ಜಗತ್ತನ್ನೇ ಬೆದರಿಸುತ್ತಿರುವ ಅಣ್ವಸ್ತ್ರ ಲೋಕದ ಸುತ್ತಮುತ್ತ

ಸುಮಾರು ಎಂಟು ದಶಕಗಳ ಹಿಂದೆ ಜಪಾನ್ ಮೇಲೆ ಅಣು ಬಾಂಬ್ ಹಾಕಿ ಎರಡು ಲಕ್ಷ ಜನರ ಪ್ರಾಣ ತೆಗೆದು ರಕ್ಕಸತನ ಮೆರೆದಿದ್ದ ಅಮೆರಿಕವು ಇಂದು ಅದೇ ಅಣು ಶಕ್ತಿ ಹೆಸರಿನ ಇರಾನ್ ಅನ್ನು ನಿರ್ನಾಮ ಮಾಡುವ ಪ್ರಯತ್ನಕ್ಕಿಳಿದಿದೆ. ಈ ಜಗತ್ತು ಕಂಡ ಪ್ರಳಯಾಂತಕ ಅಣು ಬಾಂಬ್ ಮೂಲಕ ವಿಶ್ವವು ತನ್ನದೇ ಆಯಾಮದಲ್ಲಿ ಶಾಂತಿ ವ್ಯಾಖ್ಯಾನವನ್ನು ಮಾಡುತ್ತಿದೆ. ಅಂತಾರಾಷ್ಟ್ರೀಯ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲದವರಿಗೆ ಈ ಅಣು ಬಾಂಬ್ ದೊಡ್ಡ ಗೊಂದಲವನ್ನು ಸೃಷ್ಟಿಸಿದೆ. ಏಕೆಂದರೆ ಇದರಿಂದ ಶಾಂತಿ ಸ್ಥಾಪನೆ ಆಗುತ್ತಿದೆಯೇ ಅಥವಾ ಕೆಡುತ್ತಿದೆಯೇ ಎನ್ನುವುದು ಇನ್ನೂ ಗಟ್ಟಿಯಾಗಿ ಯಾರಿಂದಲೂ ಹೇಳಲಾಗುತ್ತಿಲ್ಲ.
ಇರಾನ್‌ನಲ್ಲಿನ ಪರಮಾಣು ಶಕ್ತಿಯನ್ನು ಸರ್ವನಾಶ ಮಾಡುವವರೆಗೆ ವಿರಾಮವಿಲ್ಲ ಎಂದು ವಿಶ್ವದ ಆರ್ಥಿಕತೆಯನ್ನೇ ಅಮೆರಿಕ ಅಲುಗಾಡಿಸುತ್ತಿದೆ. ಈ ಸಂದಿಗ್ಧ ಸ್ಥಿತಿಯಲ್ಲಿ ವಿಶ್ವ ಪರಮಾಣು ಬಾಂಬ್ ನಿರ್ವಹಣೆ, ಉತ್ಪಾದನೆ ಹಾಗೂ ಸಂಗ್ರಹದ ಕುರಿತಂತೆ ಒಂದು ಸಮಗ್ರ ಚಿತ್ರಣ ಇಲ್ಲಿದೆ.
ಅಣು ಬಾಂಬ್ ಸ್ಥಿತಿಗತಿ
ಜಗತ್ತಿನಲ್ಲಿ ಅಧಿಕೃತವಾಗಿ ಸುಮಾರು 12,400ಕ್ಕಿಂತಲೂ ಹೆಚ್ಚು ಅಣು ಬಾಂಬ್‌ಗಳಿವೆ. ಅಂತಾರಾಷ್ಟ್ರೀಯ ಶಕ್ತಿ ಏಜೆನ್ಸಿಯ ಅಧಿಕೃತ ಮಾಹಿತಿ ಪ್ರಕಾರ ಎಂಟು ರಾಷ್ಟ್ರಗಳು ಈ ಪ್ರಮಾಣದ ಬಾಂಬ್‌ಗಳನ್ನು ಹೊಂದಿವೆ. ವಿಪರ್ಯಾಸವೆಂದರೆ ಶೇ. 88ರಷ್ಟು ಬಾಂಬ್‌ಗಳು ಅಮೆರಿಕ ಹಾಗೂ ರಷ್ಯಾದ ಬಳಿಯೇ ಇವೆ. ಉಳಿದ ಆರು ರಾಷ್ಟ್ರಗಳ ಬಳಿ ಶೇ. 12ರಷ್ಟು ಬಾಂಬ್‌ಗಳಿವೆ. ಅಚ್ಚರಿಯೆಂದರೆ ಈ ಪರಮಾಣು ಬಾಂಬ್ ಹೊಂದಿರುವ 13ನೇ ರಾಷ್ಟ್ರವು ಆಗಿದ್ದು, ಇಲ್ಲಿಯವರೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಧಿಕೃತಗೊಳಿಸಲಾಗಿಲ್ಲ.
ಅಮೆರಿಕ (5,500) ಹಾಗೂ ರಷ್ಯಾವನ್ನು (5,400) ಹೊರತುಪಡಿಸಿ ಚೀನಾ (6000), ಫ್ರಾನ್ಸ್ (290), ಇಂಗ್ಲೆಂಡ್ (225), ಭಾರತ (180), ಪಾಕಿಸ್ತಾನ (170), ಉತ್ತರ ಕೊರಿಯಾ (50) ಹಾಗೂ ಇಸ್ರೇಲ್ (90) ಬಳಿ ಅಣು ಬಾಂಬ್‌ಗಳಿವೆ. ಒಂದು ಅಂದಾಜಿನ ಪ್ರಕಾರ ಇವೆಲ್ಲ ಬಾಂಬ್‌ಗಳನ್ನು ಒಮ್ಮೆಲೆ ಹಾಕಿದರೆ ಜಗತ್ತಿನ ಎಲ್ಲ ಮೆಟ್ರೋ ನಗರಗಳನ್ನು ಸರ್ವನಾಶ ಮಾಡಬಹುದು. ಅಂದಹಾಗೆ ಜಪಾನ್‌ನ ಹಿರೋಶಿಮಾ ಹಾಗೂ ನಾಗಸಾಕಿಯ ಮೇಲೆ ಅಮೆರಿಕವು 1945ರಲ್ಲಿ ಅಣು ಬಾಂಬ್ ಹಾಕಿದ್ದಾಗ ಸುಮಾರು 36 ಕಿ.ಲೋ. ಟನ್ ಅನ್ನು ಮಾತ್ರ ಬಳಸಲಾಗಿತ್ತು.
ವಿಶ್ವಯುದ್ಧದ ಬಳಿಕ ಅಣು ಬಾಂಬ್ ಬಗೆಗಿನ ಕುತೂಹಲ ಹೆಚ್ಚಾಯಿತು. ಅದರಲ್ಲೂ ಅಮೆರಿಕ ಹಾಗೂ ರಷ್ಯಾದ ನಡುವಿನ ಶೀತಲ ಸಮರದ ಕಾರಣದಿಂದ ಎರಡೂ ದೇಶಗಳು ಪೈಪೋಟಿಗೆ ಬಿದ್ದು ಅಣು ಬಾಂಬ್ ತಯಾರಿಸಿದವು. ಶೀತಲ ಸಮರ ಅಂತ್ಯಕಾಣುವ ವೇಳೆಗೆ ಸುಮಾರು 70 ಸಾವಿರ ಅಣು ಬಾಂಬ್ ವಾರ್‌ಹೆಡ್‌ಗಳಿದ್ದವು. ಅಂತಾರಾಷ್ಟ್ರೀಯ ಶಾಂತಿ ಒಪ್ಪಂದ ಹಾಗೂ ಅಣು ಶಕ್ತಿ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ವಾರ್‌ಹೆಡ್‌ಗಳ ಸಂಖ್ಯೆ ಕಡಿಮೆಯಾಯಿತು.
ಇಂದು ಒಂದು ಅಂದಾಜಿನ ಪ್ರಕಾರ 12,400 ಅಣು ಬಾಂಬ್‌ಗಳ ಪೈಕಿ ಸುಮಾರು 10 ಸಾವಿರ ಅಣು ಬಾಂಬ್‌ಗಳು ಬಳಸುವ ಸ್ಥಿತಿಯಲ್ಲಿವೆ. ಅದರಲ್ಲಿ 3,900 ಬಾಂಬ್‌ಗಳನ್ನು ಮಿಸೈಲ್ ಅಥವಾ ವಿಮಾನದಲ್ಲಿ ಇರಿಸಲಾಗಿದೆ. ಹಾಗೆಯೇ ಸುಮಾರು 2,100 ಬಾಂಬ್‌ಗಳನ್ನು ಹೈ-ಅಲರ್ಟ್ ಹಂತದಲ್ಲಿರಿಸಿದ್ದು ಯಾವುದೇ ತುರ್ತು ಕ್ಷಣದಲ್ಲಿ ಉಡಾಯಿಸಬಹುದಾಗಿದೆ.
ಅಂದಹಾಗೆ ಇರಾನ್, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಹಾಗೂ ಸೌದಿ ಅರೇಬಿಯಾ ದೇಶಗಳು ಅಣು ಶಕ್ತಿಯನ್ನು ಹೊಂದಿವೆ. ಈ ದೇಶಗಳು ಗುಟ್ಟಾಗಿ ಅಣು ಬಾಂಬ್ ಹೊಂದುವಂಥ ಸಾಮರ್ಥ್ಯವನ್ನು ಬೆಳೆಸಿಕೊಂಡಿವೆ ಎನ್ನುವ ವರದಿಗಳಿವೆ. ಆದರೆ ಇವರಲ್ಲಿ ಇರಾನ್ ಮಾತ್ರ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಅಮೆರಿಕದ ವಿರೋಧದ ನಡುವೆಯೂ ಅಣು ಬಾಂಬ್ ಪರೀಕ್ಷೆಯನ್ನು ನಡೆಸಿ ಜಗತ್ತಿಗೆ ಭಯ ಹುಟ್ಟಿಸಿದ್ದು ಉತ್ತರ ಕೊರಿಯಾ. ತನ್ನ ಆಡಳಿತದ ರಕ್ಷಣೆಗಾಗಿ ಅಣು ಬಾಂಬ್ ಅನ್ನು ಕಿಮ್ ಜಾಂಗ್ ಉನ್ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳಿವೆ. ಅಚ್ಚರಿಯ ರೀತಿಯಲ್ಲಿ ಅಮೆರಿಕವೀಗ ಉತ್ತರ ಕೊರಿಯಾದ ಬಗ್ಗೆ ಜಾಣ ಮೌನ ತಳೆದಿದೆ. ಇನ್ನು ಕ್ಷಮತೆ ಹೊಂದಿರುವ ಉಳಿದ ದೇಶಗಳು ಅಮೆರಿಕದ ಮಿತ್ರ ರಾಷ್ಟçವಾಗಿರುವುದರಿಂದ ಮೌನಕ್ಕೆ ಸ್ಪಷ್ಟ ಕಾರಣವಿದೆ.
ಇನ್ನೊಂದು ಆಸಕ್ತಿಕರ ವಿಚಾರವೇನೆಂದರೆ ಅಂತಾರಾಷ್ಟ್ರೀಯ ಒತ್ತಡ, ಆರ್ಥಿಕ ಸ್ಥಿತಿ ಹಾಗೂ ನಾನಾ ಒಪ್ಪಂದಗಳ ಕಾರಣದಿಂದ ದಕ್ಷಿಣ ಆಫ್ರಿಕಾ, ಉಕ್ರೇನ್, ಕಝಾಕಿಸ್ತಾನ್, ಬೆಲಾರಸ್, ಲಿಬಿಯಾ, ಬ್ರೆಜಿಲ್, ಅರ್ಜೆಂಟಿನಾದಲ್ಲಿ ಅಣು ಬಾಂಬ್ ಉತ್ಪಾದನೆಯನ್ನು ಕೈಬಿಡಲಾಗಿದೆ.
ಬಳಕೆಗೆ ಸಂಬಂಧಿಸಿ ನಾನಾ ನಿಯಮ
ಅಣು ಬಾಂಬ್ ಬಳಕೆಗೆ ಸಂಬಂಧಿಸಿ ಜಾಗತಿಕವಾಗಿ ಮೂರು ವಿಚಾರಗಳಿವೆ. ಭಾರತ ಹಾಗೂ ಚೀನಾವು ಸ್ಪಷ್ಟಪಡಿಸಿದಂತೆ ‘ನೋ ಫಸ್ಟ್ ಯೂಸ್ʼ ನಿಯಮ ಪಾಲಿಸುತ್ತಿವೆ. ಆ ಪ್ರಕಾರ ‘ನಾವು ಯಾವುದೇ ದೇಶದ ಮೇಲೆ ಮೊದಲು ಅಣು ಬಾಂಬ್ ಹಾಕುವುದಿಲ್ಲ. ಒಂದೊಮ್ಮೆ ನಮ್ಮ ದೇಶದ ಮೇಲೆ ಹಾಕುವ ಪ್ರಯತ್ನ ನಡೆದರೆ ಅಣು ಬಾಂಬ್ ಅನ್ನು ಪ್ರತಿಯಾಗಿ ಬಳಸುತ್ತೇವೆʼ ಎನ್ನುವುದು ಭಾರತ ಹಾಗೂ ಚೀನಾದ ನಿಲುವಾಗಿದೆ. ದೇಶಗಳ ಸಮಗ್ರ ರಕ್ಷಣೆಯ ವಿಷಯ ಬಂದಾಗ ಮಾತ್ರ ಭಾರತ ಮತ್ತು ಚೀನಾ ಅಣು ಬಾಂಬ್‌ಗಳನ್ನು ಬಳಸುತ್ತದೆ. ಆದರೆ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗೂ ಪಾಕಿಸ್ತಾನ ದೇಶಗಳು ಇದಕ್ಕೆ ತದ್ವಿರುದ್ಧವಾಗಿವೆ. ಅವರಿಗೆ ಅನಿವಾರ್ಯ ಅಥವಾ ಸಂದಿಗ್ಧ ಪರಿಸ್ಥಿತಿ ಎದುರಾದರೆ ಅಣು ಬಾಂಬ್ ಬಳಸುವ ನಿಯಮಗಳನ್ನು ಅವು ಹೊಂದಿವೆ. ಅಂದ ಹಾಗೆ ಇದು ಯಾವುದೇ ಏಜೆನ್ಸಿಗಳು ನಿಗದಿಪಡಿಸಿದ ನಿಯಮವಲ್ಲ. ಆಯಾ ದೇಶಗಳು ತಮ್ಮ ಜವಾಬ್ದಾರಿಯನ್ನು ಅರಿತು ರೂಪಿಸಿಕೊಂಡಿರುವ ನಿಯಮಗಳಾಗಿವೆ. ಇದೇ ಕಾರಣದಿಂದ ಭಾರತವು ಪಾಕಿಸ್ತಾನದ ವಿಚಾರದಲ್ಲಿ ಎಂದಿಗೂ ಹೈ ಅಲರ್ಟ್ ಆಗಿರಬೇಕಾದ ಅನಿವಾರ್ಯತೆಯಿದೆ. ಆದರೆ ಇಸ್ರೇಲ್ ಹಾಗೂ ಉತ್ತರ ಕೊರಿಯಾದ ನಿಲುವು ಏನು ಎನ್ನುವುದು ಯಾರಿಗೂ ತಿಳಿದಿಲ್ಲ. ಉತ್ತರ ಕೊರಿಯಾವು ತನ್ನ ವಿರೋಧಿಗಳ ಮೇಲೆ ಅಣು ಬಾಂಬ್ ಬೆದರಿಕೆ ಹಾಕಿಕೊಂಡೇ ಬದುಕುತ್ತಿದೆ. ಇನ್ನು ಇಸ್ರೇಲ್ ಅಧಿಕೃತವಾಗಿ ಘೋಷಿಸಿಕೊಂಡಿರದ ಕಾರಣದಿಂದ ಅದರ ನಿಲುವು ಬಹಿರಂಗವಾಗಿಲ್ಲ.
ಎನ್‌ಪಿಟಿ ಎನ್ನುವ ವಿಚಿತ್ರ ಒಪ್ಪಂದ : ಅಣ್ವಸ್ತç ಪ್ರಸರಣ ನಿಷೇಧ (ಎನ್‌ಪಿಟಿ) ಎನ್ನುವ ವಿಚಿತ್ರ ಒಪ್ಪಂದವೊAದು ಅಂತಾರಾಷ್ಟಿçÃಯ ಮಟ್ಟದಲ್ಲಿದೆ. ಇದರ ಪ್ರಕಾರ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗೂ ಚೀನಾ ಮಾತ್ರ ನಿಯಮಾನುಸಾರ ಅಣ್ವಸ್ತç ಹೊಂದಿರುವ ದೇಶಗಳಾಗಿವೆ. ಭಾರತ, ಪಾಕಿಸ್ತಾನ, ಇಸ್ರೇಲ್ ದೇಶಗಳು ಎನ್‌ಪಿಟಿಯನ್ನು ಒಪ್ಪಿಲ್ಲ. ಬದಲಾಗಿ ಇದನ್ನು ವಿರೋಧಿಸಿಕೊಂಡು ಬಂದಿವೆ. ಉತ್ತರ ಕೊರಿಯಾವು ಎನ್‌ಪಿಟಿಯನ್ನು ಒಂದು ಕಾಲದಲ್ಲಿ ಸೇರಿ, ಬಳಿಕ ಹೊರಬಂದು ಅಣು ಬಾಂಬ್ ಪರೀಕ್ಷೆ ನಡೆಸಿದೆ.1967ರೊಳಗೆ ಅಣ್ವಸ್ತ್ರವನ್ನು ದೇಶಗಳನ್ನು ಮಾತ್ರ ಎನ್‌ಪಿಟಿ ಮಾನ್ಯ ಮಾಡುತ್ತದೆ. ಇದೇ ಕಾರಣದಿಂದ ಭಾರತವು ಅಣ್ವಸ್ತ್ರ ಪರೀಕ್ಷೆ ಮಾಡಿದಾಗ ಅಮೆರಿಕ ಸೇರಿ ಕೆಲವು ರಾಷ್ಟ್ರಗಳು ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದವು. ಆದರೆ ದಿನ ಕಳೆದಂತೆ ಭಾರತ ಹಾಗೂ ಪಾಕಿಸ್ತಾನದ ಅಣು ಶಕ್ತಿಯನ್ನು ಜಾಗತಿಕ ಸಮುದಾಯ ಒಪ್ಪಿಕೊಂಡಿದೆ. ಎನ್‌ಪಿಟಿಯಲ್ಲಿ ಮಾನ್ಯತೆ ಪಡೆದ ಐದು ರಾಷ್ಟçಗಳು ಅಗತ್ಯವೆನಿಸಿದರೆ ಅಣ್ವಸ್ತçಗಳ ಪ್ರಮಾಣವನ್ನು ಹೆಚ್ಚಿಸಬಹುದು. ಉಳಿದ ರಾಷ್ಟ್ರಗಳು ಹಾಲಿ ಸಂಖ್ಯೆಯನ್ನು ಹೆಚ್ಚಿಸಿದರೆ ಅಂತಾರಾಷ್ಟ್ರೀಯ ಒತ್ತಡವನ್ನು ಎದುರಿಸಬೇಕಾದೀತು.
ಇದರ ಮೇಲ್ವಿಚಾರಣೆಗಾಗಿ ಎಲ್ಲ ಉತ್ಪಾದನಾ ಕೇಂದ್ರಗಳ ಮೇಲೆ ಅಂತಾರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿಯು ಹಿಡಿತ ಸಾಧಿಸಿರುತ್ತದೆ. ನಿರಂತರ ಸಮೀಕ್ಷೆ, ಯುರೇನಿಯಂ ಹಾಗೂ ಪ್ಲುಟೋನಿಯಂಗಳ ಮೇಲೆ ನಿಗಾ, ಲೆಕ್ಕಾಚಾರ, ಮೇಲ್ವಿಚಾರಣೆ ಹಾಗೂ ಕ್ಯಾಮರಾಗಳ ಮೂಲಕ ಪರಿವೀಕ್ಷಣೆಯನ್ನು ಮಾಡಲಾಗುತ್ತದೆ. ಅಂದಹಾಗೆ ಮೇಲೆ ಉಲ್ಲೇಖಿಸಿದ ದೇಶಗಳನ್ನು ಸೇರಿಸಿ ಸುಮಾರು 32 ದೇಶಗಳಲ್ಲಿ ಯುರೇನಿಯಂನಿಂದ ಇಂಧನವನ್ನು ತಯಾರಿಸಲಾಗುತ್ತಿದೆ. ಇಲ್ಲಿಯ ಘಟಕಗಳ ಮೇಲೆ ಅಂತಾರಾಷ್ಟ್ರೀಯ ಏಜೆನ್ಸಿಗಳ ನಿಗಾ ಖಾಯಂ ಆಗಿರುತ್ತದೆ.
ಅಣ್ವಸ್ತ್ರ – ಶಾಂತಿಮಂತ್ರ
ಅಂತಾರಾಷ್ಟ್ರೀಯವಾಗಿ ದ್ವಂದ್ವ ಹಾಗೂ ಕುಟಿಲ ನೀತಿಯ ದೇಶ ಇನ್ನೊಂದಿಲ್ಲ. ಕುಂಟು ನೆಪಗಳನ್ನು ಹೇಳಿಕೊಂಡು ಜಪಾನ್ ಮೇಲೆ ಅಣ್ವಸ್ತ್ರ ಹಾಕಿದ್ದು ಅಮೆರಿಕ. ಅಂದಹಾಗೆ ಜಾಗತಿಕವಾಗಿ ಇವತ್ತಿನವರೆಗೆ ಅಮೆರಿಕ ಬಿಟ್ಟು ಇನ್ಯಾವುದೇ ದೇಶವು ಅಣ್ವಸ್ತ್ರವನ್ನು ಬೇರೆ ದೇಶದ ಮೇಲೆ ಪ್ರಯೋಗಿಸಲಿಲ್ಲ. ಈಗ ಇರಾನ್ ಅಣ್ವಸ್ತ್ರ ಹೊಂದಬಾರದು ಎನ್ನುವುದು ಅಮೆರಿಕ, ಇಸ್ರೇಲ್ ಹಾಗೂ ಮಿತ್ರರಾಷ್ಟ್ರಗಳ ವಾದವಾಗಿದೆ. ಒಂದು ಹಂತಕ್ಕೆ ಇದು ನಿಜ ಕೂಡ. ಏಕೆಂದರೆ ಇರಾನ್‌ನ ನಾಯಕತ್ವವು ತುಂಬಾ ಅಪಾಯಕಾರಿಯಾಗಿದ್ದು, ಜಾಗತಿಕವಾಗಿ ಹಲವು ಉಗ್ರ ಸಂಘಟನೆಗಳನ್ನು ಕೂಡ ಪೋಷಿಸುತ್ತಿದೆ. ಭವಿಷ್ಯದಲ್ಲಿ ಅಣ್ವಸ್ತ್ರವು ವಿಧ್ವಂಸಕ ಶಕ್ತಿಗಳ ಕೈಗೆ ಸಿಕ್ಕರೆ ಜಗತ್ತು ಅಪಾಯಕಾರಿ ಸ್ಥಿತಿಗೆ ತಲುಪಬಹುದು. ಅಮೆರಿಕದ ಈ ಆತಂಕದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇರಾನ್‌ಗಿಂತಲೂ ಉತ್ತರ ಕೊರಿಯಾದ ಸರ್ವಾಧಿಕಾರಿಯು ಜಗತ್ತಿಗೆ ಅಪಾಯಕಾರಿಯಾಗಿ ಕಾಣಿಸುತ್ತಾನೆ. ಹಾಗೆಯೇ ಈ ದೇಶವು ಈಗಾಗಲೇ ಪರಮಾಣು ಬಾಂಬ್ ಅನ್ನು ಹೊಂದಿದೆ. ಉತ್ತರ ಕೊರಿಯಾದ ಈ ಕಾರ್ಯವನ್ನು ತಡೆಯಲು ಅಮೆರಿಕವು ಅಷ್ಟೊಂದು ದೊಡ್ಡ ಸೇನಾ ಪ್ರಯತ್ನ ನಡೆಸಲಿಲ್ಲ. ಈಗಲೂ ಅಮೆರಿಕವು ಉತ್ತರ ಕೊರಿಯಾದ ಮೇಲೆ ಸಣ್ಣ ಮೌನ ತಾಳಿದೆ. ಏಕೆಂದರೆ ಉತ್ತರ ಕೊರಿಯಾದ ಬಳಿ ಇರುವ ಸೂಪರ್ ಸಾನಿಕ್ ಕ್ಷಿಪಣಿಗಳು ಅಮೆರಿಕದ ನಗರಗಳನ್ನು ಸುಲಭವಾಗಿ ತಲುಪಬಹುದು. ಹಾಗೆಯೇ ಇವು ಅಣು ಬಾಂಬ್ ಅನ್ನು ಸಾಗಿಸುವ ಶಕ್ತಿಯನ್ನು ಹೊಂದಿವೆ. ಇದೇ ಭಯದಿಂದ ಉತ್ತರ ಕೊರಿಯಾದತ್ತ ಅಮೆರಿಕ ತಲೆ ಹಾಕುತ್ತಿಲ್ಲ ಎನ್ನಲಾಗುತ್ತಿದೆ. ಒಂದೊಮ್ಮೆ ಇರಾನ್ ಬಳಿ ಈಗಾಗಲೇ ಅಣ್ವಸ್ತçವಿದ್ದರೆ ಅಮೆರಿಕವು ಇರಾನ್‌ನ ಹತ್ತಿರವೂ ಸುಳಿಯುತ್ತಿರಲಿಲ್ಲ.
ಇನ್ನು ಭಾರತ-ಪಾಕಿಸ್ತಾನದ ಕಥೆಯೂ ಭಿನ್ನವಾಗಿಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಕದನವು ಇತ್ತೀಚಿನ ದಿನಗಳಲ್ಲಿ ಅತಿರೇಖಕ್ಕೆ ಹೋಗುತ್ತಿಲ್ಲ. ಏಕೆಂದರೆ ಉಭಯ ದೇಶಗಳ ನಡುವೆ ಪರಮಾಣು ಯುದ್ಧವಾಗಬಹುದು ಎನ್ನುವ ಭಯವು ಅಂತಾರಾಷ್ಟ್ರೀಯ ಏಜೆನ್ಸಿಗಳಿಗಿವೆ. ಹೀಗಾಗಿ ಒಂದು ರೀತಿಯಲ್ಲಿ ಅಣ್ವಸ್ತ್ರ ಹೊಂದಿರುವ ದೇಶಗಳಿಗೆ, ಸ್ಥಳೀಯ ಶಾಂತಿ ಸ್ಥಾಪನೆಗೆ ಪರಮಾಣು ಬಾಂಬ್ ಅಸ್ತ್ರವಾಗಿ ಪರಿಣಮಿಸಿದೆ.

Facebook
Twitter
WhatsApp
LinkedIn
Telegram