ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹುಟ್ಟಿದ ಕ್ಷಣದಿಂದ ಆರಂಭವಾಗುವ ‘ಕಲಿಕೆ’ ಜೀವನದ ಕೊನೆ ಕ್ಷಣದವರೆಗೂ ನಿಲ್ಲುವುದಿಲ್ಲ. ಕಲಿಕೆಯಿಂದ ಹೊಸ ಅನುಭವಗಳು ದೊರೆಯುತ್ತಿರುತ್ತದೆ. ‘ಅಮ್ಮ’ ಎಂಬ ತೊದಲು ನುಡಿಯಿಂದ ಪ್ರಾರಂಭವಾಗಿ ಮಗು ತನ್ನ ತಾಯಿ-ತಂದೆ, ಅಜ್ಜ ಅಜ್ಜಿಯಿಂದ ಮಾತಿನ ಜೊತೆಗೆ ಸಂಸ್ಕಾರ, ಗುಣ-ನಡತೆಯನ್ನು ಕಲಿಯುತ್ತದೆ.
ಮಗು ಕುತೂಹಲದಿಂದ ಪ್ರಪಂಚವನ್ನು ನೋಡುತ್ತ, ಕೇಳುತ್ತ, ಸ್ಪರ್ಶಿಸುತ್ತ ಹಾಗೂ ಅನುಭವಿಸುತ್ತ ಕಲಿಯಲು ಆರಂಭಿಸುತ್ತದೆ. ಉದಾಹರಣೆಗೆ ಮಕ್ಕಳಿಗೆ ಸುತ್ತಮುತ್ತಲಿನ ಪರಿಸರದಲ್ಲಿರುವ ಬಣ್ಣ, ಆಕಾರ, ಚಲನೆ, ಮರದ ಮೇಲಿರುವ ಹಕ್ಕಿ ಅಥವಾ ಟಿ.ವಿ.ಯಲ್ಲಿ ಬರುವ ಕಾರ್ಟೂನ್ ಕೂಡ ಕಲಿಕೆಯ ಭಾಗವಾಗುತ್ತದೆ.
ಒಮ್ಮೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ಕುಟುಂಬ ಪುಟ್ಟ ಮಗುವಿನ ಜೊತೆ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದರು. ಮಗುವೂ ಕೂಡ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಹೆತ್ತವರನ್ನು ಹಿಂಬಾಲಿಸುತ್ತಿತ್ತು. ಪ್ರದಕ್ಷಿಣೆ ಪೂರ್ಣಗೊಂಡ ನಂತರ ಅವರು ಸಾಷ್ಟಾಂಗ ನಮಸ್ಕಾರ ಮಾಡಿದರು. ಅದನ್ನು ನೋಡಿದ ಮಗುವು ಅವರನ್ನು ಅನುಕರಿಸಿತು. ಹೀಗೆ ಹಿರಿಯರ, ತಂದೆ-ತಾಯಿಗಳ ನಡೆನುಡಿ, ಆಡುವ ಮಾತುಗಳು, ಕಥೆಗಳನ್ನು ಮಕ್ಕಳು ಸೂಕ್ಷö್ಮವಾಗಿ ಕೇಳಿಸಿಕೊಳ್ಳುತ್ತಾರೆ ಮತ್ತು ಅನುಕರಿಸುತ್ತಾರೆ. ವರ್ತನೆ, ಮಾಡುವ ಕೆಲಸ, ರೀತಿ ರಿವಾಜುಗಳನ್ನು ಗಮನಿಸಿ ಮಗು ಕಲಿಯುತ್ತದೆ ಮತ್ತು ಅದನ್ನೇ ರೂಢಿಸಿಕೊಳ್ಳುತ್ತದೆ. ಇದು ಮಗುವಿನ ಆರಂಭಿಕ ಕಲಿಕೆಯಾಗಿದೆ. ತದನಂತರ ಶಾಲೆಯಲ್ಲಿ ಅ,ಆ,ಇ,ಈ, ಎ,ಬಿ,ಸಿ,ಡಿ. ಹೀಗೆ ಕಾಗುಣಿತಗಳ ಪ್ರಥಮ ಜ್ಞಾನವನ್ನು ಪಡೆಯುತ್ತಾರೆ. ಅಕ್ಷರಗಳನ್ನು ಬರೆಯುವುದು, ಪದಗಳನ್ನು ಜೋಡಿಸುವುದು, ಓದುವುದು ಹೀಗೆ ಪಾಠಗಳನ್ನು ಮುಂದುವರೆಸುತ್ತಾರೆ.
ಪ್ರಾಥಮಿಕ ಶಿಕ್ಷಣ ಮಕ್ಕಳ ಪಾಲಿಗೆ ಅಮೂಲ್ಯವಾದುದು. ಇದು ಮಕ್ಕಳ ಬದುಕು ರೂಪಿಸುವ ಅಡಿಗಲ್ಲು. ಪಠ್ಯದ ಜೊತೆ ನೈತಿಕ, ಮೌಲ್ಯಯುತ ಶಿಕ್ಷಣ ಒದಗಿದಾಗ ಮಾತ್ರ ಮಕ್ಕಳು ಉತ್ತಮ ಪ್ರಜೆಗಳಾಗಲು ಸಾಧ್ಯ.
ಮನೆ ಕಟ್ಟುವಾಗ ಅದರ ಅಡಿಪಾಯವನ್ನು ಎಷ್ಟು ಗಟ್ಟಿಯಾಗಿ ಹಾಕುತ್ತೇವೆಯೋ ಅಷ್ಟು ಒಳ್ಳೆಯದು. ಅಡಿಪಾಯದ ಗಟ್ಟಿತನದ ಮೇಲೆ ಎಷ್ಟು ಮಹಡಿಗಳನ್ನು ಕಟ್ಟಬಹುದು, ಅದರ ಬಾಳಿಕೆ ಸದೃಢವಾಗಿದೆಯೋ! ಇಲ್ಲವೋ ಎಂಬುದನ್ನು ಅಂದಾಜಿಸಲಾಗುತ್ತದೆ. ಹಾಗೆಯೇ ಮಕ್ಕಳು ಬಾಲ್ಯದಲ್ಲಿ ಎಷ್ಟು ಉತ್ತಮವಾದ ಶಿಕ್ಷಣ, ಸಂಸ್ಕಾರವನ್ನು ಪಡೆಯುತ್ತಾರೋ ಅಷ್ಟೇ ಉತ್ತಮವಾದ ಬದುಕನ್ನು ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಹುಟ್ಟಿ ಬೆಳೆಯುವ ಪರಿಸರ ಮಹತ್ತರವಾದ ಪ್ರಭಾವವನ್ನು ಬೀರುತ್ತವೆ.
ಮಕ್ಕಳ ಕಲಿಕೆ ಪ್ರಶ್ನೆಯಿಂದ ಪ್ರಾರಂಭವಾಗುತ್ತದೆ. ‘ಅಮ್ಮ ಅದು ಯಾಕೆ ಹಾಗೆ? ಅಪ್ಪ ಅದು ಯಾಕೆ ಹೀಗೆ?’ ‘ಟೀಚರ್, ಚಂದಿರ ಏಕೆ ಮೇಲಿದ್ದಾನೆ?’ ಹೀಗೆ ಪ್ರತಿಯೊಂದಕ್ಕೂ ಪ್ರಶ್ನೆ ಕೇಳುತ್ತ ಕುತೂಹಲಭರಿತ ಅನ್ವೇಷಣೆಯ ಮೂಲಕ ಕಲಿಯುತ್ತಾರೆ. ಪ್ರಶ್ನೆ ಮಾಡುವ ಅವರ ಗುಣ ಕಲಿಕೆಗೆ ದಾರಿ ಮಾಡಿಕೊಡುತ್ತದೆ. ಹೀಗೆ ಮಕ್ಕಳು ಬೆಳೆಯುತ್ತಾರೆ.
ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಶಿಕ್ಷಣ ಅಗತ್ಯ. ಪ್ರಾಥಮಿಕ ಹಂತದಿAದ ಹತ್ತನೇ ತರಗತಿಯವರೆಗೆ ಮಕ್ಕಳ ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ನೈತಿಕ ಬೆಳವಣಿಗೆಗೆ ಬುನಾದಿ ದೊರೆಯುತ್ತದೆ. ಈ ಹಂತದ ಶಿಕ್ಷಣದ ಸ್ವರೂಪ ಮತ್ತು ಪಾಠದ ವಿಧಾನಗಳು ಮಕ್ಕಳ ಮನಸ್ಸನ್ನು ತಟ್ಟುತ್ತವೆ. ಉದಾಹರಣೆಗೆ ಕೆಲವೊಮ್ಮೆ ತರಗತಿಯಲ್ಲಿ ಶಿಕ್ಷಕರು ಹಾಡುತ್ತಾ, ಕುಣಿಯುತ್ತಾ ಪಾಠ ಮಾಡಿದರೆ ಮಕ್ಕಳೂ ಕೂಡ ಆಸಕ್ತಿಯಿಂದ ಕೇಳುತ್ತಾರೆ. ಅರ್ಥೈಸಿಕೊಂಡು ಓದಿನಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರಿಗೆ ಯಾವುದೇ ವಿಷಯವೂ ಕಷ್ಟ ಎಂದು ಅನಿಸಲಾರದು.
ಸರಕಾರದ ಸರ್ವಶಿಕ್ಷಣ ಅಭಿಯಾನದ ಭಾಗವಾಗಿರುವ ‘ನಲಿ ಕಲಿ’ ಯೋಜನೆ ಮಕ್ಕಳ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಇದು ಆಟದ ಮೂಲಕ, ಅನುಭವದ ಮೂಲಕ ಅರಿವನ್ನು ಒದಗಿಸಿ ಮಕ್ಕಳು ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತದೆ. ಈ ಮೂಲಕ ಮಕ್ಕಳಲ್ಲಿ ಚತುರತೆ, ಗ್ರಹಣ ಶಕ್ತಿ, ಜ್ಞಾಪಕ ಶಕ್ತಿ, ತಿಳುವಳಿಕೆ ಹಾಗೂ ಕೌಶಲವನ್ನೂ ವೃದ್ಧಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಕಲಿಕೆಯ ಸ್ವರೂಪ ಬದಲಾಗಿದೆ. ಅನೇಕ ಹೊಸ ವಿಧಾನಗಳು ರೂಪುಗೊಂಡಿವೆ. ಪ್ರಯೋಗಗಳು ನಡೆದಿವೆ. ಕೊರೊನಾ ಸಂದರ್ಭದಲ್ಲಿ ಲಾಕ್ಡೌನ್ ಆದಾಗ ಆನ್ಲೈನ್ ಶಿಕ್ಷಣ ಪದ್ಧತಿ ಹೆಚ್ಚು ಪ್ರಚಲಿತವಾಯಿತು. ಮೊಬೈಲ್, ಲ್ಯಾಪ್ಟಾಪ್, ಇಂಟರ್ನೆಟ್ ಬಳಸಿ ಮಕ್ಕಳಿಗೆ ಶಿಕ್ಷಣ ಒದಗಿಸುವ ಕಾರ್ಯ ನಡೆಯಿತು. ಮಕ್ಕಳು ಮನೆಯಲ್ಲೇ ಕುಳಿತು ಶಿಕ್ಷಣ ಪಡೆಯುವ ಪರಿಸ್ಥಿತಿ ಎದುರಾಯಿತು. ಮುಂದಕ್ಕೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸ್ಮಾರ್ಟ್ಕ್ಲಾಸ್ಗಳು ಹೆಚ್ಚು ಪ್ರಚಲಿತವಾದುವು.
‘ಸ್ಮಾರ್ಟ್ಕ್ಲಾಸ್’ ಎಂಬುದು ಸಾಂಪ್ರದಾಯಿಕ ಶೈಲಿಯ ಬೋಧನೆಯ ಜೊತೆಗೆ ಆಧುನಿಕ ತಂತ್ರಜ್ಞಾನಗಳಾದ ವೀಡಿಯೋ, ಆಡಿಯೋ, ಅನಿಮೇಷನ್ ಬಳಸಿ ಮಕ್ಕಳಿಗೆ ಮನದಟ್ಟಾಗುವಂತೆ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ. ನಾಲ್ಕು ಗೋಡೆಯ ನಡುವೆ ಕುಳಿತು ಶಿಕ್ಷಕರಿಂದ ಪಾಠ ಕೇಳುವುದರ ಬದಲಾಗಿ ಪಾಠವನ್ನು ದೃಶ್ಯಾತ್ಮಕವಾಗಿ, ಚಟುವಟಿಕೆಗಳ ಮೂಲಕ ಶಿಕ್ಷಕರು ಪಾಠ ಮಾಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿ ಮಕ್ಕಳ ನೆನಪಿನಲ್ಲಿ ಉಳಿಯುತ್ತದೆ. ಸ್ಮಾರ್ಟ್ಕ್ಲಾಸ್ ಶಿಕ್ಷಣ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ.
ನಗರ ಪ್ರದೇಶಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿದ್ದ ಸ್ಮಾರ್ಟ್ಕ್ಲಾಸ್ ಶಿಕ್ಷಣ ವ್ಯವಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗೂ ದೊರಯಬೇಕು ಎಂಬ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ ಸಂಸ್ಥೆಗಳು ಅನೇಕ ಪ್ರಯತ್ನಗಳನ್ನು ಮಾಡುತ್ತಿವೆ. ಹಳ್ಳಿಗಳಲ್ಲಿರುವ ಮಕ್ಕಳಿಗೆ ಗುಣಮಟ್ಟದ, ಆಧುನಿಕ ಶಿಕ್ಷಣವನ್ನು ತಲುಪಿಸಬೇಕೆಂಬ ನಿಟ್ಟಿನಲ್ಲಿ ಈ ಬಾರಿ ನನ್ನ ರಾಜ್ಯಸಭಾ ಸಂಸದರ ನಿಧಿಯಿಂದ ಬೆಳ್ತಂಗಡಿ ತಾಲೂಕಿನ ೧೦೦ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ಕ್ಲಾಸ್ ಯೋಜನೆಗೆ ೧.೪೬ ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ. ಈ ಮೂಲಕ ಹಳ್ಳಿಗಳಲ್ಲಿರುವ ಮಕ್ಕಳಿಗೆ ಗುಣಮಟ್ಟದ, ಆಧುನಿಕ ಶಿಕ್ಷಣವನ್ನು ತಲುಪಿಸಲು ಸಹಕಾರಿಯಾಗಲಿದೆ ಎಂಬ ಆಶಾಭಾವನೆ ಇದೆ. ಜಗತ್ತು ವೇಗವಾಗಿ ಸಾಗುತ್ತಿದ್ದು ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಹಾಸುಹೊಕ್ಕಿದೆ. ಶಿಕ್ಷಣ ರಂಗದಲ್ಲೂ ಆಧುನಿಕ ತಂತ್ರಜ್ಞಾನ ಬಳಸಿ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಿದಾಗ ಅವರು ಔಟ್ಡೇಟ್ ಆಗದೆ ಅಪ್ಡೇಟ್ ಆಗಲು ಸಾಧ್ಯವಾಗುತ್ತದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆ, ಸೌಕರ್ಯ, ಕಲಿಕಾ ವಿಧಾನ ಮುಂತಾದ ಹಲವು ವಿಚಾರಗಳಲ್ಲಿ ಸಾಕಷ್ಟು ಅಂತರವಿದೆ. ನಗರ ಪ್ರದೇಶದ ಮಕ್ಕಳಿಗೆ ವ್ಯವಸ್ಥೆಗಳು ಕೈಗೆಟಕುವುದರಿಂದ ಕಲಿಕೆಯಲ್ಲೂ ತೊಡಗಿಸಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಆದರೆ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿ ಕಲಿಕೆಯ ಬಗ್ಗೆ ಎಷ್ಟೇ ಆಸಕ್ತಿ ಹೊಂದಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತನಾಗಿ ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಉದಾಹರಣೆಗೆ ಹಳ್ಳಿಯ ಒಂದು ಶಾಲೆಯಲ್ಲಿ ಮಕ್ಕಳು ಭಾರತದ ನಕ್ಷೆಯನ್ನು ಕಲಿಯುವಾಗ ಪಠ್ಯದಲ್ಲಿ ನಕ್ಷೆಯನ್ನು ನೋಡಿದರೆ ನೆನಪಿಟ್ಟುಕೊಳ್ಳುವುದು ಕಷ್ಟ. ಆದರೆ ಸ್ಮಾರ್ಟ್ಕ್ಲಾಸ್ನಲ್ಲಿ ಅನಿಮೇಷನ್ ಮೂಲಕ ನದಿ, ಪರ್ವತದ ಜೊತೆಗೆ ಭಾರತದ ನಕ್ಷೆಯನ್ನು ತೋರಿಸಿದರೆ ಮಕ್ಕಳಲ್ಲಿ ಆಸಕ್ತಿ ಬೆಳೆದು, ಮನಸ್ಸಿನಲ್ಲಿ ಚಿತ್ರಣ ಅಚ್ಚೊತ್ತಿದಂತಿರುತ್ತದೆ ಮತ್ತು ಸಹಜವಾಗಿ ನೆನಪಾಗುತ್ತದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಕಲಿಕೆಗೆ ಸುಲಭವಾದರೆ ಕಲಿಕೆಯಲ್ಲಿ ಅತಿ ಹಿಂದುಳಿದ ವಿದ್ಯಾರ್ಥಿಯೂ ಪಾಠವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.
ಶಿಕ್ಷಕರು ಮಕ್ಕಳಿಗೆ ೩೦ ಪುಟಗಳಷ್ಟಿರುವ ಪಾಠವನ್ನು ಒಮ್ಮೇಲೆ ಮಾಡಿದರೆ ಆಗ ಮಕ್ಕಳ ಮುಖ ಬಾಡಿ ಹೋಗುತ್ತದೆ. ಅಯ್ಯೋ ಎಷ್ಟೊಂದು ಉದ್ದದ ಪಾಠ. ಅದನ್ನು ಓದಿ ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು ಚಿಂತೆ ಮಾಡುತ್ತಾರೆ. ಆದರೆ ಆ ಪಾಠÀಕ್ಕೆ ಸಂಬAಧಪಟ್ಟ ಆಡಿಯೋ-ವೀಡಿಯೋ ತೋರಿಸಿದಾಗ ಮಕ್ಕಳು ಅದನ್ನು ಕಣ್ತುಂಬಿಕೊAಡು ಪಾಠ ಎಷ್ಟು ಸುಲಭವಾಗಿ ಅರ್ಥವಾಯಿತು ಅಲ್ಲವೇ ಎಂದು ಸಹಪಾಠಿಗಳೊಂದಿಗೆ ಮತನಾಡುತ್ತಾರೆ. ಮಕ್ಕಳಿಗೆ ದೃಶ್ಯದ ಮೂಲಕ ಮಾಡಿದ ಪಾಠ ಮನಸ್ಸಲ್ಲಿ ಗಟ್ಟಿಯಾಗಿ ನೆನಪಿನಲ್ಲಿ ಉಳಿಯುತ್ತದೆ. ಇಂತಹ ನವೀನ ಪಾಠದ ವಿಧಾನಗಳು ಈಗ ಮಕ್ಕಳ ಕಲಿಕೆಯಲ್ಲಿ ಹೊಸ ಯುಗವನ್ನೇ ಆರಂಭಿಸುತ್ತಿವೆ. ಶಾಲೆಯ ಬ್ಲಾö್ಯಕ್ಬೋರ್ಡ್ಗಳು ಸ್ಮಾರ್ಟ್ಬೋರ್ಡ್ಗಳಾಗಿ ಬದಲಾಗುತ್ತಿವೆ. ಶಿಕ್ಷಣಕ್ಕೆ ಡಿಜಿಟಲ್ ಸ್ಪರ್ಶ ಒದಗಿಸುವ ಕಾರ್ಯವು ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ವದ ಹಾದಿಯಾಗಿದೆ.
ಡಿಜಿಟಲ್ ಶಿಕ್ಷಣ ಎಲ್ಲರಿಗೂ ಲಭ್ಯವಾಗಿಲ್ಲ. ವಿದ್ಯುತ್, ಇಂಟರ್ನೆಟ್ ಸವಲತ್ತು, ಉಪಕರಣಗಳ ಕೊರತೆ ಇನ್ನೂ ಸಾಕಷ್ಟು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿದೆ. ಅಂತಹ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ, ವಿದ್ಯಾಭಿಮಾನಿಗಳು, ಶಿಕ್ಷಕರು, ಪಾಲಕರು ಒಂದಾಗಿ ಕೆಲಸ ಮಾಡಿದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುವುದು.
ಪ್ರಾಥಮಿಕ ಶಿಕ್ಷಣವು ಮಕ್ಕಳ ಬದುಕಿನ ಅಡಿಪಾಯ. ಈ ಅಡಿಪಾಯ ಬಲವಾಗಬೇಕಾದರೆ, ಕಾಲಕ್ಕನುಗುಣವಾಗಿ ಹೊಸತನಕ್ಕೆ ಒಡ್ಡಿಕೊಂಡು ಶಿಕ್ಷಣ ಕ್ಷೇತ್ರ ಪರಿಷ್ಕರಣೆಗೊಳ್ಳುವುದು ಅಗತ್ಯ. ಸ್ಮಾರ್ಟ್ಕ್ಲಾಸ್ ಎಂಬ ಡಿಜಿಟಲ್ ಸ್ಪರ್ಶವು ಶಿಕ್ಷಣದಲ್ಲಿ ಹೊಸ ಬೆಳಕನ್ನು ತಂದಿದೆ. ಈ ಬೆಳಕು ಎಲ್ಲಾ ಮಕ್ಕಳ ಬದುಕನ್ನು ಬೆಳಗಿಸಲಿ ಎಂಬುದು ನಮ್ಮ ಆಶಯ.
