ಮಹಿಳಾ ಸಬಲೀಕರಣ – ಯಾರ ಹೊಣೆ?

ಪುರುಷ ಪ್ರಧಾನ ಸಂಸ್ಕøತಿಗಳೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರಕಿಸಿಕೊಡಬೇಕೆಂಬ ಪ್ರಯತ್ನ ಮಾಡಿದವರೆಷ್ಟೋ ಮಹಾಮಹಿಮರು ಆಗಿ ಹೋಗಿದ್ದಾರೆ. ಸತಿಸಹಗಮನ ಪದ್ಧತಿಯನ್ನು ರದ್ದುಗೊಳಿಸುವಲ್ಲಿ ಶ್ರಮಿಸಿದ ರಾಜಾರಾಮ್ ಮೋಹನ್‍ರಾಯ್‍ರಿಂದ ಪ್ರಾರಂಭಿಸಿ ಬಾಲಕಿಯರಿಗೆ ಶಿಕ್ಷಣ ಒದಗಿಸುವ ಕುರಿತು ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆವರೆಗೆ ನಮ್ಮ ದೇಶ ಅನೇಕ ಮಹಿಳಾ ಸಬಲೀಕರಣದ ಅಧ್ವರ್ಯಗಳನ್ನು ಕಂಡಿದೆ. ಅವರುಗಳು ಅನುಸರಿಸಿದ ದಾರಿಗಳೂ ಅಷ್ಟೇ ವೈಶಿಷ್ಟ್ಯಪೂರ್ಣವಾಗಿವೆ.
ಮಹಿಳಾ ಸಬಲೀಕರಣ ಎನ್ನುವ ಪದಪುಂಜವನ್ನು ಇತ್ತೀಚಿನ ದಿನಗಳಲ್ಲಿ ನಾವು ಬಹಳಷ್ಟು ಕೇಳುತ್ತಿದ್ದೇವೆ. ಸಬಲೀಕರಣವೆಂದರೆ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯೋರ್ವಳು ತನ್ನ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಮಂಡಿಸುವ ವಾತಾವರಣವನ್ನು ಕಲ್ಪಿಸುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಅವಕಾಶಗಳನ್ನು ಕಲ್ಪಿಸಿದರಷ್ಟೇ ಸಾಲದು. ಮಹಿಳೆಯರ ಮನಃಸ್ಥಿತಿಯೂ ಸಕಾರಾತ್ಮಕವಾಗಿ ಬದಲಾಗಬೇಕಾದ ಅವಶ್ಯಕತೆ ಇದೆ. ಗಂಡು ಮಕ್ಕಳಿಗೆ ಪ್ರಾಧಾನ್ಯತೆಯನ್ನು ನೀಡಿ, ಅವರನ್ನು ಕುಲದ ಉದ್ಧಾರಕರೆಂದು ತಿಳಿದು ಅವರ ಸಮ್ಮುಖದಲ್ಲಿ ಹೆಣ್ಣುಮಕ್ಕಳನ್ನು ಕಡೆಗಣಿಸುವ ಕುಟುಂಬಗಳಿಂದಾಗಿ ಹೆಣ್ಣುಮಕ್ಕಳಲ್ಲಿ ಸ್ವಾಭಾವಿಕವಾಗಿ ಆತ್ಮವಿಶ್ವಾಸದ ಕೊರತೆ ಕಂಡುಬರುತ್ತದೆ. ಹೆಣ್ಣು ಮಕ್ಕಳೂ ಎಲ್ಲರಂತೆಯೇ ಆತ್ಮವಿಶ್ವಾಸದಿಂದ ಬೆಳೆಯಬೇಕಾದಲ್ಲಿ ಲಿಂಗ ತಾರತಮ್ಯವನ್ನು ನಾವು ಸಂಪೂರ್ಣವಾಗಿ ನಿವಾರಿಸಬೇಕಾಗಿದೆ. ಹೆಣ್ಣು ಮಕ್ಕಳು ಹೊರಗಡೆಯೂ ಕೆಲಸ ಮಾಡುತ್ತಿದ್ದಾರೆಂದು ಹೆಮ್ಮೆ ಪಟ್ಟುಕೊಳ್ಳುವುದಷ್ಟೇ ಅಲ್ಲದೇ ಮನೆಕೆಲಸಗಳನ್ನು ಮಾಡುವ ಸಂಸ್ಕøತಿಯನ್ನೂ ತಾಯಂದಿರು ತಮ್ಮ ಗಂಡು ಮಕ್ಕಳಿಗೆ ಕಲಿಸಬೇಕಾಗಿದೆ. ಜೊತೆಯಲ್ಲಿ ಸ್ತ್ರೀಯರಿಗೆ ಗೌರವ ಕೊಡುವ ಪಾಠವನ್ನು ಹೇಳಿಕೊಡಬೇಕಾಗಿದೆ.
ಮಹಿಳೆಯರ ಚಿಂತನಾ ಲಹರಿಯನ್ನು ಬದಲಾಯಿಸಿ ಅವರಿಗೆ ಆರ್ಥಿಕ ನೆರವನ್ನು ನೀಡಿ ತನ್ಮುಖೇನ ಆತ್ಮವಿಶ್ವಾಸವನ್ನು ಮೂಡಿಸಿದ ಸ್ವಸಹಾಯ ಸಂಘ ಚಳುವಳಿ ಮಹಿಳಾ ಸಬಲೀಕರಣದ ಇತ್ತೀಚಿನ ಪ್ರಮುಖ ಗಾಥೆಯಾಗಿದೆ. ನಮ್ಮ ರಾಜ್ಯದಲ್ಲಿ ಖಂಡಿತವಾಗಿಯೂ ಈ ಚಳುವಳಿಯ ನೇತೃತ್ವವನ್ನು ವಹಿಸಿಕೊಂಡಿರುವವರು ಧರ್ಮಸ್ಥಳದ ಪೂಜ್ಯ ಹೆಗ್ಗಡೆ ದಂಪತಿಗಳು. ಶ್ರೀಮತಿ ಹೇಮಾವತಿ ಅಮ್ಮನವರು ಮಹಿಳೆಯರಿಗೆ ಉತ್ತಮ ವಿಚಾರಗಳನ್ನು ಬೋಧಿಸುವ ಜ್ಞಾನವಿಕಾಸ ಕಾರ್ಯಕ್ರಮವನ್ನು ಪ್ರಾರಂಭಿಸಿದರೆ, ಪೂಜ್ಯ ಹೆಗ್ಗಡೆಯವರು ಮಹಿಳೆಯರ ಪರವಾಗಿ ಖಾತ್ರಿ ನಿಂತು, ಅವರಿಗೆ ಬೇಕಾದ ಆರ್ಥಿಕ ನೆರವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಬೃಹತ್ ಪ್ರಗತಿನಿಧಿ ಕಾರ್ಯಕ್ರಮವೊಂದನ್ನು ಆಚರಣೆಗೆ ತಂದಿದ್ದಾರೆ. ಇವುಗಳ ಪರಿಣಾಮದಿಂದಾಗಿ ಬಹಳಷ್ಟು ಮಹಿಳೆಯರು ಸ್ವಉದ್ಯೋಗಗಳನ್ನು ಪ್ರಾರಂಭಿಸಿದ್ದಾರೆ. ತಮ್ಮ ಆರ್ಥಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಲ್ಲದೇ ಕುಟುಂಬದ ಅಗತ್ಯತೆಗೂ ಸಹಾಯ ಮಾಡುವ ಮಟ್ಟಿಗೆ ಮಹಿಳೆಯರು ಮುಂದುವರಿದಿದ್ದಾರೆ. ರಾಜ್ಯದಲ್ಲಿ 8 ಲಕ್ಷಕ್ಕೂ ಮಿಕ್ಕಿದ ಮಹಿಳೆಯರು ಕಿರು ಉದ್ದಿಮೆಗಳನ್ನು ಮಾಡಿದ್ದಾರೆ. ತನ್ಮೂಲಕ ತಮ್ಮ ಪರಿಸರದ ಇತರ ಮಹಿಳೆಯರಿಗೂ ಉದ್ಯೋಗಗಳನ್ನು ಅವರು ಒದಗಿಸುತ್ತಿದ್ದಾರೆ. ಬದುಕಿನಲ್ಲಿ ಸ್ವಸಹಾಯ ಸಂಘ ಚಳುವಳಿಯಿಂದ ಆತ್ಮವಿಶ್ವಾಸವನ್ನು ಪಡಕೊಂಡವರ ಸಂಖ್ಯೆ 40 ಲಕ್ಷಕ್ಕೂ ಮಿಕ್ಕಿದೆ. ಜ್ಞಾನವಿಕಾಸ ಕಾರ್ಯಕ್ರಮದ ಆಶಯದಂತೆ ಸರಕಾರದ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ಬಹಳಷ್ಟು ಮಹಿಳೆಯರು ಸಶಕ್ತರಾಗಿದ್ದಾರೆ.
ಇಷ್ಟೆಲ್ಲಾ ಆದರೂ ಮಹಿಳೆಯರ ಸಶಕ್ತೀಕರಣ ಆಗಿದೆಯೇ? ಎಂಬ ಪ್ರಶ್ನೆ ಉಳಿಯುತ್ತದೆ. ಕುಡುಕ ಗಂಡನೋರ್ವನಿಂದ ಹಿಂಸೆ ಅನುಭವಿಸಿದ ಹೆಣ್ಣುಮಗಳನ್ನಾಗಲೀ, ದುಷ್ಟನೋರ್ವನಿಂದ ದೌರ್ಜನ್ಯಕ್ಕೊಳಗಾದ ಯುವತಿಯೋರ್ವಳನ್ನಾಗಲೀ ಪ್ರಶ್ನಿಸಿದರೆ ಅವರಿಗೆ ಮಹಿಳಾ ಸಬಲೀಕರಣ ಎಂದರೆ ಏನೆಂಬುದೇ ಗೊತ್ತಿರಲಾರದು. ನಾವು ಓದುವ ಪತ್ರಿಕೆಗಳಲ್ಲಿಯೂ ಮತ್ತು ಮತ್ತು ಟಿ.ವಿ. ಧಾರಾವಾಹಿಗಳಲ್ಲಿಯೂ ಮಹಿಳಾ ದೌರ್ಜನ್ಯಗಳೇ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆಯುವುದರಿಂದ ಸಬಲೀಕರಣದ ನಿಜವಾದ ಭಾಷ್ಯ ಗೋಚರವಾಗುವುದಿಲ್ಲ.
ಒಂದು ಮಗುವನ್ನು ಸಮಾಜದ ಸುಸಂಸ್ಕತ ವ್ಯಕ್ತಿಯನ್ನಾಗಿ ಮಾಡುವಲ್ಲಿ ತಾಯಿಯ ಪಾತ್ರವೇ ಪ್ರಮುಖವೆಂದಾದ ಮೇಲೆ, ಸ್ತ್ರೀಯೊಬ್ಬಳು ಮಾನಸಿಕವಾಗಿ ಸಶಕ್ತಳಾಗಿಲ್ಲದಿದ್ದರೆ ಇದು ಸಾಧ್ಯವಿತ್ತೇ? ಹಾಗಿದ್ದರೆ ಸ್ವಯಂಸಂಕಷ್ಟಕ್ಕೆ ಒಳಗಾದಾಗ ಅವರೇಕೆ ಪರಾವಲಂಬಿಗಳಾಗ ಬಯಸುತ್ತಾರೆ? ಇದರರ್ಥ ಇಷ್ಟೇ – ಸ್ವಶಕ್ತಿಯನ್ನು ಕಾಣಲಾಗದ ಮೌಢ್ಯ ತಾಯಂದಿರನ್ನಾವರಿಸಿದೆ. ಈ ಪರದೆಯನ್ನು ಹರಿಯಲು ಅದೆಷ್ಟೋ ಕಾರ್ಯಕ್ರಮಗಳು ಮುಂದಾದರೂ, ಗಾಂಧಾರಿಯಂತೆ ಬಟ್ಟೆ ಕಟ್ಟಿಕೊಂಡಿರುವ ಮಹಿಳೆಯರಿಗೆ ದಾರಿ ಗೋಚರವಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಬದಲಾಗಬೇಕೆಂಬುವ ಹಂಬಲ ಪ್ರತಿಯೊಬ್ಬರ ಮನಸ್ಸಿನಾಳದಿಂದ ಪ್ರಾರಂಭವಾದಾಗ ಬದಲಾಗಲು ಮಾರ್ಗಗಳು ದೊರೆಯುತ್ತವೆ.
‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಈ ಸಂದರ್ಭದಲ್ಲಿ ನನ್ನೆಲ್ಲ ಸಹೋದರಿಯರು ಅಬಲೆ ಎಂಬ ಮೌಢ್ಯದ ಪರದೆಯನ್ನು ಹರಿದು ಸಬಲರಾಗುತ್ತಾರೆಂಬ ಆಶಯ ನನಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *