ಮಾರುಕಟ್ಟೆಯಲ್ಲಿ ಬರಲಿದೆ ‘ನ್ಯಾನೋ ಯೂರಿಯಾ’ ಗೊಬ್ಬರ ದ್ರಾವಣ

ವೃಷಾಂಕ್ ಖಾಡಿಲ್ಕರ್

ಗೊಬ್ಬರ ಬಳಕೆ ಕೃಷಿಯಲ್ಲಿನ ಒಂದು ವಿಧಾನ. ಬೆಳೆಗಳಿಗೆ ಅಗತ್ಯ ಪೋಷಕಾಂಶಗಳನ್ನು ಗೊಬ್ಬರವು ಒದಗಿಸುತ್ತದೆ. ಸೂಕ್ತ ಮಾಹಿತಿಯೊಂದಿಗೆ ನಿಗದಿತ ಅವಧಿಯಲ್ಲಿ ಮತ್ತು ನಿಗದಿತ ಪ್ರಮಾಣದಲ್ಲಿ ಗೊಬ್ಬರವನ್ನು ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ರಸಗೊಬ್ಬರಗಳ ಬಳಕೆಯಲ್ಲಂತೂ ಹೆಚ್ಚು ತಿಳುವಳಿಕೆ, ಎಚ್ಚರಿಕೆ ಅಗತ್ಯ. ‘ಹೆಚ್ಚಿನ ಇಳುವರಿ ನೀಡುವ ರಸಗೊಬ್ಬರಗಳು’ ಎಂಬ ಬ್ರ್ಯಾಂಡ್ ಹತ್ತಾರು ನಕಲಿ, ಕಲಬೆರೆಕೆಯ ರಸಗೊಬ್ಬರಗಳು ಮಾರುಕಟ್ಟೆಯಲ್ಲಿ ಆಧಿಪತ್ಯ ಸಾಧಿಸಿರುವುದರಿಂದ ಕೆಲವೊಮ್ಮೆ ರೈತರು ವಿವಿಧ ರಸಗೊಬ್ಬರಗಳನ್ನು ಎಗ್ಗಿಲ್ಲದೆ ಬಳಸಿ ಕ್ರಮೇಣ ಇಳುವರಿ ಕುಂಠಿತವಾಗಿ, ಮಣ್ಣಿನ ಆರೋಗ್ಯವು ದುರ್ಬಲಗೊಂಡು ಪರಿತಪಿಸುತ್ತಾರೆ. ಕಲಬೆರಕೆ, ನಕಲಿ ಗೊಬ್ಬರಗಳ ಬಳಕೆಯಿಂದ ಭೂಮಿಯಲ್ಲಿ ಬ್ಯಾಕ್ಟೀರಿಯಾ ಮುಂತಾದ ಜೀವಿಗಳ ಜೈವಿಕ ಚಟುವಟಿಕೆಗಳು ನಿಂತು ಹೋಗುತ್ತವೆ, ಎರೆಹುಳು ಮುಂತಾದ ಜೀವಿಗಳು ನಾಶವಾಗುತ್ತವೆ. ಮಣ್ಣು ಸತ್ವಹೀನವಾಗಿ ಪರಿಸರಕ್ಕೂ ಹಾನಿಯಾಗುತ್ತದೆ. ಇನ್ನೊಂದೆಡೆ ರಸಗೊಬ್ಬರಗಳ ಆಮದು ಹೆಚ್ಚಾಗಿ ಅರ್ಥ ವ್ಯವಸ್ಥೆಗೆ ಹೊಡೆತಬೀಳುತ್ತದೆ.
ರೈತರ ಜಮೀನಿನ ಫಲವತ್ತತೆ ಉಳಿಸುವುದರೊಂದಿಗೆ ಗಮನಾರ್ಹವಾಗಿ ಇಳುವರಿಯನ್ನು ಹೆಚ್ಚಿಸಲು ಸಹಕಾರಿ ವಲಯದ ‘ಇಫ್ಕೋ’ ಸಂಸ್ಥೆ ‘ನ್ಯಾನೋ ಯೂರಿಯಾ’ ರಸಗೊಬ್ಬರ ದ್ರಾವಣವನ್ನು ಆವಿಷ್ಕರಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಬಾಟಲಿ ರೂಪದಲ್ಲಿ ಸಿಗುವ ನ್ಯಾನೋ ಯೂರಿಯಾವನ್ನು ದೇಶದ ವಿವಿಧೆಡೆ ಬಳಸಿ ಕ್ಷೇತ್ರ ಪ್ರಯೋಗದ ಮೂಲಕ ಅದರ ಪ್ರಯೋಜನದ ಖಾತರಿಯನ್ನು ಸಂಶೋಧಕರು ಪಡೆದುಕೊಂಡಿದ್ದಾರೆ.

ಏನಿದು ನ್ಯಾನೋ ಯೂರಿಯಾ ದ್ರಾವಣ?
ಕೃಷಿಯಲ್ಲಿ ಯೂರಿಯಾವನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಬೆಳೆಗಳಿಗೆ ಸಾರಜನಕವನ್ನು ನೀಡಲು ರೈತರು ಯೂರಿಯಾವನ್ನು ಅವಲಂಬಿಸಿದ್ದಾರೆ. ಪ್ರಸ್ತುತ ಸಿಗುವ ಯೂರಿಯಾ ಹರಳು ರೂಪದಲ್ಲಿದೆ. ಇದರಲ್ಲಿ ಶೇ.30ರಿಂದ ಶೇ.40ರಷ್ಟು ಸಾರಜನಕ ಸಾಮರ್ಥ್ಯವಿದೆ. ನ್ಯಾನೋ ಯೂರಿಯಾ ದ್ರಾವಣದಲ್ಲಿ ನ್ಯಾನೋ ಕಣಗಳು ಸೂಕ್ಷ್ಮವಾಗಿದ್ದು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತವೆ. ಮೇಲ್ಭಾಗದಲ್ಲಿ ಸಿಂಪಡಿಸಿದರೆ ಬೇರು ಮಟ್ಟದವರೆಗೆ ತಲುಪುತ್ತವೆ. ಯೂರಿಯಾ ಚೀಲಗಳನ್ನು ಟ್ರ್ಯಾಕ್ಟರ್ ಅಥವಾ ಲಘುವಾಹನಗಳಲ್ಲಿ ರೈತರು ಸಾಗಾಟ ಮಾಡುತ್ತಿದ್ದರೆ ನ್ಯಾನೋ ಯೂರಿಯಾವನ್ನು ಕೈಚೀಲದಲ್ಲಿ ಒಯ್ಯಬಹುದಾಗಿದೆ.

ಬಳಕೆ ಹೇಗೆ?
ಅರ್ಧ ಲೀಟರ್ ನ್ಯಾನೋ ರಸಗೊಬ್ಬರ ದ್ರಾವಣ 50 ಕೆ.ಜಿ. ರಸಗೊಬ್ಬರಕ್ಕೆ ಸಮ. ಒಂದು ಲೀಟರ್ ನೀರಿನಲ್ಲಿ 4 ಮಿಲಿ ಲೀಟರ್ ನ್ಯಾನೋ ಯೂರಿಯಾ ದ್ರಾವಣವನ್ನು ಬೆರೆಸಿ ಸಿಂಪಡಿಸಬೇಕು. ಯಾವುದೇ ಬೆಳೆಯನ್ನು ಬಿತ್ತನೆ ಮಾಡಿದ ಅಥವಾ ನಾಟಿ ಮಾಡಿದ 30 ದಿನಗಳ ನಂತರ ಒಂದು ಬಾರಿ, ೧೫ ದಿನಗಳ ನಂತರ ಮತ್ತೊಮ್ಮೆ ಅಂದರೆ 45 ದಿನಗಳಲ್ಲಿ ಎರಡು ಬಾರಿ ಸಿಂಪಡಿಸಿದರೆ ಸಾಕು.

ಸಾಮಾನ್ಯ ಯೂರಿಯಾ – ನ್ಯಾನೋ ಯೂರಿಯಾ
ಸಾಮಾನ್ಯ ಯೂರಿಯಾದ ಒಂದು ಕಣದಲ್ಲಿ 1.3 ಮಿಲಿ ಲೀಟರ್ ಪೋಷಕಾಂಶವಿದ್ದರೆ ನ್ಯಾನೋ ಯೂರಿಯಾದ ಒಂದು ಕಣದಲ್ಲಿ 32 ಮಿಲಿ ಲೀಟರ್ ಪೋಷಕಾಂಶವಿರುತ್ತದೆ.

ಯಶಸ್ವಿ ಪ್ರಯೋಗ
ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ನೆರವು ಹಾಗೂ ಐಸಿಎಆರ್ ಮಾರ್ಗದರ್ಶನದಲ್ಲಿ ಗುಜರಾತ್‌ನ ಜೈವಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ನ್ಯಾನೋ ಯೂರಿಯಾ ದ್ರಾವಣವನ್ನು ಅಭಿವೃದ್ಧಿಪಡಿಸಲಾಗಿದೆ. ದೇಶದಾದ್ಯಂತ ರೈತರ 11,000 ತಾಕುಗಳಲ್ಲಿ 94 ವಿವಿಧ ಬೆಳೆಗಳ ಮೇಲೆ ಪ್ರಯೋಗವನ್ನು ಮಾಡಲಾಗಿದೆ. ಜೊತೆಗೆ ಐಸಿಎಆರ್, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು ಸೇರಿದಂತೆ 20ಕ್ಕೂ ಅಧಿಕ ಕಡೆಗಳಲ್ಲಿ ಪರೀಕ್ಷೆ ಮಾಡಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಈಗಾಗಲೆ ಈ ಗೊಬ್ಬರ ಮಾರುಕಟ್ಟೆಗೆ ಬಂದಿದೆ.

ರೈತರಿಗೆ ಪ್ರಯೋಜನ ಏನು?
ಮಣ್ಣಿನ ಆರೋಗ್ಯ ಉತ್ತಮವಾಗಿರಲಿದೆ. ಬೆಳೆಗಳಲ್ಲಿ ಪೌಷ್ಠಿಕಾಂಶ ಹೆಚ್ಚಲಿದೆ. ಈ ಬೆಳೆಗಳ ಸೇವನೆಯಿಂದ ಉತ್ತಮ ಆರೋಗ್ಯ ಸಾಧ್ಯ. ವಾಯು ಮಾಲಿನ್ಯ, ಜಲ ಮಾಲಿನ್ಯ ತಪ್ಪಲಿದೆ. ಸುಸ್ಥಿರ ಕೃಷಿ ಸಾಧ್ಯ. ಯೂರಿಯಾ ಬಳಕೆಯ ಪ್ರಮಾಣವು ಶೇ.50ರಷ್ಟು ತಗ್ಗುವುದರಿಂದ ಆಮದು ವೆಚ್ಚ ಕಡಿಮೆಯಾಗಲಿದೆ. ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಕಡಿತದಿಂದ ರೈತರ ಮೇಲಿನ ಹೊರೆ ತಗ್ಗಲಿದೆ. ಪ್ರತಿ ಎಕರೆಗೆ ರೂ.2 ಸಾವಿರದಿಂದ 3 ಸಾವಿರ ರೂಪಾಯಿ ಆದಾಯ ಹೆಚ್ಚಾಗಲಿದೆ. ಶೇ.95ರಷ್ಟು ರಸಗೊಬ್ಬರ ಆಮದಿನ ಪ್ರಮಾಣ ತಗ್ಗಲಿದೆ. ವಾರ್ಷಿಕವಾಗಿ ರೂ. 8,000 ಕೋಟಿ ವಿದೇಶಿ ವಿನಿಮಯ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *