ಸೀಗೆಕಾಯಿಯಿಂದ ಕಂಪನಿ ಕಟ್ಟಿದರು

ಹಿಂದೆ ಒಂದು ಕಾಲವಿತ್ತು. ಸಾಬೂನು ಶ್ಯಾಂಪ್‌ಗಳ ಪರಿಚಯ ಹೆಚ್ಚಿನವರಿಗೆ ಇರಲಿಲ್ಲ. ಕಾಡಿನಲ್ಲಿ ದೊರೆಯುವ ಸೀಗೆಕಾಯಿಯನ್ನು ಹೆಕ್ಕಿ ತಂದು ಒಣಗಿಸಿ ಕಲ್ಲಿನಲ್ಲಿ ಗುದ್ದಿ ಹುಡಿ ಮಾಡಿ, ಉಂಡೆ ಮಾಡಿ ಜೋಪಾನವಾಗಿ ಇಡುತ್ತಿದ್ದರು. ತೆಂಗಿನ ಗೆರಟೆಗೆ ಹಾಕಿ ಹುಡಿಯನ್ನು ಸಾಬೂನಿನ ಬದಲು ಬಳಸಲಾಗುತ್ತಿತ್ತು. ಹೀರೆನಾರನ್ನು ಮೈ ಉಜ್ಜುವ ಬ್ರೆಶ್ ಆಗಿ ಬಳಸುತ್ತಿದ್ದರು. ದಿನಕಳೆದಂತೆ ಪೈಪೋಟಿಗೆ ಬಿದ್ದವರಂತೆ ಸೋಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಅವುಗಳ ಕೃತಕ ಸುಗಂಧಗಳಿಗೆ ಮನಸೋತ ಮಂದಿ ಸೀಗೆಕಾಯಿ ಹುಡಿಗೆ ಗುಡ್‌ಬೈ ಹೇಳಿದರು. ಸೀಗೆಕಾಯಿ ಬಳಸುತ್ತಿದ್ದಾಗ ಉದುರದಿದ್ದ ತಲೆಗೂದಲುಗಳು ಸಾಬೂನು ಬಳಕೆ ಹೆಚ್ಚಿದಂತೆ ಉದುರತೊಡಗಿದವು. ಮತ್ತೆ ಕಂಪನಿಗಳು ‘ನಮ್ಮ ಸಾಬೂನಿನಲ್ಲಿ ಸೀಗೆಕಾಯಿಯ ತ್ವಚೆಯಿದೆ’ ಎಂದು ಜಾಹೀರಾತು ನೀಡತೊಡಗಿದವು. ಜನ ಅವುಗಳಿಗೆ ಮರುಳಾಗುತ್ತಿದ್ದಾರೆ. ಹಾಗಾದರೆ ಈಗ ಕಾಡಿನಲ್ಲಿ ಸೀಗೆಕಾಯಿ ಕಾಣಸಿಗುತ್ತಿಲ್ಲವೇ! ಅವುಗಳಿಂದ ಹುಡಿ ತಯಾರಿಸಬಹುದಾ! ಖಂಡಿತಾ ಸಾಧ್ಯ ಎಂಬುವುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಚಂದ್ರಮೌಳೇಶ್ವರ’ ಸ್ವಸಹಾಯ ಸಂಘದ ಸದಸ್ಯರಾದ ಮಧುಗಿರಿ ತಾಲೂಕಿನ ಸಿದ್ಧನಹಳ್ಳಿಯ ರಮೇಶ್ ಬಾಬುರವರು ತೋರಿಸಿಕೊಟ್ಟಿದ್ದಾರೆ.
ಇದ್ದ ಎರಡು ಎಕರೆ ಜಮೀನಿನಲ್ಲಿ ಹಿಂದೆ ರಾಗಿ, ಮುಸುಕಿನ ಜೋಳ ಬೆಳೆಯುತ್ತಿದ್ದರು. ದಿನಕಳೆದಂತೆ ಕೂಲಿಯಾಳು ಸಮಸ್ಯೆಯಾಗಿ ಜಮೀನನ್ನು ಹಡೀಲು ಬಿಡಬೇಕಾಯಿತು. ಆಗ ಇವರನ್ನು ಆಕರ್ಷಿಸಿದ್ದು 1976ರಲ್ಲಿ ತನ್ನ ತಾತ ನೆಚ್ಚಿಕೊಂಡು ಬಂದ ಸೀಗೆಕಾಯಿಯನ್ನು ಹುಡಿ ಮಾಡುವ ಮಿಲ್.
ತಾತನ ಕಾಯಕಕ್ಕೆ ಮರುಜೀವ
ತಂದೆ ರಮೇಶ್ ಬಾಬುರವರ ಪ್ರಯತ್ನಕ್ಕೆ ಎಂ.ಕಾಂ. ಪದವೀಧರನಾದ ಮಗ ವಿಶ್ವನಾಥ್ ಸಾಥ್ ನೀಡಿದರು. ತಿಪಟೂರು, ತುಮಕೂರು, ಕೊರಟಗೆರೆ, ಚಿಕ್ಕಮಗಳೂರು ಹೀಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ, ಆಂಧ್ರಪ್ರದೇಶದಿಂದ ಸೀಗೆಕಾಯಿಯನ್ನು ಖರೀದಿಸತೊಡಗಿದರು. ನಂತರ ಅವುಗಳಿಗೆ ಬೇರೆ ಬೇರೆ ರೂಪ ನೀಡಿ ಮಾರಾಟ ಮಾಡುವ ಪ್ರಯತ್ನಕ್ಕೆ ಚಾಲನೆ ನೀಡಿದರು.
ಇದೀಗ ಕಳೆದ ಮೂರು ವರ್ಷಗಳಿಂದ ಇವರ ಸೀಗೆಕಾಯಿ ಉದ್ಯಮ ಎತ್ತರಕ್ಕೆ ಬೆಳೆದು ನಿಂತಿದೆ. ‘ವಿಶ್ವ ರಕ್ಷ ಹರ್ಬಲ್ ಸೀಗೆಕಾಯಿ ಪೌಡರ್’ ಘಟಕ ಎಂಬ ಕಂಪನಿಯ ಬಾಗಿಲು ತೆರೆದಿದೆ. ವರ್ಷಕ್ಕೆ 10 ಟನ್ ಸೀಗೆಕಾಯಿಯನ್ನು ಇವರು ಖರೀದಿಸುತ್ತಿದ್ದಾರೆ. ಕಾಯಿ ಸಂಗ್ರಹಣೆಗಾಗಿ ಪ್ರತ್ಯೇಕ ಹವಾನಿಯಂತ್ರಿತ ಕೊಠಡಿ ಇವರಲ್ಲಿದೆ.
ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ : ಜನವರಿಯಿಂದ ಮಾರ್ಚ್ ತಿಂಗಳಲ್ಲಿ ಕಾಯಿ ಒಣಗಿ ಉದುರುತ್ತದೆ. ಆಗ ಕಾಯಿಗೆ ಕೆ.ಜಿ.ಗೆ ರೂ. 140 ರಿಂದ ರೂ. 200 ನೀಡಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಇತ್ತೀಚೆಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ದು ರಾಜ್ಯದಿಂದ ವಿದೇಶಗಳಿಗೆ ಸೀಗೆಕಾಯಿ ರಫ್ತಾಗುತ್ತದೆ.
ಏನೆಲ್ಲಾ ತಯಾರಿ : ಕಾಯಿಯನ್ನು ಹುಡಿ ಮಾಡಿ ಅದಕ್ಕೆ ಇತರ ಕೆಲವೊಂದು ನೈಸರ್ಗಿಕ ವಸ್ತುಗಳನ್ನು ಬೆರೆಸಿ ಹುಡಿ ತಯಾರಿಸುತ್ತಾರೆ. ಪೌಡರ್, ಶ್ಯಾಂಪ್, ಪೇಸ್ಟ್ ಅನ್ನು ಇವರು ತಯಾರಿಸುತ್ತಾರೆ. ಅದಕ್ಕಾಗಿಯೇ ಅನುಭವಸ್ಥ ಮೂರು ಮಂದಿ ಕೆಲಸದವರು ಇಲ್ಲಿದ್ದಾರೆ. ಇಲ್ಲಿಗೆ ಬಂದು ಖರೀದಿಸುವ ಸಾಕಷ್ಟು ಮಂದಿ ಖಾಯಂ ಗಿರಾಕಿಗಳಿದ್ದಾರೆ. ಆನ್‌ಲೈನ್ ಮೂಲಕ ಖರೀದಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ಇವರು ತಯಾರಿಸಿದ ಶೇ. 90ರಷ್ಟು ವಸ್ತುಗಳು ಬೆಂಗಳೂರಿನ ಮಹಾನಗರವನ್ನು ಸೇರುತ್ತಿವೆ. ಬೇಕಾದವರಿಗೆ ಅಂಚೆ ಮೂಲಕ ಕಳುಹಿಸಿಕೊಡುವ ವ್ಯವಸ್ಥೆಯೂ ಇಲ್ಲಿದೆ.
ಸೀಗೆಕಾಯಿ ಉಷ್ಣ ಹಾಗೂ ಒಣ ಹವಾಮಾನದಲ್ಲಿ ಉತ್ತಮ ಇಳುವರಿ ನೀಡುತ್ತದೆ. ಅತಿ ಹೆಚ್ಚು ಸೂರ್ಯನ ಬೆಳಕು ಇರುವ ಪ್ರದೇಶಗಳು ಇದಕ್ಕೆ ಸೂಕ್ತ. ಇದು ಮುಳ್ಳುಗಳಿಂದ ಕೂಡಿದ ಬಳ್ಳಿ ಅಥವಾ ಪೊದೆ ಜಾತಿಯ ಸಸ್ಯವಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಸೀಗೆಕಾಯಿಯನ್ನು ಬೆಳೆಯಲಾಗುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳು ಹಾಗೂ ಮಲೆನಾಡು ಭಾಗಗಳಾದ ಉತ್ತರ ಕನ್ನಡ (ಶಿರಸಿ), ದಕ್ಷಿಣ ಕನ್ನಡ, ಹಾವೇರಿ, ಕರಾವಳಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸೀಗೆಕಾಯಿ ವ್ಯಾಪಕವಾಗಿ ಬೆಳೆಯುತ್ತದೆ. ನೈಸರ್ಗಿಕ ಶ್ಯಾಂಪೂ ಮತ್ತು ಸೌಂದರ್ಯವರ್ಧಕಗಳ ತಯಾರಿಯಲ್ಲಿ ಸೀಗೆಕಾಯಿಗೆ ಭಾರಿ ಬೇಡಿಕೆ ಇರುವುದರಿಂದ ಇದನ್ನು ಲಾಭದಾಯಕ ಉಪಬೆಳೆಯಾಗಿ ಬೆಳೆಸಬಹುದು. ಸೀಗೆಕಾಯಿ ಬಳ್ಳಿಯನ್ನು ಯಾವುದೇ ರೀತಿಯ ಮಣ್ಣಿನಲ್ಲಿ ಬೆಳೆಯಬಹುದಾದರೂ ನೀರು ಬಸಿದು ಹೋಗುವ ಕೆಂಪು ಮಣ್ಣು, ಮರಳುಮಿಶ್ರಿತ ಮಣ್ಣಿನಲ್ಲಿ ಇದರ ಇಳುವರಿ ಹೆಚ್ಚಾಗಿರುತ್ತದೆ.
ಉಪಯೋಗ : ಸೀಗೆಕಾಯಿಯು ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾದ ನೈಸರ್ಗಿಕ ಔಷಧಿಯಾಗಿದೆ. ಇದು ಕೂದಲನ್ನು ಸ್ವಚ್ಛಗೊಳಿಸುತ್ತದೆ, ತಲೆಹೊಟ್ಟು ನಿವಾರಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ, ತಲೆ ತುರಿಕೆಯನ್ನು ಗುಣಪಡಿಸಿ ಕೂದಲಿಗೆ ಹೊಳಪು ಮತ್ತು ಮೃದುತ್ವವನ್ನು ನೀಡುತ್ತದೆ.
ಇವರು ಯಾವುದೇ ಕೃತಕ ಬಣ್ಣ, ಪರಿಮಳವನ್ನು ಬಳಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿಶ್ವನಾಥ್‌ರವರಿಗೆ ನೀವು ಕರೆ ಮಾಡಬಹುದಾಗಿದೆ. ಅವರ ದೂರವಾಣಿ ಸಂಖ್ಯೆ : 7019327963.

Facebook
Twitter
WhatsApp
LinkedIn
Telegram