ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಆದಿ ಮಾನವನಾಗಿದ್ದ ಮನುಷ್ಯ ಆಧುನಿಕ ಮಾನವನಾಗಿ ಬೆಳೆದು ಬಂದ ಬಗೆ ವಿಸ್ಮಯ. ನಿಸರ್ಗದೊಂದಿಗೆ ಬದುಕುತ್ತ, ಬದಲಾವಣೆಯ ಗಾಳಿ ಬೀಸುತ್ತಾ, ಅನೇಕ ಮಾರ್ಪಾಡುಗಳನ್ನು ಕಂಡು ನಿಸರ್ಗದ ಆಗು-ಹೋಗುಗಳ, ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳುವ ಮನುಷ್ಯನ ನಂಬಿಕೆಯಿಂದ ಹುಟ್ಟಿಕೊಂಡ ಹಬ್ಬಗಳು ಇಂದು ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ದೀಪಾವಳಿ ಇಂತಹ ಹಬ್ಬಗಳಲ್ಲಿ ಒಂದಾಗಿದೆ.
ಗ್ರಾಮೀಣ ಸೊಗಡಿನ ದೀಪಾವಳಿಯಿಂದ ಆಧುನಿಕ ಕಾಲದ ಆಚರಣೆ, ಸುಡುಮದ್ದು ಪ್ರದರ್ಶನದವರೆಗೆ ದೀಪಾವಳಿ ಹಬ್ಬದ ಆಚರಣೆ ಬದಲಾಗಿದೆ. ಆದಿ ಮಾನವನಾಗಿ ಜೀವಿಸುತ್ತಿದ್ದ ಮನುಷ್ಯನು ಗೆಡ್ಡೆ-ಗೆಣಸುಗಳನ್ನು ತಿಂದು ಬದುಕುತ್ತಿದ್ದ ಸಂದರ್ಭದಲ್ಲಿ ಮೊದಲಿಗೆ ಬೆಂಕಿ ಆವಿಷ್ಕರಿಸಿದ. ಬೆಂಕಿಯನ್ನು ಕಂಡುಹಿಡಿದ ಬಳಿಕ ಆದಂತಹ ಬದಲಾವಣೆ ಮತ್ತು ಬೆಳಕನ್ನು ಆವಿಷ್ಕರಿಸಿದ ನೆನಪಿಗಾಗಿ ದೀಪಾವಳಿ ಆಚರಣೆಗೆ ಬಂತು ಎನ್ನುವುದು ಒಂದು ಪ್ರತಿಪಾದನೆಯಾಗಿದೆ.
ಭೂಮಿಗೆ ಸಂಬಂಧಿಸಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಗೆ ‘ಕೌಮುದ ಮಹೋತ್ಸವ’ ಎಂಬ ಹೆಸರು ಇದೆ. ‘ಕೌ’ ಎಂದರೆ ‘ಭೂಮಿ’, ‘ಮುದ’ ಎಂದರೆ ‘ಸಂತೋಷದ ಸಮಯ’ ಎಂದರ್ಥ. ಆಶ್ವಿಜ ಮಾಸದ ಸಮಯದಲ್ಲಿ ಭೂಮಿ ತಾಯಿಯು ದವಸ-ಧಾನ್ಯಗಳಿಂದ ಮೈದುಂಬಿ ರೈತರ ಬಾಳಿಗೆ ಬೆಳಕಾಗುತ್ತಾಳೆ. ರೈತರ ಶ್ರಮಕ್ಕೆ ಫಲ ದೊರೆಯುವ ಸಂತೋಷದ ಸಮಯ ಎಂಬ ಸಂಕೇತದೊAದಿಗೆ ‘ಭೂ’ತಾಯಿಯನ್ನು ಪೂಜಿಸುವ ಹಬ್ಬವೇ ದೀಪಾವಳಿಯಾಗಿದೆ.
ಹಬ್ಬದ ಆಚರಣೆಯಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಸಾಕಷ್ಟು ವ್ಯತ್ಯಯಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ತಿಪ್ಪೆ ಅಂದರೆ, ಗೊಬ್ಬರದ ಗುಂಡಿಯನ್ನು ತಿಪ್ಪೇದೇವರು ಎಂದು ಕರೆದು ಗೌರವಿಸುತ್ತಾರೆ. ಈ ತಿಪ್ಪೆ ಗುಂಡಿಗೆ ಹೂವು, ಮಂತ್ರಾಕ್ಷತೆಗಳನ್ನು ಇಟ್ಟು ಮಂಗಳಾರತಿ ಎತ್ತಿ ಪೂಜಿಸುತ್ತಾರೆ. ಹೊಲಗದ್ದೆಗಳಲ್ಲಿ ಬಳಸುವ ಪರಿಕರಗಳನ್ನು ತೊಳೆದು ಶುಚಿ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಗೋ ಪೂಜೆಯನ್ನು ಮಾಡಲಾಗುತ್ತದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದೀಪಾವಳಿಯನ್ನು ‘ಬಲಿಪಾಡ್ಯಮಿ’ ಹಬ್ಬ ಎಂದು ಕರೆಯುತ್ತಾರೆ. ಪಾತಾಳದಲ್ಲಿರುವ ಬಲೀಂದ್ರನನ್ನು ಭೂಮಿಗೆ ಆಹ್ವಾನಿಸುವ ಹಬ್ಬವಾಗಿದೆ. ಮಲೆನಾಡಿನಲ್ಲಿ ‘ಅಂಟಿಗೆ-ಪಿಂಟಿಗೆ’ ಎಂಬ ಹೆಸರಲ್ಲೂ, ಕೆಲವು ಜನಾಂಗದವರು ‘ಬೂರೆ ಹಬ್ಬ’ ಎಂದೂ ಆಚರಿಸುತ್ತಾರೆ. ಹಬ್ಬದ ದಿನ ಕೆಲವೆಡೆ ಅನೇಕ ಕ್ರೀಡಾ ಕೂಟಗಳನ್ನು ಆಯೋಜಿಸುತ್ತಾರೆ. ನೂತನ ವಧೂ-ವರರಿಗೆ ಮೊದಲ ವರ್ಷದ ದೀಪಾವಳಿ ಹಬ್ಬವನ್ನು ಮಾವನ ಮನೆಯಲ್ಲಿ ಆಚರಿಸುವ ಪದ್ಧತಿಯೂ ಇದೆ. ಹೊಸ ಅಳಿಯಂದಿರಿಗೆ ‘ಅಳಿಯನ ಹಬ್ಬ’ವೇ ಆಗಿರುವ ದೀಪಾವಳಿ ಹಬ್ಬದಂದು ಅಳಿಯಂದಿರನ್ನು ‘ಬಲೀಂದ್ರ’ರೆಂದೇ ಪರಿಗಣಿಸಿ ಸ್ವಾಗತಿಸುವ ಪದ್ಧತಿಯೂ ಇದೆ. ಮನೆಗೆ ಬರುವ ಅಳಿಯ ಮತ್ತು ಮಗಳನ್ನು ಮುಂಬಾಗಿಲಿನಲ್ಲಿ ನಿಲ್ಲಿಸಿ, ದೃಷ್ಟಿ ತೆಗೆದು, ಆರತಿ ಮಾಡಿ ‘ಬಲೀಂದ್ರ’ ತಮ್ಮ ಮನೆಗೆ ಬಂದನೆಂದು ಭಾವಿಸಿ ಮನೆಮಂದಿ ಎಲ್ಲ ‘ಹಾಲು ಹಳ್ಳವಾಗಲಿ, ಬೆಣ್ಣೆ ಬೆಟ್ಟವಾಗಲಿ…’ ಎಂದು ಹಾಡಿ ಅಳಿಯಂದಿರು-ಮಗಳನ್ನು ವಿಶೇಷವಾಗಿ ಸತ್ಕರಿಸುವ ಪ್ರತೀತಿ ಇದೆ.
‘ಅಪರಿಮಿತದ ಕತ್ತಲೆಯೊಳಗೆ ವಿಪರೀತದ ಬೆಳಗನಿಕ್ಕಿದವರಾರೋ? ಬೆಳಗೂ ಅದೆ, ಕತ್ತಲೆಯೂ ಅದೆ, ಇದೇನು ಚೋದ್ಯವೋ?’ ಎಂದು ಅಲ್ಲಮಪ್ರಭು ತಮ್ಮ ವಚನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಈ ವಚನದಲ್ಲಿ ಕತ್ತಲೆ ಮತ್ತು ಬೆಳಕಿನ ಬಗ್ಗೆ ಒಂದು ವಿಶೇಷವಾದ ಚಿಂತನೆಯನ್ನು ಮಾಡಿರುತ್ತಾರೆ. ದುಷ್ಟಶಕ್ತಿಯ ಸಂಕೇತವಾದ ಕತ್ತಲೆಯನ್ನು ಜಯಿಸಿ ಬೆಳಕನ್ನು ಹರಿಸುವ ದೀಪವನ್ನು ಬೆಳಗುವುದು ನಮ್ಮ ಸಂಸ್ಕೃತಿಯಲ್ಲಿ ಮಿಳಿತವಾಗಿದೆ. ದೀಪವನ್ನು ಶುದ್ಧ ಮನಸ್ಸಿನಿಂದ ಹಚ್ಚಿ ದೇವರಿಗೆ ಕೈ ಮುಗಿದು ದೀಪಕ್ಕೂ ನಮಸ್ಕರಿಸುತ್ತೇವೆ. ‘ತಮಸೋ ಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ!’ ಎಂದೇ ಬೆಳಕನ್ನು ಆರಾಧಿಸುತ್ತೇವೆ. ಬೆಳಕು ಹರಿದ ಮೇಲೆ ಕತ್ತಲೆ, ಕತ್ತಲೆಯಾದ ಮೇಲೆ ಮತ್ತೆ ಬೆಳಕು. ಇದು ಜಗದ ನಿಯಮ. ಕೆಲವರಿಗೆ ಇದು ನಿತ್ಯದ ಸ್ವಾಭಾವಿಕ ಪ್ರಕ್ರಿಯೆಯಾದರೆ ಕೆಲವರು ಇದರಲ್ಲಿ ದೈವತ್ವವನ್ನು ಕಾಣುತ್ತಾರೆ. ಹೀಗೆ ಮನುಷ್ಯರಲ್ಲೂ ನಾವು ದೈವತ್ವವನ್ನು ಕಾಣುತ್ತೇವೆ. ಕೆಲವರನ್ನು ದುರುಳರು, ಅಸುರಿ ಸ್ವಭಾವದವರು ಎನ್ನುತ್ತೇವೆ. ಇನ್ನೂ ಕೆಲವರನ್ನು ದೇವತಾ ಮನುಷ್ಯರು, ದೈವತ್ವಕ್ಕೆ ಏರಿದವರು ಎಂದು ಪೂಜಿಸುತ್ತೇವೆ. ಮನುಷ್ಯನ ಮನಸ್ಸಿನಲ್ಲಿ ಸುವಿಚಾರವೂ ಅಡಗಿದೆ, ಕೆಟ್ಟ ಆಲೋಚನೆಗಳೂ ಅಡಗಿದೆ. ಅಂತರಂಗವನ್ನು ಸರಿಯಾಗಿ ಅರಿಯಲು ನಮಗೆ ಏಕಾಗ್ರತೆ ಎಂಬ ಚಿತ್ತ ಬೇಕು. ಬದುಕನ್ನು ಸುಖಮಯಗೊಳಿಸಿ ಸುಂದರವಾಗಿ ಜೀವಿಸುವುದು ಅಥವಾ ನರಕವಾಗಿಸಿಕೊಳ್ಳುವುದು ಎರಡೂ ನಮ್ಮ ಕೈಯಲ್ಲಿದೆ. ನಮ್ಮ ಬದುಕು ನರಕವಾಗಿದ್ದರೆ ಅದಕ್ಕೆ ನಾವೇ ಹೊಣೆಯೇ ಹೊರತು ಬೇರೆ ಯಾರೂ ಅಲ್ಲ. ಸಂಜೆ ಹೊತ್ತು ಅಂಧಕಾರ ವ್ಯಾಪಿಸುತ್ತಿದ್ದಂತೆ ದೀಪ ಬೆಳಗಿಸಿ ಕತ್ತಲನ್ನು ಹೋಗಲಾಡಿಸಿದಂತೆ ಮನಸ್ಸಿನ ಅಂಧಕಾರವನ್ನು ಸುಜ್ಞಾನ ಎಂಬ ದೀಪದ ಮೂಲಕ ಹೋಗಲಾಡಿಸಬೇಕು.
ಸುಖ, ಸಂತೋಷ, ನೆಮ್ಮದಿ, ಪ್ರೀತಿ, ವಾತ್ಸಲ್ಯ ತುಂಬಿದ್ದರೆ ನಿತ್ಯವೂ ಬದುಕಿನಲ್ಲಿ ಹಬ್ಬವೇ ಆಗಿರುತ್ತದೆ. ಇಂದಿನ ನಮ್ಮ ಯಾಂತ್ರಿಕ ಜೀವನಕ್ಕೆ, ದಿನನಿತ್ಯದ ಜಂಜಾಟಗಳಿಗೆ ಹೊಸ ಚೈತನ್ಯವನ್ನು ಇಂತಹ ಹಬ್ಬ-ಆಚರಣೆಗಳು ಒದಗಿಸುತ್ತವೆ. ಇಂದಿನ ದಿನಗಳಲ್ಲಿ ಹಬ್ಬವೆಂದರೆ ಕೆಲವರಿಗೆ ಮೋಜು, ಮಸ್ತಿ, ಪಾರ್ಟಿ ಎಂಬಂತಾಗಿದೆ. ಹಿರಿಯರು ಪ್ರತಿಯೊಂದು ಹಬ್ಬ, ಆಚರಣೆಗಳನ್ನು ಒಂದು ಹಿನ್ನೆಲೆ, ಮಹತ್ವ, ಉದ್ದೇಶವನ್ನಿಟ್ಟುಕೊಂಡೇ ಆರಂಭಿಸಿ ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಅವುಗಳ ಮಹತ್ವವನ್ನು ಅರಿತುಕೊಂಡು ಸನಾತನ ಪರಂಪರೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯವೂ ಆಗಬೇಕಾಗಿದೆ. ಇದು ಹಿರಿಯರು, ಕಿರಿಯರಿಗೆ ನೀಡಬೇಕಾದ ಬಳುವಳಿ.
ಒಂದೊಮ್ಮೆ ನಮ್ಮ ಕ್ಷೇತ್ರದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಮಹಿಳೆಯೋರ್ವಳ ಹತ್ತರ ಹರೆಯದ ಮಗ ಅಲ್ಲಿ ಇಲ್ಲಿ ಓಡುತ್ತಾ ತಂಟೆ ಮಾಡುತ್ತಿದ್ದ, ಮೊಬೈಲ್ ಕೊಡು ಎಂದು ಕಾಡಿಸುತ್ತಿದ್ದ. ಆಗ ಆಕೆ ಆತನನ್ನು ಗದರಿಸುವಂತೆ ಮಾಡಿ, ತನ್ನ ಬಳಿ ನಿಲ್ಲಿಸಿಕೊಂಡು ಇದು ದೇವಸ್ಥಾನ ಸುಮ್ಮನೆ ಇರಬೇಕು ಎಂದಳು. ಬಳಿಕ ಆತನ ಕಿವಿಯ ಬಳಿ ಬಗ್ಗಿ ‘ಓಂ ನಮಃ ಶಿವಾಯ ಎಂದು ಹೇಳು, ಅಲ್ಲಿ ನೋಡು ದೇವರಿಗೆ ಕೈ ಮುಗಿ, ಅಡ್ಡ ಬಿದ್ದು ನಮಸ್ಕರಿಸು’ ಎಂದು ಹೇಳುತ್ತಾ ತಾನು ಅದೇ ರೀತಿ ಮಾಡುತ್ತಾ ತನ್ನನ್ನು ಅನುಕರಿಸುವಂತೆ ತಿಳಿಸುತ್ತಿದ್ದಳು. ಇದು ನನಗೆ ಬಹಳ ಖುಷಿ ನೀಡಿತು. ಈಗೆಲ್ಲ ಮಕ್ಕಳನ್ನು ಸುಮ್ಮನಿರಿಸುವ ಸುಲಭ ಉಪಾಯವೆಂದರೆ ಮಕ್ಕಳ ಕೈಗೆ ಮೊಬೈಲನ್ನು ನೀಡುವುದು. ಅದರಲ್ಲಿ ಆಟವಾಡುತ್ತಲೋ, ರೀಲ್ಸ್, ವೀಡಿಯೋಗಳನ್ನು ನೋಡುತ್ತಲೋ ಯಾವ ತಂಟೆ-ತಕರಾರು ಮಾಡದೆ ಮಕ್ಕಳು ತಮ್ಮ ಲೋಕದಲ್ಲಿ ಕಳೆದುಹೋಗುತ್ತಾರೆ. ಅಗತ್ಯಗನುಗುಣವಾಗಿ ಮೊಬೈಲ್ ಬಳಸುವಂತೆ ತಿಳಿಸಬೇಕೇ ಹೊರತು ಮೊಬೈಲ್ ಗೀಳಿಗೆ ತುತ್ತಾಗದಿರುವಂತೆ ಎಚ್ಚರವಹಿಸಬೇಕು. ನಾವು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಪ್ರದಾಯವನ್ನು ತಿಳಿಸುವುದು ಮುಖ್ಯ. ಅದರಲ್ಲೂ ತಾಯಂದಿರು ಪ್ರೀತಿ, ಅಕ್ಕರೆಯಿಂದ ತಿಳಿಸಿಕೊಟ್ಟಾಗ ಮಕ್ಕಳು ಅದನ್ನು ಬಹಳ ಇಷ್ಟಪಟ್ಟು ಮಾಡುತ್ತಾರೆ, ಕಲಿಯುತ್ತಾರೆ. ಅದನ್ನೇ ಹಿರಿಯರು ಜನನಿಯೇ ಮೊದಲ ಗುರು, ಮನೆಯೇ ಪಾಠ ಶಾಲೆ ಎಂದಿರುವುದು. ಹೀಗೆ ಎಲ್ಲ ತಾಯಂದಿರ, ಹಿರಿಯರ ಮೂಲಕ ನಮ್ಮ ಆಚಾರ-ವಿಚಾರ, ಪರಂಪರೆ, ಧರ್ಮದ ಜ್ಞಾನವು ಮುಂದಿನ ಪೀಳಿಗೆಗೆ ಸಾಗಲಿ.
ಕವಿ ಬೇಂದ್ರೆಯವರು ‘ದೀಪಾವಳಿ’ ಕುರಿತು ‘ಇದು ಬರೀ ಬೆಳಕಲ್ಲವೋ ಅಣ್ಣಾ..!’ ಎಂದಿದ್ದಾರೆ. ಹೌದು ಇದು ಬರಿಯ ಬೆಳಕಲ್ಲ. ಶಾಂತಿ ಸೌಹಾರ್ದತೆಯ ಸಂಕೇತ. ಬದುಕಿನ ದಾರಿ ದೀಪ. ಹಾಗಾಗಿ ದೀಪಾವಳಿ ದಿನದಂದು ಮಾತ್ರ ಒಳ್ಳೆಯತನವನ್ನು ರೂಢಿಸಿಕೊಂಡರೆ ಸಾಲದು ಪ್ರತಿ ದಿನವೂ ನಮ್ಮ ತನು ಮನದಲ್ಲಿ ದೀಪಾವಳಿ ತುಂಬಿರಬೇಕು. ದೀಪ ಪರಿಶುದ್ಧದ ಸಂಕೇತವಾಗಿರುವಂತೆ ಮನಸ್ಸೂ ಕೂಡ ಪರಿಶುದ್ಧವಾಗಿ, ನಮ್ಮ ನಡೆ-ನುಡಿ, ಆಚಾರ-ವಿಚಾರಗಳೆಲ್ಲವೂ ಶುದ್ಧವಾಗಿರಬೇಕು. ಕೇವಲ ಬಾಹ್ಯ ದೀಪ ಬೆಳಗಿಸುವುದು ಮಾತ್ರವಲ್ಲ. ಆಂತರಿಕ ದೀಪ ಬೆಳಗಿಸಿದಾಗ ಮಾತ್ರ ಲೋಕಕ್ಕೆ ಹಿತವಾಗುವುದು. ಮನ ಮನಗಳಲ್ಲಿ ಭಕ್ತಿ ಭಾವದ ದೀಪಗಳ ಪ್ರಜ್ವಲನೆಯು ಪ್ರತಿಯೊಬ್ಬರಿಗೂ ಒಳಿತನ್ನುಂಟು ಮಾಡಲಿ. ಈ ಬಾರಿಯ ದೀಪಾವಳಿ ಎಲ್ಲರ ಬಾಳನ್ನು ಬೆಳಗಲಿ. ಜಗತ್ತನ್ನು ಕಾಡುತ್ತಿರುವ, ಯುದ್ಧ ಭೀತಿ, ಭಯೋತ್ಪಾದನೆ, ಆಂತರಿಕ ಪ್ರಕ್ಷುಬ್ದ ವಾತಾವರಣವೆಲ್ಲ ತಿಳಿಯಾಗಿ ಎಲ್ಲರೂ ಶಾಂತಿ, ಸೌಹಾರ್ದ, ಸುಖ-ನೆಮ್ಮದಿಯಿಂದ ಬದುಕುವಂತೆ ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
