ಬಹು ಬೆಳೆಗಳಿಂದ ಬಾಳು ಬೆಳಗಿತು

-ವೃಷಾಂಕ್ ಖಾಡಿಲ್ಕರ್


ನಿಪ್ಪಾಣಿ ತಾಲೂಕು ತಂಬಾಕು ಮತ್ತು ಕಬ್ಬು ಬೆಳೆಗೆ ಪ್ರಸಿದ್ಧಿ ಪಡೆದಿದೆ. ಹೆಚ್ಚಿನ ಬೆಳೆಗಾರರು ಸಾಂಪ್ರದಾಯಿಕವಾಗಿ ಕಬ್ಬು ಬೆಳೆಯುತ್ತಿದ್ದರೆ ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಯರನಾಳ ಗ್ರಾಮದ ಶತ್ರುಘ್ನ ಶಿವರಾಂ ದಿವೋಟೆಯವರ ಹೊಲ ವರ್ಷವಿಡೀ ಅಲ್ಪಾವಧಿ ಬಹು ಬೆಳೆಗಳಾದ ವಿವಿಧ ಬಗೆಯ ಸೊಪ್ಪು – ತರಕಾರಿಗಳಿಂದ ಕಂಗೊಳಿಸುತ್ತಿದೆ. ಬಹು ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಕೊರೊನಾ ಲಾಕ್‌ಡೌನ್‌ನಲ್ಲಿಯೂ ಹತ್ತಾರು ಬೆಳೆಗಳು ಇಳುವರಿಯನ್ನು ನೀಡಿವೆ.ಇದನ್ನು ಮಾರಾಟ ಮಾಡಿ ನೆಮ್ಮದಿಯ ಜೀವನವನ್ನು ನಡೆಸಿದ್ದಾರೆ. ‘ತನ್ನ ಬದುಕಿನ ದಾರಿಯನ್ನು ಬದಲಿಸಿದ್ದು ಗ್ರಾಮಾಭಿವೃದ್ಧಿ ಯೋಜನೆ’ ಎನ್ನುವ ಇವರ ಸಾಧನೆ ಮತ್ತು ಅದಕ್ಕಾಗಿ ಅವರು ಪಟ್ಟ ಪರಿಶ್ರಮ ಒಂದು ಉತ್ತಮ ಯಶೋಗಾಥೆ.


ಪರಿವರ್ತನೆಗೆ ಮುನ್ನುಡಿಯಾದ ಗ್ರಾಮಾಭಿವೃದ್ಧಿ ಯೋಜನೆ :
ಒಂದುವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದರು. ನೀರಾವರಿ ವ್ಯವಸ್ಥೆ ಮಾಡಿಕೊಂಡು ಜಮೀನಿನಲ್ಲಿ ಹತ್ತಾರು ಬೆಳೆಗಳನ್ನು ಬೆಳೆಯಬೇಕೆಂಬ ಉದ್ದೇಶ ಇವರದ್ದಾಗಿತ್ತು. ಆದರೆ ಸೂಕ್ತ ಮಾಹಿತಿ, ಮಾರ್ಗದರ್ಶನ ಸಿಗುತ್ತಿರಲಿಲ್ಲ. ಸ್ವತಃ ಪ್ರಯತ್ನಗಳನ್ನು ಮಾಡಿದರೂ ಯಶ ಕಾಣಲಿಲ್ಲ. 2011ರಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ನಿಪ್ಪಾಣಿಗೆ ವಿಸ್ತರಣೆಯಾಯಿತು. ಯೋಜನೆಯ ‘ಪಾಂಡುರಂಗ’ ಪ್ರಗತಿಬಂಧು ಸಂಘದ ಸದಸ್ಯರಾಗಿ ಸೇರಿದರು. ‘ಅಲ್ಪಾವಧಿ ಬಹು ಬೆಳೆಗಳನ್ನು ಬೆಳೆದರೆ ಪ್ರತಿದಿನ ಆದಾಯ ಗಳಿಸಬಹುದು’ ಎಂಬ ಯೋಜನೆಯ ಕಾರ್ಯಕರ್ತರ ಮಾತು ಬಹು ಬೆಳೆಗಳನ್ನು ಬೆಳೆಯಲು ಪ್ರೇರಣೆಯಾಯಿತು. ನೀರಿನ ಸದ್ಬಳಕೆಯೊಂದಿಗೆ ಬಹು ಬೆಳೆಗಳನ್ನು ಬೆಳೆಯುವ ಬಗ್ಗೆ ಯೋಜನೆಯು ಧಾರವಾಡದಲ್ಲಿ ನಡೆಸಿದ 8 ದಿನಗಳ ರೈತರ ತರಬೇತಿ ಕಾರ್ಯಗಾರಕ್ಕೆ ಹಾಜರಾದರು. ತಾನು ಬಹು ಬೆಳೆಗಾರನಾಗುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದರು.


ಸೂಕ್ತ ನೀರಾವರಿ ವ್ಯವಸ್ಥೆ ಇವರಲ್ಲಿರಲಿಲ್ಲ. ಯೋಜನೆಯ ನೆರವಿನಿಂದ ಬ್ಯಾಂಕಿನಿಂದ ಆರ್ಥಿಕ ಸಹಕಾರ ಪಡೆದು ಬಾವಿಯನ್ನು ತೋಡಿದರು. ಪಂಪ್ ಅಳವಡಿಸಿದರು. ನೀರಿನ ಸಮಸ್ಯೆಗೆ ಪರಿಹಾರ ದೊರೆಯಿತು. ಯೋಜನೆಯ ಮೂಲಕ ಶಿವಮೊಗ್ಗ ಮತ್ತು ಪೂನಾದಲ್ಲಿ ನಡೆದ ‘ಕೃಷಿ ಅಧ್ಯಯನ ಪ್ರವಾಸ’ದ ಪ್ರಯೋಜನವನ್ನು ಪಡೆದರು. ಅಲ್ಲಿನ ತರಕಾರಿ ಬೆಳೆಯುವ ರೈತರ ಹೊಲಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದರು.


ಇದೆಲ್ಲದರ ಫಲವಾಗಿ ಇವರ ಜಮೀನಿನಲ್ಲೀಗ ಹತ್ತು ಗುಂಟೆ ಬದನೆ, ಎರಡು ಗುಂಟೆ ಬೆಂಡೆ, ಒಂದು ಗುಂಟೆ ಟೊಮೆಟೊ ಮತ್ತು ಚವಳಿ, ಹೂಕೋಸು, ಎಲೆಕೋಸು, ಸೌತೆ, ಮೆಣಸು ಮೊದಲಾದ ತರಕಾರಿಗಳು ಬೆಳೆದು ನಿಂತಿವೆ. ಇದರೊಂದಿಗೆ 15 ಗುಂಟೆಯಲ್ಲಿ ಜವಾರಿ ಬಾಳೆಯನ್ನು ಬೆಳೆಯುತ್ತಾರೆ. ಕೃಷಿಗೆ ಪೂರಕವಾಗಿ ಹೈನುಗಾರಿಕೆಯನ್ನು ಮಾಡುತ್ತಿದ್ದು ಎರಡು ಹಸುಗಳನ್ನು ಸಾಕುತ್ತಿದ್ದಾರೆ. ಸೆಗಣಿಯನ್ನು ಗೊಬ್ಬರವನ್ನಾಗಿ ಬಳಕೆ ಮಾಡುತ್ತಾರೆ. ಬೆಳೆಗಳಿಗೆ ಕೀಟನಾಶಕವಾಗಿ ಗೋಮೂತ್ರವನ್ನು ಸಿಂಪರಣೆ ಮಾಡುತ್ತಾರೆ. ಸ್ಲರಿಯನ್ನು ಗೊಬ್ಬರವಾಗಿ ಗಿಡಗಳಿಗೆ ಉಪಯೋಗಿಸುತ್ತಾರೆ. ಯೋಜನೆಯ ನೆರವಿನಿಂದ ಗೋಬರ್ ಗ್ಯಾಸ್ ಅನ್ನು ಅಳವಡಿಸಿದ್ದಾರೆ. ಜೊತೆಗೆ ಆಡು ಮತ್ತು ಕುರಿ ಸಾಕಣೆ ಇವರ ಆದಾಯದ ಮೂಲವನ್ನು ಹೆಚ್ಚಿಸಿದೆ.


ಯೋಜನೆಯ ಕುಟುಂಬ :
ಪತ್ನಿ ಹಾಗೂ ಇಬ್ಬರು ಪುತ್ರರಿರುವ ಶತ್ರುಘ್ನರ ಕುಟುಂಬದಲ್ಲಿ ಪತ್ನಿ ‘ತ್ರಿವೇಣಿ’ ಸ್ವಸಹಾಯ ಸಂಘದಲ್ಲಿ ಓರ್ವ ಪುತ್ರ ‘ಶಿವಬಸವ’ ಸಂಘದ ಸದಸ್ಯರಾಗಿ ಸೇರಿ ಕೃಷಿ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ. ಇನ್ನೋರ್ವ ಪುತ್ರ ಕಂಪೆನಿಯೊಂದರಲ್ಲಿ ನೌಕರಿಯನ್ನು ಮಾಡುತ್ತಿದ್ದಾರೆ. ‘ನನ್ನ ವ್ಯವಸಾಯ ಅಭಿವೃದ್ಧಿಗೆ ಸಂಪೂರ್ಣವಾಗಿ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ. ಬಹು ಬೆಳೆಗಳನ್ನು ಬೆಳೆಯುವತ್ತ ರೈತರು ಒಲವು ತೋರಬೇಕು’ ಎನ್ನುವುದು ಇವರ ಅಭಿಪ್ರಾಯ. ಇವರ ಪ್ರಯತ್ನ ಯೋಜನೆಯೊಂದಿಗಿನ ಬಾಂಧವ್ಯ ಇತರರಿಗೆ ಪ್ರೇರಣೆಯಾಗಬಲ್ಲದು. ಹೆಚ್ಚಿನ ಮಾಹಿತಿಗೆ ಶತ್ರುಘ್ನರನ್ನು ಸಂಪರ್ಕಿಸಬಹುದು. ಅವರ ಮೊ.ಸಂಖ್ಯೆ 7026070778.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *