ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡಾಗ ನಮ್ಮ ಕಣ್ಣ ಮುಂದೆ ಮೂಡುವ ಮಹಾನ್ ವ್ಯಕ್ತಿತ್ವಗಳಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರು ಅಗ್ರಗಣ್ಯರು. ಅವರು ಕೇವಲ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲ, ಭಾರತದ ಭವಿಷ್ಯವನ್ನು ಹಲವು ದಶಕಗಳ ಹಿಂದೆಯೇ ದೂರದೃಷ್ಟಿಯಿಂದ ಕಂಡ ಮಹಾನ್ ರಾಷ್ಟ್ರನಿರ್ಮಾತೃ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಬಹಳಷ್ಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಅನುಭವಿಸಿದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣಕ್ಕೆ ಚೇತರಿಸಿಕೊಳ್ಳಲಾಗಲಿಲ್ಲ. ಸ್ವತಂತ್ರರಾದ ನಂತರವು ಅನೇಕ ವರ್ಷಗಳ ಕಾಲ ನಮ್ಮ ದೇಶ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಹೀಗೆ ಅನೇಕ ಸಮಸ್ಯೆ ಹಾಗೂ ವೈಫಲ್ಯಗಳನ್ನು ಎದುರಿಸಬೇಕಾಯಿತು.ಆದರೂ ಬಾಪೂಜಿಯವರು ಛಲ ಬಿಡದೆ ರಾಮರಾಜ್ಯದ ಕನಸನ್ನು ನನಸು ಮಾಡುವತ್ತಾ ತನ್ನ ಪ್ರಯತ್ನವನ್ನು ಮುಂದುವರಿಸಿದ್ದರು.
ಇಂದಿನಂತೆ ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು, ದೂರದರ್ಶನ ಅಥವಾ ವೇಗವಾದ ಸಾರಿಗೆ ವ್ಯವಸ್ಥೆಗಳು ಆ ಕಾಲದಲ್ಲಿ ಇರಲಿಲ್ಲ. ಆದರೂ ಗಾಂಧೀಜಿಯವರು ಭಾರತದ ಉದ್ದಗಲಕ್ಕೂ ಸಂಚರಿಸಿದರು. ನಗರಗಳಿಗಷ್ಟೇ ಅಲ್ಲದೆ, ದೂರದ ಹಳ್ಳಿಗಳಿಗೂ ತೆರಳಿ ಸಾಮಾನ್ಯ ಜನರನ್ನು ಭೇಟಿಯಾದರು. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ಬಡವರು ಹೀಗೆ ಎಲ್ಲರೊಂದಿಗೆ ಬೆರೆತರು. ಅವರ ನೋವು, ಸಮಸ್ಯೆ ಮತ್ತು ಆಶಯಗಳನ್ನು ಅರ್ಥಮಾಡಿಕೊಂಡರು. ಅವರ ನಿಜವಾದ ಶಕ್ತಿ ಯಾವುದೇ ಆಧುನಿಕ ಸಂವಹನ ಸಾಧನದಲ್ಲಿರಲಿಲ್ಲ, ಅದು ಜನರ ಹೃದಯದಲ್ಲಿತ್ತು. ‘ಗ್ರಾಮವೇ ಭಾರತದ ಆತ್ಮ’ ಎಂದು ಅವರು ಬಲವಾಗಿ ನಂಬಿದ್ದರು. ‘ಭಾರತದ ನಿಜವಾದ ಆತ್ಮ ಹಳ್ಳಿಗಳಲ್ಲಿದೆ. ಹಳ್ಳಿಗಳು ಬಲಿಷ್ಠವಾದರೆ ಭಾರತ ಬಲಿಷ್ಠವಾಗುತ್ತದೆ’ ಎನ್ನುವುದು ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಕೇಂದ್ರಬಿಂದು ಆಗಿತ್ತು.
ಗುಡಿ ಕೈಗಾರಿಕೆಗಳು, ಖಾದಿ, ಕರಕುಶಲ, ಸಣ್ಣ ಕೈಗಾರಿಕೆಗಳು ಮತ್ತು ಸ್ಥಳೀಯ ಉತ್ಪಾದನೆಗಳಿಗೆ ಅವರು ಉತ್ತೇಜನ ನೀಡಿದರು. ಇದರಿಂದ ಗ್ರಾಮೀಣ ಯುವಕರಿಗೆ ಜೀವನೋಪಾಯ ದೊರೆಯುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಯೂ ಬಲಪಡುತ್ತದೆ ಎಂಬುದು ಅವರ ಚಿಂತನೆಯಾಗಿತ್ತು. ಅವರು ಮದ್ಯಪಾನ ಮತ್ತು ಇತರ ವ್ಯಸನಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದರು. ಯುವಜನತೆಯನ್ನು ಸತ್ಪಥದಲ್ಲಿ ನಡೆಸಲು ಪ್ರಾರ್ಥನೆ, ಸಾತ್ವಿಕ ಜೀವನ, ಶಿಸ್ತು ಮತ್ತು ಸೇವಾಭಾವನೆಗಳಿಗೆ ಮಹತ್ವವನ್ನು ನೀಡಿದರು. ಭಜನೆ ಮತ್ತು ಪ್ರಾರ್ಥನೆಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ, ಅವು ಮನಸ್ಸನ್ನು ಶಾಂತಗೊಳಿಸಿ ಆತ್ಮಸಂಯಮ ಮತ್ತು ನೈತಿಕ ಬದುಕಿನತ್ತ ಕೊಂಡೊಯ್ಯುವ ಸಾಧನಗಳಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು.
ಗಾಂಧೀಜಿಯವರ ಭವ್ಯ ಭಾರತದ ಕನಸಿನಲ್ಲಿ ಮಹಿಳೆಯರಿಗೆ ಗೌರವ, ಸ್ವಾತಂತ್ರ್ಯ ಮತ್ತು ಸುರಕ್ಷಿತ ಬದುಕು ದೊರೆಯಬೇಕೆಂಬ ಆಶಯವೂ ಪ್ರಮುಖವಾಗಿತ್ತು. ನೈತಿಕವಾಗಿ ಬಲಿಷ್ಠ, ಸಾಮಾಜಿಕವಾಗಿ ಸಮಾನತೆಯುಳ್ಳ, ಸ್ವಾವಲಂಬಿ, ಸ್ವಚ್ಛ, ವ್ಯಸನಮುಕ್ತ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಭಾರತವಾಗಬೇಕು ಎಂಬುವುದು ಅವರ ಕಲ್ಪನೆಯಾಗಿತ್ತು.
ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದರೆ ಮಹಾತ್ಮ ಗಾಂಧೀಜಿಯವರು ಅಂದು ಕಂಡ ಎಲ್ಲ ಕನಸುಗಳು ಆ ಕಾಲದಲ್ಲಿ ನನಸಾಗದೇ ಇರಬಹುದು! ಆದರೆ ಅದನ್ನು ಅಕ್ಷರಶಃ ನನಸು ಮಾಡುತ್ತಿರುವವರು ಪೂಜ್ಯ ಶ್ರೀ ಹೆಗ್ಗಡೆಯವರು. ರಾಷ್ಟçಪಿತರು ಅಂದು ‘ಆತ್ಮನಿರ್ಭರ ಭಾರತ’ದ ಕನಸು ಕಂಡರು. ಇಂದು ಪೂಜ್ಯರು RUDSET ಮತ್ತು RSET ಗಳ ಮೂಲಕ ಸುಮಾರು 42 ಲಕ್ಷ ಯುವಕರನ್ನು ಸ್ವ ಉದ್ಯೋಗಿಗಳನ್ನಾಗಿ ಮಾಡಿ ಅವರ ಮೂಲಕ ಅಂದಾಜು 1.50 ಕೋಟಿ ಜನರಿಗೆ ಉದ್ಯೋಗವನ್ನು ಸೃಷ್ಟಿ ಮಾಡಿದ್ದಾರೆ. ಗುಡಿಕೈಗಾರಿಕೆಗಳಿಗೆ, ಗ್ರಾಮೀಣ ಸ್ವಉದ್ಯೋಗಿಗಳಿಗೆ ಅತ್ಯಂತ ಪ್ರೇರಣೆ ನೀಡಿದವರು ಶ್ರೀ ಹೆಗ್ಗಡೆಯವರು. ಗ್ರಾಮೀಣ ಶಿಕ್ಷಣಕ್ಕೆ ಮಹಾತ್ಮ ಗಾಂಧೀಜಿ ಅಂದು ಮಹತ್ವ ಕೊಟ್ಟರು. ಗ್ರಾಮೀಣ ಶಾಲೆಗಳನ್ನು ಉಳಿಸಬೇಕೆಂದು ಇಂದು ಪೂಜ್ಯರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಸ್ವಚ್ಛ ಭಾರತದ ಕಲ್ಪನೆಗೆ ಪೂರಕವಾಗಿ ಶ್ರದ್ಧಾಕೇಂದ್ರಗಳ ಸ್ವಚ್ಛತೆಯನ್ನು ಕೈಗೊಂಡಿದ್ದಾರೆ. ಮದ್ಯಪಾನದ ವಿರುದ್ಧ ಹೋರಾಡಿ ದೇಶದಲ್ಲೆ ಅತಿ ದೊಡ್ಡ ಚಳುವಳಿ ಮಾಡಿದವರು ಪೂಜ್ಯ ಖಾವಂದರು. ಮಹಿಳೆಯರ ಸ್ವಾಭಿಮಾನದ ಬದುಕಿಗೆ ಸ್ವಸಹಾಯ ಸಂಘಗಳನ್ನು ಮಾಡಿದರು. ‘ಗ್ರಾಮಾಭ್ಯುದಯದಿಂದ ರಾಷ್ಟ್ರಾಭ್ಯುದಯ ಎಂಬುದನ್ನು ಸಾಕಾರಗೊಳಿಸಲು ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಮಾದರಿಯಾದ ಅನೇಕ ಕಾರ್ಯಕ್ರಮಗಳನ್ನು ಪೂಜ್ಯರು ಮುನ್ನಡೆಸುತ್ತಿದ್ದಾರೆ. ಯುವಜನತೆಯೂ ಒಗ್ಗಟ್ಟು, ಆಧ್ಯಾತ್ಮಿಕ ಹಾಗೂ ಸದ್ಗುಣಗಳನ್ನು ಅಳವಡಿಸಿಕೊಳ್ಳುವ ದೃಷ್ಟಿಕೋನದಿಂದ ‘ಭಜನಾ ಕಮ್ಮಟ’ಗಳನ್ನು ಶ್ರೀ ಹೆಗ್ಗಡೆಯವರು ಪ್ರಾರಂಭಿಸಿ ಹಳ್ಳಿಹಳ್ಳಿಗಳಲ್ಲೂ ಭಜನೆಯ ಕಂಪನ್ನು ಪಸರಿಸಿದ್ದಾರೆ.
ಮಹಾತ್ಮರ ಕನಸುಗಳನ್ನು ಹಾಗೂ ಅವುಗಳನ್ನು ಸಕಾರಗೊಳಿಸುವ ಪೂಜ್ಯ ಶ್ರೀ ಹೆಗ್ಗಡೆಯವರ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವುದು ನಮಗೊಲಿದ ಭಾಗ್ಯ ಎಂದು ತಿಳಿದು ಭವ್ಯ ಭಾರತವನ್ನು ನಿರ್ಮಿಸುತ್ತಿರುವ ಮಹಾತ್ಮರೊಂದಿಗೆ ಕೈಜೋಡಿಸೋಣ. ರಾಷ್ಟ್ರಸೇವೆ ಮಾಡೋಣ.
