ಸುಜ್ಞಾನದ ಅರಿವಿಗೆ ಸಮ್ಮೇಳನಗಳು ವೇದಿಕೆಯಾಗಲಿ

ಭಾರತದಲ್ಲಿ ಇರುವಷ್ಟು ಧರ್ಮ, ಮತ, ಪಂಥಗಳು ಮತ್ತು ಅವುಗಳ ಆಚರಣೆಗಳು ಬಹುಶಃ ವಿಶ್ವದ ಯಾವ ದೇಶದಲ್ಲೂ ಇರಲಾರದು. ನಮ್ಮ ದೇಶದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಪ್ರತಿ ಹೆಜ್ಜೆ ಹೆಜ್ಜೆಗೂ ವಿವಿಧತೆಯನ್ನು ಕಾಣಬಹುದಾಗಿದೆ. ಜಗತ್ತಿಗೆ ಮಾದರಿ ಎಂಬಂತೆ ಆ ವಿವಿಧತೆಯಲ್ಲೂ ಏಕತೆಯನ್ನು ಸಾರಿದ ಮತ್ತು ಈಗಲೂ ಸಾರುತ್ತಿರುವ ರಾಷ್ಟ್ರದಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ ಎಂಬುವುದೇ ನಮಗೆ ಹೆಮ್ಮೆ. ಇಲ್ಲಿ ಎಷ್ಟೇ ಧರ್ಮಗಳಿದ್ದರೂ ಎಲ್ಲರೂ ಅವರವರ ಪಾಡಿಗೆ ತಮ್ಮ-ತಮ್ಮ ಧರ್ಮ, ರೀತಿ ನೀತಿಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ‘ಬದುಕು ಮತ್ತು ಇತರರನ್ನೂ ಬದುಕಗೊಡು’ ಎಂಬ ತತ್ವವು ಎಲ್ಲರಲ್ಲಿ ಇರುವುದರಿಂದಲೇ ಐಕ್ಯತೆಯನ್ನು ಹೊಂದಲು ಸಾಧ್ಯವಾಗಿದೆ.
ನಮ್ಮ ನಾಡಿನಲ್ಲಿರುವ ಭಿನ್ನ ಭಿನ್ನ ಧರ್ಮಗಳ ನೈಜತೆ, ತತ್ವ, ಸಿದ್ಧಾಂತ ಮತ್ತು ಮರ್ಮಗಳೆಲ್ಲ ಒಂದೇ ಆಗಿದೆ. ಹಾಗೆಯೇ ಎಲ್ಲ ಧರ್ಮಗಳು ವ್ರತ, ಉಪವಾಸ, ತೀರ್ಥಯಾತ್ರೆ ಮುಂತಾದವನ್ನು ಬೇರೆ ಬೇರೆಯಾದ ರೀತಿಯಲ್ಲಿ ಆಚರಿಸುವುದನ್ನು ನಾವೆಲ್ಲ ಕಂಡಿದ್ದೇವೆ. ಒಂದು ಧರ್ಮದ ವಿಶೇಷತೆಯನ್ನು ಇನ್ನೊಂದು ಧರ್ಮದವರು ಅರಿತುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಆದರೆ ಬಹುತೇಕರು ಎಡವುದೇ ಇಲ್ಲಿ. ಧರ್ಮ ಅಥವಾ ಆಚರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಾಗ ಅಥವಾ ಧರ್ಮದ ವ್ಯಾಖ್ಯಾನವನ್ನು ಸಂಕುಚಿತಗೊಳಿಸಿದಾಗ ಸಮಾಜದಲ್ಲಿ ಧರ್ಮ, ಜಾತಿ, ಮತ, ಪಂಥ, ಪಂಗಡಗಳ ನಡುವೆ ಭಿನ್ನಾಭಿಪ್ರಾಯಗಳು, ತಿಕ್ಕಾಟ, ಕೋಪ, ಘರ್ಷಣೆಗಳು ಉಂಟಾಗಿ ಸಮಾಜದ ಸ್ವಾಸ್ಥö್ಯ ಹದಗೆಡುತ್ತದೆ. ಆದ್ದರಿಂದ ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ.
ಎಲ್ಲಾ ಧರ್ಮೀಯರೂ ಮಾನವೀಯತೆ, ತ್ಯಾಗ, ಅಹಿಂಸೆ, ಸತ್ಯ, ಪರೋಪಕಾರ, ಸಹನೆ, ಸಹಬಾಳ್ವೆ, ದಯೆ ಮುಂತಾದ ಸದ್ಗುಣಗಳನ್ನು ಧರ್ಮದ ರೂಪದಲ್ಲಿ ಕಂಡುಕೊಂಡಿದ್ದಾರೆ. ಸಂತ-ಮಹಾಂತರು, ಮುನಿಗಳು, ಪ್ರವಾದಿಗಳು, ಯುಗಪುರುಷರು ಮುಂತಾದವರೆಲ್ಲ ಸದ್ವಿಚಾರಗಳನ್ನೇ ಪ್ರಚುರಪಡಿಸಿದ್ದಾರೆ. ಇಂತಹ ಮೌಲ್ಯಗಳು ವ್ಯಕ್ತಿಯಲ್ಲಿ, ಸಮಾಜದಲ್ಲಿ ಮರೆಯಾದಾಗ ಅಶಾಂತಿ, ಕೋಮು ಗಲಭೆ, ಹಿಂಸೆ, ದೊಂಬಿ, ಯುದ್ಧಗಳು ಘಟಿಸುತ್ತವೆ. ಕಳೆದ ಕೆಲವು ವರ್ಷಗಳಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು, ಆಕ್ರಮಣಗಳಿಂದಾಗಿ ಸಾಕಷ್ಟು ಪ್ರಾಣಹಾನಿಗಳು ಸಂಭವಿಸಿವೆ. ಅಪಾರ ಆಸ್ತಿ-ಪಾಸ್ತಿಗಳೂ ನಾಶವಾಗಿವೆ.
ನಾವೆಲ್ಲ ಒಂದೇ ಭೂಮಿಯಲ್ಲಿದ್ದುಕೊಂಡು ಉಸಿರಾಡುವ ಗಾಳಿ, ಕುಡಿಯುವ ನೀರು ಎಲ್ಲ ಒಂದೇ ಆಗಿರುವಾಗ ಧರ್ಮ, ಜಾತಿ, ಮತಗಳ ಹೆಸರಿನಲ್ಲಿ ಹೊಡೆದಾಡಿಕೊಳ್ಳುವುದು ಬಾಲಿಶವೆನಿಸುತ್ತದೆ. ಈ ಸಂದರ್ಭದಲ್ಲಿ ವಿಜ್ಞಾನಿ ಹಾಗೂ ರಾಷ್ಟçಪತಿಯಾಗಿದ್ದ ಅಬ್ದುಲ್ ಕಲಾಂರವರ ಮಾತನ್ನು ನಾವೊಮ್ಮೆ ನೆನಪಿಸಿಕೊಳ್ಳಬೇಕು. ಅವರು ರಾಷ್ಟ್ರಪತಿಭವನದಲ್ಲಿ ಒಂದು ‘ಸ್ಪಿರಿಚ್ಯುವಲ್ ಪಾರ್ಕ್’ ಅನ್ನು ನಿರ್ಮಿಸಿ ಭಾರತದಲ್ಲಿ ಆಚರಣೆಯಲ್ಲಿರುವ ವಿವಿಧ ಧರ್ಮಗಳಿಗೆ ಸಂಬಂಧಿಸಿದ ಸಸ್ಯಗಳು ಮತ್ತು ಮರಗಳನ್ನು ಅಲ್ಲಿ ಒಟ್ಟಿಗೆ ಪೋಷಿಸುವುದರ ಜೊತೆಗೆ ವಿವಿಧ ಜಾತಿಯ ಮರಗಳು ಒಂದೇ ನೆಲದಲ್ಲಿ ಬೆಳೆಯಬಹುದಾದರೆ ವಿವಿಧ ಧರ್ಮಿಯರು ಒಂದೇ ನೆಲದಲ್ಲಿ ಬಾಳಲು ಯಾಕೆ ಸಾಧ್ಯವಾಗದು? ಎಂಬ ಸಂದೇಶವನ್ನು ಬರೆಸಿದ್ದಾರೆ. ಈ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳ ನಡುವೆಯೂ ಸಾಮರಸ್ಯದ ಸಹಬಾಳ್ವೆಯ ಸಂದೇಶವನ್ನು ಮತ್ತು ಪರಸ್ಪರ ಸಹಿಷ್ಣುತೆಯನ್ನು ಹೊಂದಲು ಸಾಧ್ಯ ಎಂದು ಸಾರುವುದು ಈ ಉದ್ಯಾನದ ಹಿಂದಿನ ಕಲ್ಪನೆಯಾಗಿದೆ.
ಮನುಷ್ಯ-ಮನುಷ್ಯರ ನಡುವಿನ ಮನಸ್ಸನ್ನು ಬೆಸೆಯುವುದು ಎಲ್ಲ ಧರ್ಮಗಳ ಉದ್ದೇಶ. ಹೀಗೆ ಮನಸ್ಸುಗಳನ್ನು ಬೆಸೆಯಲು ಕಾರ್ಯಾಗಾರಗಳು, ಸಭೆ-ಸಮಾರಂಭಗಳು, ಸಮಾವೇಶಗಳು ಮುಖ್ಯ ವೇದಿಕೆಯಾಗುತ್ತವೆ. ಇಂದಿನ ದಿನಗಳಲ್ಲಿ ಅಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆಯಾದರೂ ಅವುಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ. ಸಾಹಿತ್ಯ ಕಾರ್ಯಕ್ರಮಗಳೂ ಸಾಹಿತ್ಯಾಸಕ್ತರಿಲ್ಲದೆ ಕಳೆಗುಂದುತ್ತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಇಂದಿನ ಯುವ ಜನಾಂಗಕ್ಕೆ, ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ವಿಚಾರಧಾರೆಗಳ ಅರಿವು ಮೂಡಿಸಬೇಕು. ಅವರಲ್ಲಿ ಹೊಸ ಹೊಸ ಚಿಂತನೆ, ವಿಚಾರಧಾರೆಗಳು ಮೂಡಿ ಬರುವಂತೆ ಪ್ರೇರಣೆ ನೀಡಬೇಕು. ಅದಕ್ಕಾಗಿ ನಾವೆಲ್ಲ ಅವಕಾಶ ಮಾಡಿಕೊಡಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಹೀಗೆ ಮಕ್ಕಳಲ್ಲಿ ಹೊಸತನವನ್ನು ಕಲಿಯುವ, ಅರಿಯುವ, ನೋಡುವ, ಸಂಶೋಧಿಸುವ ಮನೋಭಾವವು ಹೆಚ್ಚಾಗಲಿ.
ಸಾಹಿತ್ಯ ಕ್ಷೇತ್ರದ ಚಟುವಟಿಕೆ ಹಾಗೂ ಬೆಳವಣಿಗೆಗಳಲ್ಲಿ ಸಮ್ಮೇಳನಗಳ ಪಾತ್ರ ಮಹತ್ವವಾದದ್ದು. ವಿಚಾರ ಮಂಡನೆಗೆ, ವಿಮರ್ಶೆಗೆ, ಪ್ರಚಲಿತ ವಿಷಯ, ಅಭಿವೃದ್ಧಿ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲುವಂಥ ಕಾರ್ಯಗಳು ಸಮ್ಮೇಳನಗಳ ಮೂಲಕ ನಡೆಯಬೇಕಿದೆ. ಇನ್ನೂ ಮುಂದುವರೆದು ಜಗತ್ತಿನೆಲ್ಲೆಡೆ ಮಾನವೀಯತೆ, ಶಾಂತಿ, ಸೌಹಾರ್ದತೆ ನೆಲೆಗೊಳ್ಳುವ ಬಗ್ಗೆ ಸಂಕಲ್ಪಿಸಬೇಕಿದೆ. ಸಾಹಿತ್ಯ ಸರ್ವರ ಹಿತವನ್ನು ಬಯಸಬೇಕು. ಸಾಹಿತ್ಯದಿಂದ ಲೋಕ ಕಲ್ಯಾಣ ಸಾಧ್ಯ. ಇದಕ್ಕೆ ರಾಮಾಯಣ, ಮಹಾಭಾರತಗಳೇ ಸಾಕ್ಷಿ. ಆದರ್ಶ ಪುರುಷ, ಆದರ್ಶ ಸಮಾಜ, ಅಲ್ಲಿನ ಆಡಳಿತ ವ್ಯವಸ್ಥೆ ಇನ್ನಿತರ ಎಲ್ಲ ವಿಚಾರಗಳ ಬಗ್ಗೆ ಮಹಾನ್ ಗ್ರಂಥಗಳು ಉಲ್ಲೇಖಿಸುತ್ತವೆ. ಮುಖ್ಯವಾಗಿ ಸತ್ಯ, ಧರ್ಮ, ನ್ಯಾಯಕ್ಕೇ ಸದಾ ಜಯವಿದೆ ಎನ್ನುವುದನ್ನು ಅದು ಸಾರಿ ಸಾರಿ ಹೇಳುತ್ತದೆ. ಸ್ವಾತಂತ್ರ್ಯ ಪಡೆಯುವಲ್ಲಿ ಅಥವಾ ದೇಶ ಕಟ್ಟುವಲ್ಲಿ ಸಾಹಿತ್ಯವು ಪರಿಣಾಮಕಾರಿಯಾದ ಪಾತ್ರವಹಿಸಿದೆ ಎಂಬುವುದನ್ನು ಮರೆಯುವಂತಿಲ್ಲ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಡಿ. ಮಂಜಯ್ಯ ಹೆಗ್ಗಡೆಯವರು ಸರ್ವರಲ್ಲೂ ಸಾಹಿತ್ಯದ ಅಭಿರುಚಿ ಬೆಳೆಸುವ, ಧಾರ್ಮಿಕತೆಯನ್ನು ಜಾಗೃತಿಗೊಳಿಸಿ ಸರ್ವಧರ್ಮ ಸಮನ್ವಯತೆಗಾಗಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನವನ್ನು 1933ರಲ್ಲಿ ಆರಂಭಿಸಿದರು. ನಾಡಿನ ವಿದ್ವಾಂಸರು, ಧಾರ್ಮಿಕ ಪುರುಷರು, ಸಂತರು ಹಾಗೂ ಲೇಖಕರು, ಬರಹಗಾರರನ್ನು ಆಮಂತ್ರಿಸಿ ಅವರಿಂದ ವಿವಿಧ ವಿಷಯ ಸಂಗತಿಗಳ ಬಗ್ಗೆ ವಿಚಾರ ಮಂಡನೆಗೆ ಅವಕಾಶ ಕಲ್ಪಿಸಿದರು. ಅಂದು ಅವರು ನೆಟ್ಟ ಸಸಿಯೊಂದು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಡಿ. ಮಂಜಯ್ಯ ಹೆಗ್ಗಡೆಯವರ ಬಳಿಕ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಶ್ರೀ ಡಿ. ರತ್ನವರ್ಮ ಹೆಗ್ಗಡೆಯವರು 1957ರಲ್ಲಿ ಈ ಸಮ್ಮೇಳನಗಳ ಬೆಳ್ಳಿಹಬ್ಬವನ್ನು ಆಚರಿಸಿದರು. ಅವರ ಅನಂತರ ಅವನ್ನೆಲ್ಲ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಹೆಗಲೇರಿತು. ಶ್ರೀ ಸ್ವಾಮಿಯ ಸೇವೆ, ಕ್ಷೇತ್ರದ ವಿವಿಧ ಕಾರ್ಯಕ್ರಮಗಳ ಜೊತೆಗೆ ಸಮ್ಮೇಳನಗಳಿಗೆ ವ್ಯವಸ್ಥಿತ ಚೌಕಟ್ಟನ್ನು ರೂಪಿಸಿಕೊಂಡು ಶಕ್ತಾö್ಯನುಸಾರವಾಗಿ ಮುಂದುವರಿಸಿಕೊAಡು ಬರುತ್ತಿದ್ದೇನೆ.1987ರಲ್ಲಿ ಸುವರ್ಣ ಮಹೋತ್ಸವ, 2007ರಲ್ಲಿ ಅಮೃತ ಮಹೋತ್ಸವ ಆಚರಿಸಿದೆವು.
ಇದುವರೆಗೂ ನಾಡಿನ ಖ್ಯಾತ ಸಾಹಿತಿಗಳು, ಗಣ್ಯರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡರೆ, ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಧಾರ್ಮಿಕ ಗುರುಗಳು, ಚಿಂತನಕಾರರು, ವಿಚಾರಶೀಲರು, ಉಪನ್ಯಾಸಕರು ಹೀಗೆ ಅನೇಕರು ಭಾಗವಹಿಸಿ ಸಾಕಷ್ಟು ವಿಚಾರಗಳನ್ನು ಮಂಡನೆ ಮಾಡಿದ್ದಾರೆ. ಪ್ರತಿ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುವ ಜನರು ಈ ಸಮ್ಮೇಳನಗಳ ಮೂಲಕ ಹೊಸ ಹೊಸ ಚಿಂತನೆ, ವಿಚಾರಗಳಿಗೆ ಸಾಕ್ಷಿಯಾಗುತ್ತಾರೆ. ಈ ಬಾರಿಯೂ ಲಕ್ಷದೀಪೋತ್ಸವದ ಎರಡು ದಿನ ಸಮ್ಮೇಳನಗಳು ನಡೆಯಲಿವೆ.
ಪ್ರಸ್ತುತ ಸಾಹಿತ್ಯವು ಹೊಸತನವನ್ನು ಕಂಡುಕೊಳ್ಳುತ್ತಿದೆ. ಪತ್ರಿಕೆ, ಕೃತಿ ಬರವಣಿಗೆಯಲ್ಲದೆ, ಜಾಲತಾಣಗಳಲ್ಲಿಯೂ ಸಾಕಷ್ಟು ಉತ್ತಮ ಬರಹಗಾರರನ್ನು ಕಾಣಬಹುದಾಗಿದೆ. ಆನ್‌ಲೈನ್ ಮೂಲಕ ತಮ್ಮ ಬರವಣಿಗೆಯನ್ನು ಅಭಿವ್ಯಕ್ತಗೊಳಿಸುವಂತೆ, ಅದನ್ನು ಓದುವ, ಇಷ್ಟಪಡುವ ಸಾಕಷ್ಟು ಸಾಹಿತ್ಯಾಭಿಮಾನಿಗಳೂ ಇದ್ದಾರೆ.
ಧರ್ಮ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ ಹೀಗೆ ಯಾವುದೇ ರಂಗವಿರಲಿ ಮಕ್ಕಳನ್ನು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ನಾವು 1980 ಮತ್ತು 1987ರಲ್ಲಿ ಉಜಿರೆಯಲ್ಲಿ ರಾಜ್ಯಮಟ್ಟದ ಮಕ್ಕಳಮೇಳವನ್ನು ಹಮ್ಮಿಕೊಂಡಿದ್ದೆವು. ಮಕ್ಕಳ ಬೆಳವಣಿಗೆಯ ಬಗೆಗೆ ಸಾಕಷ್ಟು ಪ್ರಯೋಗಗಳನ್ನು ಮಾಡಿ ಖ್ಯಾತರಾಗಿದ್ದ ಡಾ. ಶಿವರಾಮ ಕಾರಂತರವರೊಡನೆ ವಿಚಾರ ವಿನಿಮಯ ನಡೆಸಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ಮಕ್ಕಳ ಸಮ್ಮೇಳನದ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಮಕ್ಕಳು ರಾಷ್ಟçದ ಸಂಪತ್ತು ಅವರಲ್ಲಿ ಸುಪ್ತವಾಗಿರುವ ವಿವಿಧ ಆಂತರಿಕ ಶಕ್ತಿಗಳು ಹೊರಹೊಮ್ಮುವಂತಾಗಲು ಸಾಕಷ್ಟು ಅವಕಾಶ ದೊರೆಯಬೇಕು ಎಂಬುವುದೇ ಈ ಮೇಳಗಳ ಆಶಯವಾಗಿತ್ತು.
‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ (ಋಗ್ವೇದ) ಉದಾತ್ತ ವಿಚಾರಗಳು ಎಲ್ಲೆಡೆಗಳಿಂದಲೂ ನಮ್ಮೆಡೆಗೆ ಹರಿದು ಬರಲಿ. ಅವುಗಳನ್ನು ಸ್ವೀಕರಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳೋಣ. ಧಾರ್ಮಿಕ, ಸಾಹಿತ್ಯ, ಶಿಕ್ಷಣ ಅಥವಾ ಇನ್ನಿತರ ಯಾವುದೇ ರಂಗದ ವಿಚಾರಗಳಿರಲಿ ಅವು ನಮ್ಮ ಜೀವನವನ್ನು, ನಮ್ಮ ಮೂಲಕ ಇತರರ ಬದುಕನ್ನು ಹಸನುಗೊಳಿಸುವಂತಿರಬೇಕು. ಎಲ್ಲೆಡೆ ನಡೆಯುವ ಸಮ್ಮೇಳನ, ಕಮ್ಮಟ, ಶಿಬಿರ, ಕಾರ್ಯಾಗಾರ ಇತ್ಯಾದಿಗಳು ಅಜ್ಞಾನವನ್ನು ಕಳೆದು ಸುಜ್ಞಾನದ ಅರಿವು ಮೂಡಿಸುವ ವೇದಿಕೆಯಾಗಲಿ ಎಂಬುವುದೇ ನಮ್ಮ ಆಶಯ.

Facebook
Twitter
WhatsApp
LinkedIn
Telegram