ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಈ ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದೆಂಬುದು ಎಲ್ಲೂ ಇಲ್ಲ. ನಮ್ಮ ಯೋಚನೆ ನಮ್ಮನ್ನು ಆ ರೀತಿ ಚಿಂತಿಸುವAತೆ ಮಾಡುತ್ತದೆ. ಗುಲಾಬಿಯನ್ನು ನೋಡುವಾಗ ದೇವರು ಮುಳ್ಳುಗಳನ್ಯಾಕೆ ಈ ಗಿಡದಲ್ಲಿ ಸೃಷ್ಟಿಸಿದರು ಎಂದು ಒಬ್ಬ ಚಿಂತಿಸಿದರೆ, ಇನ್ನೊಬ್ಬ ಮುಳ್ಳುಗಳ ಮಧ್ಯೆ ಇಷ್ಟು ಸುಂದರವಾದ ಹೂವನ್ನಿಟ್ಟ ದೇವರಿಗೆ ಧನ್ಯವಾದ ಹೇಳಬೇಕೆಂದು ಬಯಸುತ್ತಾನೆ. ಮನೆಯಲ್ಲಿ ಯಾವುದೇ ಒಂದು ವಸ್ತುವನ್ನು ಕಂಡರಾಗದು ಅಂದಾಗ ಅದನ್ನು ಸುಲಭವಾಗಿ ಬದಲಿಸಬಹುದು. ಉದಾಹರಣೆಗೆ ತನ್ನ ಕೋಣೆಯಲ್ಲಿರುವ ಸೋಫಾ ಹಳೆಯದಾಗಿ ಬಣ್ಣ ಕಳೆದುಕೊಂಡಿದೆ ಅದನ್ನು ನೋಡಿದಾಗಲೆಲ್ಲಾ ಮನಸ್ಸು ಮುದುಡುತ್ತದೆ ಅಂದಾಗ ಅದನ್ನು ಬದಲಾಯಿಸಬಹುದು. ಅಥವಾ ಬೇರೆಡೆಗೆ ಸಾಗಿಸಬಹುದು. ಹಾಗೆಯೆ ಓರ್ವ ವ್ಯಕ್ತಿಯನ್ನು ಕಂಡರಾಗದು ಎಂದಾಗಲೂ ಆತನಿಂದ ದೂರ ಇರುವ ಪ್ರಯತ್ನ ಮಾಡಬಹುದು. ಆದರೆ ಆ ವ್ಯಕ್ತಿ ಮನೆಯವನೇ ಆಗಿದ್ದಲ್ಲಿ ಆತನನ್ನು ಬದಲಿಸುವುದಾಗಲಿ, ದೂರವಿಡುವುದಾಗಲಿ ಕಷ್ಟ. ಆಗ ನಾವು ಆತನ ಬಗ್ಗೆ ನಮ್ಮಲ್ಲಿರುವ ದೃಷ್ಟಿಕೋನ, ಚಿಂತನೆಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಅನೇಕ ಬಾರಿ ಕೆಲ ವ್ಯಕ್ತಿಗಳು ನಾವು ತಿಳಿದುಕೊಂಡಷ್ಟು ಕೆಟ್ಟವರಾಗಿರುವುದಿಲ್ಲ. ಕೆಲವೊಮ್ಮೆ ಎಲ್ಲವೂ ನನ್ನ ಮನಸ್ಥಿತಿಗೆ ತಕ್ಕಂತೆ ಇರಬೇಕೆಂದು ಯೋಚಿಸುವುದೂ ತಪ್ಪು. ಅನೇಕ ಭಾರಿ ಓರ್ವ ವ್ಯಕ್ತಿ ನಮ್ಮನ್ನು ನೋಡಿದಾಗಲೆಲ್ಲ ನಮಸ್ಕರಿಸಬೇಕು, ಎದ್ದು ನಿಂತು ಗೌರವ ಕೊಡಬೇಕೆಂದು ಬಯಸುತ್ತೇವೆ. ಆತ ಹಾಗೆ ಮಾಡಲಿಲ್ಲ ಎಂದಾಕ್ಷಣ ನಮಗೆ ಆತನ ಬಗ್ಗೆ ಒಂದು ಕೆಟ್ಟ ದೃಷ್ಟಿ, ಚಿಂತನೆ ಬರುವುದಿದೆ.
ನಮ್ಮ ಜೀವನದಲ್ಲಿ ಒಂದು ಘಟನೆ ನಡೆದಾಗ ನಾನಾ ರೀತಿಯ ಯೋಚನೆಗಳು ಬರುವುದು ಸಹಜ. ಆದದ್ದು ಆಗಿ ಹೋಯಿತು, ಏನು ಮಾಡುವುದು ಎಂಬ ವಿಚಾರ ಒಂದಾದರೆ, ಇದರಿಂದಾಗಿ ನನಗೆಷ್ಟು ತೊಂದರೆ ಆಯಿತು ಎನ್ನುವುದು ಇನ್ನೊಂದು. ಹಾಗೆ ಮೂರನೆಯದಾಗಿ ಈ ಘಟನೆಯಿಂದ ನಾನು ಯಾವ ಪಾಠ, ಅನುಭವವನ್ನು ಪಡೆದುಕೊಂಡೆ ಎನ್ನುವುದು ಮತ್ತೊಂದು. ಸೋಲು, ಗೆಲುವಿನಲ್ಲಿ ಕಲಿಯಬೇಕಾದದ್ದು ಬಹಳಷ್ಟು ಇದೆ. ‘Mind is never a problem But Mindset is’ ಎಂಬoತೆ ನಮ್ಮ ಮನೋಧರ್ಮ, ಯೋಚನಾ ಶೈಲಿ ಬದಲಾದಾಗ ನಮಗೆ ಎಲ್ಲದರಲ್ಲೂ, ಎಲ್ಲರಲ್ಲ್ಲೂ ಒಳಿತನ್ನು ಕಾಣಲು ಸಾಧ್ಯವಾಗುತ್ತದೆ. ಯಾವುದೇ ಕೆಲಸವನ್ನು ನಾವು ಮಾಡಲೇಬೇಕು ಅಂದಾಗ ಅದು ಕಷ್ಟ ಅನ್ನಿಸುವುದಿದೆ. ಬದಲಾಗಿ ಅದನ್ನು ನಾನೀಗ ಮಾಡಬೇಕಾಗಿದೆ ಮತ್ತು ಮಾಡುವ ಆಸಕ್ತಿ ನಮ್ಮಲ್ಲಿ ಇದೆ ಎಂದಾಗ ಅದು ಸುಲಭವಾಗಿ ಕಾಣುತ್ತದೆ. ಹೊರಗಿನದು ಆಜ್ಞೆ, ನಮ್ಮೊಳಗಿನದು ಪ್ರಜ್ಞೆ. ಆಜ್ಞೆಯನ್ನು ಬೇರೊಬ್ಬ ಮಾಡುವುದರಿಂದ ಕೆಲಸ ಮಾಡುವುದು ಕಷ್ಟವಾಗುತ್ತದೆ. ಒಮ್ಮೆ ಪ್ರಜ್ಞೆಗೆ ಆ ಕೆಲಸ ಒಪ್ಪಿಗೆ ಆದರೆ ಮತ್ತೆ ಯಾರ ಆಜ್ಞೆಗಾಗಿಯೂ ಅವರು ಕಾಯುವುದಿಲ್ಲ.
ನಮ್ಮಲ್ಲಿ ಏನೂ ಇಲ್ಲದಾಗ ನಮ್ಮ ತಾಳ್ಮೆ ಹಾಗೂ ಎಲ್ಲಾ ಇದ್ದಾಗ ನಮ್ಮ ಮನೋಧರ್ಮ ಇವು ನಮ್ಮ ಸಹಾಯಕ್ಕೆ ಬರುತ್ತವೆ.
ಯಾವುದನ್ನು, ನಾನು ಯಾವ ದೃಷ್ಟಿಯಿಂದ ನೋಡುತ್ತೇನೆ ಎನ್ನುವುದು ಮುಖ್ಯ. ಬದುಕಿನಲ್ಲಿ ಎಲ್ಲರೂ ಅವರವರ ಭಾರ ಹೊತ್ತು ಸಾಗುತ್ತಿರುತ್ತಾರೆ. ಅಲ್ಲಿಯೂ ನಮ್ಮ ಮನೋಧರ್ಮ, ಪ್ರೀತಿ, ಮನಸ್ಸು ಸರಿ ಇದ್ದಾಗ ಸಂಸಾರ, ಹೆಂಡತಿ-ಮಕ್ಕಳು, ಅಪ್ಪ-ಅಮ್ಮ ಯಾರೂ ಭಾರ ಅನ್ನಿಸುವುದಿಲ್ಲ. ಆದರೆ ಪ್ರೀತಿ ಇಲ್ಲದಿದ್ದಲ್ಲಿ ತನ್ನ ಹೆಂಡತಿ ಮಕ್ಕಳೇ ಭಾರ ಅನ್ನಿಸುವುದಕ್ಕೆ ಶುರುವಾಗುತ್ತದೆ. ಅದಕ್ಕೆ ಕೆಲವರ ಜೀವನದಲ್ಲಿ ನಿತ್ಯ ಕೋಪ, ಜಗಳ ಆಗುತ್ತಿರುತ್ತದೆ. ಇನ್ನೊಬ್ಬರ ನಡವಳಿಕೆಯನ್ನು ಬದಲಾಯಿಸುವುದು ನಮಗೆ ಕಷ್ಟ. ಆದರೆ ನಮ್ಮ ಮನೋಧರ್ಮವನ್ನು ಬದಲಿಸುವುದು ಸುಲಭ. ನಾವು ನಮ್ಮ ಮನಸ್ಸಿನ ಕಿಟಕಿ ಮೂಲಕ ಜಗತ್ತನ್ನು ನೋಡುತ್ತೇವೆ. ಮನಸ್ಸಿನಲ್ಲಿ ಯಾವುದೇ ಗಲಿಬಿಲಿ ಇಲ್ಲದೆ ಮನಸ್ಸು ಸ್ವಚ್ಛವಾಗಿದ್ದರೆ ಜಗತ್ತು ಕೂಡಾ ಹಾಗೆ ಕಾಣುತ್ತದೆ. ಆಗ ನಮ್ಮ ಹೊರಗಿನ ಪ್ರಪಂಚದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ನಮಗೆ ಅನೇಕ ಕಷ್ಟಗಳ ಬಗ್ಗೆ ಭಯವಿರುತ್ತದೆ. ಆದರೆ ಆ ಕಷ್ಟಗಳು ಏನೂ ಎಂಬುವುದೇ ಗೊತ್ತಿರುವುದಿಲ್ಲ. ಬರಬಹುದಾದ ಕಷ್ಟಗಳಿಗೆ ಹೆದರಿ ಪ್ರಯೋಜನವಿಲ್ಲ. ಮೊನ್ನೆ ತಾನೇ ಚಾವಡಿಯಲ್ಲಿ ಪಟ್ಟಣ ಪ್ರದೇಶದಿಂದ ಬಂದಿದ್ದ ಓರ್ವ ಮಹಿಳೆ ನನ್ನ ಮಗ ಈಗ ಯು.ಕೆ.ಜಿ.ಯಲ್ಲಿದ್ದಾನೆ. ಈಗ ಏನೋ ಓದುವುದು, ಬರೆಯುವುದನ್ನು ಮಾಡುತ್ತಾನೆ. ಕಲಿಕೆಯಲ್ಲಿ ಹುಷಾರಿದ್ದಾನೆ. ಆದರೆ ದೊಡ್ಡ ಕ್ಲಾಸಿಗೆ ಹೋಗುವಾಗ ಏನಾಗ್ತಾನೋ ಏನು! ಎಂಬ ಚಿಂತೆ ಕಾಡುತ್ತಿದೆ ಎಂದು ಖಾವಂದರಲ್ಲಿ ಹೇಳುತ್ತಿದ್ದಳು. ಅವರು ತಕ್ಷಣ ಸ್ವಲ್ಪ ದೂರದಲ್ಲಿ ತಮ್ಮ 10 ವರ್ಷದ ಮಗನೊಂದಿಗೆ ನಿಂತಿದ್ದ ಮಹಿಳೆಯನ್ನು ಕರೆದು ನಿನ್ನ ಮಗ ಈ ಸಲ ಪಾಸಾಗಿದ್ದಾನಾ ಅಂತ ಕೇಳಿದ್ರೆ, ಆಕೆ ನಿರ್ಲಿಪ್ತಳಾಗಿ ಇಲ್ಲ ಸ್ವಾಮಿ, ಆತ ಫೇಲ್ ಅಂತ ಹೇಳಿದ್ಳು. ಹೀಗೆ ಬಾರದ ಕಷ್ಟವನ್ನು ನೆನೆದು ಚಿಂತಿಸುವುದು, ಭಯಪಡುವುದು ಕೆಲವರ ಅಭ್ಯಾಸ. ಯಾರಿಗೂ ಇಲ್ಲದ ಕಷ್ಟವೆಲ್ಲ ನನಗೆ ಇದೆ ಎಂಬ ಭಾವನೆ. ಜೀವನ ಅನ್ನುವುದು ಕಪ್ಪೂ ಅಲ್ಲ, ಬಿಳುಪು ಅಲ್ಲ, ಎರಡರ ಮಧ್ಯದ ಬೂದು ಬಣ್ಣದಂತಿರುತ್ತದೆ. ಕಷ್ಟ-ಸುಖಗಳೆರಡೂ ಇದ್ದೆ ಇರುತ್ತದೆ. ಜೀವನವನ್ನು ಪ್ರೀತಿಸುವ ಜೊತೆಗೆ ಜೀವನವನ್ನು ನೋಡುವ ನಮ್ಮ ದೃಷ್ಟಿ ಕೂಡಾ ಬದಲಾಗಬೇಕು ಅಷ್ಟೆ. ಅಗ ಬದುಕು ಸುಂದರವಾಗಿ ಕಾಣುತ್ತದೆ.
