ಮಳೆಗಾಲದ ಕೃಷಿ ತಯಾರಿಗೆ ಸಿದ್ಧರಾಗಿ

ತ್ತನೆ ಬೀಜ, ಗೊಬ್ಬರಗಳ ಸಂಗ್ರಹ

ಪೂರ್ವ ಸಿದ್ಧತೆ ಹೀಗಿರಲಿ
ಮಳೆಗಾಲದ ಸಿದ್ಧತೆ ಒಂದು ರೀತಿಯಲ್ಲಿ ಯುದ್ಧ ಸಿದ್ಧತೆಯೇ ಸರಿ! ಪ್ರಕೃತಿಯ ‘ಮುನಿಸು’ ‘ರೌದ್ರಾವತಾರ’ ಎದುರಿಸುವುದೆಂದರೆ ಸಣ್ಣ ಮಾತಲ್ಲ ತಾನೆ!? ಹಾಗಾಗಿ ಮಳೆಗಾಲದ ಪೂರ್ವ ಸಿದ್ಧತೆಗೆ ಒತ್ತು ನೀಡುವುದು ಬಹಳ ಮುಖ್ಯ. ಅದರಲ್ಲೂ ‘ಈ ಬಾರಿ ವಿಪರೀತ ಮಳೆಯಾದರೆ ಏನು ಮಾಡಬೇಕು?’ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಆ ಕಲ್ಪನೆಯಲ್ಲೇ ನಮ್ಮ ಸಿದ್ಧತೆ ನಡೆಯಬೇಕಾಗುತ್ತದೆ. ಒಂದು ಸಣ್ಣ ಉಡಾಫೆಯೂ ಇಲ್ಲಿ ಭಾರೀ ಬೆಲೆ ತೆರುವಂತೆ ಮಾಡಬಹುದು. ಉದಾಹರಣೆಗೆ ತೋಟದಲ್ಲಿ ಅಥವಾ ಹೊಲದ ಬದುಗಳಲ್ಲಿ ವಿಪರೀತವಾಗಿ ಬೆಳೆದ ಮರಗಳನ್ನು ಗುರುತಿಸಿ ‘ಹರೆ ತೆಗೆಯುವ’ ಕೆಲಸ ಮಳೆಗಾಲಕ್ಕೂ ಮುಂಚೆಯೇ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಮಳೆಯೊಂದಿಗೆ ಬರುವ ಗಾಳಿಗೆ ಮರ ಧರಾಶಾಹಿಯಾದಲ್ಲಿ ಮುಖ್ಯಬೆಳೆಗೆ ಭಾರೀ ಹಾನಿಯಾಗುವ ಸಂಭವ ಹೆಚ್ಚು. ಹಾಗೆಯೇ ವಿಪರೀತ ಮಳೆ ಹಿಡಿಯುವ ಮುನ್ನವೇ ಬಸಿಗಾಲುವೆಗಳನ್ನು ಸ್ವಚ್ಛಗೊಳಿಸುವುದರಿಂದ ಹಾನಿ ತಡೆಯಬಹುದು.
ಬಿತ್ತನೆ ಬೀಜ, ಗೊಬ್ಬರಗಳ ಸಂಗ್ರಹ
ಮುAಗಾರು ಪ್ರಾರಂಭವಾಗುತ್ತಿದ್ದAತೆಯೇ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತವೆ. ಅಂತಹ ಸಮಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಬೇಡಿಕೆ ಅಧಿಕವಾಗಿ ದರವೂ ಗಗನಕ್ಕೇರುವ ಸಂಭವ ಹೆಚ್ಚು. ಕೊರತೆಯೂ ಉಂಟಾಗಬಹುದು. ಹೀಗಾಗಿ ಮೊದಲೇ ಇವುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಉತ್ತಮ. ಅಲ್ಲದೇ ಇಂದು ಮಾರುಕಟ್ಟೆಯಲ್ಲಿ ರೈತರನ್ನು ಮೋಸಗೊಳಿಸುವ ಜಾಲ ವಿಸ್ತಾರಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಬಹಳಷ್ಟು ಜಾಗ್ರತೆ ವಹಿಸುವ ಅನಿವಾರ್ಯತೆಯೂ ಇದೆ. ಇವೆಲ್ಲಕ್ಕೂ ಪರಿಹಾರವೆಂಬAತೆ ಬಿತ್ತನೆ ಬೀಜ ಹಾಗೂ ಗೊಬ್ಬರದಲ್ಲಿ ರೈತ ಸ್ವಾವಲಂಬನೆ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯ. ಮುಂಗಾರಿನ ಬಿತ್ತನೆಗೆ ರೈತರು ‘ಆತ್ಮನಿರ್ಭರ’ರಾಗಲು ಇಂದಿನಿAದಲೇ ತಯಾರಿ ನಡೆಸುವುದು ಉತ್ತಮ.
ಗುಡುಗು, ಸಿಡಿಲು ಮೊದಲೇ ತಿಳಿದು…
ನಮ್ಮ ಪೂರ್ವಜರು ಮಳೆ ನಕ್ಷತ್ರಗಳನ್ನು ಆಧಾರಿಸಿ ಮಳೆಯ ಪ್ರಮಾಣಗಳನ್ನು ಲೆಕ್ಕ ಹಾಕುತ್ತಿದ್ದರು. ಈಗಿನ ಆಧುನಿಕ ಯುಗದಲ್ಲಿ ಮಳೆ ಲೆಕ್ಕಾಚಾರ ಸುಲಭವಾಗಿದ್ದು, ರೈತರು ನಿಖರವಾದ ಹವಾಮಾನ ಮುನ್ಸೂಚನೆಗಳನ್ನು ತಮ್ಮ ಮೊಬೈಲ್‌ನಲ್ಲೇ ಪಡಯಬಹುದಾಗಿದೆ. ಸರ್ಕಾರವೇ ಹೊರತಂದಿರುವ ‘ಮೇಘದೂತ’ ಮೊಬೈಲ್ ಅಪ್ಲಿಕೇಶನ್ ಈ ಪೈಕಿ ಒಂದು. ಸ್ಥಳೀಯ ಹವಾಮಾನ ಮುನ್ಸೂಚನೆಗಳನ್ನು ಹಾಗೂ ವೈಪರೀತ್ಯಗಳ ಬಗ್ಗೆ ಮಾಹಿತಿಯನ್ನು ಇದರಿಂದ ಪಡೆದುಕೊಳ್ಳಬಹುದು. ಇದರೊಟ್ಟಿಗೆ ಆ ಸಮಯದಲ್ಲಿ ಹವಮಾನಕ್ಕನುಗುಣವಾಗಿ ಬೆಳೆಯ ಬೇಕಾದ ಬೆಳೆಗಳ ಬಗ್ಗೆಯೂ ಈ ಆ್ಯಪ್ ಮಾಹಿತಿ ನೀಡುತ್ತದೆ. ಸ್ಥಳೀಯ ಭಾಷೆಯಲ್ಲಿಯೇ ಮಾಹಿತಿ ನೀಡುವುದರಿಂದ ಬಹುತೇಕ ರೈತರು ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಇನ್ನು ‘ದಾಮಿನಿ’ ಎಂಬ ಅಪ್ಲಿಕೇಶನ್ ಗುಡುಗು-ಸಿಡಿಲುಗಳ ಬಗ್ಗೆ ಮೊದಲೇ ಅಲರ್ಟ್ ನೀಡುವ ವ್ಯವಸ್ಥೆ ಹೊಂದಿದ್ದು ಇದರಿಂದ ಜೀವಾಪಾಯವನ್ನೂ ತಡೆಯಬಹುದಾಗಿದೆ. ಇದೇ ರೀತಿ ಅನೇಕ ಮೊಬೈಲ್ ಅಪ್ಲಿಕೇಶನ್‌ಗಳು ಗೂಗಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದ್ದು ಮಳೆಯ ಮುನ್ಸೂಚನೆಗಳನ್ನು ಈ ಮೂಲಕ ಪಡೆಯಬಹುದಾಗಿದೆ.
ಮಳೆನೀರು ಸಂಗ್ರಹ, ಇದೇ ಮೊದಲ ಆಗ್ರಹ
ಮಳೆನೀರು ಪ್ರಕೃತಿ ರೈತನಿಗೆ ಸಹಿ ಹಾಕಿ ನೀಡುವ ಖಾಲಿ ಚೆಕ್ಕಿನ ಹಾಗೆ. ಇದನ್ನು ಸರಿಯಾಗಿ ಬಳಸಿಕೊಂಡಲ್ಲಿ ಬೇಸಿಗೆಯಲ್ಲಿ ಎದುರಿಸುವ ನೀರಿನ ಅಭಾವವನ್ನು ಅನಾಯಾಸವಾಗಿ ನಿವಾರಿಸಬಹುದು. ತಮ್ಮ ಜಮೀನಿನಲ್ಲಿ ಬೀಳುವ ಪ್ರತೀ ಮಳೆ ಹನಿಯೂ ಹೊರ ಹೋಗಿ ವ್ಯರ್ಥವಾಗದಂತೆ ತಡೆಯುವ ಕೆಲಸ ಆಗಬೇಕು. ಇದಕ್ಕಾಗಿ ಇಂಗು ಗುಂಡಿಗಳನ್ನು ಮಾಡಬಹುದು, ತೆರೆದ ಬಾವಿ ಇದ್ದಲ್ಲಿ ಮಳೆ ನೀರು ಬಾವಿ ಸೇರುವಂತೆ ಮಾಡುವುದು, ಬೋರ್‌ವೆಲ್‌ನಲ್ಲಿ ಜಲಮರುಪೂರಣ ವ್ಯವಸ್ಥೆ ಅಳವಡಿಸುವುದು, ದೊಡ್ಡ ಕೃಷಿ ಹೊಂಡ ಅಥವಾ ಟ್ಯಾಂಕಿನಲ್ಲಿ ಮಳೆನೀರು ಸಂಗ್ರಹಣೆ ಮಾಡುವುದು… ಇತ್ಯಾದಿ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಹಾಗಾಗಿ ಮಳೆನೀರು ಸಂಗ್ರಹಣೆಯ ತಯಾರಿಯೂ ಮಳೆಗಾಲದ ಪೂರ್ವ ಸಿದ್ಧತೆಯ ಪಟ್ಟಿಯಲ್ಲಿ ಮುಖ್ಯ ಸ್ಥಾನ ಪಡೆಯಬೇಕು.
ಜಾನುವಾರುಗಳ ವರಿ’
ರೈತನ ಮಿತ್ರನಾಗಿರುವ ಜಾನುವಾರುಗಳಿಗೆ ಶೀತ, ನೆಗಡಿ, ಗಂಟಲು ನೋವಿನಂತಹ ರೋಗಗಳು ಬಾಧಿಸದಂತೆ ನೋಡಿಕೊಳ್ಳಬೇಕು. ಅತೀ ಮಳೆಯಿದ್ದಾಗ ಹೊರಗಡೆ ಮೇಯಲು ಬಿಡದೆ ಆದಷ್ಟು ಬೆಚ್ಚಗಿನ ವಾತಾವರಣದಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕು. ಇದರೊಟ್ಟಿಗೆ ಕೆರೆ, ಕಾಲುವೆಗಳಲ್ಲಿ ಶೇಖರಣೆಗೊಳ್ಳುವ ಕಲುಷಿತ ಮಳೆನೀರನ್ನು ಕುಡಿಯಲು ಬಿಡದೆ ಶುದ್ಧವಾದ ನೀರನ್ನು ಕೊಡಬೇಕು. ಹಸಿ ಹುಲ್ಲಿಗಿಂತ ಹೆಚ್ಚಾಗಿ ಒಣ ಹುಲ್ಲನ್ನೂ ನೀಡುವುದು, ಜಂತುಹುಳು ಹಾಗೂ ಚಪ್ಪೆ ರೋಗಕ್ಕೆ ಲಸಿಕೆಗಳನ್ನು ಹಾಕಿಸುವುದು… ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು.
ಮಳೆ ನಕ್ಷತ್ರಗಳು ಹಾಗೂ ರೂಢಿಯಲ್ಲಿರುವ ಗಾದೆಗಳು
ಇಪ್ಪತ್ತೇಳು ನಕ್ಷತ್ರಗಳ ಪೈಕಿ ಹನ್ನೊಂದು ನಕ್ಷತ್ರಗಳನ್ನು(ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಘಾ, ಪುಬ್ಬ, ಉತ್ತರ, ಹಸ್ತ, ಚಿತ್ರಾ, ಸ್ವಾತಿ ಹಾಗೂ ವಿಶಾಖ) ಮಳೆಯ ನಕ್ಷತ್ರಗಳೆಂದು ಗುರುತಿಸಲಾಗಿದೆ. ಉಳಿದ ನಕ್ಷತ್ರಗಳಲ್ಲಿ ಮಳೆ ಬರುವುದು ತೀರಾ ಕಡಿಮೆ ಎಂದು ಅಂದಾಜಿಸಲಾಗಿದೆ. ಮಳೆ ನಕ್ಷತ್ರಗಳ ಮೇಲೆ ಮಳೆಯ ಪ್ರಮಾಣಗಳನ್ನು ಊಹಿಸುತ್ತಿದ್ದ ನಮ್ಮ ಪೂರ್ವಜರು ಆಯಾ ಮಳೆ ನಕ್ಷತ್ರಗಳಿಗೆ ಸಂಬAಧಿಸಿ ಗಾದೆಗಳನ್ನೂ ಹೆಣೆದಿದ್ದಾರೆ. ಮಳೆಯ ಸ್ವರೂಪ ತಿಳಿಸುವ ಈ ಗಾದೆಗಳು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ.
• ಮಘಾ ಮಳೆ ಬಂದಷ್ಟೂ ಒಳ್ಳೇದು, ಮನೆ ಮಗ ಉಂಡಷ್ಟೂ ಒಳ್ಳೇದು.
• ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
• ಆಶ್ಲೇಷಾ ಮಳೆ, ಈಸಲಾರದ ಹೊಳೆ.
• ಆದರೆ ಆರಿದ್ರಾ ಇಲ್ವಾದ್ರೆ ದರಿದ್ರಾ!.
• ಆರಿದ್ರಾ ಮಳೆ ಆರದೇ ಹುಯ್ಯುತ್ತೆ.
• ಅಮ್ಮನ ಮನಸ್ಸು ಬೆಲ್ಲದ ಹಾಗೆ; ಆರಿದ್ರಾ ಹನಿ ಕಲ್ಲಿನ ಹಾಗೆ.
• ಮಗೆ ಮಳೆ ಮಗೆ ಗಾತ್ರ ಬೀಳ್ತದೆ.
• ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ.
• ಅಸಲೆ ಮಳೆ ಕೈತುಂಬಾ ಬೆಳೆ.
ಕೆಲವು ಪ್ರಮುಖವಾದ ಮಳೆಗಾಲದ ಪೂರ್ವ ತಯಾರಿ
• ಈ ಬಾರಿ ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆಯುತ್ತೀರಿ? ಅದಕ್ಕೆ ಎಷ್ಟು ಖರ್ಚು ತಗಲಬಹುದು? ಅದರಿಂದ ಎಷ್ಟು ಲಾಭ ಪಡೆಯಬಹುದು? ಬೀಜ, ಗೊಬ್ಬರ ಎಲ್ಲಿ ಸಿಗುತ್ತದೆ ಮುಂತಾದವುಗಳ ಪಕ್ಕಾ ಲೆಕ್ಕಾಚಾರ ನಿಮ್ಮಲ್ಲಿರಲಿ.
• ಮಳೆಗಾಲದ ಕೃಷಿ ಚಟುವಟಿಕೆಗಳಿಗೆ ಬೇಕಾದ ಹಾರೆ, ಪಿಕ್ಕಾಸು ಮುಂತಾದ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಿ.
• ಯಂತ್ರಗಳ ಮೂಲಕ ಬಿತ್ತನೆ ಕಾರ್ಯವನ್ನು ಕೈಗೊಳ್ಳುವುದಾದರೆ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಯಂತ್ರಧಾರೆ ಕೇಂದ್ರದ ಮೂಲಕ ಬೇಕಾದ ಯಂತ್ರಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಿ.
• ಅಡಿಕೆ ಹಾಗೂ ತೆಂಗಿನ ತೋಟದಲ್ಲಿ ಮಳೆ ನೀರು ನಿಲ್ಲದಂತೆ ಕಣಿಗಳನ್ನು(ಬಸಿಗಾಲುವೆ) ಸ್ವಚ್ಛಗೊಳಿಸುವುದು.
• ಹಳ್ಳ/ತೋಡಿನಲ್ಲಿ ರಭಸವಾಗಿ ನೀರು ಹರಿಯುವ ಮೊದಲೇ ಪಕ್ಕದಲ್ಲಿರುವ ತೆಂಗಿನ ಮರದ ಕಾಯಿಗಳನ್ನು ತೆಗೆಯುವುದು.
• ಭತ್ತ/ಅಡಿಕೆ ಕೆಲಸಗಳಿಗಾಗಿ ಮನೆಯ ಅಂಗಣ ಹಾಳಾಗದಂತೆ(ಅಡಿಕೆ ಅಥವಾ ತೆಂಗಿನ ಗರಿಗಳನ್ನು ಹಾಸಿ) ಕಾಪಾಡಿಕೊಳ್ಳುವುದು.
• ಗದ್ದೆಯ ಬದುಗಳನ್ನು ಸಮತಟ್ಟುಗೊಳಿಸುವುದು.
• ಅಡಿಕೆ ಔಷಧ ಸಿಂಪಡಣೆಗೆ ಹಾಗೂ ಗದ್ದೆ ಬೇಸಾಯಕ್ಕೆ ಬೇಕಾಗುವ ಪರಿಕರಗಳನ್ನು ದುರಸ್ತಿಪಡಿಸುವುದು.
• ಗದ್ದೆ ಹಾಗೂ ತೋಟದ ಸುತ್ತಲಿನ ಮರಗಳನ್ನು ಕಡಿದು ಗಾಳಿ-ಬೆಳಕು ಚೆನ್ನಾಗಿ ಬೀಳುವಂತೆ ಮಾಡುವುದು.
• ತೋಟದಲ್ಲಿ ಅಡಿಕೆ/ತೆಂಗಿನ ಗರಿಗಳ ಅಥವಾ ಕಡಿದ ಮರದ ಸೊಪ್ಪಿನ ಮುಚ್ಚಿಗೆ ನಿರ್ಮಿಸಿ ಮಣ್ಣಿನ ಸವಕಳಿ ತಡೆಯುವುದು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *