ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಕಳೆದ ಸಂಚಿಕೆಯಲ್ಲಿ ‘ವಾತ್ಸಲ್ಯ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ಮಾಸಾಶನ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.
ಅಮೆರಿಕಾದಂತಹ ದೇಶದಲ್ಲಿ ಅಲ್ಲಿನ ಭೌಗೋಳಿಕ ವ್ಯಾಪ್ತಿ ಮತ್ತು ಸಂಪತ್ತಿಗೆ ಹೋಲಿಕೆ ಮಾಡಿದಲ್ಲಿ ಅಲ್ಲಿ ಜನಸಂಖ್ಯೆ ಕಡಿಮೆ. ಅಲ್ಲಿಯ ಜನರ ವೃದ್ಧಾಪ್ಯ ಜೀವನದ ಹೆಚ್ಚಿನ ಖರ್ಚುಗಳನ್ನು ನೋಡಿಕೊಳ್ಳಲು ಸರಕಾರವು ದೊಡ್ಡ ಮೊತ್ತದ ಬಜೆಟ್ ಅನ್ನು ಇಟ್ಟಿದೆ. ಆದರೆ ನಮ್ಮ ದೇಶದ ಪರಿಸ್ಥಿತಿ ಬೇರೆ. ಆದ್ಯತಾ ವಲಯಗಳಿಗೆ ಬೇಕಾಗುವಷ್ಟು ಬಜೆಟ್ ಅನ್ನು ಹೊಂದಿಸಲಾಗದ ಪರಿಸ್ಥಿತಿಯಲ್ಲಿ ವೃದ್ಧಾಪ್ಯ ಜನರನ್ನು ನೋಡಿಕೊಳ್ಳಲು ಬಜೆಟನ್ನು ಮೀಸಲಾಗಿಡುವುದರ ಬಗ್ಗೆ ಊಹಿಸಲೂ ಸಾಧ್ಯವಿಲ್ಲ. ಇಂದಿನ ಯುವಜನತೆ ನಾಳಿನ ವೃದ್ಧರಾಗುವ ಹಿನ್ನೆಲೆಯಲ್ಲಿ ಸಹಭಾಗಿತ್ವದ ಆಧಾರದಲ್ಲ್ಲಿ ಆರ್ಥಿಕ ಭದ್ರತೆಗಳಿಗಾಗಿ ಸರಕಾರ ಅಟಲ್ ಪಿಂಚಣಿ ಯೋಜನೆ, ನ್ಯಾಷನಲ್ ಪೆನ್ಷನ್ ಸ್ಕೀಮ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಭಾರತದ ಮುಂದಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖ ಯೋಜನೆಗಳಾಗಿವೆ.
142 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಸರಕಾರಿ ಅಥವಾ ಇತರ ಖಾಸಗಿ ಉದ್ಯೋಗಿಗಳಾಗಿ ನಿವೃತ್ತಿಯ ನಂತರ ಪಿಂಚಣಿ ಪಡೆಯಬಹುದಾದವರ ಸಂಖ್ಯೆ ಬಹಳ ಕಡಿಮೆ. ಕೃಷಿ, ಸ್ವಉದ್ಯೋಗ, ಅಸಂಘಟಿತ ವಲಯದಲ್ಲಿ ತಮ್ಮ ಜೀವನೋಪಾಯವನ್ನು ಕಂಡುಕೊAಡAತÀವರ ಸಂಖ್ಯೆ ಅಗಾಧ ಪ್ರಮಾಣದಲ್ಲಿದ್ದು, ದುಡಿಯಲು ಶಕ್ತಿ ಇರುವವರೆಗೆ ದುಡಿದು ಬದುಕುತ್ತಾರೆ, ಶಕ್ತಿ ಕಳೆದುಕೊಂಡಾಗ ಇನ್ನೊಬ್ಬರ ಮೇಲೆ ಅವಲಂಬಿತರಾಗುತ್ತಾರೆ. ಹೆತ್ತವರ ಪೋಷಣೆ ಮಕ್ಕಳ ಆದ್ಯ ಕರ್ತವ್ಯ ಎಂಬ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರನ್ನು ಪೋಷಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಸಾಮಾಜಿಕ ಜೀವನ ಶೈಲಿ ಹಾಗೂ ಕುಂಠಿತವಾಗುತ್ತಿರುವ ಮಾನವೀಯ ಮೌಲ್ಯಗಳ ವ್ಯವಸ್ಥೆಗಳಿಂದಾಗಿ ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಎಷ್ಟೋ ಪೋಷಕರು ಬೀದಿ ಪಾಲಾಗಿದ್ದಾರೆ. ದುಡಿಯುವ ಶಕ್ತಿ ಇರುವಾಗ ಹಗಲಿರುಳು ಕಷ್ಟಪಟ್ಟು ದುಡಿದು ಮಕ್ಕಳಿಗೆ ಕಿಂಚಿತ್ ಕಷ್ಟಗಳೂ ಬಾರದಂತೆ ಪೋಷಿಸಿದ ಎಷ್ಟೋ ಪೋಷಕರಿದ್ದಾರೆ. ತಾನು ಅರೆಹೊಟ್ಟೆಯಲ್ಲಿ ದುಡಿದು ಕುಟುಂಬವನ್ನು ಸಲಹುತ್ತಾ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದರು. ಇದ್ದ ಒಂದು ಮನೆಯನ್ನೂ ಮಾರಾಟ ಮಾಡಿ ದುಬಾರಿ ಉನ್ನತ ಶಿಕ್ಷಣ ಕೊಡಿಸಿದರು. ಮುಂದೆ ಮಗ ನೌಕರಿಗಾಗಿ ನಗರದ್ದೋ, ವಿದೇಶದ್ದೋ ಪಾಲಾದ. ಪೋಷಕರು ಬಾಡಿಗೆ ಮನೆಯಲ್ಲೇ ಉಳಿದರು. ದುಡಿಯುವ ಶಕ್ತಿ ಕಳೆದುಕೊಂಡು ಅಸಹಾಯಕರಾದಾಗ ಅವರನ್ನು ಮಕ್ಕಳು ನಗರಕ್ಕೂ ಕರೆಸಿಕೊಳ್ಳಲಿಲ್ಲ ಅಥವಾ ಅವರಿರುವಲ್ಲಿ ಪೋಷಣೆಯ ವ್ಯವಸ್ಥೆಯನ್ನೂ ಮಾಡದಿರುವ ಎಷ್ಟೋ ನಿದರ್ಶನಗಳು ಇವೆ. ಇಂತಹ ಪೋಷಕರು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾಗುತ್ತದೆ. ಇದು ಮಕ್ಕಳಿದ್ದೂ ಅಸಹಾಯಕರಾದವರ ಕಥೆಯಾದರೆ ದಿನದ ದುಡಿಮೆಯಿಂದಲೇ ಬದುಕುವ ದಂಪತಿಗಳಿಗೆ ಮಕ್ಕಳೇ ಇಲ್ಲದಿದ್ದಲ್ಲಿ, ದುಡಿಯುವ ಶಕ್ತಿ ಇರುವವರೆಗೆ ಹೇಗೋ ಜೀವನವನ್ನು ಸಾಗಿಸುತ್ತಾರೆ. ಮುಂದೆ ದುಡಿಯುವ ಶಕ್ತಿ ಕಳೆದುಕೊಂಡಾಗ ಇವರ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ. ಈ ದಂಪತಿಗಳಲ್ಲಿ ಒಬ್ಬರನ್ನೊಬ್ಬರು ಕಳೆದುಕೊಂಡಾಗಲಂತೂ ಅವರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿರುತ್ತದೆ. ದುಡಿಯಲು ಶಕ್ತಿ ಇಲ್ಲ, ಮಕ್ಕಳಿಲ್ಲ, ಸಂಬಂಧಿಕರಿಲ್ಲ, ಆಸ್ತಿಪಾಸ್ತಿಗಳಿಲ್ಲದ ಅನಾಥ ವೃದ್ಧಾಪ್ಯ ಜೀವಗಳ ಯಾತನೆ ಯಾರಿಗೂ ಬೇಡ. ಇನ್ನೊಂದಿಷ್ಟು ಜನ ಕೆಲಸವನ್ನು ಹುಡುಕುತ್ತಾ ಎಲ್ಲಿಂದಲೋ, ಎಲ್ಲಿಯವರೆಗೋ ವಲಸೆ ಹೋಗಿ ಕೊನೆಗೆ ದುಡಿಯುವ ಶಕ್ತಿ ಇಲ್ಲದಾಗ ವೃದ್ಧಾಪ್ಯದೊಂದಿಗೆ ನಿಷ್ಕಿçಯರಾಗಿಬಿಡುತ್ತಾರೆ. ಇಂತಹ ಅಸಹಾಯಕರು ತೀವ್ರ ಯಾತನೆಯೊಂದಿಗೆ ಮರಣ ಹೊಂದಿದಾಗ ಅನಾಥ ಶವವಾಗಿ ಮುನ್ಸಿಪಾಲಿಟಿಯವರು ಬಂದು ಸಂಸ್ಕಾರ ಮಾಡುತ್ತಾರೆ. ದಿನನಿತ್ಯ ದುಡಿದೇ ಬದುಕುವವರು ತಮ್ಮ ಭವಿಷ್ಯತ್ತಿನ ವೃದ್ಧಾಪ್ಯ ಜೀವನಕ್ಕಾಗಿ ಯಾವುದೇ ಉಳಿತಾಯದ ತಯಾರಿಯನ್ನು ನಡೆಸಿಕೊಳ್ಳುವುದಿಲ್ಲ. ಆರೊಗ್ಯದ ಬಗ್ಗೆಯೂ ಕಾಳಜಿ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶಕ್ತಿ ಕಳೆದುಕೊಂಡಾಗ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಾರೆ. ಇಂತಹ ಅಸಹಾಯಕ ವ್ಯಕ್ತಿಗಳಿಗೆ ಒಂದಿಷ್ಟು ಆಸರೆಯಾಗಿ ಸರಕಾರದ ಮಾಸಾಶನಗಳಿವೆ. ಆದರೆ ನಾನಾ ಕಾರಣಗಳಿಂದ ಒಂದಿಷ್ಟು ಅಸಹಾಯಕ ವ್ಯಕ್ತಿಗಳಿಗೆ ಅದು ತಲುಪಲು ಸಾಧ್ಯವಾಗದೇ ಇರಬಹುದು. ಸರಿಯಾದ ದಾಖಲೆಗಳನ್ನು ನೀಡಿದಲ್ಲಿ, ಅವರಿಗೂ ಮಾಸಾಶನ ಸಿಗಬಹುದು. ಆದರೆ ಆ ದಾಖಲಾತಿಗಳನ್ನು ಪಡೆಯುವ ಅಥವಾ ಸರಿಪಡಿಸುವ ಶಕ್ತಿಯೂ ಅವರಿಗೆ ಇರುವುದಿಲ್ಲ.
ಪೂಜ್ಯ ಶ್ರೀ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೈಗೊಂಡ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮಾಸಾಶನವು ಮಾನವೀಯ ಮೌಲ್ಯಗಳನ್ನು ಉತ್ತುಂಗಕ್ಕೇರಿಸುವ ಒಂದು ಆದರ್ಶ ಕಾರ್ಯಕ್ರಮವಾಗಿದೆ. ಪೂಜ್ಯರ ಯೋಜನೆಯ ತಳಮಟ್ಟದ ಅಗಾಧ ಸಂಖ್ಯೆಯ ಕಾರ್ಯಕರ್ತರಿಂದ ಇಂತಹ ಅಸಹಾಯಕ ವ್ಯಕ್ತಿಗಳ ಸರ್ವೇಕ್ಷಣೆಯನ್ನು ಮಾಡಿಸಿ ಅವರ ಅಸಹಾಯಕತೆಯ ಬದುಕಿಗೆ ಯೋಜನೆಯ ಮೂಲಕ ಮಾಸಾಶನ ನೀಡುತ್ತಾರೆ. ಪ್ರತೀ ತಿಂಗಳು ಸುಮಾರು 20,000 ಅಸಹಾಯಕರಿಗೆ ಪೂಜ್ಯರಿಂದ ಮಾಸಾಶನ ನೀಡಲಾಗುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ದೇಶದ ಎನ್ಜಿಒ ವಲಯದ ಸಾಮಾಜಿಕ ಕಳಕಳಿಯ ಅತ್ಯಂತ ದೊಡ್ಡ ಈ ‘ಮಾಸಾಶನ’ ಕಾರ್ಯಕ್ರಮದ ಬಗ್ಗೆ ಇನ್ನಷ್ಟು ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
