ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಕಳೆದ ಸಂಚಿಕೆಯಲ್ಲಿ ‘ಜ್ಞಾನದೀಪ ಶಿಕ್ಷಕರ ಒದಗಣೆ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ‘ರುದ್ರಭೂಮಿ’ಗಳ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಕೊಡುಗೆಯ ಬಗ್ಗೆ ತಿಳಿದುಕೊಳ್ಳೋಣ.
ಪ್ರತಿಯೊಬ್ಬರ ಪಾಲಿಗೂ ಸಾವು ಸಹಜ. ಉಸಿರು ನಿಂತು ಹೋದ ಮೇಲೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಶಾಸ್ತೊçÃಕ್ತವಾಗಿ ಪವಿತ್ರವಾದ ಸ್ಥಳದಲ್ಲಿ ನಡೆಯಬೇಕು. ಅಂತಹ ಮಹತ್ವದ ಕೆಲಸ ನಡೆಯುವುದೇ ‘ರುದ್ರಭೂಮಿ’ಗಳಲ್ಲಿ. ರುದ್ರಭೂಮಿ ಎಂದರೆ ಶಿವನ ಸ್ಥಾನ ಎಂದರ್ಥ. ಅವನ ಆವಾಸಸ್ಥಾನದಲ್ಲಿ ಅಗ್ನಿ ಸಂಸ್ಕಾರದಂತಹ ಮಹತ್ವಪೂರ್ಣ ಕಾರ್ಯಗಳು ನಡೆಯುವುದರಿಂದ ಈ ಸ್ಥಳ ರುದ್ರಭೂಮಿ.
ಎಲ್ಲಾ ಧರ್ಮಗಳಲ್ಲೂ ಮರಣದ ನಂತರ ದೇಹವನ್ನು ಸೂಕ್ತವಾಗಿ ಸಂಸ್ಕಾರಕ್ಕೊಳಪಡಿಸಬೇಕೆAಬ ಸಂಪ್ರದಾಯವಿದೆ. ಸರ್ವಸ್ವವೆನಿಸಿರುವ ದೇಹವನ್ನು ಮರಳಿ ಪ್ರಕೃತಿಗೇ ಹಿಂದಿರುಗಿಸುವ ಕೃತಜ್ಞತಾರ್ಪಣೆಯಿದು. ಹುಟ್ಟು-ಸಾವುಗಳೆಂಬ ಭಯಚಕ್ರದಿಂದ ಬಿಡುಗಡೆ ಹೊಂದುವ ಪವಿತ್ರಕಾರ್ಯ ರುದ್ರಭೂಮಿಯಲ್ಲಿ ನಡೆಯುತ್ತದೆ. ಹಿಂದೆ ಸ್ಮಶಾನ, ಸುಡುಗಾಡು ಎಂಬ ಹೆಸರಿನಿಂದ ಈ ಸ್ಥಳವನ್ನು ಕರೆಯಲಾಗುತ್ತಿತ್ತು. ಆದರೆ ಎಲ್ಲ ಕಡೆಯೂ ಇವುಗಳ ವ್ಯವಸ್ಥೆ ಇದ್ದಿರಲಿಲ್ಲ. ಅಂತಿಮ ಕ್ರಿಯೆಗಾಗಿ ಕೊನೆ ಕ್ಷಣದಲ್ಲಿ ಸುಡುಗಾಡಿನ ಹುಡುಕಾಟ, ಮಳೆ ಹೋಗುವವರೆಗೆ ಕಾದದ್ದು, ಮಳೆ ನೀರಿನಲ್ಲಿ ಹೆಣ ಕೊಚ್ಚಿ ಹೋದದ್ದು, ಪಂಚಾಯತ್ ಮೆಟ್ಟಿಲೇರಿದ್ದು ಹೀಗೆ ಸುಡುಗಾಡಿನಲ್ಲಿ ಪಟ್ಟ ವ್ಯಥೆಯ ಕಥೆಗಳು ಹತ್ತು ಹಲವು. ಹಿಂದಿನ ಕಾಲದಲ್ಲಿ ಅತಿ ಉಪೇಕ್ಷೆಗೆ ಒಳಗಾಗಿದ್ದ ಕ್ಷೇತ್ರವೆಂದರೆ ಅದು ಸ್ಮಶಾನ ಅಥವಾ ಸುಡುಗಾಡು ಎಂದರೆ ತಪ್ಪಾಗಲಾರದು. ಅಲ್ಲಿ ಹೆಣ ದಹನ ಮಾಡಲು ಬೇಕಾದ ಕಟ್ಟಿಗೆ, ಸಿಬ್ಬಂದಿಗಳ ಕೊರತೆ, ಹಲವಾರು ಮೂಢನಂಬಿಕೆಗಳು ಹೀಗೆ ಇದೊಂದು ಒಟ್ಟು ಅವ್ಯವಸ್ಥೆಗಳ ಆಗರವಾಗಿತ್ತು. ಇದರಿಂದಾಗಿಯೇ ಜನ ಹೆಸರು ಕೇಳಿದೊಡನೆ ಭಯಭೀತರಾಗುತ್ತಿದ್ದರು. ಜನರಲ್ಲಿದ್ದ ಭಯದ ವಾತಾವರಣವನ್ನು ದೂರ ಮಾಡುವುದಕ್ಕಾಗಿಯೇ ಸುಡುಗಾಡಿಗೆ ಇದ್ದ ‘ರುದ್ರಭೂಮಿ’ ಎಂಬ ಹೆಸರನ್ನು ಹೆಚ್ಚು ಪ್ರಚಲಿತಕ್ಕೆ ತಂದ ಹೆಗ್ಗಳಿಕೆ ‘ಗ್ರಾಮಾಭಿವೃದ್ಧಿ ಯೋಜನೆ’ಯದ್ದು. ‘ರುದ್ರ’ ಅಂದರೆ ದುಃಖವನ್ನು ಕರಗಿಸುವವನು ಎಂದರ್ಥ.
ಸಮಾಜದಿಂದ ಅವಗಣನೆಗೆ ಒಳಗಾಗಿರುವ ಸುಡುಗಾಡನ್ನು ಅಭಿವೃದ್ಧಿಪಡಿಸುತ್ತಾ, ಅದನ್ನು ಪವಿತ್ರ ಕ್ಷೇತ್ರವೆಂದು ಭಾವಿಸಿದವರು ತೀರಾ ವಿರಳ. ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸರಕಾರದೊಂದಿಗೆ ಸಮುದಾಯದ ಸಹಭಾಗಿತ್ವ ಅನಿವಾರ್ಯವೆಂಬ ನಿಟ್ಟಿನಲ್ಲಿ 1998ರಲ್ಲಿ ಭಾರತ ಸ್ವಾತಂತ್ರö್ಯದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿರುವ ಹಿಂದೂ ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಯೊಂದನ್ನು ಆರಂಭಿಸಿದರು. ಊರಿಗೊಂದು ಆಸ್ಪತ್ರೆ, ಅಂಚೆ ಕಚೇರಿ, ಶಾಲೆ ಮುಂತಾದವುಗಳು ಇರುವಂತೆ ‘ರುದ್ರಭೂಮಿ’ಯೂ ಒಂದು ಅತ್ಯಂತ ಅವಶ್ಯ ಎಂಬುದನ್ನು ಊರಿನವರಿಗೆ ಮನದಟ್ಟು ಮಾಡುವುದು, ರುದ್ರಭೂಮಿಯಲ್ಲಿ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವುದು, ತಮ್ಮ ಊರಿನ ರುದ್ರಭೂಮಿಯೆಂಬ ಅಭಿಮಾನದಿಂದ ಅಂತಹ ಅಗತ್ಯತೆಗಳನ್ನು ಆಯಾ ಊರಿನವರೇ ಒಗ್ಗಟ್ಟಿನಿಂದ ಒಂದೊಂದನ್ನಾಗಿ ಪೂರೈಸಿಕೊಳ್ಳುವಂತೆ ಪ್ರೇರಣೆಯನ್ನು ನೀಡುವುದು, ರುದ್ರಭೂಮಿಯ ಜಾಗದ ಅತಿಕ್ರಮಣ ತಡೆಗಟ್ಟಿ ರಕ್ಷಿಸುವುದು, ಸ್ಥಳೀಯವಾಗಿ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯನ್ನು ಪ್ರಾರಂಭಿಸಿ, ನಿಗದಿತವಾಗಿರುವ ರುದ್ರಭೂಮಿಯಲ್ಲಿ ಶವ ದಹನಕ್ಕೆ ಬೇಕಾಗುವ ಸೌಲಭ್ಯವನ್ನು ಸಮಿತಿಯ ವತಿಯಿಂದ ಮಾಡಿಸುವ ಮತ್ತು ನಿರಂತರವಾಗಿ ನಿರ್ವಹಣೆ ಮಾಡುವ ಆಶಯ ಈ ಕಾರ್ಯಕ್ರಮದ್ದು. ಕಾರ್ಯಕ್ರಮದಡಿ ರುದ್ರಭೂಮಿಗೆ ಸಿಲಿಕಾನ್ ಛೇಂಬರ್ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ರೂ. 2.50 ಲಕ್ಷದವರೆಗೆ ನೆರವನ್ನು ನೀಡಲಾಗುತ್ತದೆ. ಈಗಾಗಲೇ ರಾಜ್ಯದ 816 ರುದ್ರಭೂಮಿಗಳಿಗೆ 11,.39 ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಯತ್ನದ ಫಲವಾಗಿ ಈಗಾಗಲೇ ರಾಜ್ಯದಲ್ಲಿರುವ ಹೆಚ್ಚಿನ ರುದ್ರಭೂಮಿಗಳು ಅಗತ್ಯ ಸೌಲಭ್ಯಗಳನ್ನು ಹೊಂದುವಂತಾಗಿದೆ.
ರುದ್ರಭೂಮಿಯ ಸ್ಥಳ ಸಮತಟ್ಟುಗೊಳಿಸುವುದು, ಆವರಣ ರಚನೆ, ಗೇಟು ನಿರ್ಮಾಣ, ದಹನ ಶೆಡ್ ರಚನೆ, ಸಿಲಿಕಾನ್ ಛೇಂಬರ್ ಅಳವಡಿಸುವುದು, ಕಟ್ಟಿಗೆ ದಾಸ್ತಾನಿಗೆ ಶೆಡ್ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ಸ್ನಾನಗೃಹ ಮತ್ತು ಶೌಚಾಲಯ ರಚನೆ, ಸಂಪರ್ಕ ರಸ್ತೆ, ಉದ್ಯಾನವನ, ವಿದ್ಯುತ್ ಸಂಪರ್ಕ, ವಿಶ್ರಾಂತಿ ಕೊಠಡಿ, ಕಾವಲುಗಾರನ ವ್ಯವಸ್ಥೆ, ಧಾರ್ಮಿಕ ಕ್ರಿಯೆ, ವೈದಿಕ ವಿಧಿಗಳಿಗೆ ಕಟ್ಟಡ ರಚನೆ, ರಸ್ತೆ, ತ್ಯಾಜ್ಯ ಗುಂಡಿ ನಿರ್ಮಾಣ ಹೀಗೆ ರುದ್ರಭೂಮಿಗಳಲ್ಲಿ ಇರಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾದರೆ ಅದಕ್ಕೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನ ದೊರೆಯುತ್ತದೆ.
ಆಯಾ ಊರಿನ ರುದ್ರಭೂಮಿಯನ್ನು ಸಂರಕ್ಷಿಸುವುದು, ಸುಂದರವಾಗಿ ಇಟ್ಟುಕೊಳ್ಳುವುದು ಆ ಊರಿನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದು ಒಬ್ಬರ ಅಥವಾ ಕೇವಲ ಗಾಮಾಭಿವೃದ್ಧಿ ಯೋಜನೆಯ ಕೆಲಸವಲ್ಲ. ಊರಿನ ಜನ ಸಾಂಘಿಕವಾಗಿ ಸ್ವ ಆಸಕ್ತಿಯಿಂದ ಈ ಪುಣ್ಯ ಕೆಲಸದಲ್ಲಿ ಭಾಗಿಯಾದಲ್ಲಿ ಅಂತಿಮ ಯಾತ್ರೆಗೊಂದು ಸುಂದರ ತಾಣ ದೊರೆತಂತಾಗುತ್ತದೆ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.
