ರಾಜ್ಯದ 140 ಕೆರೆಗಳ ಸುತ್ತ ಅರಣ್ಯೀಕರಣ
ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯಾದ್ಯಂತ ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗುತ್ತಿದೆ. ಶ್ರೀ ಹೆಗ್ಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಮೂಲಕ ಸುಮಾರು 293 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರೊಂದಿಗೆ ಸರಕಾರದ ‘ಕೆರೆ ಸಂಜೀವಿನಿ’ ಕಾರ್ಯಕ್ರಮದ ಮೂಲಕ 63 ಕೆರೆಗಳನ್ನು ಹೂಳೆತ್ತಲಾಗಿದೆ. ಹೀಗೆ ಒಟ್ಟು ರಾಜ್ಯದ ಸುಮಾರು 356 ಕೆರೆಗಳಿಗೆ ಕಾಯಕಲ್ಪ ಕೊಡಲಾಗಿದೆ.
ಹೊಸದಾಗಿ ಹೂಳೆತ್ತಲಾದ 140 ಕೆರೆಗಳ ಸುತ್ತ್ತ ಅರಣ್ಯೀಕರಣ, ಹೊಸದಾಗಿ ರಚನೆಗೊಂಡ ಏರಿಗಳು ಜರಿಯದಂತೆ ಹಸಿರು ಹೊದಿಕೆ ನಿರ್ಮಾಣ, ಅತಿಕ್ರಮಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಯು ‘ಕೆರೆಯಂಗಳದಲ್ಲಿ ಗಿಡನಾಟಿ’ ಎಂಬ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಂತೆ ಜುಲೈ ತಿಂಗಳಿನಲ್ಲಿ ಕೆರೆಯಂಗಳದಲ್ಲಿ 17,000 ಸಸಿಗಳ ನಾಟಿ ಮಾಡಲಾಗುವುದು.
ಪ್ರಾಣಿ – ಪಕ್ಷಿಗಳಿಗೆ, ಜನ – ಜಾನುವಾರುಗಳಿಗೆ, ಹಣ್ಣು, ಹೂವು, ಮೇವು, ನೆರಳು ಕೊಡುವ ಗಿಡಗಳನ್ನು, ಕೆರೆ ಸಮಿತಿಗೆ ಆದಾಯ ತಂದುಕೊಡಬಹುದಾದ ವಿವಿಧ ಹಣ್ಣಿನ ಗಿಡಗಳ ನಾಟಿಗೆ ಆದ್ಯತೆ ನೀಡಲಾಗಿದೆ. ಅದೇ ರೀತಿ ನೂತನವಾಗಿ ನಿರ್ಮಿಸಿರುವ ಕೆರೆಯ ಏರಿ ಜರಿಯದಂತೆ ಏರಿಯ ಸುತ್ತ ಹುಲ್ಲು ಬೆಳೆಯುವ ಬೀಜಗಳ ಬಿತ್ತನೆ ಕೂಡಾ ನಡೆಯಲಿದೆ. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್‌ಗಳ ಸಹಕಾರ ಕೋರಲಾಗಿದೆ. ಗಿಡಗಳಿಗಾಗಿ ಸಾಮಾಜಿಕ ಅರಣ್ಯ ಇಲಾಖೆಯ ನೆರವನ್ನೂ ಪಡೆಯಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿಗಳು, ಜನಪ್ರತಿನಿಧಿಗಳು, ಗಣ್ಯರು, ಸ್ಥಳೀಯರು ಸೇರಿ 5,000 ಜನ ಭಾಗವಹಿಸಿ ಯಶಸ್ವಿಗೊಳಿಸಲಿದ್ದಾರೆ.
ನಾಟಿ ಮಾಡುವ ಪ್ರತೀ ಗಿಡಕ್ಕೆ ಬೇಲಿ ರಚಿಸಿ ನೀರು, ಗೊಬ್ಬರ ಹಾಕಿ ಪೋಷಿಸಿ ಸಂರಕ್ಷಿಸುವ ಜವಾಬ್ದಾರಿಯನ್ನು ಕೆರೆ ಅಭಿವೃದ್ಧಿ ಸಮಿತಿಯವರು ನಿರ್ವಹಿಸಲಿದ್ದಾರೆ.