ಅರಿವೆಯ ಅರಿವು

‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ದಾಸರ ಮಾತಿನಂತೆ ಮನುಷ್ಯ ಮೊದಲು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಬಗ್ಗೆ ಚಿಂತಿಸಿದರೆ, ಎರಡನೇಯದಾಗಿ ಬಟ್ಟೆಯ ಬಗ್ಗೆ ಚಿಂತಿಸುತ್ತಾನೆ. ಐರೋಪ್ಯ ದೇಶದ ಜನಪದ ಕಥೆಯೊಂದರಲ್ಲಿ ರಾಕ್ಷಸನೊಬ್ಬ ಪುರುಷರು ಯಾರೂ ಮನೆಯಲ್ಲಿ ಇಲ್ಲದ ವೇಳೆ ಒಂದು ಮನೆಗೆ ಬರುತ್ತಾನೆ. ಆಗ ಆ ಮನೆಯಲ್ಲಿದ್ದ ಮಹಿಳೆಗೆ ಬೇರೆ ದಾರಿ ಕಾಣದೆ ಗಂಡನ ಕೋಟಿನಿಂದ ತನ್ನ ಮತ್ತು ಮಕ್ಕಳ ರಕ್ಷಣೆ ಮಾಡುತ್ತಾಳಂತೆ. ಇದೊಂದು ಉಪಮೆ ಅಷ್ಟೇ. ಆದರೆ ಅನೇಕ ಸಲ ಚಳಿ ಆದಾಗ, ಜೋರು ಮಳೆ ಬಂದಾಗ ಗಂಡ ತನ್ನ ಕೋಟನ್ನು ಬಿಚ್ಚಿ ನಡುಗುತ್ತಿರುವ ಹೆಂಡತಿಗೆ ಕೊಟ್ಟರೆ, ತಾಯಿ ತನ್ನ ಸೆರಗಿನಿಂದ ಮಗುವನ್ನು ಮುಚ್ಚಿ ರಕ್ಷಿಸುತ್ತಾಳೆ. ಅಮ್ಮನ ಸೀರೆಯಂತೂ ಅದು ಬಹುಪಯೋಗಿ. ಕಂದನ ಮುಖ ಒರೆಸಲು, ಸಿಂಬಳ ತೆಗೆಯಲು, ನೆನೆದು ಬಂದಾಗ ತಲೆ ಒರೆಸಲು, ಕೈಯಲ್ಲಿ ಮಣ್ಣಾದಾಗ ಕೈ ಒರೆಸಲು, ಎಲ್ಲದಕ್ಕೂ ಬೇಕಾದ ಒಂದು ಅಪ್ಯಾಯಮಾನವಾದ ಬಟ್ಟೆ ಅಂದರೆ ಅದು ಅಮ್ಮನ ಸೆರಗು.
ಆಗ ಬದುಕು ಈಗಿನಷ್ಟು ವೇಗವಾಗಿ ಬದಲಾಗುತ್ತಿರಲಿಲ್ಲ. ಆದ್ದರಿಂದ ಚಿನ್ನ, ಬೆಳ್ಳಿ ಎಲ್ಲವೂ ಅಜ್ಜಿಯಿಂದ ಅಮ್ಮನಿಗೆ, ಅಮ್ಮನಿಂದ ಮಗಳಿಗೆ ಹೀಗೆ ತಲತಲಾಂತರದವರೆಗೆ ಬಾಂಧವ್ಯದAತೆ ಮುಂದುವರಿಯುತ್ತಿತ್ತು. ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿAದ ನಡೆದ ಅಂಬಾನಿ ಕುಟುಂಬದ ಮದುವೆಯಲ್ಲೂ ಮದುಮಗಳು ರಾಧಿಕಾ ತನ್ನ ಧಾರೆಯ ಸಮಯದಲ್ಲಿ ಅಜ್ಜಿಯ ಚಿನ್ನ ಹಾಕಿದ್ದು ಸುದ್ದಿಯಾಗಿತ್ತು. ಹಾಗೆ ಸಿನಿಮಾ ತಾರೆ ಸೋನಾಕ್ಷಿ ಸಿನ್ಹಾ ತಾಯಿಯ ಸೀರೆ ಉಟ್ಟದ್ದು ಕೂಡಾ ಅಷ್ಟೇ ಸುದ್ದಿ ಆಗಿತ್ತು. ಇಲ್ಲಿ ಇದು ಬರಿಯ ಬಟ್ಟೆ ಅಲ್ಲ. ಆತ್ಮೀಯತೆಯ ಒಂದು ಸಂಕೇತ. ಒಂದು ನೆನಪು.
ಮದುವೆಗೆ ಅಪ್ಪ ತೆಗೆಸಿಕೊಟ್ಟ ಧಾರೆ ಸೀರೆ, ಅಕ್ಕ ಪ್ರೀತಿಯಿಂದ ಉಡುಗೊರೆಯಾಗಿ ಕೊಟ್ಟ ಸೀರೆ ಇತರ ಎಲ್ಲಾ ಸೀರೆಗಳ ಮಧ್ಯೆ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ಧಾರೆ ಸೀರೆಯ ಹಾಗೆ ಪ್ರಥಮ ಗರ್ಭಿಣಿ ಆದಾಗ ತಾಯಿ ಮನೆಯಲ್ಲಿ ಕೊಟ್ಟ ಸೀರೆ ಇವೆಲ್ಲಾ ಎಷ್ಟೇ ಹಳೆಯದಾದರೂ ಕಪಾಟಿನಲ್ಲೊಂದು ಸ್ಥಾನ ಪಡೆದುಕೊಳ್ಳುತ್ತದೆ. ಮಾತ್ರವಲ್ಲ ಪ್ರತಿಸಲ ನೋಡಿದಾಗಲೂ ಸಿಹಿ ನೆನಪಿನ ಸುರುಳಿ ಬಿಚ್ಚಿಕೊಳ್ಳುವಂತೆ ಮಾಡುತ್ತದೆ.
ಅಂದಿನ ಕಾಲದಲ್ಲಿ ಅಪ್ಪನ ಕೋಟು, ವಾಚು ಅಪ್ಪನಿಂದ ಮಗನಿಗೆ ಹೋಗುತ್ತಿತ್ತು. Stepping in to father shoe ಎಂದ ಹಾಗೆ ಮಗ ಅಷ್ಟುದ್ದ ಬೆಳೆದ ಎಂಬುದರ ಸಂಕೇತವಾಗಿತ್ತು. ಅಷ್ಟೇ ಅಲ್ಲ, ತಮ್ಮ ಡಿಗ್ರಿ ಮುಗಿಸಿ ಇಂಟರ್‌ವ್ಯೂವ್‌ಗೆ ಹೊರಟಾಗ ಅಣ್ಣ ತನ್ನ ಒಳ್ಳೆಯ ಶರ್ಟ್, ವಾಚು ತೆಗೆದು ನೀನು ಹಾಕಿಕೊಳ್ಳು ಎಂದು ಕೊಡುವುದು ಇತ್ತು. ಹಾಗೇ ಅಜ್ಜಿಯ ಜರಿ ಸೀರೆ ಮೊಮ್ಮಗಳಿಗೆ ಲಂಗ ಆಗುತ್ತಿತ್ತು. ಮೊಮ್ಮಗಳು ಮದುವೆಗೆಂದು ಕಲ್ಯಾಣ ಮಂಟಪಕ್ಕೆ ಹೊರಡುವಾಗ ಅಜ್ಜಿ ಸೀರೆ ಉಟ್ಟರೆ ಶ್ರೇಯಸ್ಕರ ಎಂಬ ಭಾವನೆ. ಯಾಕೆಂದರೆ ಮುತ್ತೆöÊದೆಯಾಗಿ ಎಲ್ಲಾ ರೀತಿಯ ಕಷ್ಟ ಸುಖಗಳಿಗೆ ಹೊಂದಿಕೊAಡು ತುಂಬು ಬಾಳನ್ನು ಬೆಳಗಿದ ಹಿರಿಯರೆಂದರೆ ಅದಕ್ಕೊಂದು ಗೌರವ.
ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿರುವಾಗ ಅಕ್ಕನ ಬಟ್ಟೆ ತಂಗಿಗೆ, ಅಣ್ಣನ ಬಟ್ಟೆ ತಮ್ಮನಿಗೆ ಎನ್ನುವುದು ಅಲಿಖಿತ ಕಟ್ಟಳೆಯಾಗಿತ್ತು. ಬಟ್ಟೆ ಅಷ್ಟೇ ಅಲ್ಲ ಪುಸ್ತಕ, ಬ್ಯಾಗ್ ಎಲ್ಲವೂ. ತಂಗಿಯೊಬ್ಬಳು ತನ್ನ ಬಾಲ್ಯದ ಬಗ್ಗೆ ಹೇಳುತ್ತಾ ನಮ್ಮ ಮನೆಯಲ್ಲಿ ಅಕ್ಕಂದಿರದ್ದು ಎಲ್ಲವೂ ನಮಗೆ. ನಾನು ಅಕ್ಕಂದಿರ ಬಟ್ಟೆಯಲ್ಲೇ ಬೆಳೆದವಳು. ನನ್ನ ದೊಡ್ಡ ಅಣ್ಣನಿಗೂ, ನನಗೂ ಹನ್ನೆರಡು ವರ್ಷ ವ್ಯತ್ಯಾಸ. ಆತ ದೊಡ್ಡವನಾಗಿ ತನಗೊಂದು ಹೊಸ ಅಂಗಿ ತಂದು ಕೊಟ್ಟಿದ್ದ. ಚಂದದ ಕಡು ನೀಲಿ ಬಣ್ಣದ ಫ್ರಾಕ್ ಮೇಲೆ ಪೋಲ್ಕಿ ಡಾಟ್ಸ್ ಅಂದರೆ ಸಣ್ಣ ಸಣ್ಣ ಬಿಳಿ ಚುಕ್ಕಿಗಳು ಮಾತ್ರವಲ್ಲ ಅದರ ಪ್ರತಿ ಬಟನ್‌ನ ಮೇಲೆ ಎ, ಬಿ, ಸಿ, ಡಿ ಎಂದು ಬರೆದಿತ್ತು. ಅಂದು ನನ್ನ ಶಾಲೆಯ ಫೋಟೋ ಫಂಕ್ಷನ್‌ಗೆ ಆ ಬಟ್ಟೆಯನ್ನು ಧರಿಸಿಕೊಂಡು ಹೋಗಿದ್ದೆ. ಇನ್ನೇನು ಫೋಟೋ ತೆಗೆಯಬೇಕು ಎನ್ನುವಷ್ಟರಲ್ಲಿ ನನ್ನ ಫ್ರಾಕ್‌ನಲ್ಲಿ ಒಂದು ಬಟನ್ ಇಲ್ಲದಿರುವುದು ನನ್ನ ಗಮನಕ್ಕೆ ಬಂತು. ನಾನು ಜೋರಾಗಿ ಅಳುವುದಕ್ಕೆ ಶುರು ಮಾಡಿದೆ. ನನ್ನ ಎಲ್ಲಾ ಟೀರ‍್ಸ್, ಶಾಲಾ ಮಕ್ಕಳು ಎಲ್ಲರೂ ಬಟನ್ ಅನ್ನು ಹುಡುಕಿದ್ದೆ ಹುಡುಕಿದ್ದು. ಅದು ಸಿಕ್ಕ ಬಳಿಕ ನನ್ನ ಅಳು ನಿಂತಿತ್ತು. ಅಣ್ಣ ತಕ್ಷಣ ನನ್ನ ಅಂಗಿಗೆ ಆ ಬಟನ್ ಅನ್ನು ಹಾಕಿಕೊಟ್ಟ. ಮುಂದೆ ನನ್ನ ಮದುವೆ ಸಂದರ್ಭದಲ್ಲಿ ನನ್ನ ಡ್ರೆಸ್‌ನಲ್ಲೂ ಆ ಬಟನ್ ಅನ್ನು ಹೊಲಿಸಿಕೊಂಡಿದ್ದೆ. ಇದು ನನ್ನ ಅಣ್ಣನ ಮೇಲೆ, ಆತ ಕೊಟ್ಟ ಬಟ್ಟೆಯ ಮೇಲಿನ ಪ್ರೀತಿಯ ಧ್ಯೋತಕವಾಗಿತ್ತು.
ಹಾಗೆ ಮಕ್ಕಳು ದೊಡ್ಡವರಾದ ಬಳಿಕ ಬರುವ ಮೊದಲ ಸಂಬಳದಲ್ಲಿ ಅಮ್ಮನಿಗೆಂದು ತರುವ ಸೀರೆ, ಅಪ್ಪನಿಗೆ ಕೊಡುವ ಅಂಗಿ, ಬಟ್ಟೆಯಲ್ಲಿ ಆತನ ಪ್ರೀತಿ, ಕೃತಜ್ಞತೆ, ಗೌರವ ಎಲ್ಲವೂ ಅಡಕವಾಗಿರುತ್ತದೆ. ಮನೆಯಲ್ಲಿ ಮಗು ಹುಟ್ಟಿದಾಗ ದೊಡ್ಡಮ್ಮ, ಚಿಕ್ಕಮ್ಮನವರು ಕಸೂತಿ ಹಾಕಿದ ಬಟ್ಟೆಗಳನ್ನು ಕಳುಹಿಸುವುದು. ಸಣ್ಣ ಉಲ್ಲನ್ ಅಂಗಿ, ಕಾಳುಚೀಲಗಳು ಇವೆಲ್ಲವನ್ನು ಕೈಯಾರೆ ತಯಾರಿ ಮಾಡಿ ಕಳುಹಿಸುವುದರ ಹಿಂದೆ ಬೆಚ್ಚಗಿನ ಪ್ರೀತಿ ಇರುತ್ತಿತ್ತು. ಈಗ ಮಗು ಹುಟ್ಟಿದ ತಕ್ಷಣ ಆಸ್ಪತ್ರೆಯವರೇ ಮಗುವಿಗೆ ಬೇಕಾದ ವಸ್ತುಗಳ ಕಿಟ್ ಅನ್ನು ಕೊಟ್ಟುಬಿಡುತ್ತಾರೆ.
ಉತ್ತರ ಕನ್ನಡ, ಧಾರವಾಡ ಕಡೆಯವರು ಎಲ್ಲಾ ಹಳೆಯ ಸೀರೆಗಳನ್ನು ಸೇರಿಸಿ ಹೊಲಿಯುವ ಕೌದಿ ಅದೊಂದು ವಿಸ್ಮಯ. ಅದರಲ್ಲಿ ಮನೆ ಮಂದಿಯೆಲ್ಲರ ಬಟ್ಟೆಯ ತುಂಡುಗಳಿರುತ್ತವೆ. ಇದನ್ನು ಹೊದ್ದು ಮಲಗಿದಾಗ ಒಂದು ರೀತಿಯ ಆತ್ಮೀಯತೆ, ರಕ್ಷಣೆಯ ಬೆಚ್ಚನೆ ಭಾವವಿರುತ್ತದೆ. ಸುಧಾಮೂರ್ತಿಯವರಿಗೆ ಉಡುಗೊರೆಯಾಗಿ ಕೊಟ್ಟ ಕೌದಿಯನ್ನು ‘ತಾನು ಅದನ್ನು ಜೋಪಾನವಾಗಿ ಇಟ್ಟಿದ್ದೇನೆ. ಯಾಕೆಂದರೆ ಅದರಲ್ಲಿ ಎಲ್ಲರ ಪ್ರೀತಿ ಅಡಗಿದೆ’ ಎನ್ನುತ್ತಿದ್ದರು.
ಜರಿ ಸೀರೆ, ಸೂಟು-ಬೂಟು ಎಲ್ಲಾ ಹೊರಗೆ ಹೋಗುವಾಗ ಕಾರ್ಯಕ್ರಮಗಳಿಗೆ ಸರಿ. ಮನೆಗೆ ಬಂದ ತಕ್ಷಣ ಹಳೇಯ ಕಾಟನ್ ಸೀರೆ, ಲುಂಗಿಗಿರುವ ಆಪ್ತತೆ ಆ ಬಟ್ಟೆಗಳಿಗಿರುವುದಿಲ್ಲ. ಅದು ಹೊರ ಜಗತ್ತಿನ ತೋರಿಕೆಗೆ. ಇದು ನಮ್ಮ ಸುಖ ನೆಮ್ಮದಿಗೆ.
ಇಂದಿನ ಫ್ಯಾಶನ್ ಜಗತ್ತು ದಿನದಿನವೂ ಹೊಸತಾಗುತ್ತಿರುತ್ತದೆ. ಅದರ ಬೆನ್ನು ಹಿಡಿಯುವುದೆಂದರೆ ವಿಕ್ರಮ ಬೇತಾಳನ ಬೆನ್ನು ಹಿಡಿದಂತೆ. ಅದಕ್ಕಿಂತ ಸರಳವಾದ ನಮಗೊಪ್ಪುವ ಬಟ್ಟೆಯಲ್ಲೆ ನೆಮ್ಮದಿಯನ್ನು ಕಾಣುವಂತಾಗಬೇಕು.

Facebook
Twitter
WhatsApp
LinkedIn
Telegram