ಬಾಲ್ಯವನ್ನು ಕಸಿದುಕೊಳ್ಳುವ ‘ಬಾಲ್ಯ ವಿವಾಹ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)


2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಗೆ ಬಂದಿದೆ. ಎಲ್ಲಾದರೂ ಬಾಲ್ಯ ವಿವಾಹಗಳು ನಡೆಯುವ ಸುದ್ದಿ ಗೊತ್ತಾದರೆ ಇಲಾಖೆಗಳ ಅಧಿಕಾರಿಗಳು ಅಲ್ಲಿಗೆ ದೌಡಾಯಿಸುತ್ತಾರೆ. ಅಂತಹ ವಿವಾಹಗಳನ್ನು ತಡೆಹಿಡಿಯುತ್ತಾರೆ. ಸರಕಾರ ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಆದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಲಾಕ್‌ಡೌನ್‌ನ ಸಂದರ್ಭದಲ್ಲಂತೂ ಹೆಚ್ಚಿನ ಬಾಲ್ಯ ವಿವಾಹಗಳು ನಡೆದಿವೆ. ಏಪ್ರಿಲ್ 2020 ರಿಂದ ಜನವರಿ 2021 ರವರೆಗೆ 2180 ಬಾಲ್ಯ ವಿವಾಹಗಳು ನಡೆದಿರುವುದು ಬಾಲ್ಯ ವಿವಾಹ ಪದ್ಧತಿ ಇಂದಿಗೂ ಜೀವಂತವಾಗಿರುವುದಕ್ಕೆ ಸಾಕ್ಷಿ. ಬಾಲ್ಯ ವಿವಾಹವನ್ನು ತಡೆಗಟ್ಟುವುದು ಕೇವಲ ಸರಕಾರದ ಕೆಲಸವಲ್ಲ. ಪ್ರತಿಯೊಬ್ಬ ಹೆತ್ತವರು ಈ ಬಗ್ಗೆ ಗಂಭೀರವಾಗಿ ಚಿಂತಿಸಿದ್ದಲ್ಲಿ ಬಾಲ್ಯವಿವಾಹ ರಹಿತ ರಾಜ್ಯ ನಮ್ಮದಾಗಬಹುದಾಗಿದೆ.

ಬಾಲ್ಯ ವಿವಾಹವಾದಲ್ಲಿ ಈ ಕೆಳಗಿನ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
• ಸೆಕ್ಷನ್ 1,10,11 ರ ಪ್ರಕಾರ ಬಾಲಕಿಯನ್ನು ಮದುವೆಯಾದ ವಯಸ್ಕ ಪುರುಷ, ಬಾಲ್ಯ ವಿವಾಹ ನೆರವೇರಿಸುವ, ಪ್ರೇರೇಪಿಸುವ ವ್ಯಕ್ತಿಗಳು, ತಂದೆ – ತಾಯಿ, ಪೋಷಕರು, ಬಾಲ್ಯ ವಿವಾಹದಲ್ಲಿ ಭಾಗಿಯಾದವರು ಶಿಕ್ಷೆಗೆ ಒಳಗಾಗುತ್ತಾರೆ.
• ಒಂದರಿಂದ ಎರಡು ವರ್ಷಗಳವರೆಗೆ ಜೈಲು ಸೇರಬೇಕಾಗುತ್ತದೆ. ಒಂದು ಲಕ್ಷ ರೂಪಾಯಿ ದಂಡ ತೆರಬೇಕು.
• ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಪತ್ನಿಯ ಜೊತೆಗೆ ಹೊಂದಿರುವ ಲೈಂಗಿಕ ಸಂಪರ್ಕವನ್ನು ಅತ್ಯಾಚಾರವೆಂದು ಪರಿಗಣಿಸಿ ಪೋಕ್ಸೋ ಕಾಯ್ದೆಯ ಪರಿಚ್ಛೇದಗಳನ್ನೂ ಸೇರಿಸಿ ಎಫ್.ಐ.ಆರ್. ದಾಖಲಿಸಬಹುದಾಗಿದೆ.


ಬಾಲ್ಯ ವಿವಾಹದ ಬಗ್ಗೆ ದೂರು ಸಲ್ಲಿಸುವುದು ಹೀಗೆ
ಬಾಲ್ಯ ವಿವಾಹ ನಡೆಯುವುದು ಅಥವಾ ಬಾಲ್ಯ ವಿವಾಹ ನಡೆಸಲು ತಯಾರಿ ಮಾಡಿಕೊಳ್ಳುವುದು ಗೊತ್ತಾದ ತಕ್ಷಣ ಯಾರು ಬೇಕಾದರೂ ಮಕ್ಕಳ ಸಹಾಯವಾಣಿ 1098ಕ್ಕೆ ದೂರವಾಣಿ ಕರೆ ಮಾಡಬಹುದು.
• ಹತ್ತಿರದ ಪೊಲೀಸ್ ಠಾಣೆ.
• ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಶಾಲಾ ಮುಖ್ಯೋಪಾಧ್ಯಾಯರಿಗೆ ದೂರು ನೀಡಬಹುದು.
• ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಲಿಖಿತ ರೂಪದಲ್ಲಿ ಅಥವಾ ಕರೆ ಮಾಡಿ ವಿಷಯವನ್ನು ತಿಳಿಸಬಹುದಾಗಿದೆ.


ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು ಈ ಕುರಿತು ಜಾಗೃತರಾಗಬೇಕಾದ ಅಗತ್ಯತೆ ಇದೆ. ಶಿಕ್ಷಿತರ ಪ್ರಮಾಣ ಹೆಚ್ಚಿದಂತೆ ಬಾಲ್ಯ ವಿವಾಹದಂತಹ ಕಂದಾಚಾರಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಉಡುಪಿ, ದ.ಕ. ಜಿಲ್ಲೆಗಳಲ್ಲಿ ಬಾಲ್ಯ ವಿವಾಹಗಳು ಕಾಣಸಿಗುವುದಿಲ್ಲ. ಆದರೆ ಇಂದು ಕೂಡಾ ಉತ್ತರ ಕರ್ನಾಟಕದ ಭಾಗಗಳಲ್ಲಿ ಬಾಲ್ಯ ವಿವಾಹ ನಡೆದ ಬಗ್ಗೆ ವರದಿ ಆಗುತ್ತಲೆ ಇರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲೂ ಜನ ಎಚ್ಚರವಾಗಬೇಕು. ಮಕ್ಕಳಿಗೆ ಲಿಂಗತಾರತಮ್ಯವಿಲ್ಲದ ಸರಿಯಾದ ಶಿಕ್ಷಣವನ್ನು ನೀಡಬೇಕು. ಹಾಗಾದಲ್ಲಿ ಬಾಲ್ಯ ವಿವಾಹ ಎಂಬ ಪಿಡುಗು ತನ್ನಿಂತಾನಾಗಿಯೇ ದೂರವಾಗುವುದರಲ್ಲಿ ಸಂಶಯವಿಲ್ಲ.

ಬಾಲ್ಯ ವಿವಾಹ ಮುಕ್ತ ಜಿಲ್ಲೆ ಉಡುಪಿ
ಶಿಕ್ಷಣ ಕ್ಷೇತ್ರದ ಸಾಧನೆಯಲ್ಲಿ ಹೆಸರುವಾಸಿಯಾದ ಉಡುಪಿ ಕಳೆದ ಮೂರು ವರ್ಷಗಳಿಂದ ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿದೆ. ಇಲ್ಲಿಗೆ ಉದ್ಯೋಗವನ್ನರಸುತ್ತಾ ಬಂದ ವಲಸೆ ಕಾರ್ಮಿಕರಲ್ಲೂ ಇಂತಹ ಪ್ರಕರಣಗಳು ಪತ್ತೆಯಾಗಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿಯೂ ಕುಟುಂಬಗಳು ಬಡತನದಲ್ಲಿದ್ದರೂ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿಲ್ಲ. ಶ್ರೀ ಹೆಗ್ಗಡೆ ದಂಪತಿಗಳ ಸಲಹೆಯಂತೆ ಉಡುಪಿ ಜಿಲ್ಲೆ ಬಾಲ್ಯ ವಿವಾಹ ಮುಕ್ತರಾಗಲು ಕಾರಣವನ್ನು ಹುಡುಕಿದಾಗ ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕುಟುಂಬಗಳು ಹೆಚ್ಚಾಗಿ ಇರುವುದರಿಂದ ವಯಸ್ಕ ವೈವಾಹಿಕ ಜೀವನಕ್ಕೆ ಎಲ್ಲರೂ ಆದ್ಯತೆ ನೀಡುತ್ತಿದ್ದಾರೆ. ಮಹಿಳೆಯರಿಗೂ ಆಸ್ತಿ ಹಕ್ಕುಗಳಲ್ಲಿ ಸಮಾನ ಪಾಲು ಇರುವುದರಿಂದ ಇಲ್ಲಿ ಹೆಣ್ಮಕ್ಕಳು ಸುರಕ್ಷಿತವಾಗಿದ್ದಾರೆ. ಸಣ್ಣ ಕುಟುಂಬ ವ್ಯವಸ್ಥೆಗೆ ಆದ್ಯತೆ ನೀಡುತ್ತಿದ್ದಾರೆ. ಲಿಂಗತಾರತಮ್ಯ ಕಾಣಸಿಗುವುದಿಲ್ಲ. ಇನ್ನು ಬಾಲ್ಯ ವಿವಾಹದ ಕುರಿತು ಇರುವ ಅರಿವು, ಶಿಕ್ಷಣ ಉಡುಪಿ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತರನ್ನಾಗಿಸಿರುವುದನ್ನು ಗಮನಿಸಲಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *