ರವಿಚಂದ್ರ ಚಾರ್ಮಾಡಿ
ನೌಕರನೊಬ್ಬ ನಿವೃತ್ತನಾದ ನಂತರ ಅವನ ಭವಿಷ್ಯತ್ತಿನ ಸುರಕ್ಷತೆಗಾಗಿ ‘ನೌಕರರ ಭವಿಷ್ಯನಿಧಿ’ ಸಂಸ್ಥೆಯಿoದ ನಿರ್ವಹಿಸಲ್ಪಡುವ ಉಳಿತಾಯ ಕಾರ್ಯಕ್ರಮವನ್ನು ಭವಿಷ್ಯನಿಧಿ ಎಂದು ಕರೆಯುತ್ತಾರೆ. ಇದಕ್ಕೆ ಪಿ.ಎಫ್., ಇ.ಪಿ.ಎಫ್. ಎಂಬ ಹೆಸರುಗಳು ಇವೆ. ಭವಿಷ್ಯನಿಧಿಗೆ ನೌಕರರು ಮತ್ತು ಉದ್ಯೋಗದಾತರಿಬ್ಬರೂ ವಂತಿಗೆ/ಕೊಡುಗೆಯನ್ನು ನೀಡಬೇಕಾಗುತ್ತದೆ.
ಪಿ.ಎಫ್. ಯಾರಿಗೆ ಲಭ್ಯ? : ಯಾವ ಸಂಸ್ಥೆ ಕನಿಷ್ಠ 20 ಮತ್ತು ಅದಕ್ಕಿಂತ ಹೆಚ್ಚಿನ ನೌಕರರನ್ನು ಹೊಂದಿದೆಯೋ ಆ ಸಂಸ್ಥೆಗಳು ನೌಕರರ ಪಿ.ಎಫ್. ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂಬ ನಿಯಮವಿದೆ. ಆದ್ದರಿಂದ ಇಂದು ಹೆಚ್ಚಿನೆಡೆ ಪಿ.ಎಫ್. ಸೌಲಭ್ಯದ ವ್ಯವಸ್ಥೆಯಿದೆ. ಕಡ್ಡಾಯವಲ್ಲದೆಡೆ ಸ್ವಯಂ ಸ್ಫೂರ್ತಿಯಿಂದಲೂ ಈ ಯೋಜನೆಯನ್ನು ಅಳವಡಿಸಿಕೊಳ್ಳಬಹುದು. ಇಲ್ಲಿ ‘ಭವಿಷ್ಯನಿಧಿ’ ಮತ್ತು ‘ನಿವೃತ್ತಿ ವೇತನ’ ಎಂಬ ಎರಡು ವಿಭಾಗಗಳಿವೆ.
ಭವಿಷ್ಯನಿಧಿ ಮತ್ತು ನಿವೃತ್ತಿ ವೇತನ : ಉದ್ಯೋಗಿಗಳಿಂದ ಪ್ರತಿ ತಿಂಗಳು ಕಡಿತಗೊಳ್ಳುವ ಮೊತ್ತ ನೇರವಾಗಿ ಪಿ.ಎಫ್. ಖಾತೆಗೆ ಸಂದಾಯವಾಗುತ್ತದೆ. ಉದ್ಯೋಗದಾತರು ನೀಡುವ ಪಾಲಿನಲ್ಲಿ ಶೇ. 8.33ರಷ್ಟು ನೌಕರರ ನಿವೃತ್ತಿ ವೇತನಕ್ಕೆ ಜಮೆಯಾಗುತ್ತದೆ. ಹತ್ತು ವರ್ಷಗಳ ಕಾಲ ನಿವೃತ್ತಿ ವೇತನಕ್ಕೆ ಹಣ ಜಮೆಯಾದರೆ ಹತ್ತು ವರ್ಷಗಳ ನಂತರ ಈ ಮೊತ್ತವನ್ನು ಹಿಂಪಡೆಯುವoತಿಲ್ಲ. ನಿವೃತ್ತಿಯ ನಂತರ ಈ ಮೊತ್ತ ನಿವೃತ್ತಿ ವೇತನವಾಗಿ ದೊರೆಯುತ್ತದೆ. ಭವಿಷ್ಯ ನಿಧಿಯನ್ನು ಕೆಲಸ ತೊರೆದ 60 ದಿನಗಳ ನಂತರ ಏಕಗಂಟಿನಲ್ಲಿ ಹಿಂಪಡೆಯಲು ಅವಕಾಶವಿದೆ. ಉದ್ಯೋಗದಲ್ಲಿರುವಾಗಲೂ ಮದುವೆ, ಶಿಕ್ಷಣ, ಆರೋಗ್ಯ ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಭವಿಷ್ಯನಿಧಿಯನ್ನು ಭಾಗಶಃ ಹಿಂತೆಗೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.
ವಂತಿಗೆಯ ನಿರ್ಧರಿತ ಮೊತ್ತ : ಪ್ರತಿ ತಿಂಗಳು ನೌಕರರು ತಮ್ಮ ನಿಗದಿತ ಮೂಲವೇತನ (ಬೇಸಿಕ್)ದ ಶೇ.12ರಷ್ಟು ಪಾಲು ಮತ್ತು ಉದ್ಯೋಗದಾತರು ಕೂಡಾ ಶೇ. 12ರಷ್ಟು ಪಾಲನ್ನು ಭವಿಷ್ಯನಿಧಿ ಯೋಜನೆಗೆ ಹೂಡಿಕೆ ಮಾಡುತ್ತಾರೆ. ಉದ್ಯೋಗದಾತರ ಪಾಲಿನಲ್ಲಿ ಶೇ.8.33ರಷ್ಟು ನೌಕರರ ನಿವೃತ್ತಿ ವೇತನಕ್ಕೆ, ಉಳಿದ ಶೇ.3.67ರಷ್ಟು ಭವಿಷ್ಯನಿಧಿಗೆ ಸಂದಾಯವಾಗುತ್ತದೆ.
ಲಾಭಗಳೇನು?
ಸುಸ್ಥಿರ, ಸದೃಢ ಉಳಿತಾಯ ಯೋಜನೆ ಇದಾಗಿದೆ.
ಆದಾಯ ತೆರಿಗೆ ಅಡಿಯಲ್ಲಿ ಲಾಭ.
ಮನೆ ಕಟ್ಟುವಿಕೆ, ವಿದ್ಯಾಭ್ಯಾಸ, ತುರ್ತು ಆರೋಗ್ಯ ಸಮಸ್ಯೆ ಇತ್ಯಾದಿ ಕಾರಣಗಳಿಗೆ ಭವಿಷ್ಯನಿಧಿಯಿಂದ ಮಿತಿಗೊಳಪಟ್ಟು ಹಿಂತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.
ನೌಕರರು ಉದ್ಯೋಗದಲ್ಲಿದ್ದಾಗ ಮರಣ ಹೊಂದಿದರೆ ನಾಮಿನಿಗೆ ರೂ. 50ಸಾವಿರದಿಂದ ರೂ.7 ಲಕ್ಷದವರೆಗೆ ವಿಮಾ ಸೌಲಭ್ಯ ಲಭಿಸುತ್ತದೆ.
ಒಂದು ವೇಳೆ ಹತ್ತು ವರ್ಷಗಳ ಕಾಲ ಭವಿಷ್ಯನಿಧಿ ಪಾವತಿಸಿರದಿದ್ದರೆ ನಂತರ ಪ್ರತಿ ತಿಂಗಳು ಯಾವುದೇ ಮೊತ್ತ ಭವಿಷ್ಯನಿಧಿ ಖಾತೆಗೆ ಪಾವತಿ ಆಗದಿದ್ದರೂ ಹತ್ತು ವರ್ಷಗಳ ಕಾಲ ಕಟ್ಟಿದ ಮೊತ್ತವನ್ನು ಹಾಗೆ ಬಿಟ್ಟು ನಿವೃತ್ತಿಯ ವಯಸ್ಸು ಅಂದರೆ 58 ವರ್ಷಗಳ ನಂತರ ಹಿಂಪಡೆಯಬಹುದಾಗಿದೆ. ಒಂದು ಕೆಲಸವನ್ನು ಬಿಟ್ಟು ಕೆಲ ಸಮಯದವರೆಗೆ ಬೇರೆಲ್ಲೂ ಕೆಲಸಕ್ಕೆ ಸೇರದೆ ಮುಂದೆ ಸೇರಬೇಕೆಂದಿದ್ದರೆ ಆಗ ನಿಮ್ಮ ಭವಿಷ್ಯ ನಿಧಿ ಖಾತೆಯನ್ನು ಲಾಕ್ ಮಾಡಿಟ್ಟು ಮುಂದೆ ಕೆಲಸಕ್ಕೆ ಸೇರಿದಾಗ ಪಿ.ಎಫ್. ಖಾತೆಯನ್ನು ಪುನಶ್ಚೇತನಗೊಳಿಸಲು ಅವಕಾಶವಿದೆ.
2025ನೇ ಸಾಲಿನ ಹೊಸ ಬೆಳವಣಿಗೆಗೆಳು
ಪಿ.ಎಫ್. ಸಂಬoಧಿತ ನೈಜ ಸಮಯ ಕೊನೆಯ ಕಂತು ಪಾವತಿವರೆಗಿನ ಡಿಜಿಟಲ್ ಪಾಸ್‌ಬುಕ್ ಆನ್‌ಲೈನ್ ಮೂಲಕ ಲಭ್ಯ.
ಪ್ರಸಕ್ತ ಶೇ. 8.25 ರಷ್ಟು ಬಡ್ಡಿದರವನ್ನು ನಿಗದಿಗೊಳಿಸಲಾಗಿದೆ.
ಸಂಸ್ಥೆ ಬದಲಾಯಿಸಿದಾಗ ಭವಿಷ್ಯನಿಧಿಯ ಸ್ವಯಂ ಚಾಲಿತ ವರ್ಗಾವಣೆ.
ಆನ್‌ಲೈನ್ ವ್ಯವಸ್ಥೆ ಮೂಲಕ ನಾಮಿನಿಯ ನಾಮ ನಿರ್ದೇಶನ ಕಡ್ಡಾಯ.
‘ಇತ್ತೀಚಿಗಿನ ವರ್ಷಗಳಲ್ಲಿ ಇಪಿಎಫ್‌ಒ ನೌಕರಸ್ನೇಹಿ ಕ್ರಮಗಳೊಂದಿಗೆ ಹೆಚ್ಚು ಸುರಕ್ಷಿತ, ಪಾರದರ್ಶಕ ಮತ್ತು ಸ್ವತಃ ನೌಕರರು ತಾನಿರುವಲ್ಲೇ ಡಿಜಿಟಲ್ ತಂತ್ರಜ್ಞಾನದ ಮೂಲಕ ಸ್ವತಂತ್ರ ವ್ಯವಹಾರ ಮಾಡುವಷ್ಟು ಮುಂದುವರೆದದ್ದು ಮಾತ್ರವಲ್ಲದೇ ಇಪಿಎಫ್ ಖಾತೆದಾರರ ಸಂಖ್ಯೆ ಗಣನೀಯವಾಗಿ ಏರಿದೆ’ ಎನ್ನುತ್ತಾರೆ ಬೆಂಗಳೂರಿನ ಬಹುರಾಷ್ಟಿçÃಯ ಕಂಪನಿಯೊoದರ ಮಾನವ ಸಂಪನ್ಮೂಲ ವ್ಯವಹಾರ ಪಾಲುದಾರರಾದ ಸತೀಶ್ ಎನ್. ಕೆ.ಯವರು.
ಭವಿಷ್ಯ ನಿಧಿಯ ಡಿಜಿಟಲ್ ಪರಿವರ್ತನೆ : ಈ ವ್ಯವಸ್ಥೆಗೆ ಸಂಪೂರ್ಣ ಡಿಜಿಟಲ್ ಸ್ಪರ್ಶವನ್ನು ನೀಡಲಾಗಿದೆ. UAN (Universal Automatic Number) -ಸಾರ್ವತ್ರಿಕ ಮತ್ತು ಶಾಶ್ವತ ಭವಿಷ್ಯ ನಿಧಿಯನ್ನು ಸರಕಾರಿ ಪೋರ್ಟಲ್ (ವೆಬ್‌ಸೈಟ್) ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಬಳಕೆದಾರರು UMANG ನಂತಹ ಮೊಬೈಲ್ ಆ್ಯಪ್ ಮೂಲಕ ತಾವು ಪಾವತಿಸಿದ ಭವಿಷ್ಯನಿಧಿಗೆ ಮೊತ್ತ, ಪಾಸ್‌ಬುಕ್, ಹಿಂಪಡೆಯಲು ಅರ್ಜಿ ಸಲ್ಲಿಸುವಿಕೆ ಹೀಗೆ ಎಲ್ಲವನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.
ಭವಿಷ್ಯನಿಧಿ ಖಾತೆ ಹೊಂದಿರುವವರ ಗಮನಕ್ಕೆ
ನಿಮ್ಮ ಭವಿಷ್ಯನಿಧಿ ಪಾಸ್‌ಬುಕ್ ಅನ್ನು ಆನ್‌ಲೈನ್ ಪೋರ್ಟಲ್ ಮೂಲಕ ಪರಿಶೀಲಿಸುತ್ತಿರಿ.
ತಪ್ಪದೇ ನಾಮನಿರ್ದೇಶನವನ್ನು ಮಾಡಿರಿ. ನಿಮ್ಮ ನಂತರ ಈ ನಿಧಿ ಯಾರಿಗೆ ಸೇರಬೇಕೆಂದು ಘೋಷಿಸಿಕೊಂಡಲ್ಲಿ ನಿಮ್ಮ ನಾಮಿನಿಗೆ ಸುಲಭದಲ್ಲಿ ಆ ಮೊತ್ತವನ್ನು ಪಡೆಯಲು ಸಾಧ್ಯವಿದೆ.
ನಿಮ್ಮ ದಾಖಲಾತಿ ಅಂದರೆ ಆಧಾರ್, ಪಾನ್‌ಕಾರ್ಡ್, ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ನೌಕರಿ ದಾಖಲಾತಿ ವಿವರಗಳು ಒಂದಕ್ಕೊoದು ತಾಳೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ವಿವರಗಳನ್ನು ಪದೇ ಪದೇ ಬದಲಾವಣೆ ಮಾಡಬೇಡಿ.
ಯಾವ ಸರಕಾರಿ ಅಧಿಕಾರಿ ಕೂಡಾ ನಿಮ್ಮ ಭವಿಷ್ಯನಿಧಿ ವಿವರಗಳನ್ನು ಕರೆ ಮಾಡಿ ಕೇಳುವುದಿಲ್ಲ. ಇದು ನಿಮ್ಮ ಗಮನದಲ್ಲಿರಲಿ.
ಯಾವುದೇ ವಿವರ, ಒಟಿಪಿಗಳನ್ನು ಯಾರಿಗೂ ನೀಡಬೇಡಿ.
ಸ್ವತಹ ನೀವು ಅಥವಾ ನಿಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮೂಲಕವೇ ಪಿ.ಎಫ್. ವ್ಯವಹಾರಗಳನ್ನು ನಡೆಸಿ. ಇಲ್ಲದಿದ್ದಲ್ಲಿ ನಿಮ್ಮ ನಂಬಿಕಸ್ಥರ ಮೂಲಕ (ನಿಮಗೆ ಸಾಧ್ಯವಾಗದಿದ್ದಲ್ಲಿ) ಪೋರ್ಟಲ್ ಅನ್ನು ನಿರ್ವಹಿಸಿ.
ಮೋಸ/ವಂಚನೆಯ ಕರೆಗಳು ಕಂಡು ಬಂದಲ್ಲಿ ತಕ್ಷಣ ನೀವು ಕೆಲಸ ಮಾಡುವ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮೂಲಕ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ.
ಸಮಸ್ಯೆಗಳು ಮಾನವ ಸಂಪನ್ಮೂಲ ವಿಭಾಗದ ಮಟ್ಟದಲ್ಲಿ ಪರಿಹಾರವಾಗದಿದ್ದಲ್ಲಿ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿ.
ಸ್ವಯಂ ಪ್ರೇರಿತ ಭವಿಷ್ಯ ನಿಧಿ ಯೋಜನೆ (ಗಿPಈ) : ನೀವು ಒಂದು ಸಂಸ್ಥೆಯ ನೌಕರರಾಗಿದ್ದು ಭವಿಷ್ಯ ನಿಧಿ ಖಾತೆ ಹೊಂದಿದಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತದ ಶೇ.೧೨ ನೌಕರ ಮತ್ತು ಶೇ.೧೨ ಉದ್ಯೋಗದಾತ ಪಾಲನ್ನು ಸಂಸ್ಥೆ ಪಾವತಿಸುತ್ತಿರುತ್ತದೆ. ಇದಲ್ಲದೆ ಪಿ.ಎಫ್.ನಲ್ಲಿ ಸ್ವಯಂ ಸ್ಫೂರ್ತಿಯಿಂದ ಹೆಚ್ಚಿನ ಉಳಿತಾಯವನ್ನು ಮಾಡಬಹುದಾಗಿದೆ. ಆದರೆ ಈ ಮೊತ್ತವು ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ತೆಯ ಒಟ್ಟು ಮೊತ್ತವನ್ನು ಮೀರಿಸುವಂತಿಲ್ಲ. ಉದಾ : ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ತೆ ಸೇರಿ ರೂ. 25 ಸಾವಿರ ಆಗಿದ್ದಾದಲ್ಲಿ ಅಷ್ಟು ದೊಡ್ಡ ಮೊತ್ತವನ್ನು ನೀವು ಭವಿಷ್ಯ ನಿಧಿ ಖಾತೆಗೆ ವರ್ಗಾಯಿಸಬಹುದು. ಅದನ್ನು ಮೀರುವಂತಿಲ್ಲ. ಇದಕ್ಕೆ ಪ್ರತ್ಯೇಕ EPF ಖಾತೆ ತೆರೆಯಬೇಕಿಲ್ಲ. ಬದಲಿಗೆ ಅದಕ್ಕೆಂದೇ ಇರುವ ಒಂದು ಫಾರಂನಲ್ಲಿ ನಿಮ್ಮ ಒಪ್ಪಿಗೆಯನ್ನು ನಿಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗಕ್ಕೆ ನೀಡಿದಲ್ಲಿ ಪ್ರತಿ ತಿಂಗಳು ನಿಮ್ಮ ವೇತನದಿಂದ ನೀವು ಸೂಚಿಸಿದ ಮೊತ್ತ ಕಡಿತಗೊಂಡು ಪಿ.ಎಫ್. ಖಾತೆಗೆ ಜಮೆಯಾಗುತ್ತದೆ. ಈ ಮೊತ್ತವು ವರ್ಷಕ್ಕೆ ರೂ. 2.50 ಲಕ್ಷ ಮೀರಿದಲ್ಲಿ ಮಾತ್ರ ಆ ಮೊತ್ತದ ಮೇಲೆ ಬರುವ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. (ಸರಕಾರಿ ನೌಕರರಿಗೆ ಈ ಮಿತಿ 5 ಲಕ್ಷ) ಈ ಉಳಿತಾಯಕ್ಕೂ ಕೂಡಾ ಶೇ. 8.25ರಷ್ಟು (ಪ್ರಸ್ತುತ) ಬಡ್ಡಿ ದೊರೆಯುತ್ತದೆ.
EPF – ಸಾರ್ವಜನಿಕ ಭವಿಷ್ಯ ನಿಧಿ : ಎಲ್ಲಾ ಭಾರತೀಯ ನಾಗರಿಕರು ಬ್ಯಾಂಕ್‌ಗಳ ಮೂಲಕ ಈ ಖಾತೆಯನ್ನು ತೆರೆಯಬಹುದಾಗಿದೆ. ಇದನ್ನು ಕೂಡಾ ಸರಕಾರ ಮೇಲ್ವಿಚಾರಣೆ ನಡೆಸುತ್ತದೆ. ಇದಕ್ಕೆ ಶೇ. 7.1 ಬಡ್ಡಿದರವನ್ನು ನಿಗದಿಗೊಳಿಸಲಾಗಿದೆ. ಈ ಖಾತೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಬ್ಯಾಂಕ್‌ಗಳನ್ನು ಸಂಪರ್ಕಿಸಿರಿ.
