ಭಯಕ್ಕೆ ಎಷ್ಟು ಮುಖ

‘ದೇವರ ಭಯವೇ ಜ್ಞಾನದ ಆರಂಭ’ ಎಂಬ ಒಂದು ಮಾತಿತ್ತು. ಬಹುಶಃ ಅಂದಿನ ಕಾಲದಲ್ಲಿ ಜ್ಞಾನ ಗಳಿಸಿಕೊಳ್ಳಬೇಕಾದಲ್ಲಿ ಬಹಳಷ್ಟು ಪ್ರಯತ್ನಶೀಲರಾಗಬೇಕಿತ್ತು. ಕಲಿಯುವ ಶ್ಲೋಕಗಳೆಲ್ಲ ದೇವರಿಗೆ ಸಂಬಂಧಿಸಿದ ಕಾರಣ ಎಲ್ಲೂ ತಪ್ಪಬಾರದು ಎಂಬ ಭಯ ಕೂಡಾ ವಿದ್ಯಾರ್ಥಿಗಳಲ್ಲಿತ್ತು.
ಇಂದು ಪರೀಕ್ಷಾ ಭಯ ನಿವಾರಣೆಯ ಕುರಿತು ಸುದೀರ್ಘ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಆದರೂ ಅನೇಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವಂತೂ ಇದ್ದೇ ಇರುತ್ತದೆ. ಎಷ್ಟೇ ಓದಿದ್ದರೂ ಪ್ರಶ್ನೆ ಕೇಳುವ ರೀತಿಯಿಂದಲೋ ಅಥವಾ ಓದದ ಯಾವುದಾದರೊಂದು ಪ್ರಶ್ನೆ ಬರಬಹುದೆಂಬ ಕಾರಣಕ್ಕೆ ಭಯ ಕಾಡುತ್ತಿರುತ್ತದೆ. ಓದಿದ್ದು ಮರೆತು ಹೋದರೇನು ಮಾಡುವುದು! ಬರೆಯಲು ಸಮಯ ಸಾಕಾಗದಿದ್ದರೆ ಹೇಗೆ, ಅಂಕ ಕಡಿಮೆ ಬಂದರೆ ಶಾಲಾ ಅಧ್ಯಾಪಕರು, ಗೆಳೆಯರು ಮಾತ್ರವಲ್ಲ ಮನೆಯವರನ್ನು ಎದುರಿಸುವುದು ಹೇಗೆ ಎಂಬ ಭಯ, ಇಷ್ಟೆಲ್ಲಾ ಭಯಗಳನ್ನು ಹೊತ್ತು ರಾತ್ರಿ ನಿದ್ದೆ ಬಿಟ್ಟು ಸರಿಯಾಗಿ ಊಟ-ತಿಂಡಿಯನ್ನು ಸೇವಿಸದೆ ಪರೀಕ್ಷೆ ಎದುರಿಸುವುದೇ ಒಂದು ದೊಡ್ಡ ಸವಾಲು. ಮನೆಯಲ್ಲಿ ಅಪ್ಪ-ಅಮ್ಮನೂ ಕೂಡಾ ಮಕ್ಕಳಷ್ಟೇ ಒತ್ತಡದಲ್ಲಿರುತ್ತಾರೆ. ಸರಿಯಾಗಿ ನೆನಪಿಟ್ಟುಕೊಂಡು ಬರೆ, ಸರಿಯಾದ ಪೆನ್ನು ಇಟ್ಟುಕೊಳ್ಳು, ಮೊದಲು ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಿಕೊಳ್ಳು ಹೀಗೆ ಹತ್ತು ಹಲವು ಸಲಹೆಗಳನ್ನು ನೀಡುತ್ತಿದ್ದರೆ ಮಕ್ಕಳು ಮತ್ತಷ್ಟು ಗಾಬರಿಗೊಳಗಾಗುತ್ತಾರೆ. ಅದಕ್ಕೆ ಬದಲಾಗಿ ‘ನೀನು ಚೆನ್ನಾಗಿ ಓದಿದ್ದೀಯಾ, ನಿನಗೆ ಗೊತ್ತಿರುವುದನ್ನು ಮೊದಲು ಬರೆ, ಅಂಕದ ಬಗ್ಗೆ ತೆಲೆಕೆಡಿಸಿಕೊಳ್ಳಬೇಡ, ಪ್ರಯತ್ನಕ್ಕೆ ಸರಿಯಾದ ಫಲ ಇದ್ದೇ ಇರುತ್ತದೆ. ನಮಗೆ ನಿನ್ನ ಪರೀಕ್ಷೆ ಮತ್ತು ಅದರ ಫಲಿತಾಂಶಕ್ಕಿಂತಲೂ ನೀನು, ನಿನ್ನ ಆರೋಗ್ಯ, ನಿನ್ನ ಭವಿಷ್ಯ ಮುಖ್ಯ. ನಾವು ಸದಾ ನಿನ್ನ ಜೊತೆಗಿದ್ದೇವೆ’ ಎಂಬ ಮಾತನ್ನು ಹೇಳಿದರೆ ಮಕ್ಕಳ ಮನಸ್ಸಿನ ಅನಗತ್ಯ ಒತ್ತಡ ಕಡಿಮೆಯಾಗುತ್ತದೆ.
ಪರೀಕ್ಷೆಯೊಂದೇ ಅಲ್ಲ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯ ಭಯ ಇದ್ದೇ ಇರುತ್ತದೆ. ನಿರಪದ್ರವ ಜೀವಿಗಳಾದ ಜಿರಳೆ, ಹಲ್ಲಿ, ಜೇಡ, ಚೇಳು, ಬೆಕ್ಕುಗಳಿಗೆ ಭಯಪಡುವವರು ಹಲವರಾದರೆ, ಕೆಲವರಿಗೆ ಕತ್ತಲಲ್ಲಿ ಒಬ್ಬಂಟಿಯಾಗಿದ್ದರೆ ಭೂತ, ಪ್ರೇತಗಳ ಬಗ್ಗೆ ಭಯ. ಕೆಲವರಿಗೆ ಎತ್ತರ ಪ್ರದೇಶಕ್ಕೆ ಹೋಗಲು, ಇನ್ನು ಕೆಲವರಿಗೆ ನೀರು ಕಂಡರೆ ಭಯ ಕಾಡುತ್ತದೆ. ಆದರೆ ಚಿಕ್ಕ ಮಕ್ಕಳಿಗೆ ಈ ಎಲ್ಲಾ ಭಯಗಳಿರುವುದಿಲ್ಲ. ಆದರೆ ನಾವು ಅವರಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ಭಯವನ್ನು ತುಂಬುತ್ತಾ ಬರುತ್ತೇವೆ. ಕಡೆಗೆ ದೇವರನ್ನು ಭಕ್ತಿಯಿಂದ, ಪ್ರೀತಿಯಿಂದ ಸ್ಮರಿಸುವ ಬದಲು ಭಯದಿಂದಲೇ ಪೂಜಿಸುವಂತೆ ಮಾಡುತ್ತೇವೆ.
ಆಸ್ತಿಪಾಸ್ತಿ ಗಳಿಸುವುದೆಷ್ಟು ಕಷ್ಟವೋ, ಅದನ್ನು ಉಳಿಸಿಕೊಳ್ಳುವುದೂ ಅಷ್ಟೇ ಕಷ್ಟ. ಕಳ್ಳಕಾಕರ ಕಣ್ಣು ತಪ್ಪಿಸುವುದೊಂದು ಕಡೆಯಾದರೆ, ಸರಕಾರದ ತೆರಿಗೆಯನ್ನು ತಪ್ಪಿಸುವುದು ಹೇಗೆ ಎಂಬ ಚಿಂತೆ ಇನ್ನೊಂದೆಡೆ. ಹಿಂದಿನ ಕಾಲದಲ್ಲಿ ಬ್ಯಾಂಕ್‌ಗಳಿರಲಿಲ್ಲವಾದ್ದರಿಂದ ಸಂಪಾದಿಸಿದ್ದನ್ನು ಮಣ್ಣಿನಡಿಯಲ್ಲಿ ಹೂತಿಡುತ್ತಿದ್ದರು. ಅಂಥಾ ನಿಧಿಯನ್ನು ಸರ್ಪ ಕಾಯುತ್ತದೆ. ಅದನ್ನು ಮುಟ್ಟಲು ಹೋದವರ ಸರ್ವನಾಶವಾಗುತ್ತದೆ ಎಂಬ ಭಯವನ್ನು ಹೂತಿಟ್ಟ ನಿಧಿಯ ಬಗ್ಗೆ ಸೃಷ್ಟಿಸಿರುವುದೂ ಇದೆ.
ರಾಜಕಾರಣಿಗಳಿಗೆ ಹೇಗಾದರೂ ಮಾಡಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಬೇಕೆಂಬ ಭಯ. ಅದಕ್ಕಾಗಿ ಅನೇಕ ಪೂಜೆ, ಪುರಸ್ಕಾರ, ಹೋಮ, ಹವನ, ಜ್ಯೋತಿಷಿಗಳ ಸಲಹೆ, ಮಂತ್ರ ತಂತ್ರಗಳು ನಡೆಯುತ್ತಲೇ ಇರುತ್ತದೆ. ಇದು ರಾಜಕಾರಣಿಗಳಿಗಷ್ಟೇ ಅಲ್ಲ ಅಧಿಕಾರದ, ಉದ್ಯಮದ ನಾನಾ ಹುದ್ದೆಗಳಲ್ಲಿ ಇರುವವರಿಗೂ ಈ ಭಯ ಕಾಡುವುದಿದೆ. ಕೆಲವರಿಗೆ ಯಾವುದೇ ಕೆಲಸ, ಉದ್ದಿಮೆ ಇತ್ಯಾದಿಗಳನ್ನು ಆರಂಭಿಸುವುದಕ್ಕೆ ಸೋಲಿನ ಭಯ, ಹಾಕಿದ ಬಂಡವಾಳ ಹಿಂದಿರುಗಿ ಬರದೇ ಇದ್ದರೆ ಎಂಬ ಭಯ ಕಾಡುತ್ತಿರುತ್ತದೆ. ಅಂತೂ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಭಯ ಇದ್ದೇ ಇರುತ್ತದೆ.
‘ನೀನು ಕರ್ಮ ಮಾಡುತ್ತಿರು, ಆದರೆ ಪ್ರತಿಫಲಾಪೇಕ್ಷೆ ನಿರೀಕ್ಷಿಸಬೇಡ’ ಎಂಬ ಶ್ರೀಕೃಷ್ಣನ ಮಾತು ಒಂದು ರೀತಿಯಲ್ಲಿ ನಾಳೆ ಏನಾಗುವುದೋ ಎಂಬ ಭಯಗ್ರಸ್ಥರಿಗೆ ಮಾರ್ಗದರ್ಶಿಯಾಗಿದೆ.
ಜೀವನ, ಭವಿಷ್ಯ, ವೃದ್ಧಾಪ್ಯ, ಸಾವು-ನೋವುಗಳ ಬಗೆಗೆ ನಾವೆಷ್ಟೇ ಚಿಂತಿಸಿದರೂ ಅವೆಲ್ಲ ನಮ್ಮ ಕೈಮೀರಿದ ವಿಷಯಗಳಾದ್ದರಿಂದ ಒಂದು ರೀತಿಯ ನಿರ್ಲಿಪ್ತಭಾವವನ್ನು ಬೆಳೆಸಿಕೊಂಡು ಸದಾ ಮನಸ್ಸನ್ನು ದೈವ ಚಿಂತನೆ, ಧ್ಯಾನ, ಯೋಗದ ಜೊತೆಗೆ ಸ್ನೇಹಿತರ ಬಳಗ, ಸಮಾಜಸೇವೆ, ಓದುವ ಹವ್ಯಾಸ, ಸಂಘ ಸಂಸ್ಥೆಗಳ ಒಡನಾಟದಲ್ಲಿದ್ದರೆ ಭಯವಿಲ್ಲದೆ ನಿರಾಳವಾಗುವ ಸಾಧ್ಯತೆಯೂ ಇದೆ.
ಓರ್ವ ಮಹಿಳೆ ಬುಟ್ಟಿಯಲ್ಲೆನನ್ನೋ ಹೊತ್ತುಕೊಂಡು ಹೋಗುತ್ತಿರುತ್ತಾಳೆ. ಆಗ ಒಬ್ಬ ‘ಬುಟ್ಟಿಯಲ್ಲಿ ಏನಿದೆ?’ ಎಂದು ಕೇಳುತ್ತಾನೆ. ಆಗ ‘ನನಗೆ ಇಲಿಗಳೆಂದರೆ ಭಯ ಅದಕ್ಕೆ ಗುರುಗಳು ಮಂತ್ರದ ಬೆಕ್ಕನ್ನು ಕೊಟ್ಟಿದ್ದಾರೆ’ ಎಂದು ಬುಟ್ಟಿಯನ್ನು ತೋರಿಸುತ್ತಾಳೆ. ಆದರೆ ಬುಟ್ಟಿಯಲ್ಲಿ ಏನೂ ಇರುವುದಿಲ್ಲ. ಯಾಕೆಂದರೆ ಅವಳ ಭಯವೂ ಕಾಲ್ಪನಿಕ. ಹಾಗೇ ಆ ಬೆಕ್ಕು ಕಾಲ್ಪನಿಕ. ಭೂತಪ್ರೇತಗಳ ಇಲ್ಲಸಲ್ಲದ ಭಯಕ್ಕೆ ಗುರುಗಳು ಕಟ್ಟುವ ತಾಯಿತ, ನೂಲುಗಳು ಇಂಥಾ ಕೆಲಸವನ್ನೇ ಮಾಡುತ್ತವೆ ಮತ್ತು ಭಯವನ್ನು ಹೋಗಲಾಡಿಸುವ ಅಭಯವನ್ನು ನೀಡುತ್ತವೆ.

Facebook
Twitter
WhatsApp
LinkedIn
Telegram