ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಯಾವುದೇ ಒಂದು ವಸ್ತುವಿನ ಸುವಾಸನೆಯನ್ನು ಗ್ರಹಿಸುವ ಕೆಲಸವನ್ನು ನಮ್ಮ ಪಂಚೇAದ್ರಿಯಗಳಲ್ಲಿ ಒಂದಾದ ಮೂಗು ಮಾಡುತ್ತದೆ. ಹಣ್ಣು, ತಿಂಡಿ, ಹೂವು, ಸುಗಂಧ ದ್ರವ್ಯ ಹೀಗೆ ಪ್ರತಿಯೊಂದು ಕೂಡಾ ತನ್ನದೇ ಆದ ವಿಶೇಷ ಪರಿಮಳವನ್ನು ಹೊಂದಿರುತ್ತದೆ. ಈ ‘ಪರಿಮಳ’ಗಳು ನಮ್ಮ ಬದುಕನ್ನು ಸದಾ ಉತ್ಸಾಹದಲ್ಲಿ ಇರುವಂತೆ ನೋಡಿಕೊಳ್ಳುತ್ತವೆ.
‘ಹಸಿವೇ ಆಗುತ್ತಿಲ್ಲ’ ಎನ್ನುವವರು ಊಟದ ಟೇಬಲ್ ಬಳಿ ಬಂದಾಗ ಬಗೆ-ಬಗೆಯ ಭಕ್ಷ್ಯಗಳ ಸುವಾಸನೆಗೆ ಮರುಳಾಗಿ ತಕ್ಷಣ ಊಟಕ್ಕೆ ತಯಾರಾಗುವುದಿದೆ. ಅಡುಗೆ ಮನೆ ಒಳಗಿನಿಂದ ಚಾವಡಿಗೆ ಬರುವ ಹಪ್ಪಳ, ಸಂಡಿಗೆ, ಬೋಂಡ, ಕರಿದ ತಿಂಡಿ, ಸಿಹಿತಿಂಡಿಗಳನ್ನು ತಯಾರಿಸುವಾಗಿನ ಸುವಾಸನೆಯನ್ನು ಗ್ರಹಿಸಿ ಆ ದಿನದ ಊಟದ ರುಚಿ ಹೇಗಿರಬಹುದೆಂದು ಮನಸ್ಸಿನಲ್ಲೆ ಲೆಕ್ಕ ಹಾಕುವವರಿದ್ದಾರೆ. ಊಟದ ಬಗ್ಗೆ ಚಿಂತನೆ, ನೋಟ, ಪರಿಮಳ ಎಲ್ಲವೂ ಬೇಕಾಗುತ್ತದೆ. ಆ ದಿನದ ಅಡುಗೆಯ ಬಗ್ಗೆ ಮನೆಯ ಹೆಂಗಸರು ಅಡುಗೆ ಮನೆಯಲ್ಲಿ ಮಾತನಾಡುವುದು ಕಿವಿಗೆ ಬಿದ್ದರೆ ಸಾಕು ಹಸಿವಾಗಲು ಆರಂಭವಾಗುತ್ತದೆ. ಆಹಾರದ ರುಚಿಯನ್ನು ಗ್ರಹಿಸುವುದು ನಾಲಿಗೆ ಆದರೂ ಅದಕ್ಕೆ ಪೂರಕವಾಗಿ ಬಾಕಿ ಇಂದ್ರೀಯಗಳೂ ಕೆಲಸ ಮಾಡುತ್ತವೆ.
ಮೀನು ಮಾರುವವಳಿಗೆ ಮೀನಿನ ವಾಸನೆ ಪ್ರಿಯವಾದರೆ, ಹೂವು ಮಾರುವವಳಿಗೆ ಹೂವಿನ ವಾಸನೆಯೇ ಹಿತ. ಬಾಲ್ಯದಲ್ಲಿ ನಾವು ಆಸೆ ಪಟ್ಟು ತಿನ್ನುತ್ತಿದ್ದ ಕೆಲವೊಂದು ಮಿಠಾಯಿಗಳು, ಲಡ್ಡು, ಚಕ್ಕುಲಿ ಇತ್ಯಾದಿಗಳ ನೆನಪಾದಾಗಲೆಲ್ಲ ನೆನಪಿನ ಜೊತೆ ಅದರ ಸುವಾಸನೆಯೂ ತೇಲಿ ಬರುತ್ತದೆ. ಮಾವು, ಹಲಸು ಹಣ್ಣಾಗುವ ಋತುಗಳಲ್ಲಿ ಮನೆ ತುಂಬಾ ಅದರದ್ದೇ ಪರಿಮಳ ಆವರಿಸಿರುತ್ತದೆ. ಮನೆಯಲ್ಲಿ ತುಪ್ಪ ಹಾಕಿ ಮಾಡಿದ ಮಸಾಲ ದೋಸೆಯ ಪರಿಮಳಕ್ಕಿಂತ ಹೋಟೆಲ್ ಪಕ್ಕದಲ್ಲಿ ಹಾದು ಹೋಗುವಾಗ ನಮ್ಮ ಮೂಗಿಗೆ ಬಡಿಯುವ ಮಸಾಲ ದೋಸೆ ಪರಿಮಳವೇ ಹಿತವಾಗಿರುತ್ತದೆ. ಬೇಕರಿಯಲ್ಲಿ ಬೇಯುತ್ತಿರುವ ಬ್ರೆಡ್, ಹೊಟೇಲ್ನ ಕಾಫಿಯ ಪರಿಮಳ ಗಿರಾಕಿಗಳನ್ನು ತನ್ನತ್ತ ಆಕರ್ಷಿಸುತ್ತದೆ. ಹಿಂದಿನ ಕಾಲದಲ್ಲಿ ಹಳ್ಳಿ ಮನೆಗಳಲ್ಲಿ ದೊಡ್ಡದಾದ ಮಣ್ಣಿನ ಪಾತ್ರೆಗಳಲ್ಲಿ ಮಾಡುತ್ತಿದ್ದ ಗಂಜಿ, ಸಾಂಬಾರಿಗೆ ಅದರದ್ದೇ ಆದ ಪರಿಮಳ ಇರುತ್ತಿತ್ತು. ಆದರೆ ಸಣ್ಣ ಪಾತ್ರೆಯಲ್ಲಿ ಮಾಡಿದ ಗಂಜಿ, ಸಾಂಬಾರಿಗೆ ಆ ಪರಿಮಳ, ರುಚಿ ಇರುವುದಿಲ್ಲ.
ಅಮ್ಮನ ಸೀರೆಗೆ, ಅಪ್ಪನ ಶರ್ಟಿಗೆ ಅದರದ್ದೇ ಆದ ಪರಿಮಳ ಇರುತ್ತದೆ. ಚಿಕ್ಕಂದಿನಲ್ಲಿ ಅಮ್ಮ ಇಲ್ಲದಾಗ ಅವಳ ಹಳೆಯ ಸೀರೆಯನ್ನು ಹೊದ್ದು ಮಲಗಿದರೆ ಸಾಕು ಅವಳೇ ಪಕ್ಕದಲ್ಲಿ ಇದ್ದಂತಹ ಹಿತಾನುಭವ. ಮೊದಲ ಮಳೆ ಬಂದಾಗ ಭೂಮಿ ಸೂಸುವ ಪರಿಮಳಕ್ಕೆ ಸರಿಸಾಟಿ ಯಾವುದು ಇಲ್ಲ. ಆದರೆ ಇಂದು ಮೊದಲ ಮಳೆಯ ನೀರು ಸಿಮೆಂಟ್, ಡಾಂಬಾರು ಹಾಕಿದ ರಸ್ತೆ, ಕಾಂಕ್ರೀಟ್ ಮೇಲೆ ಬೀಳುತ್ತಿರುವುದರಿಂದ ಆ ಸುಗಂಧ ಸಿಗುವುದು ಕಷ್ಟಸಾಧ್ಯವಾಗಿದೆ. ಕೆಲವು ವಾಸನೆಗಳು ಕೆಲವರಿಗೆ ಹಿತವೆನಿಸಿದರೆ ಮತ್ತೆ ಕೆಲವರಿಗೆ ಅಲರ್ಜಿಯನ್ನುಂಟು ಮಾಡುವುದೂ ಇದೆ. ಗರ್ಭಿಣಿಯರಿಗೆ ಕೆಲವೊಂದು ವಾಸನೆಗಳು ಹಿತವೆನಿಸುವುದಿಲ್ಲ. ಅವು ವಾಂತಿಗೆ ಕಾರಣವಾಗುತ್ತವೆ. ಕೆಲವರಿಗೆ ಸಂಪಿಗೆ ಇಷ್ಟವಾದರೆ ಕೆಲವರಿಗೆ ಅದರ ಪರಿಮಳದಿಂದಲೇ ತಲೆನೋವು ಬರುವುದಿದೆ. ಹಾಗೆಯೇ ಸುಗಂಧರಾಜನ ಪರಿಮಳವನ್ನು ಇಷ್ಟಪಡದವರು ಇದ್ದಾರೆ. ಕೆಲವರಿಗೆ ಹಲಸಿನ ಹಣ್ಣಿನ ಪರಿಮಳ ಇಷ್ಟವಾದರೆ ಕೆಲವರಿಗೆ ಅದರ ವಾಸನೆ ವಾಂತಿಯನ್ನು ತರಿಸಬಲ್ಲದು. ಸುಗಂಧ ದ್ರವ್ಯಗಳು ಕೆಲವರಿಗೆ ಇಷ್ಟವಾದರೆ ಕೆಲವರ ತಲೆನೋವಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರ ವಾಸನೆಯ ಸಾಮರ್ಥ್ಯ ಮತ್ತು ಗ್ರಹಿಕೆ ಬೇರೆ ಬೇರೆ ಆಗಿರುತ್ತದೆ. ಪ್ರಯಾಣದ ವೇಳೆ ವಾಂತಿ ಬರುವವರು ಕೈಯಲ್ಲೊಂದು ನಿಂಬೆಹುಳಿ ಹಿಡಿದುಕೊಂಡು ಅದರ ಸುವಾಸನೆಯನ್ನು ಗ್ರಹಿಸುತ್ತಾರೆ. ಮನುಷ್ಯನ ಮೆದುಳು ಹತ್ತು ಸಾವಿರದಷ್ಟು ವಾಸನೆಗಳನ್ನು ಗ್ರಹಿಸಬಲ್ಲ ಶಕ್ತಿ ಹೊಂದಿದೆಯoತೆ. ಗ್ಯಾಸ್ ಹೊರ ಸೂಸುತ್ತಿದ್ದರೆ, ವಿದ್ಯುತ್ ವಯರ್ ಸುಟ್ಟಿದ್ದರೆ, ಬೆಂಕಿ ಹತ್ತಿದ್ದರೆ ಕೆಲವೊಮ್ಮೆ ಅಪಾಯದ ಮುನ್ನೆಚ್ಚರಿಕೆಯನ್ನು ಕೊಡುವುದು ಈ ವಾಸನಾ ಶಕ್ತಿ. ಹಾಗೆಯೇ ದೇವರ ಮನೆಯಲ್ಲಿ ಹಚ್ಚಿಟ್ಟ ಧೂಪ, ಅಗರಬತ್ತಿ, ಕರ್ಪೂರದ ಪರಿಮಳ ಇತ್ಯಾದಿಗಳು ಮನಸ್ಸಿನಲ್ಲಿ ಆಧ್ಯಾತ್ಮಿಕ ಭಾವನೆಗಳನ್ನು ಮೂಡಿಸಬಲ್ಲವು.
ನಾವೆಲ್ಲಾ ಚಿಕ್ಕಂದಿನಲ್ಲಿ ಒಲೆಯಲ್ಲಿ ಕಾಯಿಸಿದ ಹಂಡೆ ನೀರಿನ ಸ್ನಾನ ಮಾಡುತ್ತಿದ್ದವರು. ಆಗ ಆ ನೀರಿಗೊಂದು ವಿಶೇಷ ಪರಿಮಳವಿತ್ತು. ವಿದ್ಯುತ್, ಸೋಲಾರ್ ನೀರಿನಲ್ಲಿ ಸ್ನಾನ ಮಾಡುವ ಈ ದಿನಗಳಲ್ಲಿ ಆ ಪರಿಮಳ ಸಿಗಲಾರದು. ಕೆಂಡದಲ್ಲಿ ಹಾಕಿ ಉಬ್ಬಿಸಿದ ರೊಟ್ಟಿ, ಬದನೆ, ಗೆಣಸು, ಹಪ್ಪಳ ಇವನ್ನೆಲ್ಲಾ ಈಗ ಗ್ಯಾಸ್ ಒಲೆಯ ಮೇಲೆ ಹಾಕಿ ಸುಟ್ಟರೂ ಆ ಪರಿಮಳ ಬರುವುದಕ್ಕೆ ಸಾಧ್ಯವಿಲ್ಲ.
ಸಣ್ಣ ಮಗುವಿನ ಮೈ ವಾಸನೆಯೇ ಆಹ್ಲಾದಕರ. ಜಾನ್ಸನ್ ಬೇಬಿ ಪೌಡರ್, ಲೋಭಾನದ ಹೊಗೆ ಎಲ್ಲಾ ಸೇರಿ ಮಗು-ಬಾಣಂತಿ ಇದ್ದ ಮನೆಯಲ್ಲಿ ವಿಶೇಷವಾದ ಪರಿಮಳವೊಂದು ಹರಡಿಕೊಂಡಿರುತ್ತದೆ. ಇತ್ತೀಚೆಗಂತೂ ಸುಖ ನಿದ್ರೆಗೆ, ಮನಸ್ಸು ಶಾಂತವಾಗಿಸಲು, ಮನೆ ತುಂಬಾ ಪರಿಮಳವನ್ನು ಪಸರಿಸಲು, ನೆಮ್ಮದಿ, ಒತ್ತಡ ನಿವಾರಣೆಗೆ ಹೀಗೆ ನಾನಾ ರೀತಿಯ, ನಾನಾ ಪರಿಮಳದ ಸುಗಂಧ ದ್ರವ್ಯಗಳು, ಎಣ್ಣೆಗಳು, ಕ್ರೀಮ್ಗಳು, ಕ್ಯಾಂಡಲ್ಗಳು, ಸೋಪು, ಶ್ಯಾಂಪ್ಗಳು ಲಭ್ಯವಿದೆ. ಕೃತಕ ಬಣ್ಣ, ಸುವಾಸನೆಗಳು ಮಾರುಕಟ್ಟೆಗೆ ಬಂದ ಬಳಿಕವಂತೂ ನೈಜ ಪರಿಮಳಗಳು ದೂರವಾಗಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ಇದೀಗ ಎಲ್ಲಾ ಋತುಗಳಲ್ಲೂ ಎಲ್ಲಾ ಹಣ್ಣುಗಳ ಪರಿಮಳವನ್ನು ಹೊಂದಿರುವ ಪಾನೀಯ, ಐಸ್ಕ್ರೀಮ್ಗಳು ಲಭ್ಯವಿದೆ.
ಶ್ವಾನ ಕರ್ತವ್ಯ ನಿಷ್ಠೆ, ಪ್ರೀತಿ, ನಂಬಿಕೆಗೆ ಎಷ್ಟು ಹೆಸರುವಾಸಿಯೋ ಹಾಗೆಯೇ ಅದು ವಾಸನಾ ಗ್ರಹಣಶಕ್ತಿಗೂ ಅಷ್ಟೇ ಹೆಸರುವಾಸಿ. ಆದ್ದರಿಂದಲೇ ಇಂದು ಪೊಲೀಸ್ ಇಲಾಖೆ, ಸೈನ್ಯದಲ್ಲಿ ಶ್ವಾನಗಳ ಬಳಕೆಯಾಗುತ್ತಿದೆ. ತಮ್ಮ ವಾಸನಾಶಕ್ತಿಯಿಂದಲೇ ಕಳ್ಳರ ಸುಳಿವು ನೀಡುವ, ಕಳ್ಳರನ್ನು ಪತ್ತೆಹಚ್ಚುವ ಕೆಲಸವನ್ನು ಇವು ಮಾಡುತ್ತವೆ. ಹೀಗೆ ಪ್ರಾಣಿಗಳಲ್ಲೂ ಕೂಡಾ ವಿಶೇಷವಾದ ವಾಸನೆಯನ್ನು ಆಸ್ವಾದಿಸುವ, ಗ್ರಹಿಸುವ ಶಕ್ತಿ ಇದೆ.
ಎಲ್ಲಾ ಇಂದ್ರಿಯಗಳoತೆ ವಾಸನೆಯನ್ನು ಗ್ರಹಿಸುವ ಇಂದ್ರಿಯದ ಕೆಲಸ ಅಷ್ಟಿಷ್ಟಲ್ಲ. ಒಟ್ಟಿನಲ್ಲಿ ಪಂಚೇAದ್ರಿಯಗಳಲ್ಲಿ ಒಂದು ಶ್ರೇಷ್ಠ, ಇನ್ನೊಂದು ಕನಿಷ್ಠ ಎನ್ನುವಂತಿಲ್ಲ. ಎಲ್ಲವೂ ಸುಸ್ಥಿರ ಸ್ಥಿತಿಯಲ್ಲಿದ್ದಾಗ ಮಾತ್ರ ಮನುಷ್ಯನೂ ಸುಖವಾಗಿರಬಲ್ಲ.
