ಸಾಮೂಹಿಕ ವಿವಾಹಗಳ ರೂವಾರಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವದಲ್ಲಿ ಪ್ರಾರಂಭಗೊAಡ ‘ಸಾಮೂಹಿಕ ವಿವಾಹ’ ಕಾರ್ಯಕ್ರಮಕ್ಕೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. ದಾನ ಪರಂಪರೆಯ ಧರ್ಮಸ್ಥಳ ಕ್ಷೇತ್ರದ ‘ಹೆಗ್ಗಡೆ’ ಜವಾಬ್ದಾರಿಯನ್ನು ೧೯೬೮ರಲ್ಲಿ ವಹಿಸಿಕೊಂಡ ಪೂಜ್ಯ ವೀರೇಂದ್ರ ಹೆಗ್ಗಡೆಯವರದ್ದು ದೂರದೃಷ್ಟಿಯ ಮನೋಭಾವ. ಅಗತ್ಯವಿದ್ದವರಿಗೆ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಅವರು ದಾರ್ಶನಿಕರೇ ಸರಿ. ಎರಡು ಹೊತ್ತಿನ ಊಟ ಮಾಡುವುದೇ ಕಷ್ಟವಾಗಿದ್ದ ಆ ದಿನಗಳಲ್ಲಿ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ವಿವಾಹ ಕಾರ್ಯಕ್ರಮಕ್ಕೆ ಹಣ ಹೊಂದಿಸಲಾಗದೆ ಸಾಲದ ಶೂಲದಲ್ಲಿ ಮುಳುಗುತ್ತಿದ್ದ ಕಾಲದಲ್ಲಿ ಪೂಜ್ಯರು ಪ್ರಾರಂಭಿಸಿದ ಕಾರ್ಯಕ್ರಮವೇ ‘ಸಾಮೂಹಿಕ ವಿವಾಹ.’ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜ್ಯ ದಂಪತಿಗಳೇ ಮುಂದೆ ನಿಂತು ನವಜೋಡಿಗಳಿಗೆ ಕಂಕಣ ಭಾಗ್ಯ ಒದಗಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಹಿಂದು ಸಂಪ್ರದಾಯದAತೆ ವರ – ವಧುವಿಗೆ ಅಲಂಕಾರಿಕ ವಸ್ತುಗಳು ಮತ್ತು ದಿಬ್ಬಣಕ್ಕೆ ಭೂರಿಭೋಜನ ಎಲ್ಲವನ್ನೂ ಕ್ಷೇತ್ರದ ಪ್ರಸಾದದ ರೂಪದಲ್ಲಿ ಪೂಜ್ಯರು ಒದಗಿಸಿದ್ದರಿಂದ ಸಹಸ್ರಾರು ಕುಟುಂಬಗಳು ತಮ್ಮ ಜಮೀನನ್ನು ಒತ್ತೆ ಇಟ್ಟು ಮದುವೆ ಮಾಡಿಸುವ ಸಂಕಷ್ಟ ತೊಲಗಿದೆ. ನಂತರದ ದಿನಗಳಲ್ಲಿ ಅನೇಕ ಸಂಘ- ಸಂಸ್ಥೆಗಳು, ಸಮಾಜದವರು, ಗಣ್ಯರು ಸಾಮೂಹಿಕ ವಿವಾಹವನ್ನು ಅನುಸರಿಸಿದರೂ ಶ್ರೀಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹದ ಆಕರ್ಷಣೆಯೇನೂ ಕಡಿಮೆಯಾಗಿಲ್ಲ.
ಆದರೆ ಹಿಂದಿನ ದಿನಗಳಲ್ಲಿ ಪೂಜ್ಯರೇ ಪ್ರಾರಂಭಿಸಿದ ‘ಗ್ರಾಮಾಭಿವೃದ್ಧಿ ಯೋಜನೆ’ ಮತ್ತು ‘ರುಡ್‌ಸೆಟ್’ ಕಾರ್ಯಕ್ರಮಗಳಿಂದ ಸಬಲೀಕೃತರಾದ ಕುಟುಂಬಗಳು ವಿವಾಹ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವುದನ್ನು ನೋಡುವಾಗ ಆಶ್ಚರ್ಯವೂ, ನೋವೂ, ಬೇಸರವೂ ಒಮ್ಮೆಲೇ ಆಗುತ್ತದೆ. ಪೂಜ್ಯರು ಆರಂಭಿಸಿದ ಕಾರ್ಯಕ್ರಮದ ಉದ್ದೇಶ ವಿವಾಹ ಕಾರ್ಯಕ್ರಮದಲ್ಲಿ ದುಂದುವೆಚ್ಚ ಆಗಬಾರದು, ಹೊರೆಯಾಗಬಾರದು, ಸರಳವಾಗಿರಬೇಕೆಂಬುದಾಗಿದೆ. ಆದರೆ ಅವರಿಂದಲೇ ಶಕ್ತಿ ಪಡೆದ ಕುಟುಂಬಗಳು ಸಾಮೂಹಿಕ ವಿವಾಹದ ಹಿಂದಿರುವ ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ತಮ್ಮ ಕೌಟುಂಬಿಕ ವಿವಾಹ ಕಾರ್ಯಕ್ರಮದಲ್ಲಿ ದುಂದುವೆಚ್ಚ ಮಾಡುತ್ತಿದ್ದಾರೆ. ‘ವಿವಾಹ’ ಎಂದರೆ ಎರಡು ಆತ್ಮಗಳ ಪವಿತ್ರ ಬಂಧನ. ಹಿರಿಯರ ಶ್ರೀರಕ್ಷೆ ಮತ್ತು ದೇವರ ಆಶೀರ್ವಾದದೊಂದಿಗೆ ಕುಟುಂಬ ಜೀವನದಲ್ಲಿ ಅಂತ್ಯದವರೆಗೂ ಜೊತೆಯಾಗಿಯೇ ಸಾಗಬೇಕೆಂಬ ಹಾರೈಕೆ. ಇದಕ್ಕೆ ಆಡಂಬರದ ಅಗತ್ಯವಿಲ್ಲ. ಕೃತಕ ಭಾವನೆಗಳ ಲೇಪ ಬೇಕಾಗಿಲ್ಲ. ಹೀಗಿರುವಾಗ ಅದ್ದೂರಿಯ ವಿವಾಹಗಳಿಗೆ ಖರ್ಚು ಮಾಡುವ ಹಣವನ್ನು ಪೋಷಕರು ವಧು – ವರರಿಗೆ ಅಭಿವೃದ್ಧಿ ಹೊಂದಲು ಬಂಡವಾಳವಾಗಿ ನೀಡಿದಲ್ಲಿ ಅವರ ಬದುಕು ಬಂಗಾರವಾಗಬಹುದು.
ಈ ನಿಟ್ಟಿನಲ್ಲಿ ನಮ್ಮ ಸ್ವಸಹಾಯ ಸಂಘಗಳ ಸದಸ್ಯರು ಆಲೋಚಿಸಬೇಕೆಂಬುದೇ ನಮ್ಮ ಆಶಯ. ಆಡಂಬರಗಳಿಗೆ ಕಡಿವಾಣ ಹಾಕೋಣ. ಕೊರೊನಾ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ನಮ್ಮ ದೇಶದಲ್ಲಿ ಇನ್ನೂ ಒಂದು ದಶಕದ ಕಾಲ ಹಣದುಬ್ಬರವನ್ನು ಎದುರಿಸಬೇಕಾಗಬಹುದು. ‘ಒಂದು ರೂಪಾಯಿಯ ಉಳಿತಾಯ ನಾಲ್ಕು ರೂಪಾಯಿಯ ದುಡಿತಕ್ಕೆ ಸಮ.’ ಪೂಜ್ಯರ ಆಶಯದಂತೆ ನಮ್ಮ ಕುಟುಂಬದಲ್ಲಿ ನಡೆಯುವ ವಿವಾಹ ಇತ್ಯಾದಿ ಕಾರ್ಯಕ್ರಮಗಳನ್ನು ಮುಂದಿನ ಕೆಲ ವರ್ಷಗಳಾದರೂ ಸರಳವಾಗಿ ಆಚರಿಸುವ ನಿರ್ಣಯವನ್ನು ಕೈಗೊಳ್ಳೊಣವೇ?

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *