ಕಾಸರಗೋಡಿನ ನವಜೀವನ ಸದಸ್ಯರ ಮಾದರಿ ಪ್ರಯತ್ನ
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮಾದರಿಗಳನ್ನು ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗಬೇಕೆಂಬುವುದು ಯೋಜನೆಯ ಮೂಲ ಆಶಯವಾಗಿದೆ. ಇದೀಗ ಯೋಜನೆಯ ಮಾದರಿ ಕಾರ್ಯಕ್ರಮಗಳು ದೇಶದಲ್ಲಿ ಮಾತ್ರವಲ್ಲದೆ ವಿದೇಶಿಗರ ಗಮನವನ್ನು ಸೆಳೆದಿವೆ. ಶ್ರೀಲಂಕಾದ ಅಧ್ಯಯನ ತಂಡವೊoದು ಇಲ್ಲಿನ ಮಾದರಿಗಳನ್ನು ಅಧ್ಯಯನ ನಡೆಸಿ ತನ್ನ ದೇಶದಲ್ಲೂ ಅಳವಡಿಸಲು ಉತ್ಸುಕತೆ ತೋರಿದ್ದು ಈ ಮಾತಿಗೆ ಸಾಕ್ಷಿಯಾಗಿದೆ. ಶ್ರದ್ಧಾಕೇಂದ್ರಗಳ ಸ್ವಚ್ಛತೆ, ಕೆರೆಗಳ ಸಂರಕ್ಷಣೆ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿ ಹೀಗೆ ಕೆಲವೊಂದು ಕಾರ್ಯಕ್ರಮಗಳನ್ನು ಈಗಾಗಲೇ ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮಾತಿಗೆ ಪೂರಕವಾಗಿ ‘ಜಿಲ್ಲಾ ನವಜೀವನ ಸಮಿತಿ ಕಾಸರಗೋಡು’ ಇದರ ಸದಸ್ಯರು ವಿನೂತನ ಪ್ರಯತ್ನವೊಂದರ ಮೂಲಕ ಗಮನವನ್ನು ಸೆಳೆದಿದ್ದಾರೆ.
ಕಾಸರಗೋಡಿನ ಬದಿಯಡ್ಕದಲ್ಲಿ ‘ಸೌಪರ್ಣಿಕಾ ನವಜೀವನ ಸಮಿತಿ’ಯೊಂದಿದೆ. ಮೊದಲ ಬಾರಿಗೆ ನವಜೀವನ ಸಮಿತಿಗಾಗಿ ಸ್ವಂತ ಕಚೇರಿಯನ್ನು ತೆರೆದ ಹೆಗ್ಗಳಿಕೆ ಈ ಸಮಿತಿಯದ್ದು. ಕಳೆದ ಹನ್ನೊಂದು ವರ್ಷಗಳಿಂದ ಸಮಿತಿ ಸದಸ್ಯರ ಮಾಸಿಕ ಸಭೆ, ವಾರ್ಷಿಕೋತ್ಸವದ ಹೆಸರಿನಲ್ಲಿ ಅಸಹಾಯಕರಿಗೆ ನೆರವು, ಮದ್ಯವರ್ಜನ ಶಿಬಿರಗಳಿಗೆ ಸೇರಿಸುವ (ನವೆಂಬರ್ 2022ರ ನಿರಂತರದಲ್ಲಿ ಈ ಸಮಿತಿ ಕುರಿತು ವಿಸ್ತೃತ ಲೇಖನ ಪ್ರಕಟಗೊಂಡಿದೆ.) ಮುಂತಾದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ರೂ. 19 ಲಕ್ಷ ಮೊತ್ತದ ನೆರವನ್ನು ಅಸಹಾಯಕರಿಗೆ ನೀಡಿರುವುದು ಇವರ ಸಮಾಜಮುಖಿ ಕೆಲಸಗಳಿಗೆ ಸಾಕ್ಷಿ. ಇದೀಗ ಇವರ ಕಲ್ಪನೆಗೆ ಹೊಸಗರಿಯೊಂದು ಸೇರಿಕೊಂಡಿದೆ.
ಸುವರ್ಣ ಸಂಭ್ರಮದಲ್ಲಿ ಉದಯಿಸಿದ ಹೊಸ ಕನಸು
ಸೌಪರ್ಣಿಕಾ ನವಜೀವನ ಸಮಿತಿಯ ಸದಸ್ಯರಾದ ಯಕ್ಷಗಾನ ಕಲಾವಿದ ಜಯರಾಮ ಪಾಟಳಿಯವರ 50ನೇ ವರ್ಷದ ‘ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ನವಜೀವನ ಸಮಿತಿಯ ಸದಸ್ಯರೆಲ್ಲ ಸೇರಿ ಅದ್ಧೂರಿಯಾಗಿ ಆಚರಿಸಿದರು. ಆ ದಿನಗಳಲ್ಲೇ ನವಜೀವನ ಸಮಿತಿಯ ಸದಸ್ಯರೋರ್ವರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಕೇವಲ ಇಪ್ಪತ್ತು ದಿನಗಳಲ್ಲಿ ಏಳು ನವಜೀವನ ಸಮಿತಿ ಸದಸ್ಯರು ದೊಡ್ಡ ಮೊತ್ತವನ್ನು ಸಂಗ್ರಹಿಸಿ ಅವರಿಗೆ ನೆರವಾದರು. ಮುಂದಕ್ಕೆ ಇನ್ನಿಬ್ಬರ ಆರೋಗ್ಯ ಸಮಸ್ಯೆಗಳಿಗೂ ಇದೇ ರೀತಿ ನೆರವನ್ನು ಒದಗಿಸಿದರು. ಎರಡು ತಾಲೂಕುಗಳ ನವಜೀವನ ಸಮಿತಿಯ ಸದಸ್ಯರುಗಳ ಈ ಒಗ್ಗಟ್ಟನ್ನು ಇದೇ ರೀತಿ ಮುಂದುವರಿಸಿಕೊoಡು ಹೋಗಬೇಕೆನ್ನುವ ನಿಟ್ಟಿನಲ್ಲಿ ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿರುವ ಏಳು ನವಜೀವನ ಸಮಿತಿಯವರು ಜೊತೆ ಸೇರಿ ಒಂದಷ್ಟು ಚರ್ಚೆಗಳನ್ನು ನಡೆಸಿದರು.
ಒಗ್ಗೂಡಿದವು ಏಳು ನವಜೀವನ ಸಮಿತಿಗಳು : ಕಾಸರಗೋಡು ತಾಲೂಕಿನ ಸೌಪರ್ಣಿಕ ನವಜೀವನ ಸಮಿತಿ ಬದಿಯಡ್ಕ ವಲಯ, ಕುತ್ಯಾಳಶ್ರೀ ನ.ಸ. ಕೂಡ್ಲು ಕಾಸರಗೋಡು ವಲಯ, ಮಲ್ಲಂಬಿಕಾ ನ.ಸ. ಮಲ್ಲ, ಶ್ರೀ ಮಂಜುನಾಥ ನ.ಸ. ಅಡೂರು, ಮಂಜೇಶ್ವರ ತಾಲೂಕಿನ ಶ್ರೀ ಮಹಾದೇವ ಸಮಿತಿ ಕಾಳತ್ತೂರು, ಜ್ಞಾನಜ್ಯೋತಿ ನ.ಸ. ಲಾಲ್ಬಾಗ್, ವೈಶಾಲಿ ನ.ಸ. ಪೆರ್ಲ ಹೀಗೆ ಒಟ್ಟು ಎರಡು ತಾಲೂಕುಗಳ ಏಳು ನವಜೀವನ ಸಮಿತಿಯ ೯೦ ಮಂದಿ ಸದಸ್ಯರು ಜೊತೆಯಾದರು. ಕಾಸರಗೋಡು ಮತ್ತು ಮಂಜೇಶ್ವರದ ಏಳು ನವಜೀವನ ಸಮಿತಿಯ ಸದಸ್ಯರನ್ನೊಳಗೊಂಡ ಈ ಸಮಿತಿಗೆ ‘ಜಿಲ್ಲಾ ನವಜೀವನ ಸಮಿತಿ ಕಾಸರಗೋಡು’ ಎಂದು ನಾಮಕರಣವನ್ನು ಮಾಡಲಾಯಿತು.
ಎಲ್ಲರಿಗೂ ಸಮಾನ ಗೌರವ : ಸಮಿತಿಯ ಎಲ್ಲಾ ಸದಸ್ಯರಿಗೆ ಸಮಾನ ಸ್ಥಾನಮಾನ, ಗೌರವ ನೀಡುವ ನಿಟ್ಟಿನಲ್ಲಿ ಇವರ ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹೀಗೆ ಯಾವುದೇ ಸ್ಥಾನಗಳಿಲ್ಲ. ಪ್ರತಿಯೊಬ್ಬರು ಅಧ್ಯಕ್ಷರೆಂಬ ನಿಟ್ಟಿನಲ್ಲಿ ಸಮಾನರಾಗಿ ದುಡಿಯುತ್ತಾರೆ.
ಉದ್ದೇಶ : ಕಷ್ಟಕಾಲದಲ್ಲಿ, ತುರ್ತು ಸಂದರ್ಭಗಳಲ್ಲಿ ಪರಸ್ಪರ ಸಹಕಾರ ನೀಡುವುದು, ತಮ್ಮಲ್ಲಿ ನಾಯಕತ್ವ ಗುಣಗಳನ್ನು ರೂಪಿಸಿಕೊಳ್ಳುವುದು, ವರ್ಷದಲ್ಲಿ ಎರಡು ಕಾರ್ಯಕ್ರಮಗಳಂತೆ ಎರಡು ತಾಲೂಕಿನಲ್ಲೂ ಒಂದೊoದು ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ನವಜೀವನ ಸಮಿತಿ ಸದಸ್ಯರು ಸದಾ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುವುದು ಇಲ್ಲಿನ ಪ್ರಮುಖ ಉದ್ದೇಶ.
ಶ್ರೀ ಹೆಗ್ಗಡೆಯವರ ಭೇಟಿ : ತಮ್ಮ ಯೋಚನೆಗಳನ್ನು ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯರವರ ಮುಂದಿತ್ತರು. ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾÊಸ್ರವರಲ್ಲೂ ಚರ್ಚಿಸಿದರು. ನಂತರ ಸಮಿತಿ ಸದಸ್ಯರೆಲ್ಲ ಸೇರಿ ಶ್ರೀ ಹೆಗ್ಗಡೆಯವರನ್ನು ಭೇಟಿಯಾಗಿ ಅವರ ಮಾರ್ಗದರ್ಶನವನ್ನು ಪಡೆದರು.
ಮದ್ಯಮುಕ್ತರಿಂದ ಮದ್ಯವರ್ಜನ ಶಿಬಿರ : ಮದ್ಯವರ್ಜನ ಶಿಬಿರ ಮತ್ತು ನವಜೀವನೋತ್ಸವ ಹೀಗೆ ಪ್ರತಿ ವರ್ಷ ಎರಡು ಕಾರ್ಯಕ್ರಮಗಳನ್ನು (ಒಂದು ಮಂಜೇಶ್ವರದಲ್ಲಿ ನಡೆದರೆ ಇನ್ನೊಂದು ಕಾಸರಗೋಡಿನಲ್ಲಿ) ನಡೆಸುವ ನಿಟ್ಟಿನಲ್ಲಿ ತೀರ್ಮಾನಿಸಿದರು. ಎಲ್ಲಿ ಶಿಬಿರಗಳು ನಡೆಯುತ್ತವೆಯೋ ಆ ವಲಯದ ನವಜೀವನ ಸಮಿತಿಯ ಸದಸ್ಯರು ಮದ್ಯವರ್ಜನ ಶಿಬಿರದ ಅಧ್ಯಕ್ಷರು, ಕೋಶಾಧಿಕಾರಿ ಆಗಬೇಕೆಂಬ ನಿರ್ಧಾರಕ್ಕೆ ಎಲ್ಲರ ಸಹಮತ ಒಪ್ಪಿಗೆಯಾಯಿತು.
ಆರ್ಥಿಕ ಸಂಪನ್ಮೂಲ : ಮದ್ಯವರ್ಜನ ಶಿಬಿರ ನಡೆಸುವುದೆಂದರೆ ಅಷ್ಟು ಸುಲಭದ ಮಾತಲ್ಲ. ಅವಿರತವಾಗಿ ದುಡಿಯಬಲ್ಲ ಸ್ವಯಂ ಸೇವಕರ ತಂಡದೊoದಿಗೆ ಸುಮಾರು ನಾಲ್ಕರಿಂದ ಏಳೆಂಟು ಲಕ್ಷ ರೂಪಾಯಿಯವರೆಗೆ ಆರ್ಥಿಕ ಸಂಪನ್ಮೂಲವು ಬೇಕು. ಈ ನಿಟ್ಟಿನಲ್ಲಿ ಪ್ರತಿ ಶಿಬಿರಾರ್ಥಿಯಿಂದ ತಲಾ ರೂ. 1 ಸಾವಿರ ಶುಲ್ಕ ಮತ್ತು ಇತರರು ನೀಡುವ ದೇಣಿಗೆಯನ್ನು ಸ್ವಿಕರಿಸಿ ಉಳಿದ ಮೊತ್ತವನ್ನು ನವಜೀವನದ 90 ಮಂದಿ ಸದಸ್ಯರು ನೀಡುವುದೆಂದು ತೀರ್ಮಾನಿಸಲಾಯಿತು.
66 ಮಂದಿಗೆ ನವಜೀವನ : ಒಂದೇ ತಿಂಗಳಲ್ಲಿ ಎಲ್ಲ ಸಿದ್ಧತೆಗಳು ನಡೆದು ಇದೀಗ ಜೂನ್ 02ರಿಂದ ಜೂನ್ 09ರವರೆಗೆ ಕಾಸರಗೋಡಿನ ಅಣಂಗೂರಿನಲ್ಲಿ ಮದ್ಯವರ್ಜನ ಶಿಬಿರವು ನಡೆದಿದೆ. ನವಜೀವನ ಸಮಿತಿಯವರಿಂದಲೇ ನಡೆದ ಈ ಶಿಬಿರಕ್ಕೆ ಜನಜಾಗೃತಿ ವೇದಿಕೆ ಮಾಹಿತಿ, ಮಾರ್ಗದರ್ಶದೊಂದಿಗೆ ಶಿಬಿರಾಧಿಕಾರಿಗಳ ತಂಡವನ್ನು ವ್ಯವಸ್ಥೆಗೊಳಿಸಿದೆ. 66 ಮಂದಿ ಶಿಬಿರದ ಪ್ರಯೋಜನವನ್ನು ಪಡೆದಿದ್ದಾರೆ.
ಉತ್ತಮ ಸ್ಪಂದನೆ : ಮದ್ಯಮುಕ್ತರೆ ಶಿಬಿರ ನಡೆಸುವುದನ್ನು ಕೇಳಿ ಒಂದಷ್ಟು ಮಂದಿ ತಾವು ಅಮಲುಮುಕ್ತರಾಗುವ ಕನಸನ್ನೊತ್ತು ಶಿಬಿರವನ್ನು ಸೇರಿದ್ದಾರೆ. ಊರವರಿಂದ ಉತ್ತಮ ಸ್ಪಂದನೆಯೂ ದೊರೆತಿದೆ. ಕೆ. ಎಸ್. ಹೆಗ್ಡೆ ಆಸ್ಪತ್ರೆಯವರು ಉಚಿತ ವೈದ್ಯಕೀಯ ನೆರವನ್ನು ನೀಡಿದ್ದಾರೆ. ಶಿಬಿರಕ್ಕೆ ಸೇರಿದವರನ್ನು ಈ ಏಳು ಸಮಿತಿಗಳಿಗೆ ಸೇರಿಸುವ ಮೂಲಕ ಅವರು ಮತ್ತೆ ಮದ್ಯದ ದಾಸರಾಗದಂತೆ ನೋಡಿಕೊಳ್ಳಲಾಗುತ್ತದೆ.
ಏಳು ನವಜೀವನ ಸಮಿತಿಗಳ ನೇತೃತ್ವದಲ್ಲಿ ‘ಕುತ್ಯಾಳಶ್ರೀ’ ನವಜೀವನ ಸಮಿತಿಯ ಸದಸ್ಯರಾದ ಉದಯ ಅವರ ಅಧ್ಯಕ್ಷತೆಯಲ್ಲಿ ಅಣಂಗೂರಿನ ಶಾರದಾಂಬ ಭಜನಾ ಮಂದಿರದಲ್ಲಿ ನಡೆದ 1930ನೇ ಶಿಬಿರದ ಯಶಸ್ಸಿಗೆ ಸಮಿತಿಯ 90 ಮಂದಿ ಸದಸ್ಯರು ಕೂಡಾ ಸುಮಾರು ಹತ್ತು ದಿನಗಳ ಕಾಲ ಅವಿರತವಾಗಿ ದುಡಿದಿದ್ದಾರೆ. ಈ ಶಿಬಿರ ಇತರ ನವಜೀವನ ಸಮಿತಿ ಸದಸ್ಯರಿಗೆ ಪ್ರೇರಣೆ ನೀಡಬಲ್ಲದು. ಮದ್ಯವರ್ಜನ ಶಿಬಿರಗಳಿಗೆ ಸೇರಿ ತಾವು ಮದ್ಯಮುಕ್ತರಾದ ನಂತರ ಇತರರನ್ನು ಶಿಬಿರಕ್ಕೆ ಸೇರಿಸಿ ಮದ್ಯಮುಕ್ತರನ್ನಾಗಿಸಿದ, ಗ್ರಾಮವನ್ನೇ ಮದ್ಯಮುಕ್ತಗೊಳಿಸಿದ, ಕಂಪನಿ ತೆರೆದ, ಸಂಸಾರವನ್ನು ಒಂದಾಗಿಸಿದ ಇಂತಹ ನೂರಾರು ನೈಜ ಕಥೆಗಳು ನಮ್ಮ ಮುಂದಿವೆ. ಆದರೆ ನವಜೀವನ ಸದಸ್ಯರೇ ಸೇರಿ ಮದ್ಯವರ್ಜನ ಶಿಬಿರವನ್ನು ನಡೆಸಿದ ಈ ಪ್ರಯತ್ನ ಇದೇ ಮೊದಲು. ಈ ಸಾಧನೆ ಪೂಜ್ಯರ ಮದ್ಯಮುಕ್ತ ಸಮಾಜದ ಕನಸಿನ ಹೊಸ ಬೆಳಕು ಎನ್ನುವುದರಲ್ಲಿ ಎರಡು ಮಾತಿಲ್ಲ.
