು ವಿಪರ್ಯಾಸ. ಉದಾಹರಣೆಗೆ – ಮಗಳ ಮದುವೆಗೋ, ಸೈಟು ಖರೀದಿಗೋ, ಹಳೆಯ ವಾಹನ ಖರೀದಿ, ಇತ್ಯಾದಿಗಳಿಗೆ ಎಷ್ಟೋ ಬ್ಯಾಂಕ್ಗಳಲ್ಲಿ ಸಾಲವಿಲ್ಲ. ಏಕೆಂದರೆ ಆ ಉದ್ದೇಶಗಳು ಬ್ಯಾಂಕಿನ ಲೋನಿನ ಯಾವ ಸ್ಕಿಮ್ನ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ದಾಖಲೆಗಳು, ಆದಾಯ, ಅರ್ಹತೆ, ಉದ್ದೇಶ ಎಲ್ಲಾ ಅದೃಷ್ಟಗಳು ಅವನ ಕೈ ಸೇರಿದರೂ ಮತ್ಯಾವುದೋ ಕಾರಣಗಳಿಂದ ಬ್ಯಾಂಕಿನ ಧನಲಕ್ಷ್ಮೀ ಕೊನೆಗೆ ಅವನಿಗೆ ಒಲಿಯದೇ ಇರಬಹುದು. ಅವುಗಳ ಕಾರಣಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ.
