ನೌಕರರ ನೆರವಿಗೆ ಇ.ಎಸ್.ಐ. ವಿಮಾ ಸೌಲಭ್ಯ

ನೌಕರರ ರಾಜ್ಯ ವಿಮಾನಿಗಮ (ಇ.ಎಸ್.ಐ.ಸಿ.) ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿದ್ದು ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.
ಇ.ಎಸ್.ಐ.ಸಿ. ಎಂದರೇನು?
ಸಾಮಾನ್ಯವಾಗಿ ಇ.ಎಸ್.ಐ. ಎಂದೇ ಕರೆಯುತ್ತಾರೆ. ಇದು ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು ಇದರ ಪ್ರಾಥಮಿಕ ಉದ್ದೇಶವೆಂದರೆ ಅನಾರೋಗ್ಯ, ಹೆರಿಗೆ, ಮಾತೃತ್ವ, ಅಂಗವೈಕಲ್ಯ, ಉದ್ಯೋಗದ ಕಾರಣಗಳಿಂದ ಗಾಯ, ಸಾವು ಇತ್ಯಾದಿಗಳ ಸಂದರ್ಭದಲ್ಲಿ ಸಂಘಟಿತ ವಲಯದ ‘ಉದ್ಯೋಗಿ’ಗಳನ್ನು ರಕ್ಷಿಸುವುದು. ಈ ಯೋಜನೆಗೆ ಉದ್ಯೋಗಿಗಳು ಮತ್ತು ಉದ್ಯೋಗದಾತರಿಬ್ಬರೂ ತಮ್ಮ ಹಣಕಾಸಿನ ಪಾಲನ್ನು ನೀಡುವ ಮೂಲಕ ಈ ಯೋಜನೆ ಕಾರ್ಯನಿರ್ವಹಿಸುತ್ತದೆ. ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಗಳಾದಾಗ ವಿಮಾ ಸೌಲಭ್ಯವನ್ನು ನೀಡುವ ಕೆಲಸವನ್ನು ESI ಮಾಡುತ್ತದೆ.
ಇ.ಎಸ್.ಐ.ಸಿ. ಯೋಜನೆಗೆ ಯಾರು ಒಳಗೊಳ್ಳುತ್ತಾರೆ? : ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಹೆಚ್ಚಿನ ಸಂಸ್ಥೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ. (ಕೆಲವು ರಾಜ್ಯಗಳಲ್ಲಿ ಈ ಮಿತಿ 20) ರೂ. 21 ಸಾವಿರದವರೆಗೆ ಮಾಸಿಕ ವೇತನವನ್ನು ಗಳಿಸುವ ಉದ್ಯೋಗಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯ. ಅದಕ್ಕಿಂತ ಹೆಚ್ಚು ವೇತನ ಪಡೆಯುವವರು ಇದರ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಮಿತಿ ವಿಶೇಷಚೇತನರಿಗೆ ರೂ. 25 ಸಾವಿರ.
ಈ ವಿಮಾ ಯೋಜನೆಗೆ ಉದ್ಯೋಗಿಯ ಕೊಡುಗೆ ಶೇ. 0.75, ಉದ್ಯೋಗದಾತರ ಕೊಡುಗೆ ಶೇ. 3.25. ಅಂದರೆ ಮಾಸಿಕ ವೇತನದ ಶೇ. 4.ರಷ್ಟು ಕೊಡುಗೆಯನ್ನು ನೀಡಬೇಕು. ಕೇವಲ ರೂ. 176ರವರೆಗೆ ದೈನಂದಿನ ಸರಾಸರಿ ವೇತನವನ್ನು ಗಳಿಸುವ ಉದ್ಯೋಗಿಗಳು ತಮ್ಮ ಕೊಡುಗೆಯನ್ನು ಪಾವತಿಸುವುದರಿಂದ ವಿನಾಯಿತಿಯನ್ನು ಪಡೆದಿದ್ದಾರೆ. ಆದರೆ ಅವರ ಉದ್ಯೋಗದಾತರು ತಮ್ಮ ಪಾಲನ್ನು ನೀಡಲೇಬೇಕು.
ಉದ್ಯೋಗಿಯ ಕುಟುಂಬಕ್ಕೆ ESI ಸೌಲಭ್ಯ ದೊರೆಯುತ್ತಿದ್ದು ಸೌಲಭ್ಯ ಪಡೆಯಲು ಉದ್ಯೋಗಿ ಕುಟುಂಬ ಸಹಿತ ಇರುವ ಭಾವಚಿತ್ರ ಮತ್ತು ಉದ್ಯೋಗದಾತರ ಸಹಿಯನ್ನು ಹೊಂದಿರುವ ESI ಕಾರ್ಡುಗಳನ್ನು ಹೊಂದಿರಬೇಕು.
ವೈದ್ಯಕೀಯ ಪ್ರಯೋಜನ
ಇ.ಎಸ್.ಐ. ಜಾಲವನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆ ಪಡೆದಾಗ ಸಂಪೂರ್ಣ ವೈದ್ಯಕೀಯ ವೆಚ್ಚ ಲಭ್ಯ.
ಔಷಧಗಳು, ವೈದ್ಯಕೀಯ ನೆರವು, ಕೃತಕ ಅಂಗಗಳ ಜೋಡಣೆ, ಉಪಕರಣಗಳ ಒದಗಣೆಗೂ ಇದರಡಿ ವಿಮಾ ಸೌಲಭ್ಯ ದೊರೆಯುತ್ತದೆ.
ರೋಗ ನಿರ್ಣಯ ವ್ಯವಸ್ಥೆಗಳಾದ ಎಕ್ಸ್ರೇ, ಸ್ಕಾö್ಯನ್, ಲ್ಯಾಬ್‌ಗಳಿಗೂ ಸೌಲಭ್ಯ ಲಭ್ಯ.
ಅಂಬ್ಯುಲೆನ್ಸ್ ಸೇವೆಗಳು, ಆಸ್ಪತ್ರೆಯಿಂದ ರೋಗಿ ಮನೆಗೆ ಬಂದ ನಂತರದ ಔಷಧೀಯ ಖರ್ಚುಗಳು ಇದರಡಿ ದೊರೆಯುತ್ತದೆ.
ನಗದು ಪ್ರಯೋಜನಗಳು
ಅನಾರೋಗ್ಯ ಭತ್ತೆ : ಅನಾರೋಗ್ಯ ಸಮಸ್ಯೆಗಳಾದ ಸಂದರ್ಭದಲ್ಲಿ ಒಟ್ಟು ಎರಡು ಬಾರಿಗೆ 91 ದಿನಗಳವರೆಗಿನ ದೈನಂದಿನ ಸರಾಸರಿ ವೇತನದ ಶೇ. 70 ರಷ್ಟು ನಗದನ್ನು ರೋಗಿಗೆ ಇ.ಎಸ್.ಐ.ಸಿ. ಸಂಸ್ಥೆ ಪಾವತಿಸುತ್ತದೆ.
ಹೆರಿಗೆ ಭತ್ತೆ : ಗರ್ಭಿಣಿಯರಿಗೆ 26 ವಾರಗಳವರೆಗೆ ಮತ್ತು ಗರ್ಭಪಾತದ ಸಂದರ್ಭಗಳಲ್ಲಿ 6 ವಾರಗಳವರೆಗೆ ಪೂರ್ಣ ವೇತನವನ್ನು ಪಾವತಿಸುವ ವ್ಯವಸ್ಥೆ ಇಲ್ಲಿದೆ.
ತಾತ್ಕಾಲಿಕ ಅಂಗವೈಕಲ್ಯ ಭತ್ತೆ : ಉದ್ಯೋಗದಲ್ಲಿರುವಾಗ ತಾತ್ಕಾಲಿಕ ಅಂಗವೈಕಲ್ಯತೆಯಾದಲ್ಲಿ ಅವರಿಗಾದ ಉದ್ಯೋಗ ನಷ್ಟದ ಆಧಾರದ ಮೇಲೆ ನಿರ್ದಿಷ್ಟ ವೇತನವನ್ನು ಪಾವತಿಸುತ್ತದೆ. ನೀವು ESI ಸದಸ್ಯರಾದ ಮೊದಲ ದಿನದಿಂದಲೇ (ಕೆಲಸದ ಕಾರಣದಿಂದ ಆದ ತಾತ್ಕಾಲಿಕ ಅಂಗವೈಕಲ್ಯಕ್ಕೆ ಮಾತ್ರ) ಈ ಸೌಲಭ್ಯ ಪಡೆಯಲು ಅರ್ಹರು.
ಶಾಶ್ವತ ಅಂಗವೈಕಲ್ಯ ಭತ್ತೆ : ಶಾಶ್ವತ ಅಂಗವಿಕಲರಾದಲ್ಲಿ ಅವರು ಗಳಿಸುತ್ತಿದ್ದ ವೇತನದ ಆಧಾರದ ಮೇಲೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಇ.ಎಸ್.ಐ.ಸಿ. ಸಂಸ್ಥೆ ನೀಡುತ್ತದೆ.
ಅವಲಂಬಿತರ ಭತ್ತೆ : ಉದ್ಯೋಗದ ಸಮಯದಲ್ಲಿ ಅಪಘಾತ, ಗಾಯದಿಂದಾಗಿ ಮರಣ ಹೊಂದಿದ ವಿಮಾದಾರರ ಅವಲಂಬಿತರಿಗೆ ವೇತನದ ಶೇ. 90ರಷ್ಟನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ. ಇ.ಎಸ್.ಐ.ಸಿ. ಸದಸ್ಯನಾದ ಮೊದಲ ದಿನದಿಂದಲೇ ಇದು ಚಾಲ್ತಿಗೆ ಬರುತ್ತದೆ. ಕೆಲಸದ ಕಾರಣದಿಂದಾದ ಗಾಯ/ಅಪಘಾತಗಳಿಂದ, ಸಾವು ಸಂಭವಿಸಿದಾಗ ಅವರ ಅವಲಂಬಿತರಿಗೆ ಪ್ರಯೋಜನ ನೀಡಲಾಗುತ್ತದೆ.
ನಿರುದ್ಯೋಗ ಭತ್ತೆ : ರಾಜೀವ್‌ಗಾಂಧಿ ಶ್ರಮಿಕ ಕಲ್ಯಾಣ ಯೋಜನೆ ಅಡಿಯಲ್ಲಿ ಕೆಲವು ಪರಿಸ್ಥಿತಿಗಳಲ್ಲಿ ನಿರುದ್ಯೋಗಿಯಾಗಿರುವ ವಿಮಾದಾರರಿಗೆ ಒಂದು ವರ್ಷದವರೆಗೆ ಕೊನೆಯ ವೇತನದ ಶೇ. 50ರಷ್ಟು ನಿರುದ್ಯೋಗ ಭತ್ತೆಯಾಗಿ ಒದಗಿಸುವ ವ್ಯವಸ್ಥೆಯು ಇಲ್ಲಿದೆ.
ಅಂತ್ಯಕ್ರಿಯೆ ವೆಚ್ಚಗಳು : ಮೃತ ವಿಮಾದಾರರ ಅಂತ್ಯಕ್ರಿಯೆ ವೆಚ್ಚಗಳನ್ನು ಭರಿಸಲು ಕುಟುಂಬದ ಸದಸ್ಯರಿಗೆ ರೂ. 15 ಸಾವಿರದಷ್ಟು ನಿಗದಿತ ಮೊತ್ತವನ್ನು ಪಾವತಿಸಲಾಗುತ್ತದೆ.
ಇದೀಗ ಇ.ಎಸ್.ಐ.ಸಿ. ವ್ಯವಸ್ಥೆಯ ಸೌಲಭ್ಯ ಇನ್ನೊಂದಷ್ಟು ಮಂದಿಗೆ ದೊರೆಯಬೇಕೆಂಬ ನಿಟ್ಟಿನಲ್ಲಿ ಆದಷ್ಟು ಸರಳಗೊಳಿಸಿದೆ. ಒಂದು ವೇಳೆ ಕಾರ್ಮಿಕರು ಇ.ಎಸ್.ಐ.ಸಿ. ಜೊತೆ ಆಧಾರ್ ಲಿಂಕ್ ಮಾಡದಿದ್ದರೂ ಪ್ರಯೋಜನಗಳನ್ನು ನಿರಾಕರಿಸಲಾಗುವುದಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಹಯೋಗವನ್ನು ಹೊಂದಿದೆ.
ಆಸ್ಪತ್ರೆಗೆ ದಾಖಲಾಗುವುದು ಹೇಗೆ? : ಆರೋಗ್ಯ ಸಮಸ್ಯೆಗಳು ಎದುರಾದಾಗ ನಮಗೆ ಬೇಕಾದ ಆಸ್ಪತ್ರೆಯಲ್ಲಿ ದಾಖಲಾಗುವಂತಿಲ್ಲ. ಮೊದಲಾಗಿ (ತುರ್ತು ಸಂದರ್ಭಗಳನ್ನು ಹೊರತುಪಡಿಸಿ) ನಿಮ್ಮ ಇ.ಎಸ್.ಐ. ಕಾರ್ಡ್ನಲ್ಲಿ ಹೆಸರಿಸಲ್ಪಟ್ಟ ಹತ್ತಿರದ ಇ.ಎಸ್.ಐ. ಆಸ್ಪತ್ರೆ/ಚಿಕಿತ್ಸಾಲಯ (ಡಿಸ್ಪೆನ್ಸರಿ)ಕ್ಕೆ ಭೇಟಿ ನೀಡಿ ಅಲ್ಲಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆ ಅಲ್ಲಿ ಲಭ್ಯವಿಲ್ಲದಿದ್ದಲ್ಲಿ ಮುಂದಿನ ಚಿಕಿತ್ಸೆಗಾಗಿ ಇತರ ಆಸ್ಪತ್ರೆಗಳಿಗೆ ತೆರಳಲು ಆ ಆಸ್ಪತ್ರೆಯವರು ಪತ್ರ ನೀಡುತ್ತಾರೆ. ಇದರ ಬದಲು ನೇರವಾಗಿ ಇತರ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರೆ ಇ.ಎಸ್.ಐ. ಸೌಲಭ್ಯ ದೊರೆಯುವುದಿಲ್ಲ.
ಅಕಸ್ಮಾತ್ ತುರ್ತು ಸಂದರ್ಭಗಳಲ್ಲಿ ಇ.ಎಸ್.ಐ.ಸಿ.ನೊಂದಿಗೆ ಸಹಯೋಗ ಹೊಂದಿದ ಆಸ್ಪತ್ರೆಗಳಿಗೆ ದಾಖಲಾದಲ್ಲಿ 24 ಗಂಟೆಗಳೊಳಗೆ ನಿಮ್ಮ ಸಂಬoಧಿತ ಡಿಸ್ಪೆನ್ಸರಿಗೆ ಮಾಹಿತಿ ನೀಡಿ ಅನುಮೋದನೆ ಪಡೆದುಕೊಳ್ಳುವುದು ಕಡ್ಡಾಯವಾಗಿರಲಿ.
ಗಮನಿಸಿ : ನಿಮ್ಮ ಹತ್ತಿರದಲ್ಲಿರುವ ಇ.ಎಸ್.ಐ.ಸಿ. ಸಹಯೋಗ ಹೊಂದಿದ ಆಸ್ಪತ್ರೆಗಳ ವಿವರಗಳನ್ನು ಸರಿಯಾಗಿ ತಿಳಿದುಕೊಳ್ಳಿ.
ನೀವು ನೀಡಿದ ಮಾಹಿತಿಗಳು ಮತ್ತು ವಂತಿಗೆಗಳು ನಿಮ್ಮ ESI ಖಾತೆಯಲ್ಲಿ ಕಾಲಾನುಕಾಲಕ್ಕೆ ದಾಖಲಾತಿಗಳಾಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ.
ನಿಮ್ಮ ಕೆಲಸ ಬಿಟ್ಟು ಆರು ತಿಂಗಳು ಅಥವಾ ಮುಂದಿನ ಕೊಡುಗೆಯ ಅವಧಿ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೀವು ಈ ಸೌಲಭ್ಯ ಪಡೆಯಬಹುದು. ಇದರಲ್ಲಿ ಎರಡು ಕೊಡುಗೆಯ ಅವಧಿಗಳಿರುತ್ತದೆ. ಏಪ್ರಿಲ್ 1 ರಿಂದ ಸಪ್ಟೆಂಬರ್ 30 ಮತ್ತು ಅಕ್ಟೋಬರ್ 1ರಿಂದ ಮಾರ್ಚ್ 31. ಈ ಅವಧಿಯಲ್ಲಿ ಕನಿಷ್ಟ 75 ದಿನಗಳ ಪಾವತಿ/ಕೊಡುಗೆ ಇ.ಎಸ್.ಐ.ಸಿ. ಗೆ ನೀಡಿದಲ್ಲಿ ನೀವು ಅನಾರೋಗ್ಯ ಭತ್ತೆಗೆ ಅರ್ಹರು. ಹೆರಿಗೆ ಭತ್ತೆ ಪಡೆಯಲು ಹಿಂದಿನ ಸತತ ಎರಡು ಕೊಡುಗೆ ಅವಧಿಗಳಲ್ಲಿ 70 ದಿನಗಳವರೆಗೆ ಪಾವತಿ ಮಾಡಬೇಕಾಗಿರುತ್ತದೆ. ಹತ್ತಿರದ ಇ.ಎಸ್.ಐ.ಸಿ. ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯ ಮೂಲಕ ಆರೋಗ್ಯ ಶಿಬಿರ ಮಾಹಿತಿ ಕಾರ್ಯಕ್ರಮದ ಸೌಲಭ್ಯ ಪಡೆದುಕೊಳ್ಳಿ.
ದೀರ್ಘಕಾಲಿಕ ರೋಗ ಭತ್ತೆ : ಕೆಲ ದೀರ್ಘಕಾಲಿಕ ರೋಗಗಳಲ್ಲಿ ಪರಿಹಾರ ಭತ್ತೆ ಪಡೆಯಲು ನೀವು ಎರಡು ವರ್ಷಗಳಷ್ಟು ಕಾಲ ಉದ್ಯೋಗದಲ್ಲಿದ್ದು ನಾಲ್ಕು ಪಾವತಿ ಅವಧಿಗಳಲ್ಲಿ ಕನಿಷ್ಟ 156 ದಿನಗಳಷ್ಟು ಅವಧಿಗೆ ವಂತಿಗೆ ನೀಡಿರಬೇಕು.
ಇಲ್ಲಿ ಉದ್ಯೋಗಿ ಅಂದರೆ ಕೇವಲ ತಿಂಗಳ ಸಂಬಳದ ವೈಟ್ ಕಾಲರ್ ಉದ್ಯೋಗಿಗಳು ಮಾತ್ರವಲ್ಲ ದಿನಗೂಲಿ ನೌಕರನೂ ಸಂಘಟಿತ ಕ್ಷೇತ್ರದಲ್ಲಿದ್ದಲ್ಲಿ ಅಂದರೆ ಉದ್ಯೋಗದಾತ ಇ.ಎಸ್.ಐ.ಸಿ.ನಡಿಯಲ್ಲಿ ನೋಂದಾವಣೆಯಾಗಿದ್ದರೆ ಇ.ಎಸ್.ಐ.ಸಿ. ಸೌಲಭ್ಯಕ್ಕೆ ಅರ್ಹರು.
ಕುಟುಂಬದಲ್ಲಿ ಯಾರೆಲ್ಲಾ ಒಳಗೊಂಡಿರುತ್ತಾರೆ?
ಉದ್ಯೋಗಿ : ಉದ್ಯೋಗಿಯ ಗಂಡ/ಹೆoಡತಿ, ಮಕ್ಕಳು.
ಮಕ್ಕಳು : ಕಾನೂನುಬದ್ಧ ಅಪ್ರಾಪ್ತ ಮಕ್ಕಳ/ಕಾನೂನುಬದ್ಧವಾಗಿ ದತ್ತು ತೆಗೆದುಕೊಂಡ ಅಪ್ರಾಪ್ತ ಮಕ್ಕಳು, 21 ವರ್ಷದ ಶಿಕ್ಷಣ ಪಡೆಯುತ್ತಿರುವ ಅಥವಾ ಸಂಪೂರ್ಣ ಅವಲಂಬಿತ ಗಂಡು ಮಕ್ಕಳು/ಅವಿವಾಹಿತ ಕಾನೂನುಬದ್ಧ ಹೆಣ್ಣು ಮಕ್ಕಳು/ದತ್ತು ತೆಗೆದುಕೊಂಡ ಅವಿವಾಹಿತ ಹೆಣ್ಣುಮಕ್ಕಳು, ಉದ್ಯೋಗಿಯ ಮೇಲೆ ಸಂಪೂರ್ಣ ಅವಲಂಬಿತ ಅಪ್ರಾಪ್ತ ಸಹೋದರ, ಸಹೋದರಿಯರು, ಉದ್ಯೋಗಿಯು ಅವಿವಾಹಿತನಾಗಿದ್ದು, ಪಾಲಕರು ನಿಧನರಾಗಿದ್ದ ಸಂದರ್ಭದಲ್ಲಿ ಉದ್ಯೋಗಿಯ ಅಪ್ರಾಪ್ತ ಸಹೋದರ, ಸಹೋದರಿಯರನ್ನು ಪರಿಗಣಿಸಲಾಗುತ್ತದೆ.
ಕುಟುಂಬದಲ್ಲಿ ಯಾರು ಅರ್ಹರಲ್ಲ?
ಮದುವೆಯಾಗಿ ಹೋದ ಹೆಣ್ಣು ಮಕ್ಕಳು, ಅತ್ತೆ-ಮಾವ ಮತ್ತು ಆರ್ಥಿಕವಾಗಿ ಉದ್ಯೋಗಿಯ ಮೇಲೆ ಅವಲಂಬಿತವಾಗಿರದ ಕುಟುಂಬದ ಯಾವುದೇ ಸದಸ್ಯರು ಅರ್ಹರಲ್ಲ. ಈ ಯೋಜನೆಯಡಿಯಲ್ಲಿ ಮೋಸ, ವಂಚನೆಗಳನ್ನು ಎಸಗಿದರೆ ಉದ್ಯೋಗಿ ಅಥವಾ ಉದ್ಯೋಗದಾತರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಇ.ಎಸ್.ಐ.ಸಿ.ನ http.esic.gov.in ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ. ಉಚಿತ ಸಹಾಯವಾಣಿ 1800-11-2526 ಆಸ್ಪತ್ರೆ ಸಹಾಯವಾಣಿ : 1800-11-3839ಕ್ಕೆ ಕರೆ ಮಾಡಬಹುದಾಗಿದೆ.

Facebook
Twitter
WhatsApp
LinkedIn
Telegram