ಸಮಾಜದ ಶಕ್ತಿ ಶ್ರೀ ಕೃಷ್ಣ ಮತ್ತು ಗಣಪ

ಭಗವಾನ್ ಶ್ರೀ ಕೃಷ್ಣನ ‘ಮಾಖನ್ ನ ಖಾಯೋ ಮೇರಿ ಮೈಯಾ’ (ನಾನು ಬೆಣ್ಣೆ ಕದ್ದಿಲ್ಲಮ್ಮ) ಎಂಬ ಹಾಡೊಂದು ಬಹು ಜನಜನಿತವಾಗಿದೆ.
ಗೋಕುಲದಲ್ಲಿ ಯಶೋಧೆ ಹಾಗೂ ಇತರ ಗೋಪಿಕೆಯರು ಬೆಣ್ಣೆ ತುಂಬಿಸಿಟ್ಟ ಮಡಕೆಯನ್ನು ಎಷ್ಟು ಸುರಕ್ಷಿತವಾಗಿಟ್ಟರೂ ಅದರಿಂದ ಬೆಣ್ಣೆ ಕಳ್ಳತನವಾಗುತ್ತಿತ್ತು. ಬಾಲಕೃಷ್ಣನು ತನ್ನ ಗೆಳೆಯರೊಂದಿಗೆ ಮನೆ-ಮನೆಗೆ ಹೋಗಿ ಬೆಣ್ಣೆ ಕದಿಯುತ್ತಿದ್ದ. ಮರಕ್ಕೆ ಹತ್ತಿ, ಮಡಿಕೆ ಒಡೆದು ಬೆಣ್ಣೆ ತಿಂದು ಸಂತೋಷಪಟ್ಟು ಕುಣಿಯುತ್ತಿದ್ದನು. ಒಂದು ದಿನ ಬಾಲಕೃಷ್ಣನು ಬೆಣ್ಣೆ ಕದಿಯುವ ಸಂದರ್ಭದಲ್ಲಿ ತಾಯಿ ಯಶೋಧೆಯು ಅಲ್ಲಿಗೆ ಆಗಮಿಸುತ್ತಾಳೆ. ಕೃಷ್ಣನ ಬಾಯಿ, ಮುಖದಲ್ಲಿ ಮೆತ್ತಿರುವ ಬೆಣ್ಣೆಯನ್ನು ಕಂಡು ತಾಯಿ ಗದರುತ್ತಾಳೆ. ಬಾಯಿ ತೆರೆ ಎಂದೆನ್ನುತ್ತಾಳೆ. ಆಗ ಪುಟ್ಟ ಕೃಷ್ಣನು ತಾನು ಬೆಣ್ಣೆ ಕದ್ದಿಲ್ಲಮ್ಮ ಎಂದು ಹೇಳುತ್ತಾನೆ. ತಾಯಿಗೆ ಆತನ ಮಾತಿನಲ್ಲಿ ಸಮಾಧಾನವಾಗದೇ ಇದ್ದಾಗ ಪುಟ್ಟ ಬಾಯಿಯನ್ನು ತೆರೆದು ಅದರೊಳಗೆ ಬ್ರಹ್ಮಾಂಡವನ್ನು ಯಶೋಧಾಳಿಗೆ ತೋರಿಸುತ್ತಾನೆ. ಇದನ್ನು ಕಂಡ ತಾಯಿ ಯಶೋಧೆಗೆ ತನ್ನ ಮಗ ಶ್ರೀ ಕೃಷ್ಣ ಅಸಾಮಾನ್ಯನೆಂಬುವುದು ಗೊತ್ತಾಗುತ್ತದೆ. ಶ್ರೀ ಕೃಷ್ಣನ ನಿಜ ದರ್ಶನ ಆಕೆಗೆ ಆಗುತ್ತದೆ.
ಶ್ರೀ ಕೃಷ್ಣನ ಬಾಲ್ಯಜೀವನ, ಬಾಲಲೀಲೆಗಳು ವರ್ಣರಂಜಿತ ಮತ್ತು ವಿನೋದಪೂರ್ಣವಾಗಿವೆ. ಅದರಲ್ಲೂ ಬೆಣ್ಣೆ ಕಳ್ಳತನದ ಪ್ರಸಂಗವAತೂ ಬಹುಪರಿಚಿತ ಕಥೆಯಾಗಿದೆ. ಶ್ರೀ ಕೃಷ್ಣನ ಬಾಲ ಲೀಲೆಗಳಿಂದ ಗೋಪಿಕೆಯರು ಕೋಪಗೊಂಡರೂ ತುಸು ಕ್ಷಣದಲ್ಲಿ ಅತೀವವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಕೃಷ್ಣನನ್ನು ಎತ್ತಿ ಮುದ್ದಾಡುತ್ತಿದ್ದರು. ಇದು ಭಗವಂತ ಮತ್ತು ಭಕ್ತರ ನಡುವಿನ ಆಟದಂತೆ. ಒಮ್ಮೆ ತುಂಟಾಟ ಮಾಡುವ ಕೃಷ್ಣನನ್ನು ತಾಯಿಯು ಒರಳು ಕಲ್ಲಿಗೆ ಕಟ್ಟಿ ಹೋಗುತ್ತಾಳೆ. ಸಾಕಷ್ಟು ಭಾರಿ ಬಿಚ್ಚಿಕೊಳ್ಳುವ ಕೃಷ್ಣನಿಗೆ ಕೊನೆಯ ಭಾರಿ ಪ್ರೀತಿಯಿಂದ ಗದರಿಸಿ ‘ಇನ್ನು ಮುಂದೆ ಹಗ್ಗ ಬಿಚ್ಚಿಸಿಕೊಳ್ಳಬೇಡ’ ಎಂದು ಬೇಡಿಕೊಳ್ಳುತ್ತಾಳೆ. ಆಕೆಯ ಮುಗ್ಧ ಪ್ರೀತಿಗೆ ಶರಣಾಗಿ ಅಸಾಮಾನ್ಯ ಶಕ್ತಿಯಿದ್ದರೂ ತಾಯಿ ಕಟ್ಟಿರುವ ಸಣ್ಣ ದಾರದ ಬಂಧನಕ್ಕೊಳಗಾಗುವುದು ವಿಶೇಷವೇ ಆಗಿದೆ. ಪ್ರೀತಿಯಿಂದ ಭಗವಂತನನ್ನು ಬಂಧಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.
ಶ್ರೀ ಕೃಷ್ಣನ ಬಾಲ್ಯವೆಂದರೆ ತುಂಟಾಟ, ಆನಂದ ಹಾಗೂ ಪ್ರೀತಿ. ಬಾಲಕನಾಗಿದ್ದುಕೊಂಡೇ ಮಾಡಿದ ಅನೇಕ ಕಾರ್ಯಗಳು ಪ್ರಾಮಾಣಿಕತೆ, ಸ್ನೇಹ, ಸತ್ಯ, ಧರ್ಮ ಮೊದಲಾದ ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತವೆ. ಕಾಳಿಂಗ ಮರ್ದನದ ಮೂಲಕ ದುಷ್ಟರ ಮೇಲೆ ಜಯ ಸಾಧಿಸುವ ಜೊತೆಗೆ ಪ್ರಕೃತಿಯನ್ನು ಸಂರಕ್ಷಿಸುವ ಸಂದೇಶವಿದೆ. ಗೋಪಾಲಕನಾಗಿ ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿ ಹಾಗೂ ಪ್ರಕೃತಿಯೊಂದಿಗಿನ ಸಂಬAಧವನ್ನು ತಿಳಿಸುತ್ತದೆ. ಗೋವರ್ಧನಗಿರಿಯನ್ನು ಕಿರು ಬೆರಳಿನಲ್ಲಿ ಮೇಲೆತ್ತಿ ಜನರನ್ನು ರಕ್ಷಿಸಿ ಇಂದ್ರನ ಸೊಕ್ಕಡಗಿಸುವ ಮೂಲಕ ದೇವಾನುದೇವತೆಗಳೂ ತಪ್ಪೆಸಗಿದರೆ ತಕ್ಕ ಪಾಠ ಕಲಿಸಲಾಗುವುದು ಎಂಬುವುದನ್ನು ತೋರಿಸಿಕೊಟ್ಟಿದ್ದಾನೆ.
ಭಗವಾನ್ ಶ್ರೀ ಕೃಷ್ಣನ ಬದುಕೇ ಒಂದು ಸಂದೇಶವಾಗಿದೆ. ಜೊತೆಗೆ ನಮ್ಮ ಬದುಕಿಗೆ ವಿವಿಧ ಸನ್ನಿವೇಶ, ಸಂದರ್ಭಗಳಲ್ಲಿ ಪ್ರಯೋಜನವಾಗುವಂತಹ ಅಂಶಗಳನ್ನು ಶ್ರೀ ಕೃಷ್ಣನ ಬದುಕಿನಿಂದ ಪಡೆಯಬಹುದಾಗಿದೆ. ಮಹಾಭಾರತದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ನಿಂತು ಅಧರ್ಮದ ವಿರುದ್ಧ ಹೋರಾಟ ಮಾಡಿದನು. ಕೊನೆಗೆ ಏನೇ ಆದರೂ ಸತ್ಯ, ಧರ್ಮಗಳಿಗೆಯೇ ಜಯ ಎಂದು ತೋರಿಸಿಕೊಟ್ಟನು. ಕುರುಕ್ಷೇತ್ರ ಯುದ್ಧಾರಂಭದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯ ಮೂಲಕ ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎನ್ನುತ್ತಾ ಫಲಾಫಲವನ್ನು ಇಚ್ಚಿಸದೆ ಶ್ರದ್ಧೆಯಿಂದ ನಮ್ಮ ಕೆಲಸ, ಕರ್ತವ್ಯವನ್ನು ಮಾಡಬೇಕೆಂದು ತಿಳಿಸಿ ಲೋಕಾಭ್ಯುದಯದ ಸಂದೇಶವನ್ನು ಸಾರಿದ್ದಾನೆ.
ಸುಧಾಮನೊಂದಿಗಿನ ಸ್ನೇಹ, ರಾಧೆಯೊಂದಿಗಿನ ಪ್ರೇಮವು ಇಂದಿಗೂ ಅಜರಾಮರವಾಗಿದೆ ಹಾಗೂ ಉದಾಹರಣೆಯಾಗಿ ಮೇಲ್ಪಂಕ್ತಿಯಲ್ಲಿದೆ. ಬಡವನಾದರೂ ಸ್ನೇಹವನ್ನು ಕಳೆದುಕೊಳ್ಳದೆ ಗೆಳೆಯ ಕೊಟ್ಟ ಹಿಡಿ ಅವಲಕ್ಕಿಯನ್ನು ತಿಂದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾನೆ. ತಾನು ರಾಧೆಯನ್ನು ಮದುವೆಯಾಗಲು ಸಾಧ್ಯವಾಗದಿದ್ದರೂ ಪ್ರೇಮದ ಮಹತ್ವವನ್ನು ಜಗತ್ತಿಗೇ ಸಾರಿದ. ಆ ಮೂಲಕ ನಿಸ್ವಾರ್ಥ ಸ್ನೇಹ ಹಾಗೂ ಪ್ರೀತಿಯ ಮೌಲ್ಯವನ್ನು ತಿಳಿಸಿಕೊಟ್ಟಾತ ಭಗವಾನ್ ಶ್ರೀ ಕೃಷ್ಣ.
ಜ್ಞಾನ ಮತ್ತು ವಿವೇಕದ ಪ್ರತಿರೂಪವಾಗಿರುವ ಕೃಷ್ಣನು ಯಾವುದೇ ಪರಿಸ್ಥಿತಿ ಎದುರಾದರೂ ತಾಳ್ಮೆ ಮತ್ತು ವಿವೇಕದಿಂದ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾನೆ. ಮಹಾಭಾರತದಲ್ಲಿ ಮುಂದೆ ನಡೆಯಬಹುದಾದ ಘೋರ ಯುದ್ಧವನ್ನು ನಿಲ್ಲಿಸುವ ಯತ್ನವನ್ನು ಶ್ರೀ ಕೃಷ್ಣ ಮಾಡುತ್ತಾನೆ. ಕೌರವರಿಗೆ ತಿಳಿ ಹೇಳುತ್ತಾನೆ. ಆದರೆ ಸಂಧಾನಕ್ಕೆ ಒಪ್ಪದ ಕೌರವರಿಗೆ ಇನ್ನು ಎಷ್ಟೇ ಬುದ್ಧಿ ಹೇಳಿದರೂ ಪ್ರಯೋಜನವಾಗದು ಎಂದು ಅರಿತು ಬಳಿಕ ಯುದ್ಧವೇ ಅಂತಿಮ ಆಯ್ಕೆ ಎಂದು ತಿಳಿದು ಪಾಂಡವರಲ್ಲಿ ಯುದ್ಧಕ್ಕೆ ಸನ್ನದ್ಧರಾಗಲು ತಿಳಿಸುತ್ತಾನೆ. ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಪಾಂಡವರ ಪರ ನಿಂತು ನಾಯಕತ್ವ ಮತ್ತು ರಾಜತಂತ್ರ ನಡೆಯ ಮೂಲಕ ಧರ್ಮ ಸಂರಕ್ಷಣೆಗೆ ಮುಂದಾಗುತ್ತಾನೆ. ಹೀಗೆ ಶ್ರೀ ಕೃಷ್ಣ ಪ್ರತಿ ಹಂತದಲ್ಲೂ ಜಗತ್ತಿಗೆ, ಮನುಕುಲಕ್ಕೆ ಸಂದೇಶಗಳನ್ನು ತನ್ನ ಜೀವನದುದ್ದಕ್ಕೂ ನೀಡುತ್ತಾ ಬಂದಿದ್ದಾನೆ.
ಶ್ರೀ ಕೃಷ್ಣನಂತೆಯೇ ಗಣಪತಿ ಕೂಡಾ ಸಾಮಾಜಿಕ ಮೌಲ್ಯ ಪ್ರತಿಪಾದನೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾನೆ. ಭಾರತೀಯ ಸಂಸ್ಕೃತಿ ಸಂಪ್ರದಾಯಗಳಲ್ಲಿ ಶುಭಕಾರ್ಯಗಳನ್ನು ಆರಂಭಿಸುವುದು ವಿಘ್ನ ನಿವಾರಕ ಶ್ರೀ ಗಣಪತಿಯ ಆರಾಧನೆಯಿಂದ. ಹಾಗಾಗಿ ಆತನನ್ನು ಅಗ್ರ ಪೂಜಿತ ಎಂದು ಕರೆಯುತ್ತಾರೆ.
ಶ್ರೀ ಗಣೇಶನೂ ಕೂಡ ಶ್ರೀ ಕೃಷ್ಣನಂತೆ ತನ್ನ ಜ್ಞಾನ, ಚತುರತೆಗೆ ಹೆಸರುವಾಸಿಯಾಗಿದ್ದಾನೆ. ಆತನ ಪ್ರತಿ ಕಥೆಗಳೂ ಕೂಡ ಜೀವನ ಮೌಲ್ಯಗಳಾಗಿವೆ. ಗಣಪತಿಯ ಜನ್ಮವೃತ್ತಾಂತವೇ ರೋಚಕವಾದುದು. ಆನೆಮೊಗವನ್ನು ಪಡೆದದ್ದೂ ಕೂಡ ಅಷ್ಟೇ ಕುತೂಹಲಕಾರಿ ಸಂಗತಿಯಾಗಿದ್ದು, ಮಕ್ಕಳಿಗೆ ಇವೆಲ್ಲ ಖುಷಿ ಕೊಡುವ ಕಥೆಗಳಾಗಿವೆ. ಇವು ಬರಿ ಕಥೆಗಳಾಗದೆ ಜೀವನವನ್ನು ಸುಂದರವಾಗಿ ರೂಪಿಸಲು ಅಳವಡಿಸಿಕೊಳ್ಳಬೇಕಾದ ಅವಶ್ಯಕ ಮೌಲ್ಯಗಳಾಗಿವೆ. ಗಣಪತಿಯ ಜೀವನವು ಅನೇಕ ಸಂದೇಶ, ಮಾರ್ಗದರ್ಶನವನ್ನು ಒದಗಿಸುತ್ತದೆ. ತಂದೆ-ತಾಯಿಯ ಮೇಲಿನ ಪ್ರೀತಿ ಹಾಗೂ ಆತನ ಜಾಣ್ಮೆಗೆ ಕೈಗನ್ನಡಿಯಾದ ಒಂದು ಕಥೆ ಇಲ್ಲಿದೆ. ಒಂದು ಬಾರಿ ಶಿವಪಾರ್ವತಿಯರು ತಮ್ಮ ಮಕ್ಕಳಾದ ಕಾರ್ತಿಕೇಯ ಮತ್ತು ಗಣಪತಿಗೆ ‘ಯಾರು ಮೊದಲಿಗೆ ಭೂಮಂಡಲದ ಸುತ್ತು ಹಾಕುತ್ತಾರೋ ಅವರಿಗೆ ಬಹುಮಾನ’ ಎಂದು ಹೇಳಿದರು. ಕಾರ್ತಿಕೇಯನು ತಕ್ಷಣ ನವಿಲಿನ ಮೇಲೇರಿ ಭೂ ಮಂಡಲ ಪ್ರದಕ್ಷಿಣೆ ಮಾಡಲು ಹೊರಟ. ಆದರೆ ಗಣಪತಿ ಅಲ್ಲೇ ಕುಳಿತು ತುಸು ಹೊತ್ತಿನ ಬಳಿಕ ತನ್ನ ತಂದೆ-ತಾಯಿಗೆ ಪ್ರದಕ್ಷಿಣೆ ಮಾಡಿ ಮಾತಾಪಿತೃಗಳೇ ನನ್ನ ಪ್ರಪಂಚ ಎಂದು ಹೇಳಿದ. ಈ ಕಥೆಯ ಮೂಲಕ ಗಣಪತಿಯ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಅವಲೋಕಿಸಬಹುದು.
ಬುದ್ಧಿಮತ್ತೆ ಮತ್ತು ವಿವೇಕವನ್ನು ಜಾಗೃತಗೊಳಿಸುವುದರಿಂದ ಗಣಪತಿಯನ್ನು ‘ಬುದ್ಧಿ-ಸಿದ್ಧಿದಾತ’ ಎನ್ನುತ್ತಾರೆ. ಸಮಾಜದಲ್ಲಿ ಜವಾಬ್ದಾರಿ, ತರ್ಕ ಮತ್ತು ವಿವೇಕದ ತಳಹದಿಯು ಮುಖ್ಯ. ಯಾವ ಸಂದರ್ಭದಲ್ಲಿ, ಹೇಗೆ ಬುದ್ಧಿಯನ್ನು ಉಪಯೋಗಿಸಬೇಕು ಎಂಬುವುದನ್ನು ಗಣಪತಿಯ ಕಥೆಗಳ ಮೂಲಕ ಕಲಿಯಬಹುದು. ಗಣಪತಿಯ ಗುಣಗಳು ಸಾಮಾಜಿಕ ನೈತಿಕತೆ, ಸನ್ಮಾರ್ಗ ಮತ್ತು ಸೌಹಾರ್ದತೆಗೆ ಪೂರಕವಾಗಿದೆ. ಗಣಪತಿ ಎಲ್ಲರಿಗೂ ಪ್ರಿಯ. ಆತನ ಪೂಜೆಯನ್ನು ಎಲ್ಲರೂ ಮಾಡುತ್ತಾರೆ. ಇದು ಸಮಾನತೆ, ಸಹೋದರತೆಯ ಸಂಕೇತ.
ಇನ್ನು ಶ್ರದ್ಧೆ, ನಿಷ್ಠೆ ಮತ್ತು ಕಾರ್ಯಸಿದ್ಧಿಗಾಗಿ ಗಣಪತಿಯ ಪರಿಶ್ರಮ ಎಷ್ಟಿತ್ತೆಂದರೆ ಮಹಾಭಾರತದ ರಚನೆಯ ಸಂದರ್ಭವನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ. ವ್ಯಾಸರು ಹೇಳಿದ ಮಹಾಭಾರತದ ಕಥೆಯನ್ನು ಗಣಪತಿ ಬರೆಯುತ್ತಾ ಹೋಗುತ್ತಾನೆ. ಆದರೆ ಗಣಪತಿ ಬರೆಯಲು ಪ್ರಾರಂಭಿಸುವ ಮೊದಲು, ಪ್ರತಿ ಪದವನ್ನೂ ಅರ್ಥಮಾಡಿಕೊಂಡು ಬರೆಯಬೇಕೆಂಬ ಷರತ್ತನ್ನು ವ್ಯಾಸರು ವಿಧಿಸಿದ್ದರು. ಆಗ ಗಣೇಶನು ಯಾವುದೇ ಅಡೆ-ತಡೆ ಇಲ್ಲದೆ ಬರೆಯಲು ಒಪ್ಪಿದನು. ಆದರೆ ‘ವ್ಯಾಸರು ನಿರಂತರ ಕಥೆ ಹೇಳಬೇಕು. ಎಲ್ಲಿಯೂ ನಿಲ್ಲಿಸಬಾರದು’ ಎಂದು ಗಣಪತಿಯೂ ಷರತ್ತು ಹಾಕುತ್ತಾನೆ. ಕಥೆ ಹೇಳುವಾಗ ವ್ಯಾಸರು ಮಧ್ಯೆ ಮಧ್ಯೆ ಕಠಿಣ ಪದಗಳನ್ನು ಬಳಸುತ್ತಿದ್ದರು. ಇದರಿಂದ ಗಣಪತಿಗೆ ಅರ್ಥಮಾಡಿಕೊಳ್ಳಲು ಸಮಯ ಹಿಡಿಯುತ್ತಿತ್ತು ಮತ್ತು ವ್ಯಾಸರಿಗೆ ಮುಂದಿನ ಕಥೆಯನ್ನು ಹೇಳಲು ಸಮಯ ಸಿಗುತ್ತಿತ್ತು. ಈ ಮಧ್ಯೆ ಗಣಪತಿಯ ಲೇಖನಿಯು ಮುರಿಯುತ್ತದೆ. ಆಗ ಬರವಣಿಗೆ ನಿಲ್ಲಬಾರದೆಂದು ತನ್ನ ದಂತವನ್ನೇ ಮುರಿದು ಬರೆಯಲು ಉಪಯೋಗಿಸಿದನು. ಆದ್ದರಿಂದ ಗಣೇಶನನ್ನು ‘ಏಕದಂತ’ ಎಂದು ಕರೆಯುತ್ತಾರೆ. ಇದರ ತಾತ್ಪರ್ಯವೇನೆಂದರೆ ಆರಂಭಿಸಿದ ಕೆಲಸವನ್ನು ಗುರಿಮುಟ್ಟಿಸುವ ತನಕ ನಿಲ್ಲಿಸಬಾರದು, ಎಷ್ಟೇ ಅಡೆ ತಡೆಗಳು ಎದುರಾದರೂ ಎದೆಗುಂದದೆ ಕಾರ್ಯಪ್ರವೃತ್ತರಾಗಬೇಕು ಎನ್ನುವುದಾಗಿದೆ. ಗಣಪತಿಯ ಅನೇಕ ಪುರಾಣ ಕಥೆಗಳು ಸಮಾಜಕ್ಕೆ ಮಾರ್ಗದರ್ಶನಗಳಾಗಿವೆ.
ಭಾರತಕ್ಕೆ ಸ್ವಾತಂತ್ರö್ಯ ದೊರಕಿಸಿಕೊಡುವಲ್ಲಿ ಗಣಪತಿಯ ಮಹತ್ತರವಾದ ಪಾತ್ರವಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಬಾಲಗಂಗಾಧರ ತಿಲಕ್ ಅವರು ೧೮೯೩ರಲ್ಲಿ ಗಣೇಶ ಚತುರ್ಥಿಯನ್ನು ಸಾರ್ವಜನಿಕ ಉತ್ಸವವಾಗಿ ಆಚರಿಸಲು ಪ್ರಾರಂಭಿಸಿದರು. ಈ ಉತ್ಸವದ ಮೂಲಕ ಜನಜಾಗೃತಿ, ಸಂಸ್ಕೃತಿಯ ಉತ್ಥಾನ ಮತ್ತು ಜನರ ಆತ್ಮಬಲ ವೃದ್ಧಿಸಿ ಸ್ವಾತಂತ್ರ್ಯ ಹೋರಾಟದ ಒಬ್ಬ ‘ಶಕ್ತಿ-ಪ್ರೇರಕ’ನಾಗಿ ಗಣಪ ಕೆಲಸ ಮಾಡಿದ್ದಾನೆ. ವಿಭಿನ್ನ ಜಾತಿ, ಸಮುದಾಯದ ನಡುವಿನ ಜನರನ್ನು ಒಗ್ಗೂಡಿಸುವಲ್ಲಿ ‘ಗಣೇಶೋತ್ಸವ’ ಸಹಾಯ ಮಾಡಿತು. ಅಲ್ಲದೆ ಸಾಮಾಜಿಕ ಏಕತೆ ಮತ್ತು ಸಾಮೂಹಿಕ ಚಿಂತನೆಗೆ ಇದು ಎಡೆ ಮಾಡಿಕೊಟ್ಟಿತು. ಹೀಗೆ ಗಣಪತಿಯ ಆರಾಧನೆಯ ರೂಪದಲ್ಲಿ ಸ್ವಾತಂತ್ರö್ಯ ಹೋರಾಟಕ್ಕೆ ಒಂದು ವಿಶೇಷ ಬಲ, ಉತ್ಸಾಹ ಒದಗಿತು. ಆ ಮೂಲಕ ಗಣಪತಿಯು ಸ್ವಾತಂತ್ರö್ಯ ಹೋರಾಟದಲ್ಲಿ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಬಲದ ಸಂಕೇತವಾಗಿ ದೇಶಭಕ್ತಿಯನ್ನು ಪ್ರತಿಯೊಬ್ಬರಲ್ಲೂ ಪ್ರೇರೇಪಿಸಿದ್ದ.
ಶ್ರೀ ಕೃಷ್ಣ ಮತ್ತು ಗಣಪತಿ – ಈ ಇಬ್ಬರೂ ದೇವತೆಗಳು ಭಾರತೀಯ ಸಂಸ್ಕೃತಿಯಲ್ಲಿ ಅಪಾರ ಪ್ರಭಾವ ಬೀರಿದ್ದಾರೆ. ಅವರು ಭಿನ್ನ ರೂಪ, ಭಿನ್ನ ತತ್ವಗಳ ಅವತಾರವಾಗಿದ್ದರೂ ಅವರ ಮಧ್ಯೆ ಹಲವಾರು ಸಾಮ್ಯತೆಗಳು ಇವೆ. ಇವು ನೈಸರ್ಗಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ನೈತಿಕ ಮಟ್ಟದಲ್ಲಿ ಕೂಡಾ ಬಿಂಬಿತವಾಗಿವೆ. ಪ್ರಕೃತಿಯಿಂದಲೇ ಹುಟ್ಟಿದ ಗಣಪತಿ, ಗೋವುಗಳೊಂದಿಗೆ ಆಡುತ್ತಾ ಪರಿಸರದೊಂದಿಗೇ ಬೆಳೆದ ಬಾಲಗೋಪಾಲ ಪರಿಸರ ಸಂರಕ್ಷಣೆಯ ಹರಿಕಾರರು. ಇಬ್ಬರೂ ಕೂಡ ಕಲಾ ಪ್ರೀತಿ ಉಳ್ಳವರು. ಸಂಸ್ಕೃತಿ, ಪರಂಪರೆ ಉಳಿಸಿ ಧರ್ಮ ಸಂರಕ್ಷಿಸುವಲ್ಲಿ ಸದಾ ನಿರತರು. ಇಂತಹ ಮಹಾನ್ ದೈವೀ ಶಕ್ತಿಯನ್ನು ಆರಾಧಿಸುವ ಶ್ರೀ ಕೃಷ್ಣಾಷ್ಟಮಿ ಹಾಗೂ ಗಣೇಶೋತ್ಸವಗಳು ಸಮಾಜದಲ್ಲಿ ಕೇವಲ ಮನರಂಜನೆ, ಅಬ್ಬರದ ಆಚರಣೆಗೆ ಸೀಮಿತವಾಗದೆ ಸಂಸ್ಕೃತಿ ಉತ್ಥಾನದ ನೆಲೆಗಟ್ಟಿನಲ್ಲಿ ಆಚರಣೆಗೊಳ್ಳಲಿ. ಈ ಮೂಲಕ ಸಮಾಜದಲ್ಲಿ ಭಾರತೀಯ ಪರಂಪರೆಯು ಚಿರಸ್ಥಾಯಿಯಾಗಲಿ.

Facebook
Twitter
WhatsApp
LinkedIn
Telegram