ಕಳೆ ತುಂಬಿದ ಕೆರೆಗೆ ‘ಜೀವಕಳೆ’

ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ

ಹಿಂದಿನ ಕಾಲದಲ್ಲಿ ‘ಬೆಳ್ತಿಕೆರೆ’ಯ ಹೆಸರು ಕೇಳಿದೊಡನೆ ಊರಿನವರಲ್ಲಿ ಭಯ – ಭಕ್ತಿ ಮೂಡುತ್ತಿತ್ತು. ದೇವಾಲಯದ ಪಕ್ಕದಲ್ಲಿರುವ ಈ ಕೆರೆ ಹಲವಾರು ಪವಾಡಗಳಿಗೆ ಸಾಕ್ಷಿಯಾಗುವ ಜೊತೆಗೆ ಕೆರೆಯ ನೀರು ದೇವಾಲಯದ ಕಾರ್ಯಗಳಿಗೆ ಬಳಕೆಯಾಗುತ್ತಿದ್ದ ಕಾರಣ ಕೆರೆ ಸ್ವಚ್ಛತೆಗೂ ಹೆಸರುವಾಸಿಯಾಗಿತ್ತು. ರಾಜರ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ಈ ಕೆರೆಯ ಒಂದು ಭಾಗದಲ್ಲಿ ‘ಶ್ರೀ ಸಿದ್ದೇಶ್ವರ ಸಿದ್ಧಿನಾಥ’ ದೇವಸ್ಥಾನ, ಇನ್ನೊಂದು ಭಾಗದಲ್ಲಿ ಶಿವನ ಸಾನ್ನಿಧ್ಯವಿದೆ. ಹಿರಿಯರು ಹೇಳುವಂತೆ ಈ ಕೆರೆಯಲ್ಲಿ ಪಿತೃಕಾರ್ಯಗಳು ನಡೆಯುತ್ತಿದ್ದವಂತೆ. ಆದರೆ ವರ್ಷಗಳು ಉರುಳಿದಂತೆ ಊರಿನಲ್ಲಿದ್ದ ಕಸ, ಕಡ್ಡಿ, ಪ್ಲಾಸ್ಟಿಕ್, ವ್ಯರ್ಥ ವಸ್ತುಗಳು ಕೆರೆಯಲ್ಲಿ ತುಂಬಿಕೊಳ್ಳತೊಡಗಿದವು. ಇದರಿಂದಾಗಿ ಕೆರೆ ಮಾಯವಾಗಿ ‘ಕೆರೆ ಇತ್ತು’ ಎನ್ನಲಾದ ಜಾಗ ಮುಂದಕ್ಕೆ ದುರ್ವಾಸನೆಯ ಕೇಂದ್ರವಾಯಿತು. ಕೆರೆಯ ಸುತ್ತಮುತ್ತ ಅಡಕೆ, ತೆಂಗಿನ ಗಿಡಗಳು ಬೆಳೆದು ನಿಂತ ಪರಿಣಾಮ ಕೆರೆಯ ಗಾತ್ರವು ಕಡಿಮೆಯಾಗುತ್ತಾ ಬಂತು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಬಾರ್ಕೂರಿನ ಹೃದಯ ಭಾಗದಲ್ಲಿರುವ ‘ಬೆಳ್ತಿಕೆರೆ’ಯ ಹಿಂದಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಇಲ್ಲಿನ ಯುವಕರಿಗೆ ದೊರಕಲೇ ಇಲ್ಲ.
ಇತ್ತೀಚೆಗೆ ದೇವಾಲಯದ ಸಮಿತಿಯವರು ಬೆಳ್ತಿಕೆರೆಗೆ ಹಿಂದಿನ ಸೌಂದರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪಟ್ಟ ಪ್ರಯತ್ನಗಳು ಅಷ್ಟಿಷ್ಟಲ್ಲ. ಆದರೆ ಕೆರೆಯ ಅವ್ಯವಸ್ಥೆಯನ್ನು ನೋಡಿ ಯಾರೂ ಕೂಡಾ ಕೆರೆ ಅಭಿವೃದ್ಧಿ ಕೆಲಸದತ್ತ ಮನಸ್ಸು ಮಾಡಲಿಲ್ಲ.
ಶ್ರೀ ಹೆಗ್ಗಡೆ ದಂಪತಿಗಳಿoದ ಮಾರ್ಗದರ್ಶನ
ಕೆರೆಯ ಕಥೆಯನ್ನು ಕೇಳಿದ ಶ್ರೀ ಹೆಗ್ಗಡೆ ದಂಪತಿಗಳು ಒಂದು ತಿಂಗಳೊಳಗೆ ಬೆಳ್ತಿಕೆರೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು – ನಮ್ಮ ಕೆರೆ’ ಕಾರ್ಯಕ್ರಮದ ಮೂಲಕ ಪುನಶ್ಚೇತನಗೊಳಿಸುವುದಾಗಿ ಭರವಸೆಯನ್ನು ನೀಡಿದರು.
ಕೆರೆ ತುಂಬಾ ಕಳೆಯ ಕಾಟ
ಸಾಮಾನ್ಯವಾಗಿ ಕೆರೆಗಳಲ್ಲಿ ಕಸ – ಕಡ್ಡಿ, ಹೂಳು ತುಂಬಿರುತ್ತದೆ. ಆದರೆ ಬೆಳ್ತಿಕೆರೆ ಸಂಪೂರ್ಣವಾಗಿ ನೀರಿನಲ್ಲಿ ಹುಟ್ಟಿ ಬೆಳೆಯುವ ಗಿಡದಾಕಾರದ ಕಳೆಗಳಿಂದ ತುಂಬಿತ್ತು. ಕೆರೆ ತುಂಬಾ ಸುಮಾರು ಮೂರು ಮುಕ್ಕಾಲು ಎಕರೆಯಲ್ಲಿ ಬೆಳೆದ ಈ ಗಿಡಗಂಟಿಗಳನ್ನು ತೆಗೆಯುವುದೇ ಹರಸಾಹಸದ ಕೆಲಸವಾಗಿತ್ತು.
ಕಳೆ ತೆಗೆಯಲು ದೋಣಿ
ಕೆರೆಗೆ ಹಿಟಾಚಿ ಇಳಿಸಿದರೆ ಮುಳುಗಿ ಹೋಗುವುದು ನಿಶ್ಚಿತವಾಗಿತ್ತು. ಬೇರೆ ದಾರಿಯ ಬಗ್ಗೆ ಯೋಚಿಸುತ್ತಿದ್ದಾಗ ಇವರ ನೆರವಿಗೆ ಬಂದದ್ದು ದೋಣಿ. ಆರಂಭದಲ್ಲಿ ದುರ್ವಾಸನೆಯಿಂದ ಕೂಡಿದ ಈ ಕೆರೆಗೆ ದೋಣಿ ಇಳಿಸಲು ಯಾರೂ ಒಪ್ಪಲಿಲ್ಲ. ಅಂತೂ ಕೊನೆಗೆ ಎರಡು ದೋಣಿಗಳನ್ನು ಈ ಕೆಲಸಕ್ಕಾಗಿ ಗೊತ್ತು ಮಾಡಿದರು. ದೋಣಿ ನಿಲ್ಲುವಷ್ಟು ನೀರಿರುವ ಜಾಗದಲ್ಲಿ ಎರಡು ಮೋಟಾರು ಚಾಲಿತ ದೋಣಿಗಳು ಕೆಲಸ ಆರಂಭಿಸಿದವು. ಒಂದು ದೋಣಿಯಲ್ಲಿ 3ಮಂದಿ ಕುಳಿತು ಕೈಯಿಂದ ಗಿಡಗಂಟಿಗಳನ್ನು ಬೇರು ಸಮೇತ ಕಿತ್ತುಹಾಕಿದರು. ನಂತರ ಆ ಕಳೆಗಿಡಗಳನ್ನು ಹಗ್ಗದಲ್ಲಿ ಸುತ್ತಿ ದೋಣಿಯ ಸಹಾಯದ ಮೂಲಕ ಕೆರೆಯ ದಡ ಸೇರಿಸಿದರು. ಸುಮಾರು ಒಂದುವರೆ ತಿಂಗಳುಗಳವರೆಗೆ ಈ ಕೆಲಸ ನಡೆಯಿತು. ಇನ್ನು ಕೆರೆಯ ಸುತ್ತಲಿದ್ದ ತನ್ನ ಸೊಂಡಿಲಿಗೆ ಸಿಗುವಷ್ಟು ಕಳೆಗಿಡಗಳನ್ನು ಹದಿನೈದು ದಿನಗಳ ಕಾಲ ಹಿಟಾಚಿಯಣ್ಣ ತೆಗೆದುಬಿಟ್ಟ. ಮೂರು ಡೀಸೆಲ್ ಪಂಪ್‌ಸೆಟ್‌ಗಳು ರಾತ್ರಿ ಹಗಲೆನ್ನದೆ ಕೆರೆಯ ನೀರನ್ನು ಖಾಲಿ ಮಾಡುವಲ್ಲಿ ನೆರವಾದವು. ಅಂತೂ ಒಂದುವರೆ ತಿಂಗಳಲ್ಲಿ ಸುಮಾರು ರೂ. 5 ಲಕ್ಷ ಖರ್ಚಿನಲ್ಲಿ ಕೆರೆಯಣ್ಣ ಕಳೆಮುಕ್ತನಾದ. ಈ ಕೆಲಸಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಸುಮಾರು 2.91 ಲಕ್ಷ ಅನುದಾನ ದೊರೆಯಿತು.
ಊರವರ ಸಹಕಾರ
ಕೆರೆಯ ಸುತ್ತ ರಸ್ತೆಗಳಿರಲಿಲ್ಲ. ಕೆರೆಯಲ್ಲಿ ಹಾವುಗಳು ಇದ್ದುವಂತೆ. ಇವುಗಳನ್ನೆಲ್ಲ ಲೆಕ್ಕಿಸದೆ ಊರಿನ ಮಂದಿ ಕೆರೆ ಕೆಲಸದಲ್ಲಿ ಶ್ರಮದಾನದ ಮೂಲಕ ಕೈಜೋಡಿಸಿದ್ದಾರೆ. ಊರಿನವರು ಸುಮಾರು 100 ಲೋಡ್‌ನಷ್ಟು ಕಳೆಯನ್ನು ಕೊಂಡೊಯ್ದು ಒಣಗಿಸಿ ಮತ್ತೆ ಗದ್ದೆಗೆ ಸುರಿದು ಗೊಬ್ಬರವನ್ನಾಗಿಸಿಕೊಂಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಎಲ್ಲ ಕೆಲಸಗಳಲ್ಲಿ ಕೈಜೋಡಿಸಿದ್ದಾರೆ, ಅಗತ್ಯ ಸಲಹೆ, ಮಾರ್ಗದರ್ಶನವನ್ನು ನೀಡಿದ್ದಾರೆ.
ನೀರಿನಿಂದ ಭರ್ತಿಯಾಯಿತು ಬೆಳ್ತಿಕೆರೆ
ಹೂಳು ತೆಗೆದ ನಂತರ ಕೆರೆ ನೀರಿನಿಂದ ಭರ್ತಿಯಾಗಿದೆ. ಊರಿನ ಸುಮಾರು ನೂರು ಬಾವಿ ಮತ್ತು ಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಕೆರೆ ಪಾಳು ಬೀಳುವ ಎಂಟು ವರ್ಷಗಳ ಹಿಂದೆ ಏಪ್ರಿಲ್ ತಿಂಗಳಲ್ಲಿ ಊರಿನ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿತ್ತು. ಆದರೆ ಈಗ ಮೇ ಕೊನೆಯವರೆಗೂ ಬೇಕಾದಷ್ಟು ನೀರು ದೊರೆಯುತ್ತಿದೆ. ಕೆರೆಯ ನೀರು ಸುವಾಸನೆಯಿಂದ ಕೂಡಿದ್ದುದರಿಂದ ಪಕ್ಕದ ಬಾವಿಗಳ ನೀರು ಸುವಾಸನೆಯುಕ್ತವಾಗಿತ್ತು. ಇದೀಗ ಬಾವಿಗಳಲ್ಲೂ ಶುದ್ಧ ನೀರು ಲಭ್ಯವಾಗುತ್ತಿದೆ.
ಸರಕಾರದ ಗಮನಸೆಳೆದ ಕೆರೆ
ಕೆರೆ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಅಚ್ಚುಕಟ್ಟಾಗಿ ಮುಗಿಸಿಕೊಟ್ಟ ನಂತರ ಈ ಕೆರೆ ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಕೆರೆಗೆ ಕಲ್ಲು ಕಟ್ಟುವ, ಗಾರ್ಡನ್ ನಿರ್ಮಾಣ ಹೀಗೆ ಕೆರೆ ಅಭಿವೃದ್ಧಿಗಾಗಿ ರೂ. ೫೦ ಲಕ್ಷ ಸರಕಾರದಿಂದ ಮಂಜೂರಾಗಿದೆಯAತೆ.

ನೆರವಿಗೆ ಬಂದ ‘ನಿರಂತರ’
ಇಲ್ಲಿನ ದೇವಾಲಯದ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿರುವ ಮಹಾಬಲೇಶ್ವರ ಭಟ್ ಮತ್ತು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಸುಶೀಲ ಎಂ. ಭಟ್ ಎಂಬವರು ಒಂದು ದಿನ ‘ನಿರಂತರ’ ಸಂಚಿಕೆಯಲ್ಲಿ ಪ್ರಕಟಗೊಂಡ ಕೆರೆಯ ಕುರಿತಾದ ಯಶೋಗಾಥೆ ಒಂದನ್ನು ಓದಿದರು. ಶ್ರೀಕ್ಷೇತ್ರ ಧರ್ಮಸ್ಥಳ ‘ನಮ್ಮೂರು – ನಮ್ಮ ಕೆರೆ’ ಯೋಜನೆಯಡಿ ರಾಜ್ಯದ ನೂರಾರು ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಸುದ್ದಿ ಇವರಲ್ಲಿ ಹೊಸ ಭರವಸೆಯನ್ನು ಮೂಡಿಸಿತು. ತಕ್ಷಣ ಬ್ರಹ್ಮಾವರದ ಯೋಜನಾಧಿಕಾರಿಯವರನ್ನು ಭೇಟಿಯಾಗಿ ಕೆರೆಯ ಅವ್ಯವಸ್ಥೆಯನ್ನು ಅವರ ಗಮನಕ್ಕೆ ತಂದರು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *