ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಶ್ರೀಕ್ಷೇತ್ರದ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಯಕರ್ತರ ಪಾಲಿನ ‘ಅಮ್ಮ’ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಪ್ರತಿವರ್ಷ ಹೊಸ ವರ್ಷದ ಆರಂಭದ ದಿನ ಯೋಜನೆಯ ಕೇಂದ್ರ ಕಚೇರಿಯ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಅಮ್ಮನ ವಾತ್ಸಲ್ಯದ ಮಾತುಗಳನ್ನು ‘ನಿರಂತರ’ದ ಓದುಗರಿಗೆ ಒದಗಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಬೀಡು (ಶ್ರೀ ಹೆಗ್ಗಡೆಯವರ ನಿವಾಸ) ಕಟ್ಟುವಾಗ ವಾಸ್ತು ನೋಡುವವರು ಒಬ್ಬರು ಬಂದಿದ್ದರು. ಅವರು ಹೇಳಿದರು, ‘ಮನೆಯ ವಾಸ್ತುವನ್ನು ಯಾರು ಬೇಕಾದರೂ ನೋಡಬಹುದು. ಆದರೆ ಧರ್ಮಚಾವಡಿಯ ವಾಸ್ತು ನೋಡಲು ನುರಿತ ತಜ್ಞರೇ ಬೇಕು’ ಎಂದು. ಯಾಕೆಂದರೆ ಬೀಡಿನ ಧರ್ಮಚಾವಡಿಯಲ್ಲಿ ಎಷ್ಟೆಲ್ಲ ಕಾರ್ಯಕ್ರಮಗಳಾಗುತ್ತವೆ, ಎಷ್ಟೆಲ್ಲ ಚಿಂತನೆಗಳು, ಯೋಚನೆಗಳು, ಯೋಜನೆಗಳು ಮತ್ತು ಎಷ್ಟೆಲ್ಲ ದಾನ ಧರ್ಮಗಳು, ಎಷ್ಟೊಂದು ಗಣ್ಯರು – ಜನಸಾಮಾನ್ಯರು ಬರುತ್ತಾರೆ. ಅವರವರ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ‘ಬೀಡಿನ ಧರ್ಮಚಾವಡಿ’ ಬೆಳಗ್ಗಿನಿಂದ ರಾತ್ರಿಯವರೆಗೆ ಏನಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡೇ ಇರುತ್ತದೆ. ಹಾಗಾಗಿ ಧರ್ಮಚಾವಡಿಯ ವಾಸ್ತು ತುಂಬಾ ಚೆನ್ನಾಗಿರಬೇಕು ಎಂದು ಹೇಳುತ್ತಿದ್ದರು. ವಾಸ್ತು ತಜ್ಞರು ಹೇಳಿದ ಹಾಗೆಯೆ ಬಹುಶಃ 12 ಗಂಟೆಗೆ ಬೀಗಮುದ್ರೆಯವರು ದೀಪ ತಂದು ಬೀಗಮುದ್ರೆ ಆಯ್ತು ಎಂದು ಹೇಳುವವರೆಗೆ ಚಾವಡಿಯಲ್ಲಿ ಬೆಳಕು ಇರುತ್ತದೆ, ಜನ ಇರುತ್ತಾರೆ, ಖಾವಂದರು ಇರುತ್ತಾರೆ.
ಹಾಗೆಯೇ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಕಟ್ಟಡದ ವಾಸ್ತುವನ್ನು ಸಹ ಒಳ್ಳೆಯ ತಜ್ಞರು ನೋಡಿ ಕಟ್ಟಿರಬೇಕು ಎಂದು ನನಗೆ ಅನ್ನಿಸುತ್ತದೆ. ಇಷ್ಟು ವಿಶಾಲವಾದ ಕಟ್ಟಡವನ್ನು ಕಟ್ಟುವಾಗ ಬಹಳ ದೊಡ್ಡ ಕಟ್ಟಡ ಅನ್ನಿಸುತ್ತಿತ್ತು. ಆದರೆ ಬರಬರುತ್ತಾ ಕಟ್ಟಡ ಸಣ್ಣದಾಯಿತು, ಮತ್ತಷ್ಟು ಕೊಠಡಿಗಳು ಸೇರಿದವು, ಮತ್ತಷ್ಟು ಕಟ್ಟಡ ಬೆಳೆಯಿತು. ಕಟ್ಟಡ ಸುಮ್ಮನೆ ಬೆಳೆಯುವುದಿಲ್ಲ. ಕಾರ್ಯಕ್ರಮಗಳು ಅದರೊಟ್ಟಿಗೆ ಬಹಳಷ್ಟು ವಿಸ್ತಾರವಾದವು.
‘ಗ್ರಾಮಾಭಿವೃದ್ಧಿ ಯೋಜನೆ’ ಎಂಬುದು ಒಂದು ಕಲ್ಪವೃಕ್ಷದಂತೆ. ಇನ್ನು ಎಷ್ಟು ರೆಂಬೆ – ಕೊಂಬೆಗಳು ಮೂಡಲಿದೆಯೋ, ಇನ್ನೆಷ್ಟು ಸಿಬ್ಬಂದಿಗಳು, ಇನ್ನೆಷ್ಟು ಕಾರ್ಯಕರ್ತರು, ಇನ್ನೆಷ್ಟು ಜನರಿಗೆ ಅದು ಆಸರೆಯಾಗಲಿದೆಯೋ ಅದನ್ನು ಊಹಿಸಲು ಸಾಧ್ಯವಿಲ್ಲ. ಒಂದು ಸಂಸ್ಥೆಯಲ್ಲಿ ಈ ನಿರಂತರತೆ ಮತ್ತು ಇಷ್ಟೊಂದು ಜನರನ್ನು ಒಳಗೊಳ್ಳುವಿಕೆ ಇದು ನಿಜವಾಗಿ ಬಹಳ ಅಪರೂಪ ಎಂಬುದು ನನ್ನ ಭಾವನೆ.
ವಿಜಯನಗರ ಸಾಮ್ರಾಜ್ಯದ ಬಗ್ಗೆ ನಾವು ಚಿಕ್ಕಂದಿರುವಾಗ ಓದುತ್ತಿದ್ದೆವು. ನಮಗೆ ಅದು ಬಹಳ ಆಸಕ್ತಿಕರ ವಿಷಯವಾಗಿತ್ತು. ಅವರು ಸಾಲು ಮರಗಳನ್ನು ನೆಟ್ಟರು, ಕೆರೆ, ಬಾವಿಗಳನ್ನು ಮಾಡಿದರು, ಅನಾಥರಿಗೆ ಆಶ್ರಯ ಕೊಟ್ಟರು, ಬಡವರಿಗೆ ಆಹಾರ ಕೊಟ್ಟರು, ಧರ್ಮಛತ್ರಗಳನ್ನು ಕಟ್ಟಿದರು ಎಂದು. ಆದರೆ ನಮ್ಮ ಸಾಮ್ರಾಜ್ಯ ಧರ್ಮಸ್ಥಳ ಗೇಟಿನ ಒಳಗಿನ ಅತೀ ಸಣ್ಣ ಸಾಮ್ರಾಜ್ಯ. ಈ ಗೇಟಿನ ಒಳಗಿನ ಸಣ್ಣ ಸಾಮ್ರಾಜ್ಯ ಮಾಡಿದ ಕೆಲಸವನ್ನು ನೋಡಿದರೆ ನಮಗೇ ಆಶ್ಚರ್ಯ ಆಗುತ್ತದೆ. ಹೂಳೆತ್ತಿದ ಕೆರೆಗಳು ಎಷ್ಟು! ಶುದ್ಧಗಂಗಾ ಘಟಕಗಳು ಎಷ್ಟು ಆದವು! ಜನಜಾಗೃತಿಯ ಮುಖಾಂತರ ಅದೆಷ್ಟು ಕುಟುಂಬಗಳು ನೆಮ್ಮದಿಯ ಬದುಕನ್ನು ಕಟ್ಟಿಕೊಂಡವು! ರುಡ್‍ಸೆಟ್‍ನಿಂದ ಸ್ವಉದ್ಯೋಗಿಗಳಾದವರು ಎಷ್ಟು! ಸುಜ್ಞಾನನಿಧಿ ಶಿಷ್ಯವೇತನ ಪಡೆದು ಉನ್ನತ ಶಿಕ್ಷಣ ವ್ಯಾಸಂಗ ಮಾಡಿದವರೆಷ್ಟು! ವಾತ್ಸಲ್ಯ ಕಾರ್ಯಕ್ರಮದ ಮೂಲಕ ಸಹಾಯ ಪಡೆದ ಅನಾಥ ಕುಟುಂಬಗಳೆಷ್ಟು! ಜನಮಂಗಲ ಕಾರ್ಯಕ್ರಮದಡಿ ಸಹಾಯ ಪಡೆದ ವಿಶೇಷಚೇತನರೆಷ್ಟು! ಇಲ್ಲಿ ಯಾವ ಕಾರ್ಯಕ್ರಮ ಇದೆ, ಯಾವ ಕಾರ್ಯಕ್ರಮ ಇಲ್ಲ ಎಂದು ಹೇಳುವುದು ಕಷ್ಟ.
ನಮಗೆ ಕೆಲಸದಲ್ಲಿ ಒಂದು ಧನ್ಯತೆ ಇರಬೇಕು, ಸಾರ್ಥಕತೆ ಇರಬೇಕು. ಬೇರೆ ಸಂಸ್ಥೆಗಳ ಉದ್ಯೋಗಿಗಳು ಹತ್ತು ದಿವಸಗಳ ಕಾಲ ಬೇರೆ ಬೇರೆ ಹಳ್ಳಿಗಳಿಗೆ ಹೋಗಿ ಅಲ್ಲಿ ಇದ್ದು ಬರುವುದು, ಸ್ವಯಂಸೇವಾ ಸಂಸ್ಥೆ (ಎನ್‍ಜಿಒ) ಗಳಿಗೆ ಹೋಗಿ ಅವರೊಂದಿಗೆ ಕೆಲಸ ಮಾಡಿ ಬರುವುದನ್ನು ಮಾಡುತ್ತಾರೆ. ಆದರೆ ಗ್ರಾಮಾಭಿವೃದ್ಧಿ ಯೋಜನೆಯು ಒಂದು ಸ್ವಯಂಸೇವಾ ಸಂಸ್ಥೆ. ಇಲ್ಲಿ ಯೋಜನೆಯ ಕಾರ್ಯಕರ್ತರು ಮಾಡುವ ಕೆಲಸದ ಪ್ರತಿ ನಿಮಿಷ ಕೂಡಾ ಸಮಾಜಕ್ಕೆ ಉಪಯುಕ್ತವಾಗುತ್ತಿದೆ.
ಸಂಭ್ರಮಾಚರಣೆ ಮಾಡುವ ವೇಳೆಗೆ ನಾವೊಮ್ಮೆ ಆತ್ಮಾವಲೋಕನವನ್ನೂ ಮಾಡಬೇಕಾಗುತ್ತದೆ. ಹುಟ್ಟುಹಬ್ಬಕ್ಕೂ ಹಾಗೆಯೇ. ಒಂದು ವರ್ಷ ಕಳೆಯಿತು, ಸಿಹಿಯೆಲ್ಲ ತಿಂದಾಯಿತು, ಕೇಕ್ ಕತ್ತರಿಸಿ ಆಯಿತು. ಮತ್ತೆ ಮರುದಿನ ಹಾಗೆಯೇ ಹೋಗುತ್ತದೆ. ಹಾಗಾಗಿ ಈ ಹೊಸ ವರ್ಷ ಎಂಬುದು ಒಂದು ರೀತಿಯಲ್ಲಿ ಆತ್ಮಾವಲೋಕನ ಮಾಡಲೂ ಒಂದು ಒಳ್ಳೆಯ ದಿವಸ. ಅನೇಕರು ಅನೇಕ ಸಂಕಲ್ಪಗಳನ್ನು ಮಾಡುತ್ತಾರೆ. ಬೆಳಿಗ್ಗೆ ಬೇಗ ಏಳಬೇಕು, ಯೋಗ ಮಾಡಬೇಕು, ಹೊಸ ಅಡುಗೆ ಕಲಿಯಬೇಕು, ಹೊಸ ಪುಸ್ತಕ ಓದಬೇಕು, ಬಂಧುಗಳನ್ನು ಭೇಟಿಯಾಗದೆ ತುಂಬಾ ದಿನ ಆಯಿತು, ಭೇಟಿ ಆಗಬೇಕು ಎಂದೆಲ್ಲ ಭಾವಿಸುತ್ತೇವೆ. ಬೆಳಿಗ್ಗೆ ಸ್ವಲ್ಪ ಚಳಿ ಇದ್ದರೆ ಇವತ್ತು ಬೇಡ ನಾಳೆ ಎದ್ದು ಯೋಗ ಮಾಡೋಣ ಎಂದು ತೀರ್ಮಾನಿಸುತ್ತೇವೆ. ಆ ನಾಳೆಗಳು ಇಡೀ ವರ್ಷಕ್ಕೆ ಮುಂದುವರಿದುಕೊಂಡು ಹೋಗುತ್ತವೆ. ಮತ್ತೆ ನಮ್ಮ ಜೀವನ ಹಾಗೆಯೇ ಇರುತ್ತದೆ. ಬೆಳಿಗ್ಗೆ ಕೆಲವು ನಿಮಿಷ ಕುಳಿತು ಯೋಗ, ಪ್ರಾಣಾಯಾಮವನ್ನು ಮಾಡುವುದನ್ನು ನಮ್ಮ ಬದುಕಿನಲ್ಲಿ ಒಂದು ಹವ್ಯಾಸವಾಗಿ ರೂಢಿಸಿಕೊಂಡರೆ ಬದುಕು ಸುಂದರವಾಗುತ್ತದೆ.
ಬದುಕಿಗೆ ನಮ್ಮ ಮನೆ, ನಮ್ಮ ಮಕ್ಕಳು, ಸಂಸಾರ, ಆರೋಗ್ಯ, ನಮ್ಮ ಹವ್ಯಾಸಗಳು, ನಮ್ಮ ಧರ್ಮ ಹೀಗೆ ಬೇರೆ ಬೇರೆ ಆಯಾಮಗಳಿರುತ್ತವೆ. ಕೆಲಸ ಕೂಡಾ ಇದರಲ್ಲಿ ಒಂದು ಆಯಾಮ. ಎಲ್ಲದಕ್ಕೂ ನಾವು ಸಮಯವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ನಾವು ಯೋಚಿಸಬಹುದು. ನಮಗೆ ಇಡೀ ದಿನ ಕೆಲಸ ಆಗುತ್ತದೆ. ಯಾವಾಗ ಏನು ಮಾಡಲು ಆಗುತ್ತೆ ಎಂದು. ಆದರೆ ನಾನು ಖಾವಂದರನ್ನು ನೋಡುತ್ತೇನೆ. ನಾಲ್ಕು ದಿನಕ್ಕೊಮ್ಮೆಯಾದರೂ ಒಮ್ಮೆ ಆನೆ ಮರಿ ‘ಶಿವಾನಿ’ ಬಳಿ ಹೋಗಿ ಬರುತ್ತಾರೆ. ಅಲ್ಲಿ ಹೋಗಿ ಬಂದು ನಮ್ಮಲ್ಲಿ ಹೇಳುತ್ತಾರೆ ಶಿವಾನಿ ಆನೆಮರಿ ಹೀಗೆ ಮಾಡಿತು, ಹಾಗೆ ಮಾಡಿತು ಎಂದು. ಬೆಳಿಗ್ಗೆ ತಿಂಡಿಯ ಹೊತ್ತಾದರೂ ಏನು ಬಂದಿಲ್ಲ ಎಂದು ಹುಡುಕಿದರೆ ಹಸುವಿನ ಕೊಟ್ಟಿಗೆಗೆ ಹೋಗಿರುತ್ತಾರೆ, ಕಾರಿನ ಹತ್ತಿರ ಹೋಗಿರುತ್ತಾರೆ, ಮ್ಯೂಸಿಯಂಗೆ ಹೋಗುತ್ತಾರೆ. ಎಲ್ಲ ಕಡೆ ಹೋಗಿ ಅವರ ಸಮಯವನ್ನು ಹೊಂದಿಸಿಕೊಳ್ಳುತ್ತಾರೆ. ಇದು ಯಾಕೆ ಸಾಧ್ಯವಾಗುತ್ತದೆ ಎಂದರೆ ಆ ಆಸಕ್ತಿ, ಹವ್ಯಾಸ ಮತ್ತು ನಾವು ಬೆಳೆಸಿಕೊಂಡು ಬಂದ ಮನೋಧರ್ಮ.
ಜೆ.ಆರ್.ಡಿ. ಟಾಟಾ ಅವರ ಬಳಿ ಅವರ ಸ್ನೇಹಿತನೊಬ್ಬ ಬಂದು ಹೇಳಿದನಂತೆ, ನನಗೆ ಬಹಳ ಮರೆವು ಜಾಸ್ತಿ. ಎಷ್ಟು ಪೆನ್ನು ಹಿಡಿದುಕೊಂಡರೂ ಕಳೆದು ಹೋಗುತ್ತದೆ. ನಮ್ಮಲ್ಲಿ ಅನೇಕರಿಗೆ ಹಾಗೆ ಆಗಬಹುದು. ಅದಕ್ಕೆ ನಾನು ಅತ್ಯಂತ ಕಡಿಮೆ ಬೆಲೆಯ ಬಾಲ್ ಪೆನ್ನನ್ನೇ ಇಟ್ಟುಕೊಳ್ಳುತ್ತೇನೆ. ಇಲ್ಲವಾದರೆ ಕಳೆದು ಹೋಗುತ್ತದೆ ಎಂದು. ವಾರಕ್ಕೆ ಎರಡು, ಮೂರು ಪೆನ್ನಾದರೂ ಬೇಕಾಗುತ್ತದೆ ಎನ್ನುತ್ತಾನೆ. ಅದಕ್ಕೆ ಟಾಟಾರವರು ಒಂದು ಕೆಲಸ ಮಾಡು. 22 ಕ್ಯಾರೆಟ್ ಚಿನ್ನದ ಒಂದು ಪೆನ್ನು ಸಿಗುತ್ತದೆ. ಅದನ್ನು ಜೇಬಿನಲ್ಲಿ ಇಟ್ಟುಕೊ ಎಂದರಂತೆ. ಅವನು ಸರಿ ಎಂದು ಅವರ ಉಪದೇಶ ತಗೊಂಡು ಅಂತಹ ದುಬಾರಿ ಪೆನ್ನನ್ನು ಇಟ್ಟುಕೊಂಡ. ಆರು ತಿಂಗಳ ನಂತರ ಇನ್ನೊಮ್ಮೆ ಸಿಗುವಾಗ ಹೇಳಿದನಂತೆ. ನೀವು ಹೇಳಿದ್ದು ಸರಿ ಇದೆ ಸ್ವಾಮಿ. ನನ್ನ ಪೆನ್ನು ಕಳೆದು ಹೋಗಿಲ್ಲ ಎಂದು. ಅದಕ್ಕೆ ಟಾಟಾರವರು ಅದು ನಿನ್ನ ಮರೆವಲ್ಲ. ನಿಷ್ಕಾಳಜಿ ಎನ್ನುತ್ತಾರೆ. ಹಾಗೆಯೇ ನಾವು ಅನೇಕ ವಿಷಯಗಳಲ್ಲಿ ಕಾಳಜಿ ಇಲ್ಲದೆ ಇರುವುದರಿಂದಲೆ ನಮಗೆ ಮರೆವು ಬರುತ್ತದೆ ಅಥವಾ ನಾವು ಅದನ್ನು ವ್ಯರ್ಥವಾಗಿ ಕಳೆದುಹೋಗಲು ಬಿಡುತ್ತೇವೆ. ನಮ್ಮ ಜೀವದ ಬಗ್ಗೆ, ನಮ್ಮ ಆರೋಗ್ಯದ ಬಗ್ಗೆ, ನಮ್ಮ ಸಂಪತ್ತಿನ ಬಗ್ಗೆ, ನಮ್ಮ ಜೀವನದ ಬಗ್ಗೆ ಕಾಳಜಿ ಇಲ್ಲದೆ ಇದ್ದರೆ, ನಿಷ್ಕಾಳಜಿ ವಹಿಸಿದರೆ ಅದು ಕಳೆದುಹೋಗುತ್ತದೆ. ಆದರೆ ಕಾಳಜಿ ವಹಿಸಿದರೆ ಪ್ರತಿಯೊಂದು ಅದು ನಮ್ಮದಾಗಿ ಉಳಿಯುತ್ತದೆ.
ನಮ್ಮ ನಡೆ, ನುಡಿ, ಪ್ರೀತಿ, ನೀತಿ, ನಾವು ಬೇರೆಯವರ ಜೊತೆ ಸ್ಪಂದಿಸುವ ಗುಣ, ನಮ್ಮ ಸ್ನೇಹ, ನಗು, ನಾವು ಬೆಳೆಸಿಕೊಂಡು ಬಂದ ಮನೋಧರ್ಮ ಬೇರೆಯವರು ನಮ್ಮನ್ನು ಪ್ರೀತಿಸುವ ಹಾಗೆ ಮಾಡುತ್ತದೆ. ಯಾರು ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಾರೆ, ಯಾರು ಸಣ್ಣಪುಟ್ಟ ಸಹಾಯ ಮಾಡುತ್ತಾರೆ, ಅವರನ್ನು ಎಲ್ಲರೂ ಪ್ರೀತಿಸುತ್ತಾರೆ. ಹಾಗಾಗಿ ನಮ್ಮನ್ನು ನಾವು ಪ್ರೀತಿಸಬೇಕು ಮತ್ತು ಇತರರನ್ನು ಪ್ರೀತಿಸುವ ಗುಣ, ನಡೆ, ನುಡಿ ನಮ್ಮದಾಗಿರಬೇಕು. ಅದು ಸಾಧ್ಯವಾಗುವುದು ನಮ್ಮಿಂದಲೆ. ಮೂರು ವರ್ಷಕ್ಕೆಲ್ಲ ನಾವು ಮಾತು ಕಲಿಯುತ್ತೇವೆ. ಆದರೆ ಮೂವತ್ತು ವರ್ಷ ಆದರೂ ಮಾತುಗಾರಿಕೆಯನ್ನು ಕಲಿತಿರುವುದಿಲ್ಲ. ಕಟುವಾದ ಮಾತು ಸ್ನೇಹವನ್ನು ಬಹಳಷ್ಟು ದೂರ ಮಾಡುತ್ತದೆ. ಮನೆಯಲ್ಲಿ, ಸಂಸಾರದಲ್ಲಿ, ಸಮಾಜದಲ್ಲಿ, ದೇಶದಲ್ಲಿ ಒಂದು ಕೆಟ್ಟ ಮಾತು ಬಹಳಷ್ಟು ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತದೆ. ದೇವರು ನಮಗೆ ನಾಲಿಗೆಯನ್ನು ಕೊಟ್ಟಿದ್ದಾರೆ. ಇತರೆ ಯಾವ ಪ್ರಾಣಿಗೂ ಅದು ರುಚಿ ನೋಡಲು ಮಾತ್ರ. ಆದರೆ ಮಾತುಗಾರಿಕೆಗೆ ಇಲ್ಲ. ಮನುಷ್ಯರಿಗೆ ರುಚಿ ನೋಡಲೂ, ಮಾತಾಡಲೂ ನಾಲಿಗೆ ಇದೆ. ಆದರೆ ಎರಡನ್ನೂ ಅತಿಯಾಗಿ ಬಳಸಿದರೆ ಕಷ್ಟ ಆಗುತ್ತದೆ. ಸಿಕ್ಕಿದ್ದೆಲ್ಲ ರುಚಿ ನೋಡುತ್ತಾ ಹೋದರೆ ಹೊಟ್ಟೆ ಕೆಡುತ್ತೆ. ಅತಿಯಾಗಿ ಮಾತನಾಡಿದರೆ ಸ್ನೇಹ, ಬಾಂಧವ್ಯ ಕೆಡುತ್ತದೆ. ನಾವು ನಮ್ಮ ಬಾಯಿಂದ ಯಾವಾಗ ಮಾತು ಬರುವುದಿಲ್ಲವೋ ಅಲ್ಲಿಯವರೆಗೆ ಆ ಮಾತು ನಮ್ಮ ಸೇವಕನಾಗಿರುತ್ತದೆ. ಯಾವಾಗ ಮಾತು ಹೊರಗೆ ಬಂತು ಅದು ಯಜಮಾನ ಆಗುತ್ತದೆ. ನೀನು ಮೊನ್ನೆ ನನಗೆ ಹೀಗೆ ಮಾತನಾಡಿದ್ದೆಯಲ್ಲ, ನೀನು ನನಗೆ ಬೈದಿದ್ದೆಯಲ್ಲ. ಆಗ ಇಲ್ಲ ಅಂತಾ ಹೇಳಲು ಆಗುವುದಿಲ್ಲ. ಹಾಗಾಗಿ ನಮ್ಮ ಬಾಯಿಂದ ಮಾತು ಹೊರಗೆ ಬರುವ ಮೊದಲು ನಾವು ಆಡದ ಮಾತನ್ನು ನಮ್ಮ ಸೇವಕನಾಗಿ ದುಡಿಸಿಕೊಳ್ಳಬೇಕಾಗುತ್ತದೆ. ಒಂದು ಮರದಲ್ಲಿ ಸಾವಿರಾರು ಬೆಂಕಿಕಡ್ಡಿಗಳನ್ನು ಮಾಡಲು ಆಗುತ್ತದೆ. ಆದರೆ ಒಂದು ಕಡ್ಡಿ ಸಾವಿರಾರು ಮರಗಳನ್ನು ಸುಡುತ್ತದೆ. ಹಾಗೆಯೇ ಒಂದು ಕೆಟ್ಟ ಮಾತು ಬಾಯಿಂದ ಬಂದರೆ ಬಹಳಷ್ಟು ಅನಿಷ್ಠಗಳನ್ನು ಅದು ಮಾಡುತ್ತದೆ. ಅದರಿಂದ ನಮ್ಮ ಸಂಗಾತಿಗಳೊಂದಿಗೆ, ನಮ್ಮ ಸಹೋದ್ಯೋಗಿಗಳೊಂದಿಗೆ ನಾವು ಕೆಲಸ ಮಾಡುವ ಜಾಗದಲ್ಲಿ ನಮ್ಮ ಮಾತು ಯಾವಾಗಲೂ ಒಳ್ಳೆಯದಾಗಿರಬೇಕು.
ಯಾರಿಗೆ ಜೀವನೋತ್ಸಾಹವಿರುತ್ತದೋ ಅವರಿಗೆ ಜೀವನದ ಎಲ್ಲ ಮಜಲುಗಳಲ್ಲಿ ಥ್ರಿಲ್‍ಗಳು ಇರುತ್ತವೆ. ನಾವು ಜೀವನೋತ್ಸಾಹವನ್ನು ಬೆಳೆಸಿಕೊಳ್ಳಬೇಕು. ಗಿಡ – ಮರಗಳನ್ನು ನೋಡುತ್ತೇವೆ. ಅವು ಇದ್ದಲ್ಲಿಯೇ ಇರುತ್ತವೆ. ಅವುಗಳಿಗೆ ಓಡಾಡಲು ದೇವರು ಶಕ್ತಿ ಕೊಟ್ಟಿಲ್ಲ. ಮಳೆ ಬಂದರೆ ನೆನೆಯುತ್ತವೆ. ಚಳಿ ಬಂದರೆ ಎಲೆಗಳನ್ನೆಲ್ಲ ಉದುರಿಸಿಕೊಂಡು ಬೋಳಾಗುತ್ತವೆ. ಬೇಸಿಗೆ ಬಂದರೆ ಎಲೆಗಳೆಲ್ಲ ಸುಟ್ಟು ಕರಕಲಾಗಿ ಕೆಳಗೆ ಬೀಳುತ್ತವೆ. ಆದರೆ ಮನುಷ್ಯನಿಗೆ ಹಾಗಲ್ಲ. ಅವನಿಗೆ ಓಡಾಟ ಮಾಡಲಾಗುತ್ತದೆ. ಬೇರೆ ಬೇರೆ ರೀತಿಯಲ್ಲಿ ರಕ್ಷಣೆಯನ್ನು ಮಾಡಿಕೊಳ್ಳುತ್ತಾನೆ. ಜೋರು ಬಿಸಿಲಾದರೆ ಮರದಡಿ, ಮಳೆಯಾದರೆ ಮನೆಯಡಿ ಇರುತ್ತಾನೆ. ಚಳಿ ಆದರೆ ಕಂಬಳಿ ಹೊದ್ದುಕೊಂಡು ಇರುತ್ತಾನೆ. ಈ ರೀತಿ ಎಲ್ಲವನ್ನು ಹೊಂದಿಸಿಕೊಂಡು, ಹೊಂದಿಕೊಳ್ಳುವ ಮತ್ತು ಎಲ್ಲ ಸವಲತ್ತುಗಳನ್ನು ಹೊಂದುವ ಅವಕಾಶ ಇರುವುದು ಮನುಷ್ಯನಿಗೆ ಮಾತ್ರ.
ಕೆಲಸ ಮಾಡುವ ಸಂಸ್ಥೆಯ ಬಗ್ಗೆ ನಮಗೆ ಯಾವಾಗಲೂ ಗೌರವ ಇರಬೇಕು, ಸಂಸ್ಥೆ ನಮ್ಮನ್ನು ಯಾವ ರೀತಿ ಬೆಳೆಸಿದೆ, ಸಂಸ್ಥೆಯಿಂದ ನಮಗೆ ಏನೆಲ್ಲ ಆಗಿದೆ ಎಂಬುದರ ಬಗ್ಗೆ ಕೃತಜ್ಞತಾ ಭಾವ ನಮ್ಮಲ್ಲಿ ಯಾವಾಗಲೂ ಇರಬೇಕು. ಒಂದು ಕಂಪೆನಿ, ಸಂಸ್ಥೆಯ ಬಗ್ಗೆ ಯಾರಾದರೂ ಕೆಟ್ಟದು ಮಾತನಾಡಿದರೆ ಅದಕ್ಕೆ ಅಲ್ಲಿ ಕೆಲಸ ಮಾಡುವವರೇ ಜವಾಬ್ದಾರರಾಗಿರುತ್ತಾರೆ. ಹೊಗಳಿಕೆಯೂ ಆ ಕೆಲಸಗಾರರಿಗೆ ಸಲ್ಲುತ್ತದೆ. ಒಂದು ಸಂಸ್ಥೆಯನ್ನು ಒಳ್ಳೆಯದು ಮಾಡುವುದು, ಕೆಟ್ಟದ್ದು ಮಾಡುವುದು ಯಜಮಾನರು, ಬಾಸ್ ಮಾತ್ರ ಅಲ್ಲ. ಅದರೊಂದಿಗೆ ದುಡಿಯುವ ಎಲ್ಲರೂ ಸೇರಿದರೆ ಮಾತ್ರ ಸಂಸ್ಥೆ ಒಳ್ಳೆಯದಾಗುತ್ತದೆ. ಸಂಸ್ಥೆ ಒಳ್ಳೆಯದಾದರೆ ಮಾತ್ರ ನಮಗೆ ಹೆಚ್ಚಿನ ಗೌರವ ಸಿಗುತ್ತದೆ. ಗ್ರಾಮಾಭಿವೃದ್ಧಿ ಯೋಜನೆಗೆ ಒಳ್ಳೆಯ ಹೆಸರು ಬರಲು ಈ ಸಂಸ್ಥೆಯ ಒಳಗೆ ಮತ್ತು ಹೊರಗೆ ದುಡಿಯುವ ಕಾರ್ಯಕರ್ತರೇ ಕಾರಣ.
ಜೀವನ ಎಂದ ಮೇಲೆ ಬಹಳಷ್ಟು ಅಡೆತಡೆಗಳು ಬರುತ್ತವೆ. ನಾವು ಕಾರಿನಲ್ಲಿ ಪ್ರಯಾಣ ಮಾಡಬೇಕಾದರೆ ಆತುರದಲ್ಲಿರುತ್ತೇವೆ. ದನ ಅಡ್ಡ ಬರುತ್ತೆ, ಒಂದು ನಾಯಿ ಅಡ್ಡ ಬರುತ್ತದೆ, ಒಮ್ಮೆ ರೆಡ್‍ಲೈಟ್ ಬೀಳುತ್ತೆ, ಒಮ್ಮೆ ಒಬ್ಬ ಬೈಕ್ ಸವಾರ ಅಡ್ಡ ಬಂದು ವೇಗವಾಗಿ ಹೋಗುತ್ತಾನೆ. ಈ ಎಲ್ಲ ಅಡೆತಡೆಗಳಿಗೆ ನಾವು ನಮ್ಮ ಶಕ್ತಿಯನ್ನು ಉಪಯೋಗಿಸಿದರೆ ಆಗುವುದಿಲ್ಲ. ಸ್ವಲ್ಪ ಸಮಯ ತಾಳ್ಮೆಯಿಂದ ಇದ್ದಾಗ ಅದೆಲ್ಲ ನಿವಾರಣೆಯಾಗಿ ಗ್ರೀನ್ ಲೈಟ್ ಬಂದು ಸರಿಯಾಗುತ್ತದೆ. ಜೀವನದಲ್ಲಿ ಬರುವ ಎಲ್ಲ ಅಡೆತಡೆಗಳನ್ನು ನಾವು ತಾಳ್ಮೆಯಿಂದ ಎದುರಿಸಿ ಜೀವನದಲ್ಲಿ ಮುಂದೆ ಹೋಗಬೇಕಾಗುತ್ತದೆ.
‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮೋಡದಂತೆ.’ ಎಂಬ ಕವಿವಾಣಿಯಂತೆ ಮೋಡ ಎಷ್ಟು ಕಷ್ಟಪಟ್ಟು ಇಡೀ ವರ್ಷ ನೀರು ಆವಿ ಆಗಿ ಆಗಿ ಮೋಡ ಕಟ್ಟುತ್ತದೆ. ಮೋಡ ಕಪ್ಪಾದ ತಕ್ಷಣ ಅದಕ್ಕೆ ಭಾರ ಆಗುತ್ತದೆ. ಅದು ಕಾಯುತ್ತಾ ಇರುತ್ತದೆ. ಯಾವಾಗ ಕೆಳಗೆ ಸುರಿಸಬೇಕು ಎಂದು. ಒಂದು ತಂಗಾಳಿ ಬಂದರೆ ಸಾಕು ಮೋಡ ಮಳೆಯಾಗಿ ಹಗುರಾಗುತ್ತದೆ. ಹಾಗೆಯೇ ನಮ್ಮ ಕಷ್ಟಗಳನ್ನು ನಾವು ತಲೆಯಲ್ಲಿಯೇ ಹೊತ್ತುಕೊಂಡು ಇದ್ದರೆ ಜೀವನ ಮಾಡುವುದು ಬಹಳ ಕಷ್ಟವಿದೆ. ಮಳೆ ಸುರಿಸಿ ಹಗುರಾದ ಮೋಡದಂತೆ ನಾವು ನಮ್ಮ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬಹುದು, ಅನುಭವವನ್ನು ಕೊಡಬಹುದು, ವಿದ್ಯೆಯನ್ನು ಕೊಡಬಹುದು, ನಮ್ಮ ಆಲೋಚನೆಗಳನ್ನು ಕೊಡಬಹುದು, ನಮ್ಮ ಒಳ್ಳೆಯ ಮಾತನ್ನು ಕೊಡಬಹುದು, ಆಗ ನಮ್ಮ ಮನಸ್ಸು ಹಗುರ ಆಗುತ್ತದೆ. ‘ತಾನೇ ಕೆಸರಲಿ ಕುಸಿಯುತ್ತಿದ್ದರೂ ತಾವರೆಯು ಮರಿದುಂಬಿಗಳ ಪೊರೆಯುವ ತೊಟ್ಟಿಲಾಗಿ ಹೇಗೆ ತಾಯ್ತನವನ್ನು ಪ್ರೀತಿಯಿಂದ ಮೆರೆಯುವುದೋ ಹಾಗೆ ಬಾಳಿಸುವುದೇ ಕರುಣೆ.’ ತಾವರೆ ಕೆಸರಿನಲ್ಲಿ ಕುಸಿತಾ ಇರುತ್ತದೆ. ಆದರೆ ಒಂದು ದುಂಬಿ ಬಂದರೆ ಅದನ್ನು ಸಲಹುವ ತೊಟ್ಟಿಲಾಗುತ್ತದೆ. ನಾವು ಬಡವರು, ನಾವು ಯಾರಿಗೆ ಏನು ಕೊಡಲು ಸಾಧ್ಯ? ಅದೆಲ್ಲ ಶ್ರೀಮಂತರು ಕೊಡುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ನಮ್ಮಲ್ಲಿ ಎಲ್ಲರಲ್ಲೂ ಕೊಡುವಷ್ಟು ಇದೆ. ಪ್ರೀತಿ ಎಂಬ ಬಂಡವಾಳವನ್ನು ದೇವರು ತುಂಬಿಸಿಕೊಟ್ಟಿದ್ದಾರೆ. ನಾವು ಮಾತ್ರ ಅದನ್ನು ಖರ್ಚು ಮಾಡಲು ಆಸೆ ಮಾಡುತ್ತೇವೆ. ಅದನ್ನು ಇಟ್ಟುಕೊಳ್ಳುತ್ತೇವೆ. ನಮ್ಮ ಮಕ್ಕಳಿಗೆ, ನಮ್ಮ ಮನೆಯವರಿಗೆ ಮಾತ್ರ. ಬೇರೆಯವರಿಗೆ ಕೊಟ್ಟರೆ ಎಲ್ಲಿ ಖರ್ಚಾದೀತೇನೋ! ಎಂದು ನಮಗೆ ಭಯ ಆಗುತ್ತದೆ.
ಒಬ್ಬಾಕೆ ‘ಚಿಂದಿ’ ಎನ್ನುವ ಮಹಿಳೆ. ಅವಳಿಗೆ ಹೆಸರು ಹಾಗೆ ಅಲ್ಲ. ಅವಳಿಗೆ ಆಕೆಯ ಮನೆಯವರು ಕರೆದಿದ್ದು ಚಿಂದಿ ಎಂದು. ಚಿಂದಿ ಎಂದರೆ ಕಾಲು ಒರೆಸುವ ಬಟ್ಟೆ ಎಂದು ಅರ್ಥ. ಹಾಗೆಯೇ ಎಲ್ಲರೂ ಅವಳನ್ನು ಭಾವಿಸಿದ್ದರು. ಗಂಡ, ಮನೆಯವರು ಎಲ್ಲರೂ ಸೇರಿ ಅವಳನ್ನು ಮನೆಯಿಂದ ಹೊರಗೆ ಹಾಕಿದ್ದರು. ಅವಳು ಹೋಗಿ ಮಾರ್ಗದ ಬದಿಯಲ್ಲಿ ಭಿಕ್ಷೆ ಎತ್ತುತ್ತಿದ್ದಳು. ತಾನು ಭಿಕ್ಷೆ ಎತ್ತಿದ ಹಣದಿಂದ ಅಕ್ಕಿ ಖರೀದಿಸಿ ಅಕ್ಕಿಯಿಂದ ಅನ್ನ ಮಾಡಿ ತಾನು ಊಟ ಮಾಡಿ ಸುತ್ತಲಿನ ನಾಲ್ಕೈದು ಹುಡುಗರಿಗೆ ಕೊಡಲು ಶುರುಮಾಡಿದಳು. ಹೀಗೆ ಬೆಳೆಯುತ್ತಾ ಬೆಳೆಯುತ್ತಾ ಒಂದುವರೆ ಸಾವಿರ ಜನ ಅವಳ ಆಶ್ರಯದಲ್ಲಿ ಇರಲು ಶುರು ಮಾಡಿದರು. ಇದನ್ನು ನೋಡಿ ಜನ ದುಡ್ಡು ಕೊಡಲು ಶುರು ಮಾಡಿದರು. ಇವತ್ತು ಅಂತಾರಾಷ್ಟ್ರೀಯವಾಗಿ ಅವಳು ಖ್ಯಾತಿಯನ್ನು ಪಡೆದುಕೊಂಡಿದ್ದಾಳೆ. ಒಮ್ಮೆ ಗಂಡನೂ ಎಲ್ಲ ಕಾಯಿಲೆ ಹಿಡಿದುಕೊಂಡು ಅವಳಿದ್ದಲ್ಲಿಗೇ ಬಂದ. ಅವಳು ‘ಬಾ ನೀನೂ ಒಂದು ಮಗು ಎಂದು ನಾನು ಸಾಕುತ್ತೇನೆ’ ಎಂದು ಹೇಳಿದಳು. ಹೀಗೆ ಮಹಿಳೆಯರು ಅಥವಾ ಯಾರೇ ಆಗಲಿ ಮನಸ್ಸು ಮಾಡಿದರೆ, ನಮ್ಮ ಮನಸ್ಸು ಒಳ್ಳೆಯದಿದ್ದರೆ, ಕೈಲಾದ ಸಹಾಯ ಮಾಡಲು ನಮಗೆ ಸಾಧ್ಯ ಆಗುತ್ತದೆ.
ಒಂದು ದೀಪ ಬೆಳಗಬೇಕಾದರೆ ಅದಕ್ಕೆ ಬತ್ತಿ ಬೇಕು, ಮಣ್ಣಿನ ಹಣತೆ ಬೇಕು ಮತ್ತು ಎಣ್ಣೆ ಬೇಕು. ಈ ದೀಪವನ್ನೇನೋ ನಾವು ಬೆಳಗಿಸುತ್ತೇವೆ. ದೀಪ ಬೆಳಗಲು ಬೇಕಾದ ಎಲ್ಲ ಪರಿಕರಗಳನ್ನು ನೀವು ಕೇಂದ್ರ ಕಚೇರಿಯಿಂದ ತಯಾರು ಮಾಡಿಕೊಡುತ್ತೀರಿ. ಆ ದೀಪ ರಾಜ್ಯದ ಬೇರೆ ಬೇರೆ ಕಡೆಗಳಿಗೆ ಹೋಗುತ್ತದೆ. ಅಲ್ಲಿ ಪ್ರತಿ ಮನೆಯನ್ನು ಬೆಳಗುವ ಕೆಲಸವನ್ನು ಮಾಡುತ್ತದೆ.
ಗುರುನಾನಕರನ್ನು ಯಾರೋ ಒಂದು ದಿನ ಕೇಳಿದರಂತೆ. ‘ಅಲ್ಲಾ ನಾನು ಸತ್ತ ಮೇಲೆ ಏನಾಗುತ್ತೇನೆ’ ಎಂದು. ಅದಕ್ಕೆ ಅವರು ಹೇಳಿದರಂತೆ. ‘ಅದನ್ನು ನೀನು ಸತ್ತ ಮೇಲೆ ಗೋರಿಯೊಳಗೆ ಕೂತು ಯೋಚನೆ ಮಾಡು. ಈಗ ಒಳ್ಳೆಯ ರೀತಿಯಲ್ಲಿ ಬದುಕುವುದು ಹೇಗೆ ಎಂದು ಯೋಚನೆ ಮಾಡು’ ಎಂದು.
ರಾಮನಿಗಿಂತ ಹೆಚ್ಚು ಗುಡಿ ಇರುವುದು ಹನುಮಂತನಿಗೆ. ಹನುಮಂತನಿಗೆ ಆತನ ತಾಯಿ ಅಂಜನಾದೇವಿ ಒಮ್ಮೆ ಕೇಳುತ್ತಾಳಂತೆ. ನಿನಗೆ ಇಷ್ಟೆಲ್ಲಾ ಶಕ್ತಿ ಇದೆ. ಹುಟ್ಟುವಾಗಲೇ ನೀನು ಸೂರ್ಯನ ಹತ್ತಿರ ಹಾರಲು ಹೋದವ. ಮತ್ತೆ ಇಷ್ಟೆಲ್ಲ ರಾಮಾಯಣ ಯಾಕೆ ಬೇಕಾಗಿತ್ತು? ಲಂಕೆಗೆ ಹಾರಿ ಹೋಗಿ ಲಂಕೆಯನ್ನು ಸುಟ್ಟು ಬಂದಿದ್ದಿ? ಆಗ ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಬಂದರೆ ಈ ಯುದ್ಧ, ಸೇತುವೆ ಬೇಕಿತ್ತಾ? ಎಂದಳಂತೆ. ಆಗ ಹನುಮಂತ ಹೇಳುತ್ತಾನೆ. ರಾಮ ಹೇಳಿದಂತೆ ನಾನು ಮಾಡುವುದು. ಇದು ನನ್ನ ಕತೆಯಲ್ಲ ರಾಮನ ಕತೆ. ಹಾಗೆಯೇ ನಮ್ಮನ್ನೆಲ್ಲ ರಾಮ ಆಗಲು ಬಿಟ್ಟು ನೀವೆಲ್ಲ ಬಹಳಷ್ಟು ಜನ ಯೋಜನೆಯ ಕಚೇರಿಗಳಲ್ಲಿರುವವರು, ಕಾರ್ಯಕ್ಷೇತ್ರದಲ್ಲಿರುವವರು ಎಲ್ಲರೂ ಸೇರಿ ಈ ಸೇತುವೆ ಕಟ್ಟುವುದು ಇರಬಹುದು, ಲಂಕೆಗೆ ಹಾರುವುದು ಇರಬಹುದು, ಇಂತಹ ಕೆಲಸಗಳನ್ನೆಲ್ಲ ಬೇರೆ ಬೇರೆ ರೀತಿಯಲ್ಲಿ ಮಾಡಿ ಹೆಸರನ್ನು, ಪ್ರಶಸ್ತಿಯನ್ನು ನಮಗೆ ಬರುವ ಹಾಗೆ ಮಾಡಿದ್ದೀರಿ. ಯೋಜನೆಯನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಕ್ಕೆ ಮತ್ತು ಸಾಕಷ್ಟು ಗೌರವವನ್ನು ತಂದು ಕೊಟ್ಟದ್ದಕ್ಕೆ ಯೋಜನೆಯ ಕಾರ್ಯಕರ್ತರೆಲ್ಲರನ್ನು ನಾನು ಅಭಿನಂದಿಸುತ್ತೇನೆ. ಹೊಸ ಆಶಯಗಳೊಂದಿಗೆ ಬದುಕು ಸಾಗಲಿ.