ಗುಟ್ಟು ಯಾಕೆ?

ಗಂಡ-ಹೆಂಡತಿ, ಅಪ್ಪ-ಮಗ, ತಾಯಿ-ಮಗಳು ಹೀಗೆ ಅತ್ಯಂತ ನಿಕಟ ಸಂಬಂಧಗಳ ಮಧ್ಯೆಯೂ ಹಲವಾರು ಹೇಳಲಾಗದ, ಹೇಳಬಾರದ ಗುಟ್ಟುಗಳು ಅಡಗಿರುತ್ತವೆ. ಗುಟ್ಟುಗಳನ್ನು ಬಚ್ಚಿಟ್ಟುಕೊಳ್ಳುವವ ಬುದ್ಧಿವಂತ. ಗುಟ್ಟುಗಳನ್ನು ನಾವೇ ಗುಟ್ಟಾಗಿರಿಸಿಕೊಳ್ಳುವುದು ಬುದ್ಧಿವಂತಿಕೆ. ಆದರೆ ಇನ್ನೊಬ್ಬರು ತಮ್ಮ ಗುಟ್ಟುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಭಾವಿಸುವುದು ಮೂರ್ಖತನ. ತನ್ನ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಬಹುದೆಂಬ ಸಂದೇಹದಲ್ಲಿ ‘ಯಾರಲ್ಲಿ ಹೇಳಬಾರದೆಂದು’ ಭಾಷೆ ತೆಗೆದುಕೊಂಡು ಇತರರಲ್ಲಿ ಗುಟ್ಟಾಗಿ ಹೇಳಿದ ಗುಟ್ಟುಗಳು ಎಂದೂ ಗುಟ್ಟಾಗಿ ಉಳಿಯುವುದಿಲ್ಲ. ಇನ್ನೊಬ್ಬನ ಕಿವಿಯಲ್ಲಿ ಗುಟ್ಟಾಗಿ ಹೇಳಿದ ವಿಷಯ ಕ್ಷಣಾರ್ಧದಲ್ಲಿ ಹತ್ತಿಪ್ಪತ್ತು ಮೈಲಿ ದೂರದಲ್ಲಿರುವವರಿಗೂ ಗೊತ್ತಾಗಿಬಿಡುತ್ತದೆ. ಪ್ರೀತಿ, ಕೆಮ್ಮು ಮತ್ತು ಕಾಯಿಲೆ ಈ ಮೂರನ್ನು ಅಡಗಿಸಿಡಲಾಗುವುದಿಲ್ಲ ಅನ್ನುತ್ತಾರೆ. ಹಾಗೆಯೇ ಸುಳ್ಳು, ಶ್ರೀಮಂತಿಕೆ ಮತ್ತು ದುಃಖವನ್ನೂ ಅಡಗಿಸಿಡಲು ಸಾಧ್ಯವಾಗುವುದಿಲ್ಲ. ಯಾರು ಇತರರ ಗುಟ್ಟುಗಳನ್ನು ಯಾವಾಗಲೂ ನಮ್ಮ ಕಿವಿಯಲ್ಲಿ ಹೇಳುತ್ತಿರುತ್ತಾರೋ ಅಂಥವರ ಬಳಿ ನಮ್ಮ ಯಾವುದೇ ಗುಟ್ಟುಗಳನ್ನು ಹೇಳಬಾರದು. ಅವರು ನಮ್ಮ ಗುಟ್ಟುಗಳನ್ನು ಹೇಳಲು ಯೋಗ್ಯರಲ್ಲ.
ಮಕ್ಕಳು ಚಿಕ್ಕವರಿರುವಾಗ ಅವರ ಮನಸ್ಸು ಶುಭ್ರವಾಗಿರುತ್ತದೆ. ಅವರಲ್ಲಿ ಒಳ-ಹೊರಗೆ ಹೇಳಬಹುದಾದ, ಹೇಳಲಾಗದ ವಿಷಯಗಳೆಂಬ ಭೇದ ಇರುವುದಿಲ್ಲ. ಹಾಗಾಗಿ ತನ್ನ ನೆರೆಮನೆಯವರ, ನಮ್ಮ ಹಿರಿಯರ ಬಗ್ಗೆ ನಾವು ಏನಾದರೂ ವ್ಯಂಗ್ಯದ ಮಾತನಾಡಿದ್ದರೆ, ಟೀಕೆ ಮಾಡಿದ್ದರೆ ಆ ಮಕ್ಕಳು ಅವರು ಮನೆಗೆ ಬಂದ ತಕ್ಷಣ ‘ನಿನ್ನೆ ನಿಮ್ಮ ಬಗ್ಗೆ ಅಮ್ಮ ಹೀಗೆ ಹೇಳುತ್ತಿದ್ದರು’ ಎಂದು ಹೇಳಿ ಬಿಡುತ್ತಾರೆ. ಆಗ ಆಗುವ ಮುಜುಗರವನ್ನು ತಪ್ಪಿಸಿಕೊಳ್ಳುವುದು ಬಹಳ ಕಷ್ಟ. ಕೆಲವೊಮ್ಮೆ ಮಕ್ಕಳಿಗೆ ‘ನೀನೊಬ್ಬನೆ ತಿನ್ನು’ ಎಂದು ಕದ್ದುಮುಚ್ಚಿ ತಿಂಡಿ ಕೊಟ್ಟರೆ ತಿಂದು ಹೊರಗೆ ಹೋಗಿ ‘ಅಮ್ಮ ನೀನೊಬ್ಬನೇ ತಿನ್ನು ಅಂತ ನನಗೆ ತಿಂಡಿ ಕೊಟ್ಳು’ ಎಂದು ಹೇಳಿ ಬಿಡುತ್ತಾರೆ. ಇತ್ತೀಚೆಗೆ ಟಿ.ವಿ. ಶೋ ಒಂದರಲ್ಲಿ ಅಪ್ಪ-ಅಮ್ಮನ ಗುಟ್ಟುಗಳನ್ನು ಚಿಕ್ಕ ಮಕ್ಕಳ ಬಾಯಿಯಿಂದ ಹೊರಡಿಸುವ ಕಾರ್ಯಕ್ರಮವೊಂದು ನಡೆಯುತ್ತಿತ್ತು. ನಮ್ಮ ಸಂಭಾಷಣೆ, ಜಗಳಗಳನ್ನೆಲ್ಲಾ ಮಕ್ಕಳು ನೋಡಿ ನೆನಪಿಟ್ಟುಕೊಂಡು ಶೋನಲ್ಲಿ ಹೇಳುವುದನ್ನು ಕೇಳಿ ಹೆತ್ತವರಿಗೆ ಆಶ್ಚರ್ಯವಾಗುತ್ತಿತ್ತು.
ಹೀಗೆ ಪಾರದರ್ಶಕವಾಗಿದ್ದ ಬಾಲ್ಯವನ್ನು ಕಳೆದು ದೊಡ್ಡವರಾಗುತ್ತಾ ಬಂದಂತೆ ಹೇಳಲಾಗದ ಅನೇಕ ಗುಟ್ಟುಗಳು ಮಕ್ಕಳ ಮನಸ್ಸಿನಲ್ಲಿ ಸೇರಿಕೊಳ್ಳುತ್ತವೆ. ಪ್ರತಿಯೊಂದಕ್ಕೂ ಬೆದರಿಸುವ, ಶಿಕ್ಷಿಸುವ ಹೆತ್ತವರಿದ್ದರಂತೂ ಮಕ್ಕಳು ಮತ್ತಷ್ಟು ಅಂತರ್‌ಮುಖಿಗಳಾಗುತ್ತಾರೆ. ತಮ್ಮ ಸ್ನೇಹಿತೆಯರೊಂದಿಗೆ ಹಂಚಿಕೊಳ್ಳಬಹುದಾದ ವಿಚಾರಗಳನ್ನು ಅಪ್ಪ-ಅಮ್ಮನೊಂದಿಗೆ ಹಂಚಿಕೊಳ್ಳುವುದಿಲ್ಲ. ಅದಕ್ಕೆ ತಿಳಿದವರು ಹೇಳುತ್ತಾರೆ ಬಾಲ್ಯ ಕಳೆದು ಯೌವನಕ್ಕೆ ಬಂದಾಗ ನಾವು ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕಂತೆ. ಅವರ ಮಾತುಗಳನ್ನು ಗಮನವಿಟ್ಟು ಕೇಳುವ, ಅವರಿಂದಾದ ತಪ್ಪುಗಳನ್ನು ಒಪ್ಪಿ ತಿದ್ದಿ, ಬುದ್ಧಿ ಹೇಳಿ ಸರಿದಾರಿಗೆ ತರುವ, ಅವರ ಸ್ನೇಹಿತರನ್ನು ಗಮನಿಸುವ ಕೆಲಸವನ್ನು ಹೆತ್ತವರು ಮಾಡಬೇಕಾಗುತ್ತದೆ. ಇತ್ತೀಚೆಗಂತೂ ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಅಥವಾ ಇನ್ಯಾವುದೋ ಸಂದರ್ಭದಲ್ಲಿ ತಪ್ಪು ಮಾಡಿ ಅದನ್ನು ಮನೆಯಲ್ಲಿ ಹೇಳಲು ಆಗದೇ ಇದ್ದಾಗ ಮಕ್ಕಳು ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವುದೂ ಇದೆ. ಕೆಲವೊಮ್ಮೆ ಅವರದಲ್ಲದ ತಪ್ಪಿನಿಂದ ಅವರ ಮೇಲೆ ಅತ್ಯಾಚಾರ ನಡೆದಾಗಲೂ ಅದನ್ನು ಹೆತ್ತವರಲ್ಲಿ ಹೇಳಿಕೊಳ್ಳಲಾಗದೆ ಹೆದರಿ ಅನಾಹುತಗಳಾಗುವುದೂ ಇದೆ. ಇದೆಲ್ಲದಕ್ಕೂ ಪರಿಹಾರವೆಂದರೆ ತಂದೆ-ತಾಯಿ ಭಯಪಡಿಸುವುದಕ್ಕಿಂತ ಭರವಸೆ, ಸಾಂತ್ವನಗಳ ಮೂಲಕ ತಮ್ಮ ಮಕ್ಕಳು ತಮ್ಮೊಂದಿಗೆ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಬಿಚ್ಚಿ ಹೇಳುವಂತಹ ವಾತಾವರಣವನ್ನು ನಿರ್ಮಿಸಬೇಕು.
ಇನ್ನೊಬ್ಬರ ಗುಟ್ಟುಗಳನ್ನು ಪ್ರಕಟಪಡಿಸುವುದು ಪಾಪದ ಕೆಲಸ. ಆದರೆ ಇನ್ನೊಬ್ಬರ ಒಳ್ಳೆಯತನವನ್ನು ಬಹಿರಂಗಪಡಿಸುವುದು ಪುಣ್ಯದ ಕೆಲಸ. ಈಗಿನ ಮೊಬೈಲ್ ಯುಗದಲ್ಲಿ ಆಗಾಗ ದೊಡ್ಡವರ, ಸೆಲೆಬ್ರೆಟಿಗಳ ಗುಟ್ಟನ್ನು ಬಿಚ್ಚಿಡುವ ಕೆಲಸ ಆಗುತ್ತಲೇ ಇರುತ್ತದೆ. ಅದರಲ್ಲಿ ಸತ್ಯಾಂಶ ಇದೆಯೋ, ಇಲ್ಲವೋ ಅದು ಬೇರೆ ವಿಚಾರ. ಆದರೆ ಇನ್ನೊಬ್ಬರ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬ ಮನುಷ್ಯನ ಕೀಳು ಅಭಿರುಚಿಯೇ ಇಂತಹ ಸುಳ್ಳುಗಳನ್ನು ಹರಡಲು ಕಾರಣವಾಗುತ್ತದೆ. ತನ್ನ ಎಲೆಯಲ್ಲಿ ಇಲಿ ಬಿದ್ದಿದ್ದರೂ, ಬೇರೋಬ್ಬರ ಎಲೆಯಲ್ಲಿ ನೊಣ ಹುಡುಕುವ ಬುದ್ಧಿ ನಮ್ಮದು. ನಾಲ್ಕು ಜನ ಸೇರಿದಾಗ ತಮ್ಮನ್ನು ಬಿಟ್ಟು ಇತರರ ಅವಗುಣಗಳನ್ನು ಹೇಳುವುದರಲ್ಲಿ ಗಂಟೆಗಳೇ ಉರುಳಿ ಹೋದದ್ದು ಗೊತ್ತಾಗುವುದಿಲ್ಲ. ಇತರರ ಬಗ್ಗೆ ಯೋಚಿಸುವ, ಗುಟ್ಟುಗಳ ಬಗ್ಗೆ ಕಲ್ಪಿತ ಕಥೆಗಳನ್ನು ಕಟ್ಟಿ ಮಾತನಾಡಿ ಬಾಯಿಚಪಲ ತೀರಿಸಿಕೊಳ್ಳುವುದಕ್ಕಿಂತ ನಮ್ಮ ಬಗ್ಗೆ ನಾವು ಯೋಚಿಸಿದ್ದಲ್ಲಿ ಬದುಕು ಸುಂದರಗೊಳ್ಳುತ್ತದೆ.
ನಮ್ಮಲ್ಲಿರುವ ಕೆಟ್ಟ ಕುತೂಹಲಗಳನ್ನು ಬದಿಗಿರಿಸಿ ಉತ್ತಮ ಸಮಾಜಮುಖಿ ಕೆಲಸಗಳಲ್ಲಿ, ಒಳ್ಳೆಯವರ ಸಂಗದಲ್ಲಿ, ಮಾಹಿತಿಯುಕ್ತ ಪುಸ್ತಕಗಳನ್ನು ಓದುವ ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಜೀವನ ಸಾರ್ಥಕವಾಗಬಲ್ಲದು.

Facebook
Twitter
WhatsApp
LinkedIn
Telegram