ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಮಹಾಶಿವನ ಮಂಗಳಕರ ಶಿವರಾತ್ರಿಯನ್ನು ಪ್ರತಿವರ್ಷ ಭಕ್ತಿಪೂರ್ವಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಲಾಗುತ್ತದೆ. ನಾಡಿನ ವಿವಿಧ ಕಡೆಗಳಿಂದ ಬಹಳಷ್ಟು ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಂದು ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಮಾಡಿ ರಥೋತ್ಸವವನ್ನು ಕಣ್ತುಂಬಿಕೊಂಡು ಶ್ರೀಸ್ವಾಮಿಯ ದರ್ಶನವನ್ನು ಮಾಡುತ್ತಾರೆ. ಕೈಕಾಲು ನೋವು, ಸುಸ್ತನ್ನು ಲೆಕ್ಕಿಸದೆ ಶ್ರೀಕ್ಷೇತ್ರವನ್ನು ತಲುಪಬೇಕು, ಸ್ವಾಮಿಯನ್ನು ಕಾಣಬೇಕೆಂಬ ಭಕ್ತಿ, ಏಕಾಗ್ರತೆ, ಗುರಿಯೊಂದಿಗೆ ಉತ್ಸಾಹಭರಿತವಾಗಿ ಗಾಳಿಯೇ ತಳ್ಳಿಕೊಂಡು ಬಂದ ರೀತಿಯಲ್ಲಿ ಭಕ್ತರು ಏಳೆಂಟು ದಿನಗಳ ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಈ ದೇಹವೆಂಬುವುದು ಒಂದು ವಾಹನದಂತೆ. ವಾಹನ ಚಲಿಸಬೇಕಾದರೆ ಇಂಧನ ಬೇಕು. ಹಾಗೆಯೇ ಮನುಷ್ಯನ ದೇಹಕ್ಕೂ ಚೈತನ್ಯ ಅಥವಾ ಜೀವ ಬೇಕು. ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡದಿದ್ದರೆ ನಾವು ಚೈತನ್ಯವನ್ನು ಕಳೆದುಕೊಳ್ಳುತ್ತೇವೆ. ಆರೋಗ್ಯ ಕೈ ಕೊಡುತ್ತದೆ. ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರುತ್ತದೆ. ‘ಜೀವವಿದ್ದರೆ ಶಿವ. ಇಲ್ಲದಿದ್ದರೆ ಶವ’ ಎಂಬ ಮಾತೊಂದಿದೆ. ಆದ್ದರಿಂದ ನಾವು ಸದಾ ಚೈತನ್ಯದಿಂದ ಇರುವುದು ಬಹಳ ಮುಖ್ಯ. ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ, ನಿದ್ರೆ, ಮದ್ಯಪಾನ, ಡ್ರಗ್ಸ್ ಇತ್ಯಾದಿ ದುಶ್ಚಟಗಳು ದೇಹಕ್ಕೆ ನಾನಾ ರೀತಿಯಲ್ಲಿ ಹಾನಿಯುಂಟು ಮಾಡುತ್ತವೆ. ಅಂದಾಜು 40 ವರ್ಷಗಳವರೆಗೆ ದೇಹ ನಾವು ಮಾಡುವುದೆಲ್ಲವನ್ನು ತಡೆದುಕೊಳ್ಳಬಹುದು. ಬಳಿಕ ಒಂದೊಂದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮಾನವ ಪಂಚೇಂದ್ರಿಯಗಳಿಂದ ರೂಪಿತನಾದವನು. ಈ ಪಂಚ ಜ್ಞಾನೇಂದ್ರಿಯಗಳು ನಮಗೆ ಹೊರಗಿನ ವಸ್ತುಗಳ ಸಾಕ್ಷಾತ್ಕಾರವನ್ನು ಮಾಡಿಸುತ್ತವೆ. ಆದರೆ ಈ ಪಂಚೇಂದ್ರಿಯಗಳು ಮಾನವನ ಹತೋಟಿಯಲ್ಲಿರಬೇಕೇ ಹೊರತು ಅವುಗಳ ಹತೋಟಿಯಲ್ಲಿ ಮಾನವ ಇರಬಾರದು. ಇಂದ್ರಿಯಗಳನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದಕ್ಕೆ ಸಾಕ್ಷಾತ್ ಈಶ್ವರ ದೇವರು ಮಾದರಿ. ನಿತ್ಯ ಜೀವನದಲ್ಲಿ ನಾವು ನಮ್ಮ ದೇಹದಲ್ಲಿ ಯಾವೆಲ್ಲ ಅಂಗಗಳು, ಎಲ್ಲೆಲ್ಲಿವೆ ಎಂಬುವುದಕ್ಕೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ. ಆದರೆ ಪಾದಯಾತ್ರೆ ಮಾಡುವವರಿಗೆ ತಮ್ಮ ದೇಹದ ಹೆಚ್ಚಿನ ಅಂಗಗಳ ಸ್ಪರ್ಶಜ್ಞಾನವಾಗುತ್ತದೆ. 50 – 60 ಕಿ.ಮೀ. ನಡೆಯುವಾಗ ಸಾಕಷ್ಟು ಅಭ್ಯಾಸವಿಲ್ಲದ ಕಾರಣ ಕಾಲು ನೋಯುತ್ತದೆ. ಮತ್ತಷ್ಟು ದೂರ ನಡೆದಾಗ ಸೊಂಟ ಹಿಡಿದುಕೊಳ್ಳುತ್ತದೆ. ಹಸಿವು, ಬಾಯಾರಿಕೆಯಾದಾಗ ಹೊಟ್ಟೆಯ ಮೇಲೆ ತನ್ನಷ್ಟಕ್ಕೆ ಕೈಯಾಡುತ್ತದೆ. ಮಲಗಲು ಮೆತ್ತನೆಯ ಹಾಸಿಗೆಯೇ ಬೇಕು, ಉಣ್ಣಲು ಸ್ವಾದಿಷ್ಟ ಆಹಾರವೇ ಆಗಬೇಕು ಎಂಬಿತ್ಯಾದಿ ವಿಷಯಾಸಕ್ತಿಗಳನ್ನು ಬಿಟ್ಟು ದಾರಿಯಲ್ಲಿ, ಸಿಕ್ಕ – ಸಿಕ್ಕಲ್ಲಿ ದಣಿವಾರಿಸಿಕೊಳ್ಳುತ್ತಾರೆ, ನಿದ್ದೆ ಮಾಡುತ್ತಾರೆ.
ಕೆಲವು ಪಾದಯಾತ್ರಿಗಳು ಕಠಿಣ ವ್ರತವನ್ನಾಚರಿಸಿಕೊಂಡು ಬರುತ್ತಾರೆ. ದಿನಕ್ಕೆ ಇಂತಿಷ್ಟೇ ಆಹಾರ ಸೇವನೆ ಎಂದು ನಿಶ್ಚಯಿಸಿಕೊಂಡಿರುತ್ತಾರೆ. ಅವರಿಗೆ ಉಚಿತವಾಗಿ ಎಷ್ಟು ಕೊಟ್ಟರೂ, ಏನು ಕೊಟ್ಟರೂ ಬೇಡ. ಅವರ ದೃಷ್ಟಿ ಗುರಿಯೆಡೆಗೆ ನೆಟ್ಟಿರುತ್ತದೆ. ಹಾಗಾಗಿ ಅವರಿಗೆ ವಿಷಯಾಸಕ್ತಿಗಿಂತ ಭಕ್ತಿಯೇ ಮುಖ್ಯವಾಗುತ್ತದೆ. ಪುಣ್ಯಕ್ಷೇತ್ರಗಳ ದರ್ಶನ ಮಾಡುವಾಗ ಆಹಾರ, ವಿಹಾರ, ವಿಚಾರಗಳು ಹತೋಟಿಯಲ್ಲಿ ಇದ್ದಾಗ ಗುಣಗ್ರಹಣ ಶಕ್ತಿ ಜಾಸ್ತಿಯಾಗುತ್ತದೆ. ದೋಷಗ್ರಹಣ ಶಕ್ತಿ ಕಮ್ಮಿಯಾಗುತ್ತದೆ. ಶ್ರೀ ಮಂಜುನಾಥ ಸ್ವಾಮಿ ಎಂದರೆ ಶಿವ. ಯಾವುದೇ ಆಡಂಬರ ಬಯಸದಿರುವ, ಮುಗ್ಧ ಭಕ್ತಿಗೊಲಿಯುವ ದೇವರು. ಮೈಗೆ ಭಸ್ಮವನ್ನು ಮೆತ್ತಿಕೊಂಡು, ಚರ್ಮಾಂಬರ ಉಟ್ಟು, ಕುತ್ತಿಗೆಯಲ್ಲಿ ಹಾವನ್ನೇ ಆಭರಣದಂತೆ ಧರಿಸಿ ವಿರಕ್ತಿಯಿಂದ ಇರುವ ದೇವರು. ಇನ್ನೂ ಬೇಕು, ಮತ್ತಷ್ಟು ಬೇಕೆಂದು ಆಸೆ ಪಟ್ಟು ಅದು ಈಡೇರದಿದ್ದರೆ ನಿರಾಸೆಯಾಗುತ್ತದೆ. ಅದು ದುಃಖಕ್ಕೆ ಕಾರಣವಾಗಬಲ್ಲದು. ಹಾಗಾಗಿ ವಿಷಯಾಸಕ್ತಿಯ ನಿಗ್ರಹಕ್ಕಾಗಿ ದೀಕ್ಷೆ ಪಡೆದು ವ್ರತ – ನಿಯಮಗಳನ್ನು ಪಾಲಿಸುವುದು ಅದೊಂದು ಒಳ್ಳೆಯ ಉಪಾಯ.
ನಮ್ಮೆಲ್ಲ ದೋಷಗಳನ್ನು ತ್ಯಜಿಸಿ ಪರಿವರ್ತಿತರಾಗಿ ಉತ್ತಮ ಜೀವನ ನಡೆಸಬೇಕು. ಕೇವಲ ಬಾಯಿ ಮಾತಿನಲ್ಲಿ ‘ಪರಿವರ್ತನೆಯಾದೆ’ ಎಂದರೆ ಸಾಲದು, ನಡೆ – ನುಡಿ ಒಂದೇ ಆಗಿರಬೇಕು. ಕಾಶಿಗೆ ಹೋದರೆ ಏನಾದರೂ ಬಿಟ್ಟು ಬರಬೇಕೆಂಬುದು ಪ್ರತೀತಿ. ಕೆಲವರು ಇಷ್ಟವಿರುವ ಸಿಹಿ, ಇನ್ನು ಕೆಲವರು ಖಾರ ತಿನ್ನುವುದನ್ನು ಬಿಡುತ್ತಾರೆ. ಒಬ್ಬ ಮಹಾ ಸಿಡುಕನಿದ್ದ. ಆತ ಕಾಶಿಗೆ ಹೋದವನು ತನ್ನಲ್ಲಿರುವ ಕೆಟ್ಟ ಗುಣ ‘ಕೋಪವನ್ನು ಬಿಡುತ್ತೇನೆ’ ಎಂದು ಸಂಕಲ್ಪ ಮಾಡಿದ. ಕಾಶಿ ವಿಶ್ವನಾಥ ಸ್ವಾಮಿಯ ದರ್ಶನ ಮಾಡಿ ಊರಿಗೆ ಹಿಂದಿರುಗಿದಾಗ ‘ಏನು ಬಿಟ್ಟು ಬಂದೆ?’ ಎಂದು ಊರವರು ಕೇಳಿದರು. ಅದಕ್ಕಾತ ‘ಕೋಪ ಬಿಟ್ಟು ಬಂದೆ’ ಎಂದ. ಆಗ ಇನ್ನೊಬ್ಬಾತ ಹೌದೋ, ಇಲ್ಲವೋ ಎಂದು ಪರೀಕ್ಷಿಸಲು ‘ಏನನ್ನು ಬಿಟ್ಟು ಬಂದೆ?’ ಎಂದು ಕೇಳಿದ. ‘ಕೋಪ ಬಿಟ್ಟೆ’ ಎಂದು ಉತ್ತರಿಸಿದ. ಮತ್ತೆ ಕೇಳಿದ, ‘ಏನನ್ನು ಬಿಟ್ಟು ಬಂದಿದ್ದೀ?’ ‘ಕೋಪ’ ಎಂದುತ್ತರಿಸಿದ. ಹೀಗೆ ಮೂರು – ನಾಲ್ಕು ಸಲ ಪದೇಪದೆ ಕೇಳಿದಾಗ ಆ ವ್ಯಕ್ತಿ ‘ರೀ… ಎಷ್ಟು ಸಲ ಹೇಳೋದ್ರೀ, ಕೋಪ ಬಿಟ್ಟು ಬಂದೆ ಅಂತ. ಒಂದು ಸಲ ಹೇಳಿದ್ರೆ ಅರ್ಥವಾಗಲ್ವಾ?’ ಎಂದು ದಬಾಯಿಸಿದ. ಒಮ್ಮೊಮ್ಮೆ ಹೀಗೂ ಆಗುತ್ತದೆ. ನಾವು ಅದನ್ನು ಬಿಟ್ಟರೂ ಅದು ನಮ್ಮನ್ನು ಬಿಡುವುದಿಲ್ಲ. ಆತ ಸಿಟ್ಟು ಬಿಟ್ಟದ್ದು ಮಾತ್ರ. ಆದರೆ ಪರಿವರ್ತನೆ ಆಗಿರಲಿಲ್ಲ. ಭಗವಂತನ ದರ್ಶನದ ಮೂಲಕ ಪರಿವರ್ತನೆಯೂ ಆಗಬೇಕಾಗಿದೆ. ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಸರ್ವರಿಗೂ ಶ್ರೀಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.