ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಇತ್ತೀಚೆಗೆ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಸಾಮಾನ್ಯ ಮಳೆ ಸುರಿದಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಮಳೆಯಾದ ಪ್ರಮಾಣ ತುಂಬಾ ಕಡಿಮೆ. ಈ ಬಾರಿ ರಾಜ್ಯದಲ್ಲಿ ಶೇ. 32 ರಿಂದ 41ರಷ್ಟು ಮಳೆಯ ಕೊರತೆಯಾಗಬಹುದೆಂದು ಅಂದಾಜಿಸಲಾಗಿದೆ.
ಈ ನಿಟ್ಟಿನಲ್ಲಿ ಮುಂದಿನ ದಿನಗಳಿಗಾಗಿ ನಾವು ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಮೊದಲಾಗಿ ತಮಗೆ ಲಭ್ಯವಿರುವ ನೀರನ್ನು ಉಳಿಸುವತ್ತಾ ಗಮನಹರಿಸಬೇಕು. ನಿತ್ಯ ನಾವು ಉಪಯೋಗಿಸುವ ನೀರಿನಲ್ಲಿ ಪ್ರತಿಯೊಬ್ಬರು ಪ್ರತಿ ದಿನ 10 ಲೀಟರ್ನಂತೆ ಉಳಿಕೆ ಮಾಡುತ್ತಾ ಬಂದರೆ ಒಂದು ಮನೆಯಲ್ಲಿ ಕನಿಷ್ಟ ಐದು ಜನರಿದ್ದರೆ 50 ಲೀಟರ್ನಂತೆ ಒಂದು ವರ್ಷದಲ್ಲಿ ಒಂದು ಕುಟುಂಬ 18,250 ಲೀಟರ್ ನೀರನ್ನು ಉಳಿಸಬಹುದಾಗಿದೆ. ಒಂದು ಊರಿನಲ್ಲಿ ಕನಿಷ್ಟ ಇನ್ನೂರು ಮನೆಗಳಿದ್ದರೆ ಅವರು ವರ್ಷಕ್ಕೆ ಉಳಿಸುವ ನೀರಿನ ಪ್ರಮಾಣ 36.50 ಲಕ್ಷ ಲೀಟರ್ ಆಗುತ್ತದೆ. ಹೀಗೆ ಉಳಿಸಿದ ನೀರನ್ನು ಕೃಷಿಗೆ ಬಳಸುವ ಮೂಲಕ ನೀರಿನ ಸಮಸ್ಯೆಯಾಗದಂತೆ ಸುಲಭವಾದ ಪರಿಹಾರವನ್ನು ಸ್ವತಹ ನಾವೇ ಕಂಡುಕೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರು ಸುಲಭವಾಗಿ ಲಭ್ಯವಾಗುವುದರಿಂದ ಸುಲಭವಾಗಿ ಪೋಲು ಕೂಡಾ ಆಗುತ್ತದೆ. ನೀರಿನ ಮಿತ ಬಳಕೆ ಮಾಡಿ ಉಳಿಸಿದರೆ ನಮ್ಮ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ. ಅಂದರೆ ಎಪ್ರಿಲ್ ಮಾಸದಲ್ಲೆ ತಲೆದೋರಬಹುದಾದ ನೀರಿನ ಸಮಸ್ಯೆಯನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡಬಹುದಾಗಿದೆ.
ನಗರ ಪ್ರದೇಶದಲ್ಲಿ ನೀರಿಗೆ ದುಡ್ಡು ಖರ್ಚು ಮಾಡಬೇಕಾಗಿರುವುದರಿಂದ ನೀರಿನ ಬಳಕೆಯಲ್ಲಿ ಸಾಮಾನ್ಯವಾಗಿ ಜಾಗೃತೆ ವಹಿಸುತ್ತಾರೆ. ಆದರೆ ಹಳ್ಳಿಗಳಲ್ಲಿ ನೀರಿನ ಬಳಕೆ ಕುರಿತು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇಂದು ನಮ್ಮೆದುರಿಗಿದೆ. ಪ್ರತಿನಿತ್ಯದ ಉಪಯೋಗಕ್ಕೆ, ಕೃಷಿ ಹೀಗೆ ಎಲ್ಲೆಂದರಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಖರ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ಪ್ರಮಾಣದಲ್ಲಿ ಉಪಯೋಗಿಸಬಹುದಾದ ನೀರಿನ ನಾಲ್ಕು ಪಟ್ಟಷ್ಟು ಹೆಚ್ಚು ನೀರು ಉಪಯೋಗ ಆಗುತ್ತಿದೆ. ಇದಲ್ಲದೆ ನಲ್ಲಿ, ನೀರು ಸರಬರಾಜು ಪೈಪ್ಗಳು ಹಾಳಾಗಿರುವುದು ಮುಂತಾದ ಕಾರಣಗಳಿಂದಲೂ ನೀರು ಪೋಲಾಗುತ್ತದೆ. ಬಟ್ಟೆ ಒಗೆಯುವ ಸಂದರ್ಭದಲ್ಲಿ, ದನ ಕರುಗಳನ್ನು ತೊಳೆಯುವ, ಪಾತ್ರೆ, ಕೊಟ್ಟಿಗೆ, ವಾಹನ ತೊಳೆಯುವ ಸಂದರ್ಭದಲ್ಲಿ ಅಗತ್ಯದಷ್ಟೇ ನೀರನ್ನು ಉಪಯೋಗಿಸಿ ಪ್ರತಿದಿನ ಒಂದಷ್ಟು ನೀರನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕಿದೆ.
ನೀರಿನ ಲಭ್ಯತೆ ಇರುವವರು ಜಲಾಶಯ, ಕೊಳವೆಬಾವಿ, ನದಿ, ಬಾವಿ, ಅಣೆಕಟ್ಟುಗಳಿಂದ ದೊರೆತ ನೀರನ್ನು ಮಿತವಾಗಿ ಬಳಸಿರಿ. ನಿಮ್ಮೂರಿನಲ್ಲಿರುವ ಕೆರೆಗಳ ಹೂಳೆತ್ತುವಿಕೆ, ನೀರಿನ ಮೂಲಗಳ ರಕ್ಷಣೆ, ಪರಿಸರ ಬೆಳೆಸುವ ಕೆಲಸಗಳು ಸಮಾರೋಪಾದಿಯಲ್ಲಿ ನಡೆಯಬೇಕಿದೆ. ಈಗಾಗಲೇ ಪೂಜ್ಯ ಶ್ರೀ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಹೂಳೆತ್ತಲಾದ ಕೆರೆಗಳ ಸಂಖ್ಯೆ1 ಸಾವಿರದ ಸಮೀಪದಲ್ಲಿದೆ. ಇದು ರಾಜ್ಯದಲ್ಲಿ ಜಲಕ್ರಾಂತಿಯನ್ನೆ ಮಾಡಿದೆ. ನಿಮ್ಮೂರಿನಲ್ಲಿರುವ ಹೂಳೆತ್ತಿದ ಕೆರೆಗಳ ರಕ್ಷಣೆ ನಿಮ್ಮ ಹೊಣೆ ಎಂಬುದನ್ನರಿತು ಅವುಗಳ ರಕ್ಷಣೆಯಲ್ಲಿ ತೊಡಗುವ ಮೂಲಕ ರಾಜ್ಯದ ನೀರಿನ ಸಮಸ್ಯೆಯ ಪರಿಹಾರಕ್ಕೆ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕಿದೆ.
ನೀರಿನ ಸಮಸ್ಯೆ ಎದುರಾದಾಗ ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಬೆಳೆಗಳತ್ತ ಒಲವು ತೋರಬೇಕಿದೆ. ಉದಾಹರಣೆಗೆ, ಭತ್ತ ಮತ್ತು ಕಬ್ಬು ಕೃಷಿಗೆ ಸಾಕಷ್ಟು ನೀರು ಬೇಕು. ಇದರ ಬದಲು ಜೋಳ, ಹೆಸರು, ಉದ್ದು, ಸಾಸಿವೆ, ಮೆಕ್ಕೆಜೋಳ, ನವಣೆ, ಸಜ್ಜೆ, ಹತ್ತಿ, ಬರಗು, ಹಾರಕ, ಸಾಮೆ, ಊದಲು, ಶೇಂಗಾ, ರಾಗಿ ಹುರುಳಿ ಬೆಳೆಯಬಹುದಾಗಿದೆ. ಭತ್ತಕ್ಕೆ ಬಳಸುವ ಮೂರನೆ ಒಂದು ಭಾಗದಷ್ಟು ನೀರು ಈ ಬೆಳೆಗಳಿಗೆ ಸಾಕಾಗುತ್ತದೆ. ಹನಿ ನೀರಾವರಿ ವಿಧಾನ, ವಿನೂತನ ನೀರಾವರಿ ಯಂತ್ರಗಳನ್ನು ಬಳಸುವ ಮೂಲಕ ಕಡಿಮೆ ನೀರಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಮುಂದೆ ಸಾಕಷ್ಟು ಮಳೆ ಬಂದಾಗ ಭತ್ತವನ್ನು ಬೆಳೆಯಬಹುದಾಗಿದೆ.
ಮಳೆಗಾಲ ಬಂದಾಗ ನೀರಿಗೂ, ನಮಗೂ ಸಂಬAಧವೇ ಇಲ್ಲದಂತೆ ಇದ್ದು ಬಿಡುತ್ತಾರೆ. ಬೇಸಿಗೆಗಾಲ ಬರುತ್ತಿದ್ದಂತೆ ನೀರಿಗಾಗಿ ಪರದಾಡುತ್ತಾರೆ. ಇದರ ಬದಲು ಮಳೆಗಾಲದಲ್ಲಿ ಲಭ್ಯವಾಗುವ ನೀರನ್ನು ಸಂಗ್ರಹಿಸುವತ್ತಾ ಪ್ರಯತ್ನಿಸಬೇಕಿದೆ. ಮನೆಯ ಮೇಲೆ ಬೀಳುವ ನೀರನ್ನು ಸಂಗ್ರಹಿಸಿ ಬಾವಿಗೆ ಸೇರುವಂತೆ ಮಾಡುವ ಮಳೆಕೊಯ್ಲು ವಿಧಾನಗಳತ್ತ ಒಲವು ತೋರಬೇಕಿದೆ. ಜಮೀನಿಗೆ ಬಿದ್ದ ನೀರು ನೇರವಾಗಿ ಹರಿದು ಹೋಗುವುದರಿಂದ ಭೂಮಿಯ ಫಲವತ್ತತೆಯೂ ನಾಶವಾಗುತ್ತದೆ. ಇಳಿಜಾರು ಪ್ರದೇಶದಲ್ಲಿ ಸಣ್ಣ ಕೃಷಿ ಹೊಂಡಗಳನ್ನು ನಿರ್ಮಿಸಿ ಹರಿದು ಹೋಗುವ ನೀರನ್ನು ನಿಲ್ಲುವಂತೆ ಮಾಡಬೇಕು. ನೀರಿನ ಸಂರಕ್ಷಣೆಗಾಗಿ ಇಂಗು ಗುಂಡಿ, ಬದು, ಆಳ, ಕಂದಕಗಳನ್ನು ನಿರ್ಮಿಸುವ ಮೂಲಕ ಮಳೆಗಾಲದ ನೀರನ್ನು ಸಂರಕ್ಷಿಸಬೇಕು. ಆಗ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಬತ್ತಿದ ಕೊಳವೆಬಾವಿಗಳು ಮರುಜೀವ ಪಡೆಯುತ್ತವೆ.
ಪ್ರತಿವರ್ಷ ಬರಗಾಲ ಬಂದಾಗ ಸಾಮಾನ್ಯವಾಗಿ ರಾಜ್ಯ ಸರಕಾರವನ್ನಾಗಲಿ, ಕೇಂದ್ರ ಸರಕಾರವನ್ನಾಗಲಿ ದೂಷಿಸುವುದು ವಾಡಿಕೆ. ಇದರಲ್ಲಿ ಯಾವ ಅರ್ಥವೂ ಇಲ್ಲ. ಸರಕಾರಗಳು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತವೆ. ಆದರೆ ನಮ್ಮ ಪ್ರಯತ್ನಗಳನ್ನು ನಾವು ಪ್ರಾಮಾಣಿಕತೆಯಿಂದ ಮಾಡೋಣ. ಆ ಮೂಲಕ ಜಲಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿ, ವರ್ಗಾಯಿಸೋಣ. ನೀರು ಉಳಿಸುವ ಪ್ರಯತ್ನಗಳು ಪ್ರತಿ ಮನೆ ಮನೆಗಳಿಂದಾಗಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸೋಣ.