ಕತ್ತಲಲ್ಲಿ ದೀಪ ಹಚ್ಚುವವರು

ಯಾವುದೇ ಕತೆ, ಕಾದಂಬರಿಯನ್ನು ಓದಿದರೂ ಮಧ್ಯಮ ಮತ್ತು ಬಡವರ್ಗದ ಜನರ ಬದುಕಿನಲ್ಲಿ ಕಷ್ಟಗಳು ಆರಂಭವಾಗುವುದು ಗಂಡ ಕುಡಿತದ ಚಟ ಆರಂಭಿಸಿದಾಗ ಅಥವಾ ಬೇರೊಬ್ಬ ಹೆಣ್ಣಿನ ಮೋಹಕ್ಕೆ ಬಿದ್ದಾಗ. ಅದರಲ್ಲೂ ಮುಖ್ಯವಾಗಿ ಮದ್ಯಪಾನ ಒಂದಿರದಿದ್ದರೆ ಹೆಚ್ಚಿನ ಹೆಣ್ಣು ಮಕ್ಕಳ ಬದುಕು ಸ್ವಲ್ಪವಾದರೂ ಸಹನೀಯವಾಗಿರುತ್ತಿತ್ತೇನು! ಹಾಗೆಂದು ಮೇಲ್ವರ್ಗದವರ, ವಿದ್ಯಾವಂತರ, ಉದ್ಯಮಿಗಳ ಮನೆಗಳಲ್ಲೂ ಕುಡಿತ ಇಲ್ಲವೆಂದಿಲ್ಲ. ಆದರೆ ಅದನ್ನೆಲ್ಲ ನಿಭಾಯಿಸಬಲ್ಲ ಆರ್ಥಿಕ ಶಕ್ತಿ ಅವರಲ್ಲಿ ಇರುವುದರಿಂದ ನೆಮ್ಮದಿ, ಆರೋಗ್ಯ ಎಲ್ಲವನ್ನೂ ಸಾಕಷ್ಟು ಹಣ ಖರ್ಚುಮಾಡಿ ಅವರು ಕೊಂಡುಕೊಳ್ಳುತ್ತಾರೆ.
ಒಂದು ಮನೆಯ ಯಜಮಾನ ಎನಿಸಿಕೊಂಡವ ಆ ಮನೆಯ ಆಧಾರಸ್ತಂಭದಂತಿರುತ್ತಾನೆ. ಮನೆಯ ಆಧಾರಸ್ತಂಭ ಗಟ್ಟಿಯಾಗಿದ್ದಾಗ ಮಕ್ಕಳು ಆ ಸ್ತಂಭವನ್ನು ಗಟ್ಟಿಯಾಗಿ ಹಿಡಿದುಕೊಂಡು ಧೈರ್ಯದಿಂದ ಅದರ ಸುತ್ತ ತಿರುಗುತ್ತಾರೆ. ಆದರೆ ಒಂದು ವೇಳೆ ಸ್ತಂಭವೇ ಬಿದ್ದರೆ ಆಗ ಮಕ್ಕಳು ಬೀಳುತ್ತಾರೆ. ಇಂಥಾ ಆಧಾರ ಸ್ತಂಭಗಳನ್ನು ಬಲಪಡಿಸುವ ಮತ್ತು ಮಕ್ಕಳು ನಿಶ್ಚಿಂತೆ, ಸಂತೋಷದಿಂದ ಹೆತ್ತವರ ಜೊತೆ ಬೆಳೆಯುವ ಸಂದರ್ಭವನ್ನು ಕಲ್ಪಿಸಿಕೊಡುವ ಕೆಲಸವನ್ನು ಇಂದು ‘ಜನಜಾಗೃತಿ ವೇದಿಕೆ’ಯ ಕಾರ್ಯಕರ್ತರು ಮಾಡುತ್ತಿದ್ದಾರೆ.
‘ಮಾತು’ ಖಡ್ಗವೂ ಆಗಬಹುದು ಅಥವಾ ಗಾಯಕ್ಕೆ ಹಚ್ಚುವ ಮುಲಾಮೂ ಆಗಬಹುದೆಂಬ ಮಾತಿದೆ. ದುಶ್ಚಟಗಳಿಂದಾಗಿ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ವಲಯಗಳಲ್ಲಿ ಸಾಕಷ್ಟು ಕಷ್ಟ-ನೋವು ಅನುಭವಿಸಿದವರನ್ನು ಮದ್ಯವರ್ಜನ ಶಿಬಿರಕ್ಕೆ ಸೇರಿಸಿಕೊಂಡು ತಮ್ಮ ಮಾತೆಂಬ ಮುಲಾಮಿನಿಂದ ದಿನ ಅವರ ದುಶ್ಚಟವೆಂಬ ಕಾಯಿಲೆಯನ್ನು ಗುಣಪಡಿಸುವ ಕೆಲಸವನ್ನು ಜನಜಾಗೃತಿ ವೇದಿಕೆಯ ಕಾರ್ಯಕರ್ತರು ಬಹಳ ಸಂಯಮ, ಶ್ರದ್ಧೆಯಿಂದ ಮಾಡುತ್ತಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಬಹುಷಃ ಗಂಡ-ಹೆಂಡತಿ ಸೇರಿ ದುಡಿದು ತಮ್ಮ ಮನೆ, ಮಕ್ಕಳನ್ನು ಸಾಕುವ ಶಕ್ತಿ ಅವರಲ್ಲಿ ಖಂಡಿತಾ ಇದೆ. ಆದರೆ ಸಂಸಾರದ ಬಂಡಿ ಎಳೆಯಬೇಕಾದ ಎರಡೆತ್ತುಗಳಲ್ಲಿ ಒಂದು ಕುಂಠಿತವಾದಾಗ ಗಾಡಿ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ನೆರವು ನೀಡುವ ದೃಷ್ಟಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾಯಿತು. ಬಹುಷಃ ಕುಡಿತದ ಚಟ ಒಂದಿಲ್ಲದಿರುತ್ತಿದ್ದರೆ ಮಾಸಾಶನ, ಶಿಷ್ಯವೇತನ, ವಾತ್ಸಲ್ಯ, ಜನಜಾಗೃತಿ, ಸ್ವಾಸ್ಥö್ಯ ಸಂಕಲ್ಪ, ಸುರಕ್ಷಾ ಇತ್ಯಾದಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿರಲಿಲ್ಲ.
ಒಟ್ಟಿನಲ್ಲಿ ಒಬ್ಬ ವ್ಯಕ್ತಿಯನ್ನು ದುಶ್ಚಟ ಮುಕ್ತನಾಗಿಸುವ ಮೂಲಕ ಪತ್ನಿಗೆ ಒಳ್ಳೆಯ ಪತಿ, ಮಕ್ಕಳಿಗೆ ಪ್ರೀತಿಯ ಅಪ್ಪ, ಅಣ್ಣ ತಮ್ಮಂದಿರಿಗೆ ಒಳ್ಳೆಯ ಸಹೋದರ, ತಂದೆ-ತಾಯಿಗೆ ಒಬ್ಬ ಉತ್ತಮ ಮಗ ಮಾತ್ರವಲ್ಲ ಸಮಾಜಕ್ಕೆ ಶ್ರೇಷ್ಠ ನಾಗರಿಕ ದೊರೆತಂತಾಗುತ್ತದೆ. ಆದ್ದರಿಂದ ‘ಜನಜಾಗೃತಿ ವೇದಿಕೆ’ ಒಬ್ಬನ ಸಮಸ್ಯೆಗಷ್ಟೆ ಪರಿಹಾರವಲ್ಲ, ಸಮಸ್ತರಿಗೆ ಸಂಬAಧಿಸಿದ ವಿಚಾರ.
ಹಾಗೆಂದು ಮದ್ಯಪಾನಿಗಳನ್ನು ದುಶ್ಚಟದ ಕದಂಬ ಬಾಹುಗಳಿಂದ ಬಿಡಿಸಿ ಹೊರ ತರುವುದು ಸುಲಭದ ಕೆಲಸವಲ್ಲ. ಸಹನೆ, ತಾಳ್ಮೆಯ ಜೊತೆಗೆ ತನ್ನ ಮತ್ತು ತನ್ನ ಕೆಲಸದ ಮೇಲೆ ಹೆಚ್ಚಿನ ಭರವಸೆಯೂ ಅಗತ್ಯವಾಗಿ ಇರಬೇಕಾಗುತ್ತದೆ. ಅಂಥಹಾ ಛಲ, ಗುರಿಮುಟ್ಟಿಸುತ್ತೇನೆಂಬ ಆತ್ಮವಿಶ್ವಾಸ ಕಾರ್ಯಕರ್ತರಲ್ಲಿದೆ.
ಕೆಲವೊಮ್ಮೆ ನಾವು ವೈದ್ಯರ ಬಗ್ಗೆ ಮಾತನಾಡುವಾಗ ‘ಅವರ ಕೈಗುಣ ದೊಡ್ಡದು’ ಎನ್ನುತ್ತೇವೆ. ಅದು ಕೈಗುಣವಲ್ಲ ಬದಲಾಗಿ ಮಾತಿನ ಗುಣ. ವೈದ್ಯ ರೋಗಿಯಲ್ಲಿ ಆತ್ಮೀಯತೆಯಿಂದ ಮಾತನಾಡಿ ಧೈರ್ಯ ತುಂಬುವ ಕೆಲಸವನ್ನು ಮಾಡಿದಾಗ ರೋಗಿಯ ಅರ್ಧ ಕಾಯಿಲೆ ಗುಣವಾದಂತೆಯೇ ಸರಿ. ಹಾಗೆಯೇ ನಮ್ಮ ಕಾರ್ಯಕರ್ತರು ತಮ್ಮ ಮಾತಿನ ಮೋಡಿಯಿಂದ ಆತನೊಳಗಿನ ಮದ್ಯ ರಾಕ್ಷಸನನ್ನು ಹೊರಗಟ್ಟಿ ಆತನ ನಿಜವಾದ ರೂಪದರ್ಶನವನ್ನು ಮಾಡಿಸುತ್ತಾರೆ. ಆತನ ಬಾಯಿಯಿಂದಲೇ ತಾನು ಎಲ್ಲೆಲ್ಲಿ, ಯಾವಾಗ ತಪ್ಪು ಮಾಡಿದೆ, ಎಷ್ಟು ಹಣ ಕಳೆದುಕೊಂಡೆ, ತನ್ನ ಮನೆಯವರಿಗೆ ಎಷ್ಟು ಹಿಂಸೆ ಕೊಟ್ಟೆ ಎಂಬ ಪಶ್ಚಾತ್ತಾಪದೊಂದಿಗೆ ತಪ್ಪೊಪ್ಪಿಕೊಳ್ಳುವಂತೆ ಮಾಡುವುದು ಸುಲಭದ ಮಾತೇನಲ್ಲ.ಮದ್ಯವ್ಯಸನಿಗಳದ್ದು ಯಾರಿಂದಲೂ ಬಗ್ಗಿಸಲಾಗದ ವ್ಯಕ್ತಿತ್ವ. ಜಾಸ್ತಿ ಬಗ್ಗಿಸಿದರೆ ಮುರಿದು ಬೀಳಬಹುದಾದ ಸಂದರ್ಭಗಳೇ ಅಧಿಕ. ಅಂಥವರನ್ನು ತಮ್ಮ ಮೃದು ಮಾತುಗಳಿಂದ ಮೃದುವಾಗಿ ಬಗ್ಗಿಸಿ ಸರಿ ದಾರಿಗೆ ತರುವ ಕೆಲಸ ಮಾಡುವ ನಮ್ಮ ಕಾರ್ಯಕರ್ತರ ಶ್ರಮ ಸಣ್ಣದೇನಲ್ಲ. ಅವರ ಮಾತನ್ನು ಪುಂಗಿ ನಾದಕ್ಕೆ ಹಾವು ಹೆಡೆ ಆಡಿಸುವಂತೆ ತಲ್ಲೀನತೆಯಿಂದ ಕೇಳಿ ಮನಸಾರೆ ಒಪ್ಪಿ ಸ್ವೀಕರಿಸುವ ಪರಿ ನಿಜವಾಗಿಯೂ ವಿಸ್ಮಯ.
‘ಮಾತು ಮನೆಕೆಡಿಸಿತು ತೂತು ಒಲೆ ಕೆಡಿಸಿತು’ ಎಂಬ ಮಾತಿದೆ. ಆದರೆ ಅದಕ್ಕೆ ವ್ಯತಿರಿಕ್ತವಾದ ನಮ್ಮ ಕಾರ್ಯಕರ್ತರ ‘ಮಾತು’ ಇಂದು ಸಾವಿರಾರು ಮನೆಗಳನ್ನು ಉಳಿಸಿದೆ. ಇದು ಮಾತಿಗಿರುವ ಸಾಮರ್ಥ್ಯ. ‘ಶವವನ್ನು ಶಿವನನ್ನಾಗಿಸುವ, ನಿನ್ನಲ್ಲೂ ದೈವತ್ವದ ಅಂಶ ಇದೆ’ ಎಂದು ತಿಳಿಯಪಡಿಸುವುದೇ ಈ ಮಾತು. ಜನಜಾಗೃತಿ ವೇದಿಕೆಯ ಕಾರ್ಯಕರ್ತರ ಮಾತೆಂಬ ಜ್ಯೋತಿಯ ಮೂಲಕ ಇನ್ನಷ್ಟು ಮನೆಗಳು ಬೆಳಕಾಗಲೆಂದು ಗಾಂಧಿ ಜಯಂತಿಯ ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.

Facebook
Twitter
WhatsApp
LinkedIn
Telegram