ಶ್ರೀ ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಕಳೆದ ಸಂಚಿಕೆಯಲ್ಲಿ ‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ‘ಗ್ರಾಮ ಕಲ್ಯಾಣ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.
ಕಳೆದ ನಾಲ್ಕು ದಶಕಗಳ ಹಿಂದೆ ಅಂದರೆ ಗ್ರಾಮಾಭಿವೃದ್ಧಿ ಯೋಜನೆಯ ಆರಂಭದ ದಿನಗಳಲ್ಲಿ ಹಳ್ಳಿ ಪ್ರದೇಶಗಳ ಜನರು ಅಗತ್ಯವಾದ ಮೂಲಸೌಕರ್ಯಗಳಿಂದ ವಂಚಿತರಾಗಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ, ಸಮುದಾಯ ಭವನಗಳು, ಗ್ರಂಥಾಲಯ, ಮಂದಿರಗಳು ಕಾಣಸಿಗುವುದೇ ಅಪರೂಪವಾಗಿತ್ತು. ಈ ಸಮಸ್ಯೆಯನ್ನು ಹತ್ತಿರದಿಂದ ಕಂಡ ಪೂಜ್ಯ ಶ್ರೀ ಹೆಗ್ಗಡೆಯವರು 1990ರಲ್ಲಿ ‘ಗ್ರಾಮ ಕಲ್ಯಾಣ’ ಎಂಬ ವಿನೂತನ ಕಾರ್ಯಕ್ರಮವೊಂದನ್ನು ಆರಂಭಿಸಿದರು.
ಈ ಕಾರ್ಯಕ್ರಮದಡಿ ಊರ ಗಣ್ಯರ, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಶೌಚಾಲಯ, ಅಂಗನವಾಡಿ, ಸಮುದಾಯ ಭವನ, ಯುವಕ ಮಂಡಲ, ಮಹಿಳಾ ಮಂಡಲ, ಭಜನಾ ಮಂದಿರ, ಗ್ರಂಥಾಲಯ ದುರಸ್ತಿ ಮತ್ತು ನಿರ್ಮಾಣವನ್ನು ಮಾಡಲು ಯೋಜನೆಯಿಂದ ಮಾರ್ಗದರ್ಶನದೊಂದಿಗೆ ಅನುದಾನವನ್ನು ಒದಗಿಸಲಾಯಿತು. ಊರಿನ ಜನರನ್ನು ಒಂದೆಡೆ ಒಗ್ಗೂಡಿಸುವ, ಅವರಲ್ಲಿ ಸಾಮರಸ್ಯದ ಬೀಜವನ್ನು ಬಿತ್ತುವ ಸಲುವಾಗಿ ಯುವಕ/ಯುವತಿ ಮಂಡಲಗಳ, ಸಭಾಭವನಗಳ ರಚನೆಗೆ ಪ್ರೇರಣೆಯನ್ನು ನೀಡಲಾಯಿತು. ಪರಿಣಾಮವಾಗಿ ಹಳ್ಳಿಗಳು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಪ್ರಗತಿ ಕಂಡವು.
ಸಮುದಾಯ ಭವನಗಳು ನಮ್ಮ ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳನ್ನು, ಭಜನೆ ಮುಂತಾದ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಉತ್ತಮ ವೇದಿಕೆಯಾದವು. ಯುವಕ-ಯುವತಿಯರು ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ, ಅವರನ್ನು ಒಗ್ಗೂಡಿಸುವ ಹಿತದೃಷ್ಟಿಯಿಂದ ಯುವಕ-ಯುವತಿ ಮಂಡಲಗಳನ್ನು ಆರಂಭಿಸಲಾಯಿತು. ಇದರಿಂದಾಗಿ ಯುವ ಜನತೆಯಲ್ಲಿ ಸಮಾಜಮುಖಿ ಚಿಂತನೆ ಬೆಳೆಯಿತು. ಸಂಘಟನೆಗಳನ್ನು ಮುನ್ನಡೆಸುವ, ಕಾರ್ಯಕ್ರಮಗಳನ್ನು ಆಯೋಜಿಸುವ, ನಾಯಕತ್ವದ ಗುಣ ಬೆಳೆಯಿತು. ಊರಿನಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಅವರ ನೆರವಿಗೆ ಸ್ಪಂದಿಸುವ ಕೆಲಸವನ್ನು ಆ ಊರಿನ ಈ ಯುವಕ-ಯುವತಿ ಮಂಡಲಗಳ ಸದಸ್ಯರು ಮಾಡುತ್ತಾ ಬಂದರು. ಇದು ಇತರರಿಗೂ ಪ್ರೇರಣೆಯನ್ನೊದಗಿಸಿತು. ಕೌಟುಂಬಿಕ ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ‘ಮಹಿಳಾ ಮಂಡಲ’ ಆಸರೆಯಾಯಿತು. ನಮ್ಮ ಸಂಪ್ರದಾಯ, ಆಚರಣೆಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ‘ಭಜನಾ ಮಂದಿರ’ಗಳು ಉತ್ತಮ ವೇದಿಕೆಯಾದವು. ಬಡ ಮತ್ತು ಮಧ್ಯಮ ವರ್ಗದ ಎಷ್ಟೋ ವಿದ್ಯಾರ್ಥಿಗಳು ತಮಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳಲು ಅಸಹಾಯಕರಾಗಿದ್ದರು. ಇಂತಹ ವಿದ್ಯಾರ್ಥಿಗಳಿಗಾಗಿ ಸಾರ್ವಜನಿಕ ‘ಗ್ರಂಥಾಲಯ’ಗಳನ್ನು ದುರಸ್ಥಿಗೊಳಿಸಿ ಅಲ್ಲಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಾಯಿತು. ಆ ಮೂಲಕ ಉಚಿತವಾಗಿ ಪುಸ್ತಕವನ್ನು ಓದಲು ಅವಕಾಶವು ದೊರೆಯಿತು.
‘ಸಾರ್ವಜನಿಕ ಶೌಚಾಲಯ’ಗಳ ರಚನೆಗೆ ಬೇಕಾದ ನೆರವನ್ನು ನೀಡಲಾಯಿತು. ಇದರಿಂದಾಗಿ ಜನರಲ್ಲಿ ಶೌಚಾಲಯ ಬಳಕೆ ಮತ್ತು ನಿರ್ಮಾಣದ ಕುರಿತು ಜಾಗೃತಿ ಮೂಡಿತು. ನಂತರದ ದಿನಗಳಲ್ಲಿ ಪ್ರತಿ ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣಗೊಳ್ಳಲು ಇದು ಪ್ರೇರಣೆಯನ್ನು ನೀಡಿತು.
ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಗ್ರಾಮ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ವೈಯಕ್ತಿಕವಾಗಿ ಹಾಗೂ ಕುಟುಂಬದಲ್ಲಿ ಸಬಲೀಕರಣವನ್ನು ಹೊಂದುತ್ತಾರೆ. ಸಮುದಾಯ ಅಭಿವೃದ್ಧಿಯ ಮೂಲಕ ಸಮಗ್ರ ಗ್ರಾಮೀಣ ಮೂಲ ಸೌಕರ್ಯದ ಅಭಿವೃದ್ಧಿಯನ್ನು ಕಾಣುತ್ತಾರೆ. ಕಳೆದ ಮೂರುವರೆ ದಶಕಗಳಿಂದ ಗ್ರಾಮ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 43 ಕೋಟಿ ಅನುದಾನವನ್ನು ನೀಡಲಾಗಿದೆ. ಇವುಗಳಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಹಾಗೂ ಮೋರಿ ರಚನೆ, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ ರಚನೆ, ಪಶುಚಿಕಿತ್ಸಾಲಯಗಳ ಕಟ್ಟಡ ನಿರ್ಮಾಣ, ಆರೋಗ್ಯ ಉಪಕೇಂದ್ರದ ಕಟ್ಟಡ ರಚನೆ, ಸಮುದಾಯ ಭವನಗಳು, ಯುವಕ ಮತ್ತು ಯುವತಿ ಮುಂಡಲ, ಭಜನಾ ಮಂದಿರಗಳ ನಿರ್ಮಾಣ, ಸಾರ್ವಜನಿಕ ಗ್ರಂಥಾಲಯ ದುರಸ್ಥಿ ಮತ್ತು ನಿರ್ಮಾಣ ಮುಂತಾದವುಗಳು ಪ್ರಮುಖ ಅಭಿವೃದ್ಧಿ ಕಾರ್ಯಗಳಾಗಿವೆ.
ಯೋಜನೆಯ ನೆರವಿನಿಂದ ಆರಂಭಗೊಂಡ ಈ ಎಲ್ಲಾ ಮೂಲ ಸೌಕರ್ಯಗಳನ್ನು ಆಯಾಯ ಗ್ರಾಮಸ್ಥರು ಅತ್ಯಂತ ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಿಕೊಂಡಿರುವುದು ಈ ಕಾರ್ಯಕ್ರಮದ ಯಶಸ್ಸು ಮತ್ತು ಸಾರ್ಥಕತೆಯ ಪ್ರತೀಕವಾಗಿದೆ.
ಮುಂದಿನ ಸಂಚಿಕೆಯಲ್ಲಿ ಇನ್ನೊಂದು ವಿಶೇಷ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.
