ಬೋರೇಗೌಡರು ಮರದಿಂದ ಬಿದ್ದು ನಿತ್ರಾಣರಾದರು. ವೈದ್ಯರ ಸಲಹೆಯಂತೆ ಯೋಗಾಭ್ಯಾಸಕ್ಕೆಂದು ಹೋದವರು ಆಹಾರ ಮತ್ತು ಆರೋಗ್ಯದ ನಡುವೆ ಇರುವ ಸಂಬಂಧವನ್ನು ತಿಳಿದುಕೊಂಡರು. ರಾಸಾಯನಿಕದಿಂದ ಆರೋಗ್ಯದ ಮೇಲಾಗುತ್ತಿರುವ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ತಾನು ಕೊಟ್ಟಿಗೆ ಗೊಬ್ಬರದಲ್ಲಿ ಭತ್ತ ಬೆಳೆಯುವ ಪ್ರಯತ್ನಕ್ಕಿಳಿದರು. ಇದೀಗ ಇವರ ಜಮೀನಿನಲ್ಲಿ 210 ತಳಿಯ ಭತ್ತಗಳು ಸಿದ್ಧಗೊಂಡಿವೆ. ಭತ್ತದ ರಕ್ಷಣೆ ಮತ್ತು ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರತ್ಯೇಕ ‘ಭತ್ತದ ಮ್ಯೂಸಿಯಂ’ ಅನ್ನು ತೆರೆಯುವ ಮೂಲಕ ಗೌಡರು ಭತ್ತದ ಬೋರೇಗೌಡರೆಂದೆನಿಸಿಕೊoಡಿದ್ದಾರೆ.
ಮoಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ಎಸ್. ಬೋರೇಗೌಡರು ತನಗಿರುವ ಎರಡುವರೆ ಎಕರೆ ಜಮೀನಿನಲ್ಲಿ ಇತರರಂತೆ ಮಳೆಯಾಶ್ರಿತ ಬೆಳೆಗಾಗಿ ರಾಗಿ, ತರಕಾರಿ ಬೆಳೆಯುವ ಬದಲು ಭತ್ತ ಬೆಳೆದಿದ್ದಾರೆ. ಭತ್ತದ ತಳಿಗಳನ್ನು ಸಿದ್ಧಪಡಿಸುವ ಕೆಲಸದಲ್ಲೂ ಯಶಸ್ಸನ್ನು ಪಡೆದಿದ್ದಾರೆ.
ನೈಸರ್ಗಿಕ ಕೃಷಿ ಪದ್ಧತಿ : 2004ರಲ್ಲಿ ಸುಭಾಷ್ ಪಾಳೇಕರ್ ಎನ್ನುವ ನೈಸರ್ಗಿಕ ಕೃಷಿಯ ಪರಿಚಯವಾಯಿತು. ನೈಸರ್ಗಿಕ ಕೃಷಿಗೆ ಹೊಂದಿಕೊಳ್ಳುವ ಭತ್ತದ ತಳಿಗಳಿಗಾಗಿ ಹುಡುಕಾಟ ಆರಂಭಿಸಿದರು. ತಳಿಗಳಿಗಾಗಿ ಕರ್ನಾಟಕವನ್ನೆಲ್ಲಾ ಸುತ್ತಾಡಿದರು. 2006ರ ಹೊತ್ತಿಗೆ 12 ಜಾತಿ ಭತ್ತದ ತಳಿಗಳು ಬೋರೇಗೌಡರ ಗದ್ದೆಯಲ್ಲಿ ನೆಲೆಯೂರಿದವು. 2007ರಲ್ಲಿ ಧರ್ಮಸ್ಥಳದಲ್ಲಿ ನಡೆದ ‘ಮುಂಗಾರಿಗೆ ಬೀಜ ಸಂರಕ್ಷಕರ ಜಾತ್ರೆ’ಯಲ್ಲಿ ತನ್ನ ಸಂಗ್ರಹದ ಭತ್ತದ ತಳಿಗಳನ್ನು ಪ್ರದರ್ಶನಕಿಟ್ಟರು. ನಂತರ ಹೊಸ ತಳಿಗಳನ್ನು ತಂದು ಬಿತ್ತಿದರು. ಚಿನ್ನಪೊನ್ನಿ, ಮೈಸೂರು ಮಲ್ಲಿಗೆ, ರತ್ನ ಚೂಡಿ, ರಾಜಕಯಮೆ, ಭಾಸ್ಮತಿ, ನಾಗಭತ್ತ, ಗಂಧಸಾತಿ, ಮೊರಡ್ಡ, ಜೀರಿಗೆ ಸಾಂಬ, ಸೇಲಂಸಣ್ಣನವರ ಮುಂತಾದ 27 ಜಾತಿಯ ಭತ್ತದ ತಳಿಗಳನ್ನು ಗದ್ದೆಯಲ್ಲಿ ನೆಟ್ಟರು. ಹೀಗೆ ಆರಂಭವಾದ ಭತ್ತದ ತಳಿಗಳ ಸಂರಕ್ಷಣೆ ಇಂದು210ರ ಗಡಿಗೆ ಬಂದು ನಿಂತಿದೆ.
ಇದೀಗ ತನಗಿರುವ ಎರಡುವರೆ ಎಕರೆ ಜಮೀನಿನ ಜೊತೆಗೆ ಆರು ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಅದರಲ್ಲೂ ಹನ್ನೆರಡು ತಳಿಯ ಭತ್ತವನ್ನು ಬಿತ್ತುತ್ತಿದ್ದಾರೆ. ಪ್ರತಿ ವರ್ಷ ಎರಡು ಎಕರೆಯಲ್ಲಿ ತಾನೇ ಸಂಶೋಧಿಸಿದ ಸಿದ್ಧಸಣ್ಣ ಭತ್ತ ಬೆಳೆದು ಅಕ್ಕಿಯನ್ನು ಮಾರಾಟ ಮಾಡುತ್ತಾರೆ. ಈ ತಳಿಯ ಅಕ್ಕಿಗೆ ಕೆ.ಜಿ.ಗೆ ರೂ. 120 ದರವಿದೆ. ಪ್ರತಿವರ್ಷ ರೈತರಿಗೆ ಬೀಜಕ್ಕಾಗಿ ಇಪ್ಪತ್ತು ತಳಿಯ ಭತ್ತವನ್ನು ಬೆಳೆಯುತ್ತಾರೆ.
ಹೊರರಾಜ್ಯಗಳಿಂದ ಬೇಡಿಕೆ : ಆಂಧ್ರ, ತಮಿಳುನಾಡು, ಒರಿಸ್ಸಾ ಮುಂತಾದ ರಾಜ್ಯಗಳಿಗೆ ಇಲ್ಲಿಂದ ಬೇರೆ ಬೇರೆ ಭತ್ತದ ತಳಿಯ ಬೀಜಗಳು ರಫ್ತಾಗುತ್ತವೆ. ಬೀಜಕ್ಕೆ ರೂ. 60 ರಿಂದ120ರವರೆಗೆ ದರವಿದೆ. ಪ್ರತಿ ವರ್ಷ 50 ಕ್ವಿಂಟಾಲ್ ಬೀಜವನ್ನು ಮಾರಾಟ ಮಾಡುತ್ತಾರೆ. ಇವರ ಪ್ರಯತ್ನಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯ ‘ಅನ್ನಪೂರ್ಣೇಶ್ವರಿ’ ಸ್ವಸಹಾಯ ಸಂಘದ ಸದಸ್ಯರಾಗಿರುವ ಇವರ ಪತ್ನಿ ಹೇಮಾವತಿ ಕೂಡಾ ಸಾಥ್ ನೀಡುತ್ತಾರೆ.
ಭತ್ತದ ತಳಿಗಳು : ಸಿಪ್ಪಾಗಂಗ್, ಗಿಡ್ಡ ಬಾಸ್ಮತಿ, ಕಲನಮಕ್, ಅಂಬೆಮೋರ್, ಹೊಳೆಸಾಲು, ಚಿಪ್ಪಿಗ, ಪರಿಮಳಸಣ್ಣ, ಮುಕ್ಕಣ್ಣುಸಣ್ಣ, ಕೃಷ್ಣಲೀಲಾ, ಬಾಸ್ಮತಿ ಸುಗಂಧ, ಗಂಧಸಾಲೆ, ಎಚ್‌ಎಂಟಿ, ಜೀರಿಗೆ ಸಾಂಬ್, ರತ್ನ ಚೂಡಿ, ನಾಗಾಭತ್ತ, ಗೌರಿಸಣ್ಣ, ಬಂಗಾರಸಣ್ಣ, ನವರ, ಬಾದ್‌ಷಾ, ಬೋಗ್, ಬೋರೇಗೌಡ 1,2,3,4,5,6,7 ಮಾಲ್ಗು ಡಿ ಸಣ್ಣ, ರಾಜ್ ಬೋಗ್, ಕಪ್ಪು ಬಾಸ್ಮತಿ, ಕುರಿಗೆ ನೆಲ್ಲು, ದೆಹಲಿ ಬಾಸ್ಮತಿ, ಮೆಹಾಡಿ, ಚೋಮಲ್, ಎಂಎನ್ನೆಸ್ 2, ಜೀರಿಗೆ ಸಣ್ಣ, ಸೇಲಂಸಣ್ಣ, ತೊಂಡಿ, ತೊನ್ನುರು ರಾಮಾತೊಂದಿ, ಬಿಳಿನೆಲ್ಲು, ಬರ್ಮಾ ಬ್ಲಾಕ್, ರಸದ್ಯಂ ಮುಂತಾದ ತಳಿಗಳು ಬೋರೇಗೌಡರ ಬಳಿಯಿವೆ.
ಹೆತ್ತವರ ಹೆಸರಿನ ಭತ್ತದ ತಳಿ : ತಾವು ಸಂಶೋಧಿಸಿದ ತಳಿಗಳಿಗೆ ವಿಶ್ವವಿದ್ಯಾಲಯದವರು ಸಂಖ್ಯೆಯೊoದನ್ನು ನೀಡುತ್ತಾರೆ. ಇವರು ಒಂದು ತಳಿಗೆ ತಂದೆ ಸಿದ್ಧೇಗೌಡ ತಾಯಿ ಸಣ್ಣಮ್ಮರವರ ಹೆಸರನ್ನು ಸೇರಿಸಿ ಅವರ ನೆನಪಿಗಾಗಿ ಇಬ್ಬರ ಹೆಸರಿನ ಪದ ಬಳಸಿ ‘ಸಿದ್ಧಸಣ್ಣ’ ಎಂಬ ತಳಿಯನ್ನು ತಯಾರಿಸಿದ್ದಾರೆ. ಈ ತಳಿಗೆ ಇಂದಿಗೂ ಬಹುಬೇಡಿಕೆಯಿದೆ.
ಸಿದ್ಧಸಣ್ಣ ತಳಿಯ ವಿಶೇಷತೆ : ಈ ತಳಿ ಅಧಿಕ ರೋಗನಿರೋಧಕ ಗುಣವನ್ನು ಹೊಂದಿದೆ. ಸಾವಯವದಲ್ಲಿ ಎಕರೆಗೆ 20 ಕ್ವಿಂಟಾಲ್ ಇಳುವರಿ ನೀಡುವುದು ಈ ತಳಿಯ ವೈಶಿಷ್ಟ್ಯ. ಅಧಿಕ ಹುಲ್ಲು ದೊರೆಯುತ್ತದೆ. ಒಂದು ಕ್ವಿಂಟಾಲ್ ಭತ್ತದಲ್ಲಿ 65 ಕೆ.ಜಿ ಅಕ್ಕಿ ದೊರೆಯುತ್ತದೆ. ಹುಲ್ಲು ಕೂಡಾ ನೆಲಕ್ಕೆ ಬೀಳುವುದಿಲ್ಲ. ಬೆಳಗಿನ ತಿಂಡಿ ತಯಾರಿಗೆ ಸಿದ್ಧಸಣ್ಣ ತಳಿ ಅಕ್ಕಿಯನ್ನು ಬಳಸಬಹುದು. ಪಲಾವ್, ಚಿತ್ರನ್ನಾ, ಪುಳಿಯೋಗರೆ, ವಾಂಗಿ ಬಾತ್‌ಗೆ ಹೇಳಿ ಮಾಡಿಸಿದ ತಳಿಯಿದು. ಸೋನಾ ಮಸೂರಿಗೆ ಇದು ಪರ್ಯಾಯವಾಗಿದೆ.
ರಾಸಾಯನಿಕ ಗೊಬ್ಬರ ಬಳಸಿ ಪಡೆಯುವ ಇಳುವರಿಗಿಂತ ಸಾವಯವದಲ್ಲಿ ಅಧಿಕ ಇಳುವರಿ ಪಡೆಯಬಹುದೆಂಬುವುದನ್ನು ಬೋರೇಗೌಡರವರು ತೋರಿಸಿಕೊಟ್ಟಿದ್ದಾರೆ. ಭೂತಾಯಿ ಸಂರಕ್ಷಣೆಯ ನಿಟ್ಟಿನಲ್ಲಿ ಇವರ ಪ್ರಯತ್ನ ಅನುಕರಣೀಯವಾಗಿದೆ. ಇವರಿಂದ ಮಾಹಿತಿ ಪಡೆದು ತಮ್ಮ ಭೂಮಿಯನ್ನು ಸಾವಯವಗೊಳಿಸಿಕೊಳ್ಳಬಹುದಾಗಿದೆ. ಅಪ್ಪಟ ಸಾವಯವದಲ್ಲಿ ಬೆಳೆದ ಅಕ್ಕಿ, ಭತ್ತದ ತಳಿಗಳು ಬೇಕೆಂದರೆ ಗೌಡರನ್ನು ಸಂಪರ್ಕಿಸಬಹುದಾಗಿದೆ. ಸಾವಯವ ಬೆಲ್ಲವನ್ನು ಇವರು ತಯಾರಿಸುತ್ತಿದ್ದಾರೆ. ಸಾವಯವದಲ್ಲಿ ಭತ್ತ ಬೆಳೆಯುವ ಒಂದಷ್ಟು ಮಂದಿ ಇದ್ದಾರೆ. ಆದರೆ ಭತ್ತಕ್ಕಾಗಿ ಮ್ಯೂಸಿಯಂ ತೆರೆದ ಅಪೂರ್ವ ವ್ಯಕ್ತಿ ಇವರಾಗಿದ್ದಾರೆ.
ಇವರ ಪ್ರಯತ್ನಗಳಿಗೆ ರಾಜ್ಯ, ರಾಷ್ಟçಮಟ್ಟದ ಪ್ರಶಸ್ತಿಗಳು ಸಂದಿವೆ. ನೀವು ಬೋರೇಗೌಡರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್ : 7829020746.
